ಬೆಂಗಳೂರು: ಯುದ್ಧ ನಡೆಯಲಿದೆ ಇಲ್ಲಿ! ಹೌದು; ಒಂದು ದಿಟ್ಟ ಹೋರಾಟದ ಛಲ ಹೊಂದಿರುವ ಪುಟ್ಟ ಕ್ರಿಕೆಟ್ ತಂಡ, ಇನ್ನೊಂದು ದಶಕಗಳ ಇತಿಹಾಸವುಳ್ಳ ಗಟ್ಟಿ ಪಡೆ. ಸಣ್ಣದೊಂದು ಸೈನ್ಯವೇ ಮಹಾಬಲದ ಸಾಮ್ರಾಜ್ಯಕ್ಕೆ ಆಪತ್ತಾದ ಇತಿಹಾಸ ಬಲ್ಲವರು ಮತ್ತೊಂದು ಅಂಥ ಅಚ್ಚರಿ ಸಾಧ್ಯವೇ? ಎಂದು ಯೋಚನೆಯ ಸುಳಿಯಲ್ಲಿ ಸಿಲುಕಿ ಬಹಳಷ್ಟು ಕಳವಳಗೊಂಡಿದ್ದಾರೆ.ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವಣ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನ ಪಂದ್ಯದ ತಳಮಳ ಹೆಚ್ಚಾಗಿದೆ.

ಉಭಯ ಕ್ರಿಕೆಟ್ ಪಡೆಗಳು ಭಾನುವಾರದ ಪಂದ್ಯಕ್ಕೆ ಶನಿವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದಾಗ ಎಲ್ಲರ ಮನದಲ್ಲಿ ಐರ್ಲೆಂಡ್ ಮತ್ತೊಂದು ಪವಾಡ ಸಾಧ್ಯವಾಗುವಂತೆ ಮಾಡುವುದೇ ಎನ್ನುವ ಸವಾಲು. ಅದೇನೋ...ಏಕೋ ಗೊತ್ತಿಲ್ಲ; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಂತು ಮೇಲೆ ನೋಡಿದಾಗ ಆಗಸದ ತುಂಬಾ ನೂರಾರು ಹದ್ದುಗಳು ಸುತ್ತು ಹೊಡೆಯುತ್ತಿದ್ದವು. ಅವುಗಳ ಕರಿ ನೆರಳು ಹಸಿರು ಹಾಸಿನ ಅಂಗಳದಲ್ಲಿ ಸುಳಿದಾಡುತ್ತಿದ್ದವು. ಭಯದ ಈ ನೆರಳು ಭಾರತ ತಂಡದವರ ಮನದೊಳಗಿನ ಭಯದ ಸಂಕೇತದಂತೆ ಕಾಣಿಸಿದ್ದಂತೂ ನಿಜ.

ಇದೇ ಕ್ರೀಡಾಂಗಣದಲ್ಲಿ ಭಾರತಕ್ಕೆ ಪ್ರಬಲ ಹೋರಾಟ ನೀಡಿ ಪಂದ್ಯ ‘ಟೈ’ ಮಾಡಿಕೊಂಡ ತಂಡ ಇಂಗ್ಲೆಂಡ್. ಅಂಥ ಇಂಗ್ಲೆಂಡ್ಗೇ ಆಘಾತ ನೀಡುವಂಥ ಸತ್ವವನ್ನು ವ್ಯಕ್ತಪಡಿಸಿತು ಐರ್ಲೆಂಡ್. ಈಗ ಆ ತಂಡವನ್ನು ಎದುರಿಸಬೇಕಿದೆ ಮಹೇಂದ್ರ ಸಿಂಗ್ ದೋನಿ ಬಳಗ. ಆದ್ದರಿಂದ ಆತಿಥೇಯ ತಂಡದವರ ಮನದ ಮನೆಯ ಮೂಲೆಯಲ್ಲಿ ಕುಳಿತ ಭಯವೆನ್ನುವ ಹಲ್ಲಿ ಲೊಚಗುಟ್ಟುತ್ತಿದೆ ಎಂದು ಸ್ಪಷ್ಟವಾಗಿ ಹೇಳಬಹುದು.

ಆ್ಯಂಡ್ರ್ಯೂ ಸ್ಟ್ರಾಸ್ ನಾಯಕತ್ವದ ತಂಡವನ್ನು ಮೂರು ವಿಕೆಟ್ಗಳ ಅಂತರದಿಂದ ಸೋಲಿಸಿದ ಐರ್ಲೆಂಡ್ ಮತ್ತೊಂದು ಅಚ್ಚರಿಗೆ ಕಾರಣವಾಗಬಹುದು ಎನ್ನುವ ಅನುಮಾನವೂ ಬಲಗೊಂಡಿದೆ. ‘ಮಹಿ’ ಪಡೆಯ ಬೌಲರ್ಗಳಿಗೆ ವಿಲಿಯಮ್ ಪೋರ್ಟರ್ಫೀಲ್ಡ್ ದಂಡನಾಯಕ ಆಗಿರುವ ತಂಡದ ಬ್ಯಾಟಿಂಗ್ ಬಲಕ್ಕೆ ಪೆಟ್ಟು ನೀಡುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ದಾಳಿಯಲ್ಲಿ ಆದ ಯಡವಟ್ಟು ಮರುಕಳಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಮೊದಲು ಬ್ಯಾಟಿಂಗ್ ಮಾಡಲಿ, ಗುರಿಯನ್ನು ಬೆನ್ನಟ್ಟುವುದಿರಲಿ ಐರ್ಲೆಂಡ್ ಎರಡೂ ಸವಾಲಿಗೆ ಸಿದ್ಧವಾಗಿದೆ. ಬೌಲಿಂಗ್ ವಿಭಾಗದಲ್ಲಿ ಬೆರಳು ತೋರಿಸುವಂಥ ಕೊರತೆಯೂ ಈ ತಂಡಕ್ಕಿಲ್ಲ.ವಿಶ್ವಕಪ್ನಲ್ಲಿ ಪಾಲ್ಗೊಂಡಿರುವ ತಂಡಗಳಲ್ಲಿ ಉತ್ತಮ ಕ್ಷೇತ್ರರಕ್ಷಣೆಯ ಸಾಮರ್ಥ್ಯ ಹೊಂದಿರುವ ತಂಡ ಕೂಡ ಐರ್ಲೆಂಡ್ ಎಂದು ಸ್ಪಷ್ಟವಾಗಿ ಹೇಳಬಹುದು. ಈ ವಿಭಾಗದಲ್ಲಿ ಭಾರತದವರು ಕೂಡ ಐರ್ಲೆಂಡ್ಗೆ ಸರಿಯಾಗಿ ತೂಗುವುದಿಲ್ಲ. ಸ್ಥಿತಿ ಹೀಗಿರುವಾಗ ಬ್ಯಾಟಿಂಗ್ನಲ್ಲಿ ಬಲಾಢ್ಯ ಎನ್ನುವ ಶ್ರೇಯ ಹೊಂದಿರುವ ದೋನಿ ಬಳಗವು ಗೆಲ್ಲುವ ನೆಚ್ಚಿನ ತಂಡವೆಂದು ವಿಶ್ವಾಸದಿಂದ ಹೇಳುವುದಾದರೂ ಹೇಗೆ ಸಾಧ್ಯ?

ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ವಿಜಯ ಸಾಧಿಸಿದ ನಂತರ ಪೋರ್ಟರ್ಫೀಲ್ಡ್ ಪಡೆಯು ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಕೆವಿನ್ ಓಬ್ರಿಯನ್ ಅವರಂಥ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಕ್ರಿಕೆಟಿಗರು ತಂಡದಲ್ಲಿ ಇರುವುದರಿಂದ ಅದೊಂದು ದುರ್ಬಲ ತಂಡವೆಂದು ಹೇಳುವುದು ಸಾಧ್ಯವೇ ಇಲ್ಲ. ನಾಲ್ಕು ವರ್ಷಗಳ ಹಿಂದೆ ಭಾರತದ ಎದುರು ಸೋತಿದ್ದರೂ, ಈಗ ಸಾಕಷ್ಟು ಸುಧಾರಿಸಿಕೊಂಡು ಬೆಳೆದಿರುವ ಐರ್ಲೆಂಡ್ಗೆ ಸಮಬಲದ ಹೋರಾಟ ನಡೆಸುವ ತಾಕತ್ತು ಬಂದಿದೆ.

ಬೆಲ್ಫಾಸ್ಟ್ನಲ್ಲಿ 2007ರ ಜೂನ್ 23ರಂದು ನಡೆದಿದ್ದ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಐವತ್ತನೇ ಓವರ್ ಕೊನೆಗೆ ಆಲ್ಔಟ್ ಮಾಡಿ 193 ರನ್ಗಳಿಗೆ ನಿಯಂತ್ರಿಸಿದ್ದ ಭಾರತವು ಆನಂತರ 34.5 ಓವರುಗಳಲ್ಲಿ ಒಂದೇ ವಿಕೆಟ್ ಕಳೆದುಕೊಂಡು 171 ರನ್ ಸೇರಿಸಿತ್ತು. (ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ) ಒಂಬತ್ತು ವಿಕೆಟ್ಗಳಿಂದ ಗೆದ್ದ ಆ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದು ರಾಹುಲ್ ದ್ರಾವಿಡ್. ಆನಂತರ ಮತ್ತೆ ಭಾರತ-ಐರ್ಲೆಂಡ್ ಮುಖಾಮುಖಿ ಆಗುತ್ತಿರುವುದು ಉದ್ಯಾನನಗರಿಯಲ್ಲಿ.

ಹಿಂದಿನ ಇತಿಹಾಸವನ್ನು ಮುಂದಿಟ್ಟುಕೊಂಡು ಪೋರ್ಟರ್ಫೀಲ್ಡ್ ಬಳಗದವರು ದುರ್ಬಲರೆಂದು ಹೇಳುವುದು ಸಾಧ್ಯವೇ ಇಲ್ಲ. ಈ ಬಾರಿಯ ವಿಶ್ವಕಪ್ನಲ್ಲಿ ಅಚ್ಚರಿಯ ಫಲಿತಾಂಶದೊಂದಿಗೆ ಅದು ಪುಟಿದೆದ್ದಿದೆ. ಭಾರತದವರು ಬಾಂಗ್ಲಾದೇಶದ ಎದುರು ಉದ್ಘಾಟನಾ ಪಂದ್ಯದಲ್ಲಿ ವಿಜಯ ಸಾಧಿಸಿ ಶುಭಾರಂಭ ಮಾಡಿದರೂ, ನಂತರದ್ದು ಆತಂಕಕಾರಿ ಕಥೆ. ಇಂಗ್ಲೆಂಡ್ ಎದುರು ಬೌಲಿಂಗ್ ದೌರ್ಬಲ್ಯದಿಂದ ತಬ್ಬಿಬ್ಬಾಗಿ ನಿಲ್ಲಬೇಕಾಯಿತು.

ಬೌಲಿಂಗ್ ದಾಳಿಯ ಯೋಜನೆಯನ್ನು ತಿದ್ದಿಕೊಳ್ಳುವುದು ತುರ್ತು ಅಗತ್ಯ. ಇಲ್ಲಿನ ಕ್ಯೂರೇಟರ್ ನಾರಾಯಣ್ ರಾಜು ಅವರು ಚೆಂಡು ತಿರುವು ಪಡೆಯುತ್ತದೆಂದು ಹೇಳಿರುವ ಮಾತನ್ನು ನಂಬಿದರು ಕೂಡ, ಇನ್ನೊಬ್ಬ ಪರಿಣತ ವೇಗಿಯ ನೆರವು ಪಡೆಯುವುದೇ ಸೂಕ್ತ ಎನಿಸುತ್ತದೆ. ಇಲ್ಲವೆ ಇಬ್ಬರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಗಳನ್ನು ಇಟ್ಟುಕೊಂಡು, ಸಾಂದರ್ಭಿಕ ಬೌಲರ್ಗಳನ್ನು ಪ್ರಯೋಗಿಸಲು ಗಮನ ನೀಡುವುದೂ ಸರಿಯಾದ ನಿರ್ಧಾರ ಎನಿಸಲಿದೆ.

ಬೌಲರ್ಗಳ ಪರಾಕ್ರಮಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅವಕಾಶ ಸಿಗುವುದಿಲ್ಲ ಎನ್ನುವ ಅಂಶವನ್ನೂ ಮರೆಯುವಂತಿಲ್ಲ. ಆದ್ದರಿಂದ ಇಲ್ಲಿ ಪಂದ್ಯ ಗೆಲ್ಲಬೇಕಾಗಿರುವುದು ಬ್ಯಾಟಿಂಗ್ ಬಲದಿಂದ ಮಾತ್ರ. ಮೊದಲು ಬ್ಯಾಟಿಂಗ್ ಮಾಡಿದರೆ ಮುನ್ನೂರೈವತ್ತರ ಆಸುಪಾಸಿನಲ್ಲಿ ರನ್ಗಳನ್ನು ಪೇರಿಸಿಡುವುದೇ ಸುರಕ್ಷಿತ. ಗುರಿಯನ್ನು ಬೆನ್ನಟ್ಟುವುದು ಇಲ್ಲಿ ಕಷ್ಟವಲ್ಲ ಎನ್ನುವುದೂ ಸ್ಪಷ್ಟ. ಇಂಥ ಸ್ಥಿತಿಯಲ್ಲಿ ಬ್ಯಾಟ್ಸ್ಮನ್ಗಳ ಪಾತ್ರ ದೊಡ್ಡದು.

ಈ ಲೆಕ್ಕಾಚಾರ ಏನೇ ಇರಲಿ ಕ್ಷೇತ್ರರಕ್ಷಣೆಯಲ್ಲಿನ ಕೊರತೆಗಳನ್ನು ಭಾರತ ತುಂಬಿಕೊಳ್ಳದಿದ್ದರೆ ಅನಗತ್ಯವಾಗಿ ಪಂದ್ಯದ ಒತ್ತಡ ಹೆಚ್ಚುತ್ತದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ನಲ್ಲಿನ ಸಣ್ಣ ತಪ್ಪುಗಳ ಪರಿಣಾಮವು ದುಬಾರಿ ಆಯಿತು ಎನ್ನುವುದನ್ನು ಮರೆಯಲಾಗದು. ಮಹತ್ವದ ಘಟ್ಟದಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳು ಅಬ್ಬರಿಸದಂತೆ ತಡೆಯುವ ಬೌಲಿಂಗ್ ಸಂಯೋಜನೆ ಕಡೆಗೂ ದೋನಿ ಗಮನ ನೀಡುತ್ತಾರೆಂದು ನಿರೀಕ್ಷಿಸಬಹುದು.

‘ದೋನಿ’ ಅವರು ಯುವರಾಜ್ ಸಿಂಗ್ ಹಾಗೂ ಯೂಸುಫ್ ಪಠಾಣ್ಗೆ ಹತ್ತು ಓವರ್ಗಳ ಒಂದು ಕೋಟಾವನ್ನು ಹಂಚುವುದು ಪ್ರಯೋಜನಕಾರಿ ಆಗಬಹುದು. ಪಿಯೂಶ್ ಚಾವ್ಲಾಗಿಂತ ಆರ್.ಅಶ್ವಿನ್ ಈ ಪಂದ್ಯಕ್ಕೆ ಸೂಕ್ತ ಆಯ್ಕೆ ಎನಿಸುತ್ತದೆ. ಐರ್ಲೆಂಡ್ ತಂಡದಲ್ಲಿ ಐವರು ಎಡಗೈ ಬ್ಯಾಟ್ಸ್ಮನ್ಗಳಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಂಡರೆ ತಮಿಳುನಾಡಿನ ಆಫ್ ಸ್ಪಿನ್ನರ್ ಪರಿಣಾಮಕಾರಿ ಆಗಬಲ್ಲರು. ವೇಗದ ಬೌಲಿಂಗ್ ಹೊಂದಾಣಿಕೆ ಯಾವುದಾದರೂ ಆ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ!

ಭಾರತ
ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಹರಭಜನ್ ಸಿಂಗ್, ಜಹೀರ್ ಖಾನ್, ಮುನಾಫ್ ಪಟೇಲ್, ಪಿಯೂಶ್ ಚಾವ್ಲಾ, ಆಶೀಶ್ ನೆಹ್ರಾ, ಸುರೇಶ್ ರೈನಾ ಮತ್ತು ಆರ್.ಅಶ್ವಿನ್.

ಐರ್ಲೆಂಡ್
ವಿಲಿಯಮ್ ಪೋರ್ಟರ್ಫೀಲ್ಡ್ (ನಾಯಕ), ಆ್ಯಂಡ್ರೆ ಬೊಥಾ, ಅಲೆಕ್ಸ್ ಕ್ಯೂಸೆಕ್, ನೀಲ್ ಓಬ್ರಿಯನ್, ಕೆವಿನ್ ಓಬ್ರಿಯನ್, ಜಾರ್ಜ್ ಡಾಕ್ರೆಲ್, ಟ್ರೆಂಟ್ ಜಾನ್ಸ್ಟನ್, ನಿಗೆಲ್ ಜೋನ್ಸ್, ಜಾನ್ ಮೂನಿ, ಬಾಯ್ಡ್ ರಂಕಿನ್, ಪಾಲ್ ಸ್ಟಿರ್ಲಿಂಗ್, ಅಲ್ಬರ್ಟ್ ವಾನ್ ಡೇರ್ ಮೆರ್ವ್, ಗ್ಯಾರಿ ವಿಲ್ಸನ್, ಆ್ಯಂಡ್ರ್ಯೂ ವೈಟ್ ಮತ್ತು ಎಡ್ ಜಾಯ್ಸಾ.

ಅಂಪೈರ್ಗಳು: ಬಿಲ್ಲಿ ಬೌವ್ಡೆನ್ (ನ್ಯೂಜಿಲೆಂಡ್) ಮತ್ತು ರಾಡ್ ಟರ್ಕರ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಮರೈಸ್ ರಾಸ್ಮಸ್ (ದಕ್ಷಿಣ ಆಫ್ರಿಕಾ).
ಮ್ಯಾಚ್ ರೆಫರಿ: ರೋಷನ್ ಮಹಾನಾಮಾ (ಶ್ರೀಲಂಕಾ).
ಪಂದ್ಯದ ವೇಳೆ: ಮಧ್ಯಾಹ್ನ 2.30ರಿಂದ ಸಂಜೆ 6.00;
6.45ರಿಂದ ಪಂದ್ಯ ಮುಗಿಯುವವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.