ಭಾನುವಾರ, ಏಪ್ರಿಲ್ 18, 2021
27 °C

ದುಡ್ಡಿನ ಚೀಲಕ್ಕಾಗಿ ಬಾವಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಪಟೂರು: ಐನೂರರ ಒಂದೆರಡು ನೋಟು ನೀರಲ್ಲಿ ತೇಲುತ್ತಿದ್ದವೆಂಬ ಸುದ್ದಿ ಹಬ್ಬಿದ್ದರಿಂದ ಯಾರೋ ದುಡ್ಡಿನ ಚೀಲ ಎಸೆದಿರಬೇಕು ಎಂದು ಬಾವಿ ನೀರು ಖಾಲಿ ಮಾಡಿ ಶೋಧಿಸಿದ ತಮಾಷೆಯ ಘಟನೆ ತಾಲ್ಲೂಕಿನ ಬಜಗೂರಿನಲ್ಲಿ ನಡೆದಿದೆ.ಹಿಂದೆ ಊರಿಗೆಲ್ಲ ನೀರು ಕೊಡುತ್ತಿದ್ದ ಸೇದುವ ಬಾವಿಯಲ್ಲಿ ಈಗ ನೀರಿದ್ದರೂ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಸುತ್ತಾರೆ. ಗ್ರಾಮ ಸಮೀಪ ಹೇಮಾವತಿ ನೀರು ಹರಿಯುವುದರಿಂದ ಬಾವಿ ಬತ್ತಿದ ಉದಾಹರಣೆ ಕಡಿಮೆ. ಸೇದಿ ನೀರು ತರುವವರು ಕ್ಷೀಣಿಸಿದ್ದರಿಂದ ಬಾವಿ ಬಳಿ ಹೋಗುತ್ತಿದ್ದವರೂ ಕಡಿಮೆಯೇ.

 

ಕೆಲ ದಿನಗಳ ಹಿಂದೆ ನೀರಿಗೆಂದು ಬಾವಿಗೆ ಹೋದ ಯಾರೋ ಬಗ್ಗಿ ನೋಡಿದಾಗ ಐನೂರು ರೂಪಾಯಿ ಬೆಲೆಯ ನೋಟು ಕಂಡಿದ್ದರಂತೆ ! ಏನೋ ಮಾಡಿ ಅವನ್ನು ಹೊರ ತೆಗೆದಾಗ ಅವು ಹರಿದ ನೋಟಿನ ತುಂಡುಗಳಾಗಿದ್ದವು. ಅವು ಅಸಲಿಯೋ, ನಕಲಿಯೋ ತಿಳಿಯುವ ಗೋಜಿಗೆ ಹೋಗಿರಲಿಲ್ಲ.ಅಷ್ಟಕ್ಕೆ ಸುಮ್ಮನಾಗದ ಕೆಲವರು ಯಾರೋ ನೋಟುಗಳ ಚೀಲವನ್ನು ಬಾವಿಗೆ ಎಸದಿರಬೇಕು ಎಂದು ಶಂಕಿಸಿ ತಳ ತಪಾಸಣೆ ಯೋಜನೆ ರೂಪಿಸಿದರು. ಇಂಥದ್ದೊಂದು ಅನುಮಾನಕ್ಕೆ ಕಾರಣವೂ ಇತ್ತು. ಕೆಲ ತಿಂಗಳ ಹಿಂದೆ ಬೆಂಗಳೂರಿನ ಪೊಲೀಸರು ಈ ಗ್ರಾಮಕ್ಕೆ ಬಂದು ವ್ಯಕ್ತಿಯೊಬ್ಬರ ಮನೆ ತಪಾಸಣೆ ಮಾಡಿ ಹೋಗಿದ್ದರು.

 

ಬೆಂಗಳೂರಿನಲ್ಲಿದ್ದ ಆ ವ್ಯಕ್ತಿ ಕೋಟ್ಯಂತರ ರೂಪಾಯಿ ಲಪಟಾಯಿಸಿ ತಂದು ಹಳ್ಳಿಯ ತನ್ನ ಮನೆಯಲ್ಲಿಟ್ಟಿರುವ ಗುಮಾನಿ ಮೇರೆಗೆ ಪೊಲೀಸರು ಬಂದು ಹೋಗಿದ್ದಾರೆಂಬ ಗುಲ್ಲು ಹಬ್ಬಿತ್ತು. ಈ ಪ್ರಕರಣವನ್ನು ಬಾವಿಯಲ್ಲಿ ನೋಟು ಸಿಕ್ಕಿದ ಘಟನೆಯೊಂದಿಗೆ ತಳಕು ಹಾಕಿದ ಕೆಲ ಕುತೂಹಲಿಗಳು ಬಾವಿ ನೀರು ಬಗೆದು ನೋಡುವ ಉತ್ಸಾಹ ತೋರಿದರೆಂದು ತಿಳಿದುಬಂದಿದೆ.ಹಾಗೆಂದು ಯೋಚಿಸಿದ್ದೆ ತಡ ಮೋಟರ್ ತಂದು ನೀರು ಹೊಡೆಯುವ ಕೆಲಸ ಶುರುವಾಯಿತು. ನೀರು ಕಡಿಮೆಯಾಗುತ್ತಾ ಹೋದಂತೆ ಬಾವಿ ಬಗ್ಗಿ ನೋಡುವವರು `ತುದಿಗಾಲಲ್ಲಿ ನಿಂತಿದ್ದರು. ಕುತೂಹಲದಿಂದ ಜನಜಾತ್ರೆಯೇ ನೆರೆದಿತ್ತು. ಅಂತೂ ನೀರು ಖಾಲಿಯಾಗಿ ತಳ ಕಂಡಾಗ ಎಲ್ಲರ ಕಣ್ಣು ಬಾವಿಯಷ್ಟು ಅಗಲ ಹಿಗ್ಗಿದವು. ಆದರೆ ನಿರಾಶೆ ಕಾದಿತ್ತು. ಹಗ್ಗ ಕಟ್ಟಿ ಇಳಿದು ನೋಡಿದರೆ ಒಡೆದ ಗಡಿಗೆ ಚೂರಿನ ರಾಶಿ, ಕಸಕಡ್ಡಿ.ಶೋಧಿಸಿದರೂ ದುಡ್ಡಿನ ಚೀಲ ಮಾತ್ರ ಇಲ್ಲ. ಇಷ್ಟಾದರೂ ಬೇಸರಪಟ್ಟುಕೊಳ್ಳದ ಯುವಕರು ನಗುತ್ತಲ್ಲೇ ಕಾರ್ಯಾಚರಣೆ ಮುಂದುವರಿಸಿದ್ದರು. ಬಾವಿ ನೀರು ಖಾಲಿ ಮಾಡಿರುವುದರಿಂದ ಕಸಕಡ್ಡಿ, ಕೆಸರು ತೆಗೆದು ಬಾವಿ ಸ್ವಚ್ಛಗೊಳಿಸೋಣ ಎಂದು ಕೆಲವರು ಉತ್ಸಾಹ ತೋರಿಸಿದರು. ಆದರೆ ನೀರು ಬಸಿ ಇದ್ದಿದ್ದರಿಂದ ಕಷ್ಟವೆಂದು ತಿಳಿದು ಕೈ ತೊಳಕೊಂಡರೆಂದು ತಿಳಿದುಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.