ಬುಧವಾರ, ಮೇ 25, 2022
22 °C

ದೇವೋಭವನಾದ ರೈತ ಮತ್ತು ದೇವರಂಥ ಆತನ ಮೌನ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತ ದೇಶದ ಬೆನ್ನೆಲುಬು, ಅನ್ನದಾತ. ಹೀಗೆಲ್ಲಾ ಹೇಳಿ ಬಡ ರೈತನಿಗೆ ಉತ್ತುಂಗದ ಗೌರವ ನೀಡಲು ಆರಂಭಿಸಿ ವರ್ಷಗಳೇ ಸರಿದು ಹೋಗಿವೆ. ಹೀಗೆ ಹೇಳುತ್ತಲೇ ಆತನ ಆರ್ಥಿಕ ಪರಿಸ್ಥಿತಿ ಚೇತರಿಕೆ ಕಾಣದಿರುವುದನ್ನು, ಇನ್ನಷ್ಟು ಬಡ ಆಗುತ್ತಿರುವುದನ್ನು, ಕೃಷಿ ವೆಚ್ಚದ ಹೊರೆಯಿಂದಾಗಿ ಬೆನ್ನೆಲುಬು ಪ್ರತಿ ವರ್ಷ ಬಾಗುತ್ತಿರುವುದು ಗಮನಕ್ಕೆ ಬರುತ್ತಿಲ್ಲ.ರಾಯಚೂರು ಕೃಷಿ ವಿಶ್ವವಿದ್ಯಾಲಯ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಅನ್ನದಾತನಿಗೆ `ರೈತ ದೇವೋಭವ~ ಎಂಬ ಗೌರವ ನೀಡಲು ನಿರ್ಧರಿಸಿದೆ. ತಾಯಿ, ತಂದೆ, ಗುರುವಿನ ಬಳಿಕ ಈಗ ರೈತನಿಗೆ ದೇವೋಭವದ ಸ್ಥಾನ. ರೈತನಲ್ಲಿ ದೇವರನ್ನು ಕಾಣಲು ಇಷ್ಟು ವರ್ಷ ಬೇಕಾಯಿತೇ ಎಂಬ ಪ್ರಶ್ನೆಯಿದ್ದರೂ, ಈಗಲಾದರೂ ಆಯಿತಲ್ಲ ಎಂಬ ಸಮಾಧಾನ.ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ವಿಶ್ವವಿದ್ಯಾಲಯ ಮತ್ತು ಅದರ ವ್ಯಾಪ್ತಿಯ ವಿವಿಧ ಕೃಷಿ ವಿಜ್ಞಾನ ಕೇಂದ್ರಗಳು, ಸಂಸ್ಥೆಗಳ ಪ್ರವೇಶದಲ್ಲಿ ಫಲಕದೊಂದಿಗೆ `ರೈತ ದೇವೋಭವ~ ಎಂಬ ಘೋಷಣೆಯೂ ರಾರಾಜಿಸಲಿದೆ.ಹಾಗೆ ನೋಡಿದರೆ ರೈತ ದೇವರಾಗಿ, ದೇವರಂತೆಯೇ `ಮೌನ~ವನ್ನು ತಳೆದು ವರ್ಷಗಳೇ ಕಳೆದು ಹೋಗಿರಬೇಕು. ಅಥವಾ ಈತ ಇನ್ನೊಂದೆಡೆ, ಆಡಳಿತದಲ್ಲಿರುವ ಕಿವಿಗಳಿಗೂ ಈತ ಕೂಗೂ ಕೇಳಿಸುತ್ತಿಲ್ಲ ಎಂಬುದು ಇರಬಹುದು. ಇತ್ತೀಚಿನ ಸಂಗತಿಗಳನ್ನೇ ಗಮನಿಸಿ.ಪೆಟ್ರೋಲ್ ಬೆಲೆ ಏರಿಕೆಯಾದ ಕೂಡಲೇ ಪ್ರತಿಭಟನೆಗಳದು ದೊಡ್ಡ ಕೂಗು. ಪ್ರತಿಭಟನೆಯ ಆಕ್ರೋಶ ರಸ್ತೆಗಳ ವಾಹನಗಳ ಶಬ್ದಗಳನ್ನು ಮೀರಿಸುತ್ತದೆ. ಆದರೆ, ರಸಗೊಬ್ಬರ, ಕೃಷಿ ಪರಿಕರಗಳ ಬೆಲೆ ಹೆಚ್ಚಾದರೆ, ಅದು ಹೊರೆ ಎನಿಸಿದರೂ ದೊಡ್ಡ ಪ್ರತಿಭಟನೆ ಆಗುವುದಿಲ್ಲ. ಬಡ ರೈತನದು ದಿವ್ಯ ಮೌನ. ಏಕೆಂದರೆ ಆತ ದೇವರು.ಮುಂಗಾರು ಆಗಮಿಸುವ ಮೊದಲೇ ಬೀಜ ಖರೀದಿಸಲು, ರಸಗೊಬ್ಬರ ಖರೀದಿಸಲು ರೈತ ಸಾಲುಗಟ್ಟಿ ನಿಲ್ಲುತ್ತಾನೆ. ಪ್ರತಿ ವರ್ಷ ಬಿತ್ತನೆಯ ಅವಧಿ ಬರುತ್ತದೆ, ಬೇಡಿಕೆಯ ಅರಿವು ಇರುತ್ತದೆ. ಆದರೂ, ಸಾಕಷ್ಟು ದಾಸ್ತಾನು ಇರುವುದಿಲ್ಲ. ಬೀಜ, ಗೊಬ್ಬರ ಸಿಗುತ್ತದೋ ಇಲ್ಲವೋ, ಲಾಠಿ ಏಟಂತೂ ಮೌನ. ರಾಜಕಾರಣದ ಅಂಗಳದಿಂದ ಖಂಡನೆಗಳು ಮೊಳಗುತ್ತವೆ. ರೈತ ಏನೂ ಮಾತನಾಡುವುದಿಲ್ಲ. ಮತ್ತೆ, ಮಾರನೇ ದಿನ ಬೀಜಕ್ಕಾಗಿ ಸಾಲುಗಟ್ಟುತ್ತಾನೆ. ಆತನದು ಮೌನ. ಏಕೆಂದರೆ ಆತ ದೇವರು.`ಮಂಡಿಯುದ್ದ ಕಬ್ಬು, ಎದೆಯುದ್ದ ಸಾಲ~ ಎಂಬುದು ಮಂಡ್ಯದಂಥ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಆರ್ಥಿಕ ಸ್ಥಿತಿಯನ್ನು ಬಣ್ಣಿಸಲು ಬಳಸುವ ನಾಣ್ಣುಡಿ. ಕಬ್ಬಿಗೆ ಉತ್ತಮ ದರ ಪಡೆಯಲು, ಕಟಾವು ಮಾಡಿಸಲು, ಪೂರೈಸಿದ ಕಬ್ಬಿಗೆ ಹಣ ಪಡೆಯಲು. ಕಬ್ಬು ಬೆಳೆಗಾರರದು ಪ್ರತಿ ವರ್ಷ ಯಾಚಿಸುವ ಸ್ಥಿತಿ. ಆದರೂ, ಆತನದು ಮೌನ. ಏಕೆಂದರೆ ಆತ ದೇವರು.ರೈತ ಸಂಘಟನೆಗಳು ಧರಣಿ ಕೂರಬೇಕು. ಎರಡು ಮೂರು ಧರಣಿ, ಪ್ರತಿಭಟನೆಗಳು ನಡೆದ ಮೇಲೆ ಜನ ಪ್ರತಿನಿಧಿಗಳು ಭರವಸೆ ನೀಡಬೇಕು, ಅದು ಪತ್ರಿಕೆಗಳಲ್ಲಿ ಫೋಟೋ ಸಮೇತ ಬರಬೇಕು. ತದನಂತರ ಒಂದಷ್ಟು ಸಭೆಗಳು ನಡೆದ ಮೇಲೇ ದರ ನಿಗದಿಯಾಗಬೇಕು. ಸಾಮಾನ್ಯ ರೈತ  ಇದನ್ನು ಗಮನಿಸಿಯೂ ಮೌನವಾಗಿರುತ್ತಾನೆ. ಏಕೆಂದರೆ ಆತ ದೇವರು.ಅಲ್ಲಲ್ಲಿ ರೈತ ಸಂಘಟನೆಗಳ ಪ್ರತಿಭಟನೆಗಳು, ಕೂಗುಗಳು ಕೇಳಿಬಂದರೂ ಇಂಥ ಮೌನ ತಳೆಯುವ ಸಾಮಾನ್ಯ ರೈತನದ್ದೇ ದೊಡ್ಡ ಸಮೂಹ. ಹೆಚ್ಚುತ್ತಿರುವ ಕೃಷಿ ಹೊರೆ, ಬೆಳೆದ ಫಸಲಿಗೆ ಸಕಾಲದಲ್ಲಿ ಸಿಗದ ಬೆಲೆ, ಮಧ್ಯವರ್ತಿಗಳಿಂದಾಗಿ ತನಗೆ ಸಿಗದ ನ್ಯಾಯಯುತ ದರ. ಈ ಎಲ್ಲರಿಂದ ನಲುಗುತ್ತಿದ್ದಾನೆ. ಇಂಥ ರೈತನೇ ನಿಜವಾದ ದೇವೋಭವ.ದೇವೋಭವದ, ಬೆನ್ನೆಲುಬು ಇತ್ಯಾದಿ ಸ್ಥಾನ ನೀಡುವ ಬದಲಿಗೆ ಈತನನ್ನು ಮನುಷ್ಯನಾಗಿಯೇ ನೋಡುವುದು ಯಾವಾಗ? ಬೆಳೆದ ಫಸಲಿಗೆ, ಆತನ ದುಡಿಮೆಗೆ ಯಾವುದೇ ಪ್ರತಿಭಟನೆ, ಆಗ್ರಹ, ಹೋರಾಟಗಳಿಲ್ಲದೇ ನ್ಯಾಯಯುತ ಬೆಲೆಯನ್ನು; ಹೋರಾಟಗಳಿಲ್ಲದೆ ಬಿತ್ತನೆ ಬೀಜ, ಗೊಬ್ಬರವನ್ನು ಒದಗಿಸುವ ದಿನ ಬರುವುದು ಯಾವಾಗ?

ಸಾಮಾನ್ಯ ರೈತನಿಗೆ ದೇವರ ಸ್ಥಾನ ನೀಡುವುದಕ್ಕೂ ಮೊದಲು ಆತನಿಗೆ ಸಿಗಬೇಕಾದ್ದನ್ನು ಸಕಾಲದಲ್ಲಿ, ಸುಗಮವಾಗಿ ಒದಗಿಸಲು ನಿರ್ಣಯಗಳನ್ನು ಜಾರಿ ಮಾಡುವವರು ಕೈಗೊಳ್ಳುವ ಮೂಲಕ, ಅಂಥದೊಂದು ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ `ದೇವೋಭವನಾದ~ ಸಾಮಾನ್ಯ ರೈತನನ್ನು ಹೊರತುಪಡಿಸಿದ ಸಮಾಜ ಚಿಂತಿಸಬೇಕಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.