ಶನಿವಾರ, ಜನವರಿ 25, 2020
19 °C

ದೇಶದ ಕರಕುಶಲ ಸಂಪತ್ತಿಗೆ ಕನ್ನಡಿ ಯುವಕೃತಿ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಮೊದಲೇ ಕರಾವಳಿ ಉತ್ಸವ ಮೈದಾನದಲ್ಲಿ  ಗುರುವಾರ ಮಧ್ಯಾಹ್ನದಿಂದಲೇ ಜನರನ್ನು ಸೆಳೆಯತೊಡಗಿದ್ದು `ಯುವಕೃತಿ~. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಿಂದ ಹಿಡಿದು ತಮಿಳುನಾಡಿನವರೆಗೆ, ಮಹಾರಾಷ್ಟ್ರದ ಉಸ್ಮಾನಾಬಾದ್‌ನಿಂದ ಹಿಡಿದು ಮಿಜೊರಾಂವರೆಗೂ- ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಪರಿಚಯ ನೀಡುವ ಮಳಿಗೆ ಇಲ್ಲಿ ಕಾಣಬಹುದು.ಒಂದು ಕಡೆ ಫುಡ್‌ಕೋರ್ಟ್, ಇನ್ನೊಂದು ಕಡೆ ಕರಕುಶಲ ಮಳಿಗೆ. ಹೀಗಾಗಿ ಜನರಿಗೂ ಇದೊಂದು ರೀತಿ `ಟೈಂ ಪಾಸ್~ ತಾಣವಾಗಿ ಪರಿಣಮಿಸಿದೆ. ಕರಕುಶಲ ವಸ್ತುಗಳ ಬಗ್ಗೆ ವಿಚಾರಿಸುವವರೇ ಜಾಸ್ತಿ. ಖರೀದಿಸುತ್ತಿದ್ದವರು ಕಡಿಮೆ ಎಂಬ ವಾತಾವರಣ ಅಲ್ಲಿತ್ತು.ಮಧ್ಯಪ್ರದೇಶದ ಆದಿವಾಸಿಗಳಿಂದ ತುಂಬಿರುವ ಜಿಲ್ಲೆ ಜಬುವಾದ ಆಳೆತ್ತರದ ಆಕರ್ಷಕ ಗೊಂಬೆಗಳು, ಇದೇ ರಾಜ್ಯದ ಟಿಕಮ್‌ಗಢದ ಕಂಚಿನ ಪ್ರತಿಮೆಗಳು, ಬಿಹಾರದ ದರ್ಬಾಂಗಾ ಜಿಲ್ಲೆಯ ಸಿನುವಾರ್‌ನ ಮಧುಬನಿ ಚಿತ್ತಾರವಿರುವ ದಿಂಬು ಕವರ್, ಸೀರೆ, ಟಾಪ್‌ಗಳು, ಆಗ್ರಾದ ಅಮೃತಶಿಲೆಯ ಆನೆ, ಆಮೆ, ಗಣೇಶ, ಬುದ್ಧನ ಪ್ರತಿಮೆಗಳು, ಧೂಪ ಇಡುವ ಸೂಕ್ಷ್ಮಕುಸುರಿಯ ಗೋಲಗಳು ಇಲ್ಲಿನ ಬೇರೆ ಬೇರೆ ಮಳಿಗೆಗಳಲ್ಲಿವೆ.ಭುವನೇಶ್ವರ ಬಳಿಯ ಸಣ್ಣ ಗ್ರಾಮ ಪೀಪ್ಲಿಯ ಛಾಂದ್ವಾ ಕುಸುರಿ ಕಲೆ ಗಮನ ಸೆಳೆಯುತ್ತದೆ. ಬಡವರೇ ತುಂಬಿರುವ ಪೀಪ್ಲಿ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಇಂಥ ಕುಸುರಿ ಕಲೆಯನ್ನು ಪೋಷಿಸಲಾಗುತ್ತಿದೆ.`ಕೆಲವು ವರ್ಷಗಳಿಂದ ಸ್ವಸಹಾಯ ಗುಂಪು ರಚಿಸಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತರಬೇತಿ ನೀಡಲಾಗಿದೆ. ಬ್ಯಾಂಕ್‌ಗಳ ಮೂಲಕ ಸಾಲ ನೀಡಿ ಅವರ ಸಬಲೀಕರಣ ಯತ್ನ ಪ್ರಗತಿಯಲ್ಲಿದೆ~ ಎಂದು ಮಳಿಗೆಯಲ್ಲಿದ್ದ ಆ ಪರಿಸರದ ಎಸ್.ಕೃಷ್ಣ ರಾವ್ ತಿಳಿಸಿದರು.ಕೇರಳದ ಎರ್ನಾಕುಲಂನ ಮಳಿಗೆಯಲ್ಲಿ ಬೀಟೆ ಮರದಿಂದ ಆನೆಗಳನ್ನು, ಕ್ರಿಸ್ತನ ಶಿರದ ಪ್ರತಿರೂಪಗಳನ್ನು ತಯಾರಿಸಿ ಮಾರಾಟಕ್ಕಿಡಲಾಗಿತ್ತು. ಬಿದಿರು ಬಳಸಿ ತಯಾರಿಸಿದ `ಚುಂಡನ್~ (ಹಾವಿನಂತೆ ಉದ್ದವಿರುವ ದೋಣಿ), ಹೌಸ್ ಬೋಟ್‌ಗಳೂ ಇದ್ದವು. ಉದಯಪುರದಲ್ಲಿ ಕೇರಳದ ಮಳಿಗೆಗೆ ಒಂದು ಲಕ್ಷ ರೂಪಾಯಿ ವಹಿವಾಟು ಆಗಿತ್ತು. ಇದಕ್ಕಾಗಿ ಸಮಾಧಾನಕರ ಬಹುಮಾನದ ಜತೆಗೆ ನಗದು ಬಹುಮಾನ ದೊರಕಿತ್ತು.  ಚೀನದಲ್ಲಿ 2010ರಲ್ಲಿ ನಡೆದ ವಿಶ್ವ ಯುವ ಮೇಳದಲ್ಲಿ ಮೊದಲ ಬಹುಮಾನ ದೊರಕಿತ್ತು ಎನ್ನುತ್ತಾರೆ ಮೇರಿ ಮತ್ತು ಕ್ಸೇವಿಯರ್.ಛತ್ತೀಸಗಢದ ಕಂಕರ್‌ನ ಮಳಿಗೆಯಲ್ಲಿ ಮರದ ವಸ್ತುಗಳೇ ಅಧಿಕ ಪ್ರಮಾಣದಲ್ಲಿವೆ. ಲೋಹವನ್ನು ಬಳಸಿದ ಆದಿವಾಸಿ ಶೈಲಿಯ ಜಿಂಕೆಗಳಿವೆ.ಬಿದ್ರಿ ಕಲೆ: ಕರ್ನಾಟಕದ ಬೀದರ ಮೂಲದ ಬಿದ್ರಿ ಕಲೆಯ ಮಳಿಗೆಯೊಂದು ಗಮನ ಸೆಳೆಯುತ್ತದೆ. `ನಾವು ದೆಹಲಿಯಲ್ಲಿ ಕಳೆದ ನವೆಂಬರ್‌ನಲ್ಲಿ ನಡೆದಿದ್ದ ಇಂಡಿಯ ಇಂಟರ್‌ನ್ಯಾಷನಲ್ ಟ್ರೇಡ್ ಫೇರ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದೆವು ಎನ್ನುತ್ತಾರೆ ಬೀದರ್ ಬಿದ್ರಿ ಯುವ ಮಂಡಲದ ಒಬೇದುಲ್ಲಾ ಖಾನ್. ಇದರ ಜತೆಗೆ ಇತರ ಲೋಹ ಬಳಸಿದ ಚಿದ್ರಿ ಕಲೆಯ ಸಾಮಗ್ರಿ ಕಾಣಬಹುದು.ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನ ಮಳಿಗೆಯಲ್ಲಿ ಅಕ್ರೂಟ್, ಬಾದಾಮಿ ಒಣಹಣ್ಣು ಜತೆಗೆ ದುಬಾರಿ ಕೇಸರ್ ಕೂಡ ಮಾರಾಟಕ್ಕಿದೆ. ಒಂದು ಗ್ರಾಂ ಕೇಸರ್ ಬೆಲೆ 250 ರೂ!.ಯುವ ಕೃತಿ ಮತ್ತು ಆಹಾರ ಮೇಳವನ್ನು ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಅಜಯ್ ಮಾಖನ್ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಅಜಯ್ ಮಾಖನ್ ಉದ್ಘಾಟಿಸುವರು.

ಪ್ರತಿಕ್ರಿಯಿಸಿ (+)