ಮಂಗಳವಾರ, ಮೇ 17, 2022
26 °C

ದಸರೆಯ ಅರಸರು ಅಳಿದ ಮೇಲೆ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಮೈಸೂರು ಈಗ 401ನೇ ದಸರಾ ಹಬ್ಬದ ಸಂಭ್ರಮದಲ್ಲಿದೆ. ರಾಜ ಒಡೆಯರ್ ಆರಂಭಿಸಿದ ದಸರಾ ಮಹೋತ್ಸವ ಸಾಂಗವಾಗಿ ಅದೇ ವೈಭವದಲ್ಲಿ ನಡೆದುಕೊಂಡು ಬರುತ್ತಿದೆ. ರಾಜರ ಮೆರವಣಿಗೆ ಇಲ್ಲ ಎನ್ನುವುದನ್ನು ಬಿಟ್ಟರೆ ಜನರ ಉತ್ಸಾಹದಲ್ಲಿ ಕೊರತೆ ಕಾಣುತ್ತಿಲ್ಲ. ಚಿನ್ನದ ಅಂಬಾರಿಯಲ್ಲಿ ಕುಳಿತ ನಾಡದೇವತೆ ಚಾಮುಂಡೇಶ್ವರಿ, ಭುವನೇಶ್ವರಿ ಮೆರವಣಿಗೆಯ ಹಮ್ಮುಬಿಮ್ಮುಗಳಿಗೇನೂ ಕಡಿಮೆ ಇಲ್ಲ.ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿದ್ದೇವೆ. ರಾಜರ ಕುರುಹುಗಳು ಮೈಸೂರಿನಲ್ಲಿ ಬೇಕಾದಷ್ಟಿದೆ. ಅರಮನೆಯಂತೂ ನೂರರ ಸಂಭ್ರಮದಲ್ಲಿ ಮೆರೆಯುತ್ತಿದೆ. ಇದೇ ಅಂಬಾ ವಿಲಾಸ ಅರಮನೆಯಲ್ಲಿ ಆಡಳಿತ ನಡೆಸಿದ ಮೈಸೂರಿನ ರಾಜರು ಇಡೀ ದೇಶಕ್ಕೇ ಮಾದರಿಯಾಗಿದ್ದರು. ದೇಶದಲ್ಲಿಯೇ ಮೊದಲ ಬಾರಿಗೆ ಮೀಸಲಾತಿ ಸೌಲಭ್ಯವನ್ನು ಜಾರಿಗೆ ತಂದ ಮೈಸೂರು ಒಡೆಯರ್ ಜನಾಂಗಕ್ಕೆ ಸೇರಿದ `ಅರಸು~ ಜಾತಿಗೆ ಇನ್ನೂ ಮೀಸಲಾತಿ ಸೌಲಭ್ಯ ಸಿಕ್ಕಿಲ್ಲ.ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿರುವ ಅರಸು ಜನಾಂಗದವರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಯದು ರಾಜರಿಂದ ಹಿಡಿದು ಕೊನೆಯ ಅರಸು ಜಯಚಾಮರಾಜ ಒಡೆಯರ್‌ವರೆಗೆ ಸುಮಾರು 550 ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ ಅರಸು ಜನಾಂಗ ಯಾವಾಗಲೂ ಬಹುಸಂಖ್ಯಾತವಾಗಿರಲಿಲ್ಲ. ಆದರೆ ಅರಮನೆಯ ಅನುಗ್ರಹಕ್ಕೆ ಪಾತ್ರವಾಗಿದ್ದ ಈ ಜನಾಂಗ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿಯೇ ಇತ್ತು.ಮೂವತ್ತಮೂರು ಹಳ್ಳಿಗಳ ಒಂದು ಪುಟ್ಟ ಪಾಳೇಗಾರಿಕೆಯಾಗಿ ಆರಂಭವಾದ ಯದುವಂಶರ ಅರಸೊತ್ತಿಗೆ ಮೈಸೂರು ಸಂಸ್ಥಾನವಾಗಿ ಬೆಳೆದಿದ್ದು ಈಗ ಇತಿಹಾಸ. ಅದೊಂದು ಸಾಹಸದ ಕತೆಯೂ ಹೌದು. 550 ವರ್ಷಗಳ ಕಾಲ ರಾಜ್ಯವಾಳಿದ ಹೆಗ್ಗಳಿಕೆ ಭಾರತದಲ್ಲಿ ಮತ್ತೆ ಯಾವ ಅರಸೊತ್ತಿಗೆಗೂ ಇರಲಿಲ್ಲ ಎನ್ನುವುದು ಇದರ ಹೆಮ್ಮೆ.ಕ್ರಿ.ಶ. 1399ರಲ್ಲಿ ಯದುರಾಯರು ಕಟ್ಟಿದ ಮೈಸೂರು ಒಡೆಯರ ವಂಶದಲ್ಲಿ ರಾಜ ಒಡೆಯರ್, ರಣಧೀರ ಕಂಠೀರವ ನರಸರಾಜ ಒಡೆಯರ್, ದೊಡ್ಡ ದೇವರಾಜ ಒಡೆಯರ್, ಚಿಕ್ಕದೇವರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ಹತ್ತನೇ ಚಾಮರಾಜೇಂದ್ರ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಪ್ರಮುಖರು.ಮೈಸೂರು ಸಂಸ್ಥಾನ ರಾಜಾಡಳಿತಕ್ಕೆ ಒಳಪಟ್ಟಿದ್ದರೂ ಅದು ಪ್ರಜಾರಾಜ್ಯವೇ ಆಗಿತ್ತು. ಈ ಹಿನ್ನೆಲೆಯಲ್ಲಿಯೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು `ರಾಜ ಋಷಿ~ ಎಂದಿದ್ದರು.`ಭಾರತದ ಉಕ್ಕಿನ ಮನುಷ್ಯ~ ಎಂದೇ ಖ್ಯಾತರಾಗಿದ್ದ ದೇಶದ ಮೊಟ್ಟ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್- `ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ರಾಜರು ಇದ್ದರೆ ಭಾರತಕ್ಕೆ ಸ್ವಾತಂತ್ರ್ಯವೇ ಬೇಕಾಗಿರಲಿಲ್ಲ~ ಎಂದಿದ್ದರು.ಆಧುನಿಕ ಕರ್ನಾಟಕದ ಅಭಿವೃದ್ಧಿಗೆ ಅಡಿಪಾಯ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರು ಹಲವಾರು ಪ್ರಥಮಗಳ ಸರದಾರರಾಗಿದ್ದರು. 1676ರಲ್ಲಿ ರಾಜ್ಯಾಡಳಿತವನ್ನು 18 ಭಾಗಗಳಾಗಿ ವಿಂಗಡಿಸಿ ಆಡಳಿತ ಸುಧಾರಣೆಯನ್ನು ಕೈಗೊಂಡ ಮೊದಲ ದೊರೆ ಚಿಕ್ಕದೇವರಾಜ ಒಡೆಯರ್.ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭವಾಯಿತು. ಬಾಲಕಿಯರಿಗೆ ವಸತಿ ಶಾಲೆಯನ್ನು ಮೊಟ್ಟ ಮೊದಲ ಬಾರಿಗೆ ಆರಂಭಿಸಿದರು. ಬೆಂಗಳೂರು ಪುರಸಭೆ ಕೂಡ ಅವರ ಆಡಳಿತದಲ್ಲಿಯೇ ಅಸ್ತಿತ್ವಕ್ಕೆ ಬಂತು.ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ಸೌಲಭ್ಯವನ್ನು ಜಾರಿಗೆ ತಂದವರು ಮೈಸೂರು ಅರಸರು. ಬಾಲ್ಯವಿವಾಹ ನಿಷೇಧ, ದೇವದಾಸಿ ಪದ್ಧತಿ ನಿಷೇಧ, ವಿದ್ಯುತ್ ಉತ್ಪಾದನೆ, ಕೈಗಾರಿಕೆ, ನೀರಾವರಿ ಮುಂತಾದ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರದ್ದೇ ಆಗಿದೆ.ಜವಾಹರಲಾಲ್ ನೆಹರೂ ಅವರು 1952ರಲ್ಲಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದರೆ ಜಯಚಾಮರಾಜ ಒಡೆಯರ್ ಅವರು 1942ರಲ್ಲಿಯೇ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದರು.

ರಾಜನಾಗಬೇಕಾದವನು ಸಾಮಾನ್ಯ ಪ್ರಜೆಯ ಕಣ್ಣೀರ ಕಥೆಯನ್ನು ಅರಿಯಬೇಕು ಎನ್ನುವ ನೀತಿಯನ್ನು ಅನುಸರಿಸುತ್ತಾ ಬಂದ ಮೈಸೂರು ರಾಜರು ಜನಾನುರಾಗಿ ಅರಸರಾಗಿದ್ದರು.ಇಂತಿರ್ಪ ಅರಸು ಜನಾಂಗದವರು ಈಗ ಏನಾಗಿದ್ದಾರೆ ಎಂದು ಕೇಳಿದರೆ ಉತ್ತರಿಸುವುದು ಕಷ್ಟ. `ಬಂಗಾರದ ಅರಸರು~ ಮತ್ತು `ಥೇಟ್ ಅರಸು~ ಎಂಬ ಎರಡು ಪ್ರಮುಖ ಉಪ ಪಂಗಡವನ್ನು ಹೊಂದಿದ ಅರಸು ಜನಾಂಗದ ಜನಸಂಖ್ಯೆ ಇಡೀ ರಾಜ್ಯದಲ್ಲಿ 50 ಸಾವಿರ ಮೀರುವುದಿಲ್ಲ. ಮೈಸೂರು, ಬೆಂಗಳೂರು, ಬಳ್ಳಾರಿ, ಆನೆಗುಂದಿ ಮುಂತಾದ ಕಡೆ ಚದುರಿ ಹೋಗಿರುವ ಅವರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.1970ರಲ್ಲಿ ರಾಜಧನವನ್ನು ನಿಲ್ಲಿಸಿದ ಮೇಲೆ ಈ ಜನಾಂಗದವರ ಸ್ಥಿತಿ ಇನ್ನಷ್ಟು ಹೀನಾಯವಾಯಿತು. ಮಹಾರಾಜರಿಗೆ ರಾಜಧನ ಬರುತ್ತಿದ್ದ ಕಾಲದಲ್ಲಿ ಅರಸು ಜನಾಂಗದ ಪ್ರಮುಖರಿಗೆ `ಜಾತಿ ಸಂಬಳ~ ಬರುತ್ತಿತ್ತು. ಸಾವಿರ ರೂಪಾಯಿಗಳಿಂದ ಹಿಡಿದು ನೂರು ರೂಪಾಯಿಯವರೆಗೆ ಜಾತಿ ಸಂಬಳ ಪಡೆದುಕೊಳ್ಳುವವರೂ ಇದ್ದರು.ತಂದೆಗೆ ನೂರು ರೂಪಾಯಿ ಜಾತಿ ಸಂಬಳ ಬರುತ್ತಿದ್ದರೆ ತಂದೆಯ ನಿಧನದ ನಂತರ ಮಗನಿಗೆ 75 ರೂಪಾಯಿ, ಮೊಮ್ಮಗನಿಗೆ 50 ರೂಪಾಯಿ ಹೀಗೆ ಜಾತಿ ಸಂಬಳ ಕಡಿಮೆಯಾಗುತ್ತಿತ್ತು. ಕೊನೆಕೊನೆಗೆ 5 ರೂಪಾಯಿ, 10 ರೂಪಾಯಿ ಪಡೆಯುವವರೂ ಇದ್ದರು.ಅರಮನೆಯ ಪಟ್ಟಿಯಲ್ಲಿದ್ದ ಅರಸು ಜನಾಂಗದ ಪ್ರಮುಖರ ಮನೆಯಲ್ಲಿ ಯಾವುದೇ ಕಾರ್ಯ ನಡೆದರೂ ಅದಕ್ಕೆ ಅರಮನೆಯಿಂದಲೇ ಎಲ್ಲ ಸೌಲಭ್ಯ ದೊರಕುತ್ತಿತ್ತು. ಹಬ್ಬ ಹರಿದಿನಗಳಲ್ಲಿಯೂ ಅರಮನೆಯಿಂದ ವಸ್ತುಗಳು ಬರುತ್ತಿದ್ದವು.ವರ್ಷಕ್ಕೊಂದು ಜೊತೆ ಬಟ್ಟೆ ಸಿಗುತ್ತಿತ್ತು. ಮದುವೆ ನಡೆದರೆ ಸಾಸಿವೆಯಿಂದ ಹಿಡಿದು ಭೋಜನದವರೆಗೆ, ಓಲಗದವರಿಂದ ಹಿಡಿದು ನೃತ್ಯಗಾತಿಯವರೆಗೆ ಎಲ್ಲವೂ ಅರಮನೆಯಿಂದ ಸರಬರಾಜಾಗುತ್ತಿತ್ತು. ಕೆಲವು ಪ್ರತಿಷ್ಠಿತರಿಗೆ ಆನೆ ಮೆರವಣಿಗೆಯೂ ಲಭ್ಯವಿತ್ತು.ನಗರದ ಕೋಟೆಯಲ್ಲಿ ಬದುಕಿದ್ದ ಅರಸು ಜನಾಂಗದವರ ಮನೆಗಳಲ್ಲಿ ಆಳುಕಾಳಿನ ಕೊರತೆ ಇರಲಿಲ್ಲ. ದುಡಿಯುವ, ವಿದ್ಯೆ ಕಲಿಯುವ ಅಗತ್ಯವಿರಲಿಲ್ಲ. ಸಮಾಜದಲ್ಲಿ ಗೌರವಕ್ಕೇನೂ ಕೊರತೆ ಇರಲಿಲ್ಲ. ಹೀಗೆ ಸುಮಾರು 550 ವರ್ಷಗಳ ಕಾಲ ರಾಜರ ಆಡಳಿತದಲ್ಲಿ ಆರಾಮಾಗಿ ಇದ್ದವರಿಗೆ ಅದು ಅಭ್ಯಾಸವಾಗಿ ಹೋಗಿತ್ತು.ರಾಜಧನ ನಿಂತು ಹೋದ ಮೇಲೆ, ಜಾತಿ ಸಂಬಳ ಸ್ಥಗಿತವಾದ ನಂತರ ಇವರು ನೀರಿನಿಂದ ಹೊರಬಂದ ಮೀನಿನಂತಾದರು. ಆದರೆ ಗತ್ತು ಬಿಡುವಂತಿರಲಿಲ್ಲ. ವಲ್ಲಿ, ಪೇಟ ಹಾಗೆಯೇ ಇತ್ತು. ಕೆಲವು ಮಂದಿ ಆಸ್ತಿಯನ್ನು ಮಾರುತ್ತಾ ಸಾಲವನ್ನೂ ಮಾಡುತ್ತಾ ತಮ್ಮ ಆಡಂಬರ ಉಳಿಸಿಕೊಳ್ಳಲು ಯತ್ನಿಸಿದರು.550 ವರ್ಷಗಳಷ್ಟು ದೀರ್ಘ ಕಾಲ ಈ ರಾಜ್ಯವನ್ನು ಆಳಿದ ಅರಸು ಜನಾಂಗದಲ್ಲಿ ದೇವರಾಜ ಅರಸು, ಜಯದೇವರಾಜೇ ಅರಸ್ ಅವರನ್ನು ಬಿಟ್ಟರೆ ರಾಜಕೀಯ ರಂಗದಲ್ಲಿ ಯಾರೂ ಮುಂದೆ ಬರಲಿಲ್ಲ. ಬೆಂಗಳೂರಿನಲ್ಲಿ ಇಬ್ಬರು ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ಮೈಸೂರು ಜಿಲ್ಲಾ ಪಂಚಾಯ್ತಿ ಮತ್ತು ನಗರ ಪಾಲಿಕೆಯಲ್ಲಿ ಕೆಲವರು ಸದಸ್ಯರಾಗಿದ್ದರು.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಲೋಕಸಭಾ ಸದಸ್ಯರಾಗಿದ್ದರು. ಅದನ್ನು ಬಿಟ್ಟರೆ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ ರಾಜಕಾರಣಿ ಅರಸು ಜನಾಂಗದಲ್ಲಿ ಇಲ್ಲ. ಇದಕ್ಕೆ ಜಾತಿಯ ಬೆಂಬಲ ಇಲ್ಲದಿರುವುದೂ ಕಾರಣವಿರಬಹುದು. ಆದರೆ ದೇವರಾಜ ಅರಸು ಅವರು ಜಾತಿಯ ಬಲ ಇಲ್ಲದಿದ್ದರೂ ಮುಖ್ಯಮಂತ್ರಿಯಾದರು.ಒಂದು ಕಾಲದಲ್ಲಿ ರಾಜ್ಯದ ಆಡಳಿತದಲ್ಲಿ ಮುಂಚೂಣಿಯಲ್ಲಿದ್ದ ಅರಸು ಜನಾಂಗದಲ್ಲಿ ಸ್ವಾತಂತ್ರ್ಯಾ ನಂತರ ಐಎಎಸ್ ಮಾಡಿದವರು ಎಂದರೆ ಜಯರಾಮರಾಜೇ ಅರಸ್ ಮಾತ್ರ. ಬಿ.ವಿ.ಪುಟ್ಟರಾಜೇ ಅರಸ್, ಇಂದ್ರರಾಜೇ ಅರಸ್, ಚಂದ್ರಕಾಂತರಾಜೇ ಅರಸ್, ಎಂ.ಬಸವರಾಜೇ ಅರಸ್, ಬಿ.ಪಿ.ಮಲ್ಲರಾಜ ಅರಸ್ ಮುಂತಾದವರು ಸರ್ಕಾರದ ವಿವಿಧ ಹುದ್ದೆಯಲ್ಲಿದ್ದರು.ಉಳಿದಂತೆ ಡಿ.ವಿ.ಅರಸ್ ಮತ್ತು ಜಯಲಕ್ಷ್ಮಮ್ಮಣ್ಣಿ ಅವರು ಕುಲಪತಿಗಳಾಗಿದ್ದರು. ಚದುರಂಗ, ಎಂ.ನಂಜಮ್ಮಣ್ಣಿ, ಪಿ.ವಿ.ನಂಜರಾಜ ಅರಸ್, ಚುಟುಕು ಸಾಹಿತ್ಯದ ಡಾ.ಎಂ.ಜಿ.ಆರ್.ಅರಸ್ ಮುಂತಾದವರು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಿದ್ದಾರೆ.ಜಯಚಾಮರಾಜ ಒಡೆಯರ್ ಅವರು ಸಂಸ್ಕೃತದಲ್ಲಿ 94 ಕೃತಿಗಳನ್ನು ರಚಿಸಿದ್ದರು. ಆ ಮಟ್ಟಕ್ಕೆ ಮತ್ತೆ ಯಾರೂ ಏರಲೇ ಇಲ್ಲ. ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿಯೂ ಒಬ್ಬಿಬ್ಬರು ಸಾಧನೆ ಮಾಡಿದ್ದಾರೆ.ಒಂದು ಕಾಲದಲ್ಲಿ ರಾಜರಾಗಿ ಮೆರೆದ ಜನಾಂಗ ಈಗ ಕೀಳರಿಮೆಯ ಕೂಪದಲ್ಲಿ ಸಿಲುಕಿಕೊಂಡಿದೆ. ಆಸ್ತಿ ಮತ್ತು ಅಧಿಕಾರವನ್ನು ಕಳೆದುಕೊಂಡಿದೆ. ಮತ್ತೆ ಪುಟಿದು ನಿಲ್ಲಲು ಹವಣಿಸುತ್ತಿದೆ. 550 ವರ್ಷದ ಅಭ್ಯಾಸ ಕೇವಲ 64 ವರ್ಷದಲ್ಲಿ ಬದಲಾಗುವುದು ಕಷ್ಟ. ಆದರೂ ಅರಸು ಜನಾಂಗ ಈಗ ಬದಲಾವಣೆಗೆ ಒಗ್ಗಿಕೊಳ್ಳುತ್ತಿದೆ. ಒಗ್ಗಟ್ಟನ್ನು ಮೂಡಿಸಿಕೊಂಡು ಅಭಿವೃದ್ಧಿಯತ್ತ ಮುಖ ಮಾಡಲು ಹೆಣಗುತ್ತಿದೆ. 

ಮೈಸೂರಿನ ಕೆಲವು ಪ್ರಥಮಗಳು

1676 ರಾಜ್ಯವನ್ನು 18 ಭಾಗಗಳಾಗಿ ವಿಂಗಡಿಸಿ    (ಅಠಾರಾ ಕಚೇರಿ) ಆಡಳಿತ ಸುಧಾರಣೆ1806 ಸಿಡುಬು ನಿರೋಧಕ ಮದ್ದು ವ್ಯಾಕ್ಸಿನೇಷನ್ ಅನ್ನು ಪ್ರಾಯೋಗಿಕವಾಗಿ ಅರಸು ಕುವರಿಯರಿಗೆ ನೀಡಿ ಆನಂತರ ಸಾರ್ವಜನಿಕರಿಗೆ ಬಳಕೆಗೆ ತಂದಿದ್ದು ರಾಜಮಾತೆ ಮಹಾರಾಣಿ ಲಕ್ಷ್ಮಮ್ಮಣ್ಣಿ.1833 ಇಂಗ್ಲಿಷ್ ಶಿಕ್ಷಣಕ್ಕೆ ಶಾಲೆ ಆರಂಭ. ರಾಜಾಸ್ ಫ್ರೀ ಸ್ಕೂಲ್. ಇದರ ವೆಚ್ಚವನ್ನೆಲ್ಲಾ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸ್ವಂತ ಹಣದಲ್ಲಿ ಭರಿಸಿದರು.1840 ಮೊದಲ ಮುದ್ರಣಾಲಯ-ಅಂಬಾ ವಿಲಾಸ ಪ್ರೆಸ್ ಆರಂಭ

1844 ಬಾಲಕಿಯರಿಗಾಗಿ ವಸತಿ ಶಾಲೆ ಆರಂಭ

1862 ಬೆಂಗಳೂರು ಪುರಸಭೆ ಅಸ್ತಿತ್ವಕ್ಕೆ

1871 ಬೆಂಗಳೂರು ಪುರಸಭೆ ಮಸೂದೆ ಜಾರಿ

1881 ಇತರ ಪಟ್ಟಣಗಳಿಗೂ ಪುರಸಭೆ ಕಾಯ್ದೆ ವಿಸ್ತರಣೆ

1906 ಪುರಸಭೆ-ನಗರಸಭೆ ಕಾನೂನು ಜಾರಿ

1871 ಮುಜರಾಯಿ ವಿಭಾಗ ಸ್ಥಾಪನೆ

1871 ಮೊದಲ ಜನಗಣತಿ

1881 ಪ್ರಜಾಪ್ರತಿನಿಧಿ ಸಭೆ ಸ್ಥಾಪನೆ

1888 ಕೃಷಿ-ಕೈಗಾರಿಕಾ ವಸ್ತು ಪ್ರದರ್ಶನ ಆರಂಭ

1890 ದಲಿತರಿಗೆ ಪ್ರತ್ಯೇಕ ಶಾಲೆ ಆರಂಭ, ವೃತ್ತಿಪರ ಶಿಕ್ಷಣ, ಉಚಿತ ಭೋಜನ, ವಸತಿ, ಪುಸ್ತಕ, ವಸ್ತ್ರ, ವಿದ್ಯಾರ್ಥಿ ವೇತನ ನೀಡಿಕೆ ಆರಂಭ.

1892 ತಾಂತ್ರಿಕ ಶಿಕ್ಷಣ ಶಾಲೆ ಆರಂಭ

1892 ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಪ್ರಾರಂಭ

1892 ಬಸವಿ ಬಿಡುವ ಪದ್ಧತಿ ನಿಷೇಧ

1894 ಅಪ್ರಾಪ್ತ ಬಾಲಕಿಯರ ವಿವಾಹ ನಿಷೇಧ

1894 ಕೃಷಿ ಬ್ಯಾಂಕ್ ಸ್ಥಾಪನೆ

1898-1907 ವಾಣೀವಿಲಾಸ ಸಾಗರ ಜಲಾಶಯ ನಿರ್ಮಾಣ

1902 ಶಿವನಸಮುದ್ರದಲ್ಲಿ ಜಲ ವಿದ್ಯುತ್ ಯೋಜನೆಯಿಂದ ವಿದ್ಯುತ್ ಉತ್ಪಾದನೆ

1903 ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಲಿ ಸ್ಥಾಪನೆ

1905 ಆಗಸ್ಟ್ 3-ಬೆಂಗಳೂರಿಗೆ ವಿದ್ಯುತ್ ಸಂಪರ್ಕ. ಏಷ್ಯಾದಲ್ಲಿಯೇ ಪ್ರಥಮ

1905 ಅರಣ್ಯದಲ್ಲಿ ಅನಧಿಕೃತ ಬೇಟೆ ನಿಷೇಧ.

1906 ಮೈಸೂರು ನಗರಕ್ಕೆ ವಿದ್ಯುತ್ ಸಂಪರ್ಕ.

1907 ಜೂನ್ 22 -ನ್ಯಾಯ ವಿಧಾಯಕ ಸಭೆ ಪ್ರಾರಂಭ

1909 ದೇವದಾಸಿ ಪದ್ಧತಿ ನಿಷೇಧ

1911 ಭಾರತೀಯ ವಿಜ್ಞಾನ ಕೇಂದ್ರ ಸ್ಥಾಪನೆ

1911-31 ಕೃಷ್ಣರಾಜ ಸಾಗರ ಅಣೆಕಟ್ಟೆ ನಿರ್ಮಾಣ

1912 ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿ ಆರಂಭ

1912 ವಯಸ್ಕರ ಶಿಕ್ಷಣ ಯೋಜನೆ ಪ್ರಾರಂಭ

1913 ಗ್ರಾಮ ನ್ಯಾಯಾಲಯ ಸ್ಥಾಪನೆ

1913 ಎಲ್ಲರಿಗೂ ಕಡ್ಡಾಯ, ಉಚಿತ ಶಿಕ್ಷಣ ಆದೇಶ

1913 ಮೈಸೂರು ಬ್ಯಾಂಕ್ ಸ್ಥಾಪನೆ

1915 ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ

1916 ಜುಲೈ 22-ಮೈಸೂರು ವಿ.ವಿ. ಸ್ಥಾಪನೆ

1916 ಶ್ರೀಗಂಧದೆಣ್ಣೆ ಕಾರ್ಖಾನೆ ಸ್ಥಾಪನೆ

1916 ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ

1918 ರೇಷ್ಮೆ ಕಾರ್ಖಾನೆ ಸ್ಥಾಪನೆ

1918 ಭಾರತದಲ್ಲಿಯೇ ಪ್ರಥಮವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು ನ್ಯಾಯಮೂರ್ತಿ ಲೆಸ್ಲಿ ಮಿಲ್ಲರ್ ಅಧ್ಯಕ್ಷತೆಯಲ್ಲಿ ರಚನೆ

1918 ಗ್ರಾಮ ಪಂಚಾಯ್ತಿ ಸ್ಥಾಪನೆ

1921 ದಕ್ಷಿಣ ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಕ್ಷಯ ರೋಗ ಚಿಕಿತ್ಸೆಗಾಗಿ ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಆಸ್ಪತ್ರೆ

1921 ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಆರಂಭ. ಮೈಸೂರು ಕಾಗದ ಕಾರ್ಖಾನೆ ಸ್ಥಾಪನೆ.

1927 ಅಂಧರಿಗಾಗಿ ಬ್ರೈಲ್ ಅಕ್ಷರ ವಿನ್ಯಾಸದ ಪ್ರಿಂಟಿಂಗ್ ಪ್ರೆಸ್ ಸ್ಥಾಪನೆ

1933 ಜೂನ್ 29 - ಹಿಂದೂ ವಿಧವೆಯರಿಗೆ ಗಂಡನ ಆಸ್ತಿಯಲ್ಲಿ ಹಕ್ಕು ನೀಡುವ ಮಸೂದೆ ಜಾರಿ

1936 ವೇಶ್ಯಾವೃತ್ತಿ ನಿಷೇಧ ಕಾನೂನು ಜಾರಿ

1937 ಅರಗು ಮತ್ತು ಬಣ್ಣದ ಕಾರ್ಖಾನೆ

1938 ಜುಲೈ 7-ವಿಧವಾ ಮರು ವಿವಾಹ ಕಾನೂನು ಜಾರಿ. ವಿಧವೆಯರಿಗಾಗಿ ಅಬಲಾಶ್ರಮ ಸ್ಥಾಪನೆ.

1947 ಸ್ವತಂತ್ರ ಭಾರತದಲ್ಲಿ ತಮ್ಮ ರಾಜತ್ವವನ್ನು ವಿಲೀನಗೊಳಿಸಿದ ದೇಶದ ಮೊದಲ ದೊರೆ ಜಯಚಾಮರಾಜ ಒಡೆಯರ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.