ಭಾನುವಾರ, ಏಪ್ರಿಲ್ 18, 2021
33 °C

ದೇಶದಲ್ಲಿ ಶೇ 15ರಷ್ಟು ಮಳೆ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂಗಾರು ವೈಫಲ್ಯ ಕುರಿತು ಮೇಲಿಂದ ಮೇಲೆ ಆಘಾತಕಾರಿ ಅಂಶಗಳನ್ನು ಹೊರಗೆಡವುತ್ತಿರುವ ಹವಾಮಾನ ಇಲಾಖೆಯು ಕರ್ನಾಟಕ, ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಿಗೆ `ಬರ~ಸಿಡಿಲಿನಂಥ ಸುದ್ದಿಯನ್ನು ಬಿತ್ತರಿಸಿದೆ.ಈ ಬಾರಿ ಶೇ 15ರಷ್ಟು ಮಳೆ ಕೊರತೆ ಆಗಲಿದೆ. ಕರ್ನಾಟಕದ ಒಳನಾಡು, ಆಹಾರ ಧಾನ್ಯಗಳ ಕಣಜಗಳಾದ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಮುಂದಿನ ದಿನಗಳು ಭೀಕರವಾಗಲಿವೆ ಎಂದು ಇಲಾಖೆ ಮಹಾ ನಿರ್ದೇಶಕ ಲಕ್ಷ್ಮಣ್ ಸಿಂಗ್ ರಾಥೋಡ್ ಹೇಳಿದ್ದಾರೆ.`2009ರ ಬಳಿಕ ಇದೇ ಮೊದಲ ಬಾರಿ ದೇಶವನ್ನು ಬರಗಾಲ ಕಾಡಲಿದೆ. ಜೂನ್‌ನಲ್ಲಿ ಮುಂಗಾರು ವಿಳಂಬದಿಂದ ಶೇ 20ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಗುರುವಾರದ ವರೆಗೆ ದೇಶದಲ್ಲಿ 378.8 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ 471.4 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು~ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.`ಮಳೆ ವೈಫಲ್ಯದಿಂದ ಬತ್ತದ ಬೇಸಾಯಕ್ಕೆ ಹೊಡೆತ ಬೀಳುವುದಿಲ್ಲ. ಆದರೆ ದ್ವಿದಳ ಧಾನ್ಯಗಳ ಉತ್ಪಾದನೆಯು ಕುಂಠಿತಗೊಳ್ಳಲಿದೆ. ಈ ತಿಂಗಳಿನಲ್ಲಿ ವಾಡಿಕೆ ಮಳೆ ಬೀಳಲಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಆಗಲಿದೆ~ ಎಂದೂ ಹೇಳಿದರು.ಸರಾಸರಿ ಮಳೆ ಕೊರತೆಯು ಶೇ10ಕ್ಕಿಂತಲೂ ಹೆಚ್ಚಿದ್ದರೆ  ಸಾಮಾನ್ಯ ಬರ,  ಶೇ50ಕ್ಕಿಂತಲೂ ಅಧಿಕವಾಗಿದ್ದರೆ ಭೀಕರ ಬರಗಾಲ ಎನ್ನಲಾಗುತ್ತದೆ. ದೇಶದ ವಾಯವ್ಯ ಭಾಗದಲ್ಲಿ ಬರದ ಆತಂಕ ಕಾಡುತ್ತಿದೆ.

ರಾಜಕೀಯ ಬೇಡ: ಕರ್ನಾಟಕ, ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಬರ ಪರಿಸ್ಥಿತಿ ಎದುರಿಸುತ್ತಿದ್ದು, ಕೇಂದ್ರದ ನೆರವಿಗೆ ಮನವಿ ಸಲ್ಲಿಸುವಾಗ ರಾಜಕೀಯ ಮಾಡಕೂಡದು ಎಂದು ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.ಕರ್ನಾಟಕ- ರೂ, 11,000ಕೋಟಿ, ಮಹಾರಾಷ್ಟ್ರ-ರೂ 10,000 ಕೋಟಿ ಹಾಗೂ ಗುಜರಾತ್ ರೂ 14,000 ಕೋಟಿ ಬರ ಪರಿಹಾರ ಕೇಳಿವೆ. ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಮೊತ್ತ ಕೇಳಿರುವುದರಿಂದ ಪರಿಷ್ಕೃತ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಈ ಮೂರು ರಾಜ್ಯಗಳಿಗೆ ಸೂಚಿಸಲಾಗಿದೆ.`ಅಸೋಚಾಂ ಸಮೀಕ್ಷೆ:  ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷ ಶೇ 6.2ಕ್ಕೆ ಕುಸಿಯಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ  (ಅಸೋಚಾಂ) ಸಮೀಕ್ಷೆ ತಿಳಿಸಿದೆ. ದೇಶದಾದ್ಯಂತ 110 ಹಿರಿಯ ಉದ್ಯಮಿಗಳನ್ನು `ಅಸೋಚಾಂ~ ಸಂದರ್ಶಿಸಿ ವರದಿ ಸಿದ್ಧಪಡಿಸಿದ್ದು, ಶೇ 80 ಜನ `ಜಿಡಿಪಿ~ ಕುಸಿತ ಕಾಣಲಿದೆ ಎಂದೇ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.