ಶನಿವಾರ, ಮೇ 28, 2022
26 °C

ದೇವಣಗಾಂವ ಗ್ರಾಮದ ರಸ್ತೆಗಳ ದುಃಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಣಗಾಂವ ಗ್ರಾಮದ ರಸ್ತೆಗಳ ದುಃಸ್ಥಿತಿ

ಆಲಮೇಲ: ಸಿಂದಗಿ ಶಾಸಕರ ತವರು ಈ ದೇವಣಗಾಂವ ಗ್ರಾಮ. ಎಂಟು ಸಾವಿರಕ್ಕೂ ಮಿಕ್ಕು ಜನಸಂಖ್ಯೆ ಇಲ್ಲಿದೆ. ಗ್ರಾಮದಲ್ಲೊಂದು ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡವಿಲ್ಲ. ಇದ್ದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳು ದುರವಸ್ಥೆಯಿಂದ ಕಂಗೊಳಿಸುತ್ತವೆ.ಎಲ್ಲೆಡೆ ಕಂಪೌಂಡ್ ಗೋಡೆಯನ್ನು ಕೆಡವಿಹಾಕಲಾಗಿದೆ. ಕಟ್ಟಡಗಳು ತೀವ್ರ ಕಳಪೆಯಾಗಿ ನಿರ್ಮಾಣಗೊಂಡಿರುವುದರಿಂದ ಅವು ಇಂದೋ ನಾಳೆಯೋ ಕುಸಿಯುತ್ತವೆ. ಇದ್ದುದರಲ್ಲೇ ಸರಿಯಾಗಿ ಕಟ್ಟಿದ ಸಮೂಹ ಸಂಪನ್ಮೂಲ ಕೇಂದ್ರವನ್ನು ದುಷ್ಕರ್ಮಿಗಳು ವಿರೂಪಗೊಳಿಸಿ ಬಾಗಿಲು ಕಿಟಕಿಗಳನ್ನು ದೋಚಿದ್ದಾರೆ. ಇನ್ನು ಅಂಗನವಾಡಿಗಳ ಸ್ಥಿತಿಯಂತೂ ಕೇಳಲೇಬೇಡಿ! ಇದು ನಮ್ಮ ಶಾಸಕರ ಹುಟ್ಟೂರಿನ ಕಥೆಯ ವ್ಯಥೆ!ಇಲ್ಲೊಂದು ಹೊಸೂರು ಬಡಾವಣೆ ಎಂಬುದು ಬಡವರು ಕಟ್ಟಿಕೊಂಡಿರುವ ಮನೆಗಳ ಪ್ರದೇಶ. ಇಲ್ಲಿನ ಬೀದಿದೀಪಗಳು ಬೆಳಗುವುದಿಲ್ಲ: ಸಂಜೆಯಾಯಿತೆಂದರೆ ಕತ್ತಲೆಯ ದುರ್ಗಮ ರಸ್ತೆಯಲ್ಲಿ ದೊಡ್ಡವರು ಮೊದಲು ಮಾಡಿ ಯಾರಿಗಾದರೂ ತಿರುಗಾಡಲು ಅಂಜಿಕೆ ಹುಟ್ಟಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.

 

ಸ್ವಲ್ಪ ಮಳೆ ಬಂದರಂತೂ ಈ ಬಡಾವಣೆಯ ಸ್ಥಿತಿ ಇನ್ನೂ ಶೋಚನೀಯ! ರಸ್ತೆಯ ಎಲ್ಲಿ ಎಂದು ಹುಡುಕಾಡಬೇಕಾಗುತ್ತದೆ. ಅಲ್ಲಿ ತಗ್ಗು, ಕಂದಕಗಳು ನಿರ್ಮಾಣವಾಗಿ ಮಕ್ಕಳು, ಮುದುಕರನ್ನು ಬೀಳಿಸಲು ತಯಾರಾಗಿವೆಯೇನೊ ಎನ್ನುವಂತಿರುತ್ತವೆ.ಇಲ್ಲಿನ ಜನರು ಈ ರಸ್ತೆ ದಾಟುವಾಗ  ,ಕೆಲವೊಮ್ಮೆ ಇಲ್ಲಿನ ಮಹಿಳೆಯರು ಗಿರಣಿಯಿಂದ ಬೀಸಿಕೊಂಡು ಬರುವಾಗ, ದಿನಸಿ ತರುವಾಗ ಈ ರಸ್ತೆಯಲ್ಲಿ ಆಯತಪ್ಪಿ ಬಿದ್ದು, ಇದ್ದ ವಸ್ತುಗಳನ್ನು ಚೆಲ್ಲಿ ರಸ್ತೆಗೆ ( ಅಲ್ಲ! ಜನ ಪ್ರತಿನಿಧಿಗಳಿಗೆ) ಹಿಡಿ ಶಾಪ ಹಾಕುತ್ತಾರೆ. ಇಲ್ಲಿ ಬಿದ್ದು ಎದ್ದವರ ಪೈಕಿ ಲಾಲಬಿ ನದಾಫ, ಬಡೇಮಾ ಭಗವಾನ, ಜಯಶ್ರೀ ಪೂಜಾರಿ, ದಾನಮ್ಮ ಪೂಜಾರಿ `ಪ್ರಜಾವಾಣಿ~ಯೊಂದಿಗೆ ತಮ್ಮ ಸಂಕಟ ಹಂಚಿಕೊಂಡರು.ಗ್ರಾಮಕ್ಕೆ ಪ್ರವೇಶಿಸುವ ಮುಖ್ಯ ರಸ್ತೆಯ ಕಥೆಯೂ ಬೇರೆ ಇಲ್ಲ. ಅಲ್ಲೊಂದು ದೊಡ್ಡ ಹೊಂಡವೇ ನಿರ್ಮಾಣವಾಗಿ ಬಹಳ ದಿನಗಳೇ ಆಗಿವೆ. (ಚಿತ್ರದಲ್ಲಿ ನೋಡಬಹುದು),ಇನ್ನು ಮಹಾಮಳೆಗೆ ನಿರಾಶ್ರಿತರಾದವರಿಗೆ `ಆಸರೆ~ಯ ರಸ್ತೆಗಳು ಅವು ಹುಟ್ಟುವ ಮೊದಲೇ ಕೆಟ್ಟು ನಿಂತಂತೆ ಕಾಣುತ್ತವೆ. ಆಸರೆ ಮನೆಗಳು ಸಂಪೂರ್ಣ ತಯಾರಾಗಿವೆ. ಅವು ಇನ್ನೇನು ಹಸ್ತಾಂತರ ಆಗಿಬೇಕು; ಆದರೆ ಇಲ್ಲಿನ ರಸ್ತೆಗಳು ಕೆಸರು ಗದ್ದೆಗಳೇ,  ಹೊಲದ ರಸ್ತೆ ತರಹವೇ ಎಂದು ಜನ ಆಡಿಕೊಳ್ಳುತ್ತಾರೆ.ಈ ಗ್ರಾಮಕ್ಕೆ ಹೋಗಬೇಕೆಂದರೆ ಆಲಮೇಲದಿಂದ 15 ಕಿ.ಮಿ ದೂರ. ಇಲ್ಲಿನ ಒಂದೊಂದು ರಸ್ತೆಯೂ ಒಂದೊಂದು ಕಥೆ ಹೇಳುತ್ತದೆ. ಮಹಾ ಮಳೆಗೆ ಒಂದು ಕಡೆ ದೊಡ್ಡ  ಕಂದಕವೇ ಬಿದ್ದು ಹೋಗಿದೆ. ಎಚ್ಚರ ತಪ್ಪಿ ವಾಹನ ಓಡಿಸಿದರೆ ಮೃತ್ಯು ಲೋಕ ಕಣ್ಮುಂದೆಯೇ!ಶಾಸಕರು ತಮ್ಮೂರಿನ ಈ ರಸ್ತೆಗಳನ್ನು ಸುಧಾರಿಸಬೇಕು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಅವರಿಗೆ ಕೇಳಿಸೀತೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.