ಬುಧವಾರ, ಫೆಬ್ರವರಿ 1, 2023
16 °C

ದೂಳಿನ ನಡುವೆ ಪೊಲೀಸರ ಪ್ರಯಾಸದ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೂಳಿನ ನಡುವೆ ಪೊಲೀಸರ ಪ್ರಯಾಸದ ಕೆಲಸ

ಬೆಂಗಳೂರು: ದೃಷ್ಟಿ ಹಾಯಿಸಿದವರೆಗೂ ವಾಹನಗಳ ಸಾಲು ಸಾಲು. ದೂಳು- ಹೊಗೆಯುಕ್ತ ವಾತಾವರಣ. ನಾಲ್ಕು ಕಡೆಗಳಿಂದಲೂ ಪ್ರವಾಹೋಪಾದಿಯಲ್ಲಿ ಬರುವ ವಾಹನಗಳು. ಮತ್ತೊಂದೆಡೆ ಭಾರಿ ಸದ್ದು ಮಾಡುತ್ತಾ ಕೆಲಸ ನಿರ್ವಹಿಸುವ ದೈತ್ಯಾಕಾರದ ಯಂತ್ರಗಳು. ಇಷ್ಟೆಲ್ಲದರ ನಡುವೆ ಪೊಲೀಸರ ಕಾರ್ಯ ನಿರ್ವಹಣೆ ಹಾಗೂ ರಸ್ತೆ ದಾಟುವ ಪಾದಚಾರಿಗಳು.ನಗರದ ಮೈಸೂರು ರಸ್ತೆಯಲ್ಲಿರುವ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಸದ್ಯ ಕಾರ್ಯ ನಿರ್ವಹಿಸುವ ಸಂಚಾರ ಪೊಲೀಸರ ಪಾಡು ಹೇಳತೀರದು. ನಿತ್ಯ ಲಕ್ಷಾಂತರ ವಾಹನಗಳು ಹಾದು ಹೋಗುವ ಈ ಜಂಕ್ಷನ್‌ನಲ್ಲಿ ಒಂದು ತಿಂಗಳಿನಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಪೊಲೀಸರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.ನಾಯಂಡಹಳ್ಳಿಯು ಬೆಂಗಳೂರು ಮತ್ತು ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಎನಿಸಿದೆ. ಜಂಕ್ಷನ್ನಿನ ಮಗ್ಗುಲಲ್ಲೇ ವರ್ತುಲ ರಸ್ತೆಯಿರುವುದರಿಂದ ವಾಹನಗಳ ಸಂಚಾರ ಹೆಚ್ಚಾಗಿದೆ. ಇತ್ತೀಚೆಗೆ ಬಿಡಿಎ ನೂತನ ಗ್ರೇಡ್ ಸೆಪರೇಟರ್ ನಿರ್ಮಿಸಿದೆ. ಆದರೆ ಇದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಇನ್ನೂ ಪೂರ್ಣಗೊಳ್ಳದ ಕಾರಣ ವಾಹನ ದಟ್ಟಣೆ ಉಂಟಾಗುತ್ತಿದೆ.ಗ್ರೇಡ್ ಸೆಪರೇಟರ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಮುನ್ನ ಬಿಡಿಎ, ಸಂಚಾರ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ ಎಂದು ಹಿರಿಯ ಅಧಿಕಾರಿಗಳೇ ದೂರುತ್ತಾರೆ.ಬೆಳಿಗ್ಗೆ ಮತ್ತು ಸಂಜೆ ಮಾತ್ರವಲ್ಲ, ದಿನದ ಬಹುಪಾಲು ವೇಳೆ ವಾಹನ ಸಂಚಾರ ಹೆಚ್ಚಾಗಿಯೇ ಇರುತ್ತದೆ. ಅಲ್ಲದೇ ಕೆಎಸ್‌ಆರ್‌ಟಿಸಿ ಬಸ್ಸುಗಳು ಇದೇ ಜಂಕ್ಷನ್ ಮೂಲಕ ಹಾದು ಹೋಗುವುದರಿಂದ ಹೆಚ್ಚಿನ ದಟ್ಟಣೆಗೆ ಕಾರಣವಾಗಿದೆ.ಪಾದಚಾರಿಗಳಿಗೆ ಕಿರಿಕಿರಿ: ರಸ್ತೆಯ ಒಂದೆಡೆ ‘ಮೆಟ್ರೊ’ ಹಾಗೂ ಮೇಲು ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದರೆ ಇನ್ನೊಂದೆಡೆ ಎಡೆಬಿಡದೇ ವಾಹನಗಳು ಸಂಚರಿಸುತ್ತವೆ. ಇದರಿಂದ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ.ಪ್ರತಿ ಗಂಟೆಗೆ ಸುಮಾರು 12,000ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ ಎಂದು ಅಂದಾಜಿಸಲಾಗಿದೆ. ವಾರಾಂತ್ಯದಲ್ಲಿ ಇಲ್ಲಿ ಹಾದು ಹೋಗುವ ವಾಹನಗಳ ಸಂಖ್ಯೆ 14 ಸಾವಿರ ದಾಟಿದರೂ ಅಚ್ಚರಿಯಿಲ್ಲ. ಕೆಲವೊಮ್ಮೆ ರಾಜರಾಜ್ವೇರಿನಗರ ಪ್ರವೇಶ ದ್ವಾರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಇತ್ತ ದೀಪಾಂಜಲಿನಗರ ಜಂಕ್ಷನ್‌ವರೆಗೂ ವಾಹನಗಳು ಸರತಿಯಲ್ಲಿ ನಿಂತಿರುತ್ತವೆ. ಇವುಗಳ ನಡುವೆಯೇ ಅಂಬುಲೆನ್ಸ್‌ಗಳು ಸಂಚರಿಸಬೇಕಿದೆ.ಸಿಬ್ಬಂದಿ ಸುಸ್ತೋ ಸುಸ್ತು: ‘ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ವಾಹನ ಸಂಚಾರ ತೀವ್ರವಾಗಿದೆ. ಮೈಸೂರು ರಸ್ತೆಯಿಂದ ಸುಮನಹಳ್ಳಿ ಜಂಕ್ಷನ್ ಸಂಪರ್ಕಿಸುವ ರಸ್ತೆ ಪೂರ್ಣಗೊಂಡ ಬಳಿಕ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಪರಿಣಾಮ ಸಂಚಾರ ನಿಯಂತ್ರಣ ಕಷ್ಟಕರವೆನಿಸಿದೆ. ಈ ಹಿಂದೆ ಕೇವಲ ಮೂರು ಸಿಗ್ನಲ್‌ಗಳಿದ್ದವು. ಇದೀಗ ನಾಲ್ಕು ಸಿಗ್ನಲ್ ಅಳವಡಿಸಿರುವುದರಿಂದ ವಾಹನ ದಟ್ಟಣೆ ತೀವ್ರವಾಗಿದೆ’ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ವಾಹನಗಳು ಸಂಚರಿಸಿದಂತೆಲ್ಲಾ ವಿಪರೀತ ದೂಳು ಏಳುತ್ತದೆ. ಅರ್ಧ ಗಂಟೆಯೊಳಗೆ ಸಮವಸ್ತ್ರ ಕೊಳೆಯಾಗುತ್ತದೆ. ಕುಡಿಯಲು ನೀರು ಸಿಗುವುದಿಲ್ಲ. ಶೌಚಾಲಯ ವ್ಯವಸ್ಥೆಯಿಲ್ಲ. ವಿಶ್ರಾಂತಿ ಪಡೆಯಲು ಪೊಲೀಸ್ ಚೌಕಿ ಕೂಡ ಇಲ್ಲ. ನೀರು ಕುಡಿಯಲು ಅರ್ಧ ಕಿ.ಮೀ. ನಡೆದು ಹೋಗಬೇಕು. ಅತ್ತ ಹೋದರೆ ಇತ್ತ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಬೆಳಿಗ್ಗೆ- ಸಂಜೆ ವೇಳೆಯಲ್ಲಿ ಸಂಚಾರ ನಿಯಂತ್ರಿಸಲು ಹರಸಾಹಸ ಪಡಬೇಕಾಗಿದೆ’ ಎಂದರು.ಅಂಬುಲೆನ್ಸ್‌ಗಳ ಪರದಾಟ: ‘ಕೆಂಗೇರಿ, ರಾಮನಗರ, ಚನ್ನಪಟ್ಟಣದ ಕಡೆಯಿಂದ ನಗರಕ್ಕೆ ಬರುವ ಅಂಬುಲೆನ್ಸ್‌ಗಳ ಸಂಚಾರಕ್ಕೆ ಕೂಡ ಅಡಚಣೆಯಾಗುತ್ತಿದೆ. ಧಾವಂತದಲ್ಲಿರುವ ಜನ ಅಂಬುಲೆನ್ಸ್‌ಗೆ ದಾರಿ ಬಿಡುವುದಿಲ್ಲ. ಪರ್ಯಾಯ ರಸ್ತೆ ಇಲ್ಲದಿರುವುದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಹಾಗಿದ್ದರೂ ವಾಹನ ಸಂಚಾರ ಸ್ಥಗಿತಗೊಳಿಸಿ ಅಂಬುಲೆನ್ಸ್‌ಗಳಿಗೆ ಅನುವು ಮಾಡಿಕೊಡಲಾಗುತ್ತಿದೆ’ ಎಂದು ಹೇಳಿದರು.ಜನರೊಂದಿಗೆ ಗುದ್ದಾಟ: ‘ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ಇದೇ ಮಾರ್ಗದಲ್ಲಿ ಹಾದು ಹೋಗಬೇಕಾಗಿತ್ತು. ಹಾಗಾಗಿ ಮುಖ್ಯಮಂತ್ರಿಗಳ ವಾಹನ ಬರುವ ರಸ್ತೆ ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದ ಸಾರ್ವಜನಿಕರ ನಿಂದನೆಗೆ ಗುರಿಯಾಗಬೇಕಾಯಿತು. ಒಂದು ಹಂತದಲ್ಲಿ ಕೆಲ ವಾಹನ ಸವಾರರು ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆಸಲು ಮುಂದಾದರು. ಪರಿಸ್ಥಿತಿ ಕೈಮೀರದಂತೆ ಎಚ್ಚರ ವಹಿಸಲಾಯಿತು. ಒಟ್ಟಿನಲ್ಲಿ ಇನ್ನೂ ಕೆಲ ತಿಂಗಳು ಈ ತೊಂದರೆಗೆ ಮುಕ್ತಿ ಇಲ್ಲ’ ಎಂದು ಅವರು ಅಳಲು ತೋಡಿಕೊಂಡರು.

‘ಪ್ರತಿ 15 ನಿಮಿಷಕ್ಕೊಂದು ಕೆಎಸ್‌ಆರ್‌ಟಿಸಿ ಬಸ್ಸು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈ ಬಸ್ಸುಗಳು ಬೇರೆ ಮಾರ್ಗದಲ್ಲಿ ಸಂಚರಿಸುವಂತಾದರೆ ಪರಿಸ್ಥಿತಿ ಸುಧಾರಿಸಲಿದೆ’ ಎಂದರು.

ಪರಿಸ್ಥಿತಿ ಇನ್ನೂ ಗಂಭೀರ!

‘ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ‘ಮೆಟ್ರೊ’ ರೈಲು ಮತ್ತು ಬಿಡಿಎ ಮೇಲುಸೇತುವೆ ನಿರ್ಮಿಸುವ ಕಾರ್ಯ ಒಮ್ಮೆಗೆ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ತುಸು ಅಡಚಣೆ ಉಂಟಾಗಿದೆ. ಹಾಗಾಗಿ ಪ್ರತಿ ಪಾಳಿಯಲ್ಲಿ ನಾಲ್ಕೈದು ಮಂದಿ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸಂಚಾರ ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಪಾಂಡುರಂಗ ಎಚ್. ರಾಣೆ ‘ಪ್ರಜಾವಾಣಿ’ಗೆ ತಿಳಿಸಿದರು.‘ಸುಮನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಿದ ಬಳಿಕ ದಟ್ಟಣೆ ಹೆಚ್ಚಾಗಿದೆ. ಎರಡು ತಿಂಗಳ ನಂತರ ರಸ್ತೆಯ ಮಧ್ಯ ಭಾಗದಲ್ಲಿ ಎರಡು ಬೃಹತ್ ಪಿಲ್ಲರ್‌ಗಳನ್ನು ನಿರ್ಮಿಸಲು ಬಿಡಿಎ ಮುಂದಾಗಲಿದೆ. ಆಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಏಕೆಂದರೆ ರಾಜರಾಜೇಶ್ವರಿನಗರದ ಕಡೆಯಿಂದ ಬರುವ ವಾಹನಗಳಿಗೆ ಒಂದು ಪಥದಲ್ಲಷ್ಟೇ ಸಂಚರಿಸಲು ಅವಕಾಶ ನೀಡಲಾಗುವುದು’ ಎಂದರು.‘ಸಂಚಾರ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಗೃಹ ರಕ್ಷಕ ದಳದ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಬೇಕು. ಎಲ್ಲರೂ ತಾಳ್ಮೆಯಿಂದ ವರ್ತಿಸಿ ಸಹಕರಿಸಿದರೆ ನಿಯಂತ್ರಣ ಕಾರ್ಯ ಸುಲಭವೆನಿಸುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.