ಶನಿವಾರ, ಮೇ 8, 2021
26 °C

ದೇಸಿ ಕಲೆಗೆ ಉಘೇ..ಉಘೇ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಉಘೇ..ಉಘೇ..ಉಘೇ...~

-ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಮೂಲೆ ಮೂಲೆಯಿಂದ ಲಯವಾದ ಕೂಗು ಕೇಳಿಸುತ್ತಿತ್ತು. `ದಸರಾ ಯುವ ಸಂಭ್ರಮ~ದ ಎರಡನೇ ದಿನವಾದ ಗುರುವಾರ ದೇಸಿಯ ಕಲೆಗಳಾದ ಡೊಳ್ಳು ಕುಣಿತ, ಬುಡಕಟ್ಟು ಜನರ ನೃತ್ಯ ಹಾಗೂ ಕಂಸಾಳೆ ನೃತ್ಯಕ್ಕೆ  ಮನಸೋತ ಯುವಜನರು ದಿಲ್‌ಖುಷ್‌ಗೊಂಡು `ಉಘೇ..ಉಘೇ..~ ಎಂದು ಕೂಗಿದರು, ಮೆಚ್ಚುಗೆಯ ಚಪ್ಪಾಳೆಯ ಸುರಿಮಳೆಯನ್ನೇ ಹರಿಸಿದರು. ಮಾಡ್ರನ್ ನೃತ್ಯಗಳ ನಡುವೆಯೂ ನಮ್ಮ ದೇಸಿಯ ಕಲೆಗಳು ವಿಜೃಂಭಿಸಿದವು.ಆರಂಭಕ್ಕೆ ಸೂರಜ್ ಮತ್ತು ತಂಡ ರಾಕ್ ಬಾಂಡ್ ಪ್ರದರ್ಶನ ನೀಡಿತು. ಠಪೋರಿ ಹಾಡು `ನಿನ್ನ ಕಂಡಾಗ~ ಎನ್ನುವ ಪಡ್ಡೆ ಹುಡುಗರ ಕುರಿತಾದ ಗೀತೆಯನ್ನು ಹಾಡಿದರು. ನಂತರದಲ್ಲಿ `ದಾರಿ ತೋರಿಸು ಪ್ರೇರಣೆ~ ಹಾಗೂ ಸೈಕೋ ಚಿತ್ರದ `ನಿನ್ನಾಣೆ..~ ಹಾಡಿದರು. ಆದರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಾಣಲಿಲ್ಲ.

ನಂತರ ವೇದಿಕೆಯನ್ನು ಆವರಿಸಿಕೊಂಡವರು ಮಂಡ್ಯದ ಪಿಇಎಸ್ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು. ಗಂಡು ಕಲೆ ಎಂದೇ ಕರೆಸಿಕೊಳ್ಳುವ ಡೊಳ್ಳಿನೊಂದಿಗೆ ಪ್ರವೇಶ. ವೃತ್ತಿಪರ ಕಲಾವಿದರನ್ನೂ ನಾಚಿಸುವಂತೆ ಈ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ಮೈತುಂಬ ಕಸುವು ತುಂಬಿಕೊಂಡು 15 ನಿಮಿಷಗಳ ಕಾಲ ಬಗೆ ಬಗೆಯ ವರಸೆಗಳ ಮೂಲಕ ಪ್ರೇಕ್ಷಕರಿಗೆ ಮುದ ನೀಡಿದರು. ಇವರ ಪ್ರದರ್ಶನದ ನಂತರ ಇಡೀ ಬಯಲು ರಂಗಮಂದಿರದಲ್ಲಿ ಚಪ್ಪಾಳೆ ಸದ್ದು ರಿಂಗಣಿಸಿತು.ಗ್ರಾಮೀಣ ಪ್ರತಿಭೆಗಳು: ಗುಂಡ್ಲುಪೇಟೆ ಜೆಎಸ್‌ಎಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬುಡಕಟ್ಟು ಜನರ ನೃತ್ಯ ರಂಜಿಸಿತು. ಹಾಡಿಗೆ ತಕ್ಕನಾದ ಉಡುಪು ಗಮನ ಸೆಳೆಯಿತು. `ನಾಗರಹೊಳೆಯೋ ಅಮ್ಮಾಲೇ...~, `ಶರಣು ಶರಣುವಯ್ಯ ಗಣನಾಯಕ~ ಹಾಡಿಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ತಂಡದ ವಿದ್ಯಾರ್ಥಿಯೊಬ್ಬ ಗಾಳಿಯಲ್ಲಿ `ಪಲ್ಟಿ~ ಹೊಡೆಯುವ ಮೂಲಕ ಪ್ರೇಕ್ಷಕರು ನಿಬ್ಬೆರಗಾಗುವಂತೆ ಮಾಡಿದನು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನೀಡಿದ ಪ್ರದರ್ಶನ `ನಾವು ಯಾರಿಗೂ ಏನು ಕಡಿಮೆ ಇಲ್ಲ~ ಎನ್ನುವುದನ್ನು ಸಾರಿ ಹೇಳಿತು.

 

ಮಹಾರಾಣಿಯರು: ಮಹಾರಾಣಿ ವಿಜ್ಞಾನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕಂಸಾಳೆ ನೃತ್ಯವೂ ಆಕರ್ಷಕವಾಗಿತ್ತು. `ಉಘೇ..ಉಘೇ..~ ಎನ್ನುವ ಮೂಲಕ ವೇದಿಕೆ ಪ್ರವೇಶಿಸಿದರು. ಪುರುಷರ ಕಲೆ ಎಂದೇ ಹೇಳುವ ಕಂಸಾಳೆಯನ್ನು ಯುವತಿಯರು ಅದ್ಭುತವಾಗಿ ಪ್ರದರ್ಶಿಸಿದರು. ವಿವಿಧ ವಿನ್ಯಾಸಗಳ ಪಿರಮಿಡ್ ಗಮನ ಸೆಳೆದವು. ಹಿಮ್ಮೇಳವೂ ನೃತ್ಯಕ್ಕೆ ಪೂರಕವಾಗಿತ್ತು. ಇದೇ ಕಾಲೇಜಿನ ವಿದ್ಯಾರ್ಥಿನಿಯರು ನಡೆಸಿಕೊಟ್ಟ ರಾಜಸ್ತಾನದ ದಾಂಡಿಯಾ ನೃತ್ಯವೂ ಗಮನ ಸೆಳೆಯಿತು.ಪ್ರಕೃತಿ ರೂಪಕ: ಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಕೃತಿ ಕುರಿತಾದ ನೃತ್ಯ ರೂಪಕ ವಿಭಿನ್ನ ಅನುಭವ ನೀಡಿತು. ಆಧುನಿಕ ಜಗತ್ತಿನಲ್ಲಿ ಮರಗಳ ಹನನ, ವಾಯು ಮಾಲಿನ್ಯ, ಪ್ರಾಣಿ ಪಕ್ಷಿಗಳ ಸಂಕುಲಗಳ ಬೇಟೆ ಇತ್ಯಾದಿಗಳ ಬಗ್ಗೆ ಮನಮುಟ್ಟುವಂತೆ ನೃತ್ಯ ಪ್ರದರ್ಶಿಸಿದರು. ಪರಿಸರವನ್ನು ಉಳಿಸಿ, ಬೆಳೆಸುವ ಸಂದೇಶವನ್ನು ನೀಡಿದರು.ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ದಶಾವತಾರ ಕೂಡ ಆಕರ್ಷಕವಾಗಿತ್ತು.

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.