ಮಂಗಳವಾರ, ಏಪ್ರಿಲ್ 13, 2021
31 °C

ದೇಸಿ ಕಲೆ ಕಾಪಾಡಲು ಹಂಸಲೇಖ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದೇಸಿ ಕಲೆಗಳನ್ನು ಸಂಸ್ಕರಿಸಿ ಕಾಪಿಟ್ಟುಕೊಳ್ಳದಿದ್ದರೆ ಈ ಕಲೆಗಳೆಲ್ಲವೂ ಪೇಟೆಂಟ್ ಕಂಪೆನಿಗಳ ಪಾಲಾಗುವುದು ಖಚಿತ ಎಂದು ಸಂಗೀತ ನಿರ್ದೇಶಕ ಹಂಸಲೇಖ ಆತಂಕ ವ್ಯಕ್ತಪಡಿಸಿದರು.ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ರಂಗಾಯಣ, ಶಿವಮೊಗ್ಗ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಾನಪದ ಸಿರಿ ವೈಭವ: ರಂಗಗೀತೆಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಾನಪದ ಹೊಸ ಅವತಾರ ಎತ್ತುವ ಕಾಲ ಇದು. ಸ್ಪರ್ಧೆಗೆ ಹೊರಟ ದೇಸೀ ಕಲೆಗೆ ಸಂಸ್ಕರಣೆ ಮಾಡಬೇಕು. ಇಲ್ಲದಿದ್ದರೆ ನಮ್ಮ ವೈವಿಧ್ಯಮಯ ಕಲೆಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿಕ್ಷಣದಿಂದ ಯಾವುದೇ ಪ್ರಾದೇಶಿಕ ಭಾಷೆ ಉಳಿದಿದೆ ಎಂಬ ಮಾತು ಸುಳ್ಳು ಎಂದ ಅವರು, ಕಲೆ, ಕಲಾವಿದರಿಂದ ಮಾತ್ರ ಪ್ರಾದೇಶಿಕ ಭಾಷೆ ಉಳಿದಿರುವುದು ಎಂದು ಹಂಸಲೇಖ ಪ್ರತಿಪಾದಿಸಿದರು.ಕರ್ನಾಟಕ ಜಾನಪದ ವಿವಿ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ, ರಂಗಕರ್ಮಿಗಳು ಶಿಷ್ಟ ಮತ್ತು ಜಾನಪದದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ರಂಗಭೂಮಿ ಜಾನಪದ ನೆಲೆಗಟ್ಟಿನಿಂದಲೇ ರೂಪುಗೊಂಡಿರುವುದು. ಜಾನಪದ ಕಲೆ ಜನರಿಗೆ ತಲುಪಲು ಬೇಕಾದ ಮಾಧ್ಯಮ ರಂಗಭೂಮಿ ಎಂದು ಪ್ರತಿಪಾದಿಸಿದರು.ಜಾನಪದದಲ್ಲಿ ವಾದ್ಯಗಳ ಬಳಕೆ ಯಥೇಚ್ಛವಾಗಿದೆ. ಆದರೆ, ವಾದ್ಯಗಳ ಕುರಿತು ನಮ್ಮಲ್ಲಿ ಅಧ್ಯಯನ ಇನ್ನೂ ಆಗಿಲ್ಲ. ವಾಸ್ತವಾಗಿ ಒಂದೊಂದು ವಾದ್ಯಕ್ಕೂ ಒಂದೊಂದು ಕಥೆ ಇದೆ. ವಾದ್ಯ, ವಾದನಗಳಲ್ಲಿಯೂ ಬೇರೆ ಬೇರೆ ಪ್ರಾಕಾರಗಳಿವೆ. ಈ ಕುರಿತು ಸಂವಾದ, ಚರ್ಚೆ ನಡೆಯಬೇಕಿದೆ ಎಂದರು.ಈ ಸಂದರ್ಭದಲ್ಲಿ ವಿವಿಧ ಜಾನಪದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಜಾನಪದ ಕಲಾವಿದರಾದ ಸಾಗರದ ಎನ್. ಹುಚ್ಚಪ್ಪ ಮಾಸ್ತರ್, ಶಿಕಾರಿಪುರ ತಾಲ್ಲೂಕು ಕಪ್ಪನಹಳ್ಳಿಯ ಎಸ್.ಪಿ. ನಾಯ್ಡು, ಸಾಗರದ ಗುಡ್ಡಪ್ಪ ಜೋಗಿ, ಸೊರಬದ ಲಿಂಗಪ್ಪ ಜೋಗಿ, ಮಹೇಂದ್ರಸಿಂಗ್ ಬಾಬಳ್ಳಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಹಿಸಿದ್ದರು. ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನ. ಸತ್ಯ, ಧಾರವಾಡ ರಂಗಾಯಣ ನಿರ್ದೇಶಕ ಸುಭಾಷ್ ನರೇಂದ್ರ, ಎಂ.ಎನ್. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಉಪಸ್ಥಿತರಿದ್ದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಿವರುದ್ರಪ್ಪ ಹಾಗೂ ಗುಡ್ಡಪ್ಪ ಅವರು ಜೋಗಿ ಪದವನ್ನು ಹಾಡಿದರು. ಸಹಚೇತನ ನಾಟ್ಯಾಲಯದ  ಮಕ್ಕಳು ಹಾಲಕ್ಕಿ ಹಾಗೂ ಕೀಲು ಕುದುರೆ ಕುಣಿತವನ್ನು ಪ್ರದರ್ಶಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.