ಶನಿವಾರ, ಮೇ 8, 2021
19 °C

ದುಬೈನಲ್ಲಿ ವಿಶ್ವ ಕರ್ಮ ಜಾಗೃತಿ ಸಮಾವೇಶ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ವಿಶ್ವಕರ್ಮ ಸಮುದಾಯದ ಅಂತರಾಷ್ಟ್ರೀಯ ಜಾಗೃತಿ ಸಮಾವೇಶವನ್ನು ದುಬೈನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ.ಉಮೇಶ್ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 16ರಂದು ಯುಎಇ ದುಬೈನ `ದಿ ಕರ್ಮ ಸೆಂಟರ್ ಸೆರಮೋನಿಯಲ್ ಹಾಲ್~ನಲ್ಲಿ ಸಮುದಾಯದ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. 100ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಏರುತ್ತಿರುವ ಚಿನ್ನದ ಬೆಲೆಯನ್ನು ನಿಯಂತ್ರಿಸುವ ಮಾರ್ಗೋಪಾಯಗಳು, ಜನಾಂಗದ ಶ್ರೇಯೋಭಿವೃದ್ಧಿಗೆ ಅನುಕೂಲಕರವಾಗುವ ಯೋಜನೆಗಳು, ಜನಾಂಗದವರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದೆ ಎಂದು ಅವರು ತಿಳಿಸಿದರು.ರಾಜ್ಯ ಮಟ್ಟದ ಸಮಾವೇಶ : ವಿಶ್ವಕರ್ಮ ಸಮಾಜದ ರಾಜ್ಯ ಸಮಾವೇಶವನ್ನು ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಸಭಾಂಗಣದಲ್ಲಿ 25 ರಂದು ನಡೆಸಲು ತೀರ್ಮಾನಿಸಲಾಗಿದೆ.ದೈವಶಿಲ್ಪಿ ವಿಶ್ವಕರ್ಮ ದಿನಾಚರಣೆಯ ಪ್ರಯುಕ್ತ 17ರಂದು ರಾಜ್ಯ ಸರ್ಕಾರ ಕುಶಲಕರ್ಮಿಗಳ ದಿನವೆಂದು ಘೋಷಿಸಿ ಸರ್ಕಾರಿ ರಜೆ ನೀಡಬೇಕು. ರಾಜ್ಯದಲ್ಲಿ 40 ಲಕ್ಷ ವಿಶ್ವಕರ್ಮ ಜನಾಂಗದ ಜನರಿದ್ದಾರೆ. ಮುಂದುವರಿದ ಜನಾಂಗದವರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಅಸಾಧ್ಯ.ಆದ್ದರಿಂದ ರಾಜಕೀಯ ಮೀಸಲಾತಿ ಕಲ್ಪಿಸಿಕೊಡಬೇಕು.  ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ವಿಶ್ವಕರ್ಮ ಜನಾಂಗದವರಿಗೆ ಸ್ಥಾನಗಳನ್ನು ಮೀಸಲಿಡಬೇಕು.`ಕೇರಳದಲ್ಲಿ ಜಾರಿಯಲ್ಲಿರುವಂತೆ ಶೇ. 2ರಷ್ಟು ಉದ್ಯೋಗ ಮೀಸಲಾತಿ ಕಾನೂನನ್ನು ಜಾರಿಗೆ ತರಬೇಕು. ಶೈಕ್ಷಣಿಕ ಸಂಸ್ಥೆಗಳು, ಶಿಲ್ಪಕಲಾ ತರಬೇತಿ ಕೇಂದ್ರಗಳು ಹಾಗೂ ಸಮುದಾಯ ಭವನ ನಿರ್ಮಿಸಲು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಅಗತ್ಯ ಭೂಮಿಯನ್ನು ವಿಶ್ವಕರ್ಮ ಸಂಘಟನೆಗೆ ದೊರಕಿಸಿಕೊಡಬೇಕು~ ಎಂಬ ಬೇಡಿಕೆಗಳನ್ನು ಸಮಾವೇಶದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವ ಸುಜ್ಞಾನಮೂರ್ತಿ ಮಹಾ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯವಹಿಸಲಿದ್ದಾರೆ. ಸಮಾರಂಭವನ್ನು ಗೃಹ ಮತ್ತು ಸಾರಿಗೆ ಸಚಿವರಾದ ಆರ್.ಅಶೋಕ್ ಉದ್ಘಾಟಿಸಲಿದ್ದಾರೆ. ಕೆಆರ್‌ವಿಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಬಿ.ಉಮೇಶ್  ಅಧ್ಯಕ್ಷತೆವಹಿಸುವರು.ಹುಲಿಯೂರು ದುರ್ಗ ದೀಪಾಂಬುದಿ ಶ್ರೀ ಕಾಳಿಕಾಂಬ ದೇವಾಲಯದ ಕರುಣಾಕರ ಮಹಾ ಸ್ವಾಮೀಜಿ, ಚಿಕ್ಕಲ್ಲೂರು ಮಠದ ಪೀಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಸತಿ ಸಚಿವ ವಿ.ಸೋಮಣ್ಣ, ಶಾಸಕರುಗಳಾದ ದಿನೇಶ್ ಗುಂಡೂರಾವ್, ಎಸ್.ಆರ್.ವಿಶ್ವನಾಥ್, ಕೆ.ರಾಜು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸಂಘದ ಗೌರವಾಧ್ಯಕ್ಷ ಮಹಾಲಿಂಗಾಚಾರ್, ಉಪಾಧ್ಯಕ್ಷ ಎಚ್.ಪಿ.ರಾಜು, ಇತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.