ಭಾನುವಾರ, ಮೇ 22, 2022
22 °C

ದೆಹಲಿ ತಿರಸ್ಕಾರ, ರಾಜ್ಯ ಪುರಸ್ಕಾರ!

ಪ್ರಜಾವಾಣಿ ವಾರ್ತೆ/ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೂರ ಶಿಕ್ಷಣ ಮಂಡಳಿಯಿಂದ (ಡಿಇಸಿ) ಮಾನ್ಯತೆ ಪಡೆಯದೇ ತಮಿಳುನಾಡು ವಿಶ್ವವಿದ್ಯಾಲಯಗಳು ದೂರ ಶಿಕ್ಷಣದ ಮೂಲಕ ನೀಡುವ ಪದವಿ ಪ್ರಮಾಣ ಪತ್ರಗಳು ಸರ್ಕಾರಿ ನೌಕರಿ ಪಡೆಯಲು ಅರ್ಹವಾಗಿರುವುದಿಲ್ಲ ಎಂದು ಡಿಇಸಿ ಅನೇಕ ಸಲ ಹೇಳಿದೆ. ಆದರೆ ಇಂತಹ ವಿಶ್ವವಿದ್ಯಾಲಯಗಳು ನೀಡಿದ ಎಂಫಿಲ್ ಪದವಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮಾನ್ಯತೆ ಕೊಟ್ಟು ನೂರಾರು ಜನರಿಗೆ ಉದ್ಯೋಗವನ್ನೂ ನೀಡಿದೆ.ದೂರ ಶಿಕ್ಷಣ ಮಂಡಳಿ ಅಧ್ಯಕ್ಷ ವಿ.ಎನ್.ರಾಜಶೇಖರ ಪಿಳ್ಳೈ ಅವರು 2008 ಜುಲೈ 25ರಂದು `ತಮಿಳುನಾಡು ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ಪದವಿಗಳು ಅನರ್ಹ' ಎಂದು ಹೇಳಿದ್ದರು. ಆದರೆ 2008ರ ಜನವರಿ ತಿಂಗಳಿನಲ್ಲಿಯೇ ತಮಿಳುನಾಡಿನ ವಿಶ್ವವಿದ್ಯಾಲಯಗಳು ಸಾವಿರಕ್ಕೂ ಹೆಚ್ಚು ಎಂಫಿಲ್ ಪದವಿ ನೀಡಿದ್ದವು. ಇದೇ ಸಂದರ್ಭದಲ್ಲಿ ಕೆಪಿಎಸ್ ನಡೆಸಿದ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲಿ 400ಕ್ಕೂ ಹೆಚ್ಚು ಅಭ್ಯರ್ಥಿಗಳು ಇಂತಹ ಎಂಫಿಲ್ ಪಡೆದು ಉಪನ್ಯಾಸಕರಾಗಿ ನೇಮಕವಾಗಿದ್ದಾರೆ.ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳು ಕರ್ನಾಟಕದಲ್ಲಿ ಅಂಚೆ ತೆರಪಿನ ಶಿಕ್ಷಣ, ಆಫ್ ಕ್ಯಾಂಪಸ್, ಸ್ಟಡಿ ಸೆಂಟರ್ ಮುಂತಾದ ಹೆಸರಿನಲ್ಲಿ ದೂರ ಶಿಕ್ಷಣ ನೀಡುತ್ತಿದ್ದು ಇದರಿಂದ ರಾಜ್ಯದ ವಿಶ್ವವಿದ್ಯಾಲಯಗಳಿಗೆ ತೊಂದರೆಯಾಗುತ್ತಿದೆ. ಇವು ಕಾನೂನು ಬಾಹಿರವಾಗಿದ್ದು, ಕ್ರಮ ಕೈಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ 2008ರ ನವೆಂಬರ್ 7ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.2006ರಲ್ಲಿ ನಡೆದ ದೇಶದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ 2007-08ನೇ ಸಾಲಿನಿಂದ ದೂರ ಶಿಕ್ಷಣದ ಮೂಲಕ ಎಂಫಿಲ್ ಮತ್ತು ಪಿಎಚ್‌ಡಿ ಪದವಿ ನೀಡುವಂತಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ತಮಿಳುನಾಡಿನ ವಿವಿಧ ವಿವಿಗಳು 2008ರಲ್ಲಿಯೇ ನೀಡಿದ ಎಂಫಿಲ್ ಆಧಾರದಲ್ಲಿಯೇ ಕೆಪಿಎಸ್‌ಸಿ ಸಾಕಷ್ಟು ಮಂದಿಗೆ ಉದ್ಯೋಗ ನೀಡಿದೆ.ಪ್ರಥಮ ದರ್ಜೆ ಕಾಲೇಜುಗಳಿಗೆ 2550 ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಕೆಪಿಎಸ್‌ಸಿ 2007ರ ಡಿಸೆಂಬರ್ 24ರಂದು ಅಧಿಸೂಚನೆ ಹೊರಡಿಸಿತು. ಅರ್ಜಿ ಸಲ್ಲಿಸಲು 2008ರ ಜನವರಿ 30 ಕಡೆ ದಿನವಾಗಿತ್ತು. ನಂತರ ಅರ್ಜಿ ಸಲ್ಲಿಸುವ ಅವಕಾಶವನ್ನು ಫೆ.20ರವರೆಗೆ ವಿಸ್ತರಿಸಿತು. ಹೀಗೆ ಅವಧಿ ವಿಸ್ತರಿಸಿದ 20 ದಿನಗಳಲ್ಲಿಯೇ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಎಂಫಿಲ್ ಪಡೆದವರು ಕೆಲಸ ಗಿಟ್ಟಿಸಿಕೊಂಡಿದ್ದಾರೆ ಎಂಬ ಅಂಶವನ್ನು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳು ಬಹಿರಂಗ ಪಡಿಸಿವೆ. ದೂರ ಶಿಕ್ಷಣದಲ್ಲಿ ಕೆಲವು ಅಭ್ಯರ್ಥಿಗಳು ಪಡೆದ ಎಂಫಿಲ್ ಪದವಿ ಪ್ರಮಾಣ ಪತ್ರಗಳು 3 ಬಗೆಯಲ್ಲಿವೆ. ನೋಂದಣಿ ಸಂಖ್ಯೆ ಬದಲಾಗಿರುವುದು ಹಾಗೂ ಪದವಿಯಲ್ಲಿ ಹೆಸರು ತಪ್ಪಾಗಿವೆ. ಆದರೂ ಕೆಪಿಎಸ್‌ಸಿ ಅವುಗಳಿಗೆ ಪುರಸ್ಕಾರ ನೀಡಿದೆ.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿದ ನಂತರವೂ ಬಂದ ನೂರಾರು ಅರ್ಜಿಗಳನ್ನು ಸ್ವೀಕಾರ ಮಾಡಿರುವುದಾಗಿ ಕೆಪಿಎಸ್‌ಸಿ ಇತ್ತೀಚೆಗೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದೆ. ಅಪರಿಪೂರ್ಣ ಅರ್ಜಿಗಳನ್ನು ಒಪ್ಪಿಕೊಂಡಿರುವುದು, ಅರ್ಜಿ ತಿರಸ್ಕೃತವಾಗಿದ್ದರೂ ಅವರ ಹೆಸರು ಆಯ್ಕೆ ಪಟ್ಟಿಯಲ್ಲಿ ಪ್ರಕಟವಾಗಿರುವ ಪವಾಡಗಳೂ ನಡೆದಿವೆ. ಪದವಿಯಲ್ಲಿ ಶೇ 58.12 ಅಂಕ ಪಡೆದಿದ್ದರೂ ನೋಟಿಸ್ ಬೋರ್ಡ್‌ನಲ್ಲಿ ಶೇ 62.12 ಎಂದು ತೋರಿಸಿ ಕೆಲಸ ನೀಡಿರುವ ಉದಾಹರಣೆಯೂ ಇದೆ. ಇದಕ್ಕೆಲ್ಲಾ ತಾಂತ್ರಿಕ ದೋಷ ಕಾರಣ ಎಂದು ಕೆಪಿಎಸ್‌ಸಿ ಹೇಳುತ್ತದೆ.ಕರಡು ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಕೆಪಿಎಸ್‌ಸಿ ಆಕ್ಷೇಪಣೆಗಳಿಗೆ ಆಹ್ವಾನಿಸಿತು. ಆಗ ನೂರಾರು ಆಕ್ಷೇಪಣೆಗಳು ಬಂದವು. ಆದರೆ ಯಾರ ಆಕ್ಷೇಪವನ್ನೂ ಪರಿಗಣಿಸದ ಆಯೋಗ ಕರಡು ಪಟ್ಟಿಯನ್ನೇ ಅಧಿಕೃತ ಪಟ್ಟಿ ಎಂದು ಪ್ರಕಟಿಸಿತು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರಿಗೆ ವರ್ಷಕ್ಕೆ ಒಂದರಂತೆ ಗರಿಷ್ಠ 5 ಕೃಪಾಂಕ ನೀಡಲಾಗುವುದು ಎಂದು ಕೆಪಿಎಸ್‌ಸಿ ಅಧಿಸೂಚನೆಯಲ್ಲಿ ಪ್ರಕಟಿಸಿತ್ತು. ಆದರೆ ಸಮಾಜ ಶಾಸ್ತ್ರ ವಿಷಯವೊಂದರಲ್ಲಿಯೇ ಖಾಸಗಿ ಕಾಲೇಜಿನ 23 ಅರೆಕಾಲಿಕ ಉಪನ್ಯಾಸಕರು ಆಯ್ಕೆಯಾಗಿದ್ದಾರೆ. ಹೀಗೆ ಆಯ್ಕೆಯಾದ ಅಭ್ಯರ್ಥಿಯೊಬ್ಬರು ಹಂಪಿ ವಿಶ್ವವಿದ್ಯಾಲಯದಲ್ಲಿ ಎಂಫಿಲ್ ಮಾಡುತ್ತಿದ್ದು ಶಿಷ್ಯವೇತನವನ್ನು ಪಡೆಯುತ್ತಿದ್ದರು. ಆದರೆ ಅವರು ತಾವು ಇದೇ ಅವಧಿಯಲ್ಲಿ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಕಾಲೇಜಿನಲ್ಲಿ 5 ವರ್ಷ ಉಪನ್ಯಾಸಕನಾಗಿದ್ದೆ ಎಂಬ ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ.ಸಾಮಾನ್ಯವಾಗಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಮೊದಲು ಅಂಕ ಪಟ್ಟಿ ಪ್ರಕಟವಾಗುತ್ತದೆ. ನಂತರ ಘಟಿಕೋತ್ಸವ ಪ್ರಮಾಣ ಪತ್ರ ನೀಡಲಾಗುತ್ತದೆ. ಆದರೆ ಅಂಕ ಪಟ್ಟಿಯನ್ನು ನೀಡುವುದಕ್ಕೆ ಮೊದಲೇ ಪಡೆದ ಘಟಿಕೋತ್ಸವ ಪ್ರಮಾಣ ಪತ್ರವನ್ನು ನೀಡಿ 13 ಮಂದಿ ಉದ್ಯೋಗ ಪಡೆದುಕೊಂಡ ಪ್ರಸಂಗವೂ ಈ ಸರಮಾಲೆಯಲ್ಲಿದೆ.ಸರ್ಕಾರಿ ಪ್ರಥಮ ದರ್ಜೆ ಉಪನ್ಯಾಸಕರ ನೇಮಕಾತಿ ಮಾಡುವಾಗ ಕೆಪಿಎಸ್‌ಸಿ ನಿಯಮಾವಳಿಯನ್ನು ಉಲ್ಲಂಘಿಸಿರುವುದರ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ 2013ರ ಜುಲೈ 8ರಂದು ತೀರ್ಪು ನೀಡಿದೆ. ಅತಿಥಿ ಉಪನ್ಯಾಸಕರಿಗೆ ನೀಡಿದ ಕೃಪಾಂಕವನ್ನು ರದ್ದು ಮಾಡಿ ನೇಮಕಾತಿ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುವಂತೆ ಸೂಚಿಸಿದೆ. ನೇಮಕಾತಿಯಲ್ಲಿ ಆಗಿರಬಹುದಾದ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ. ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.