ಗುರುವಾರ , ಮೇ 6, 2021
27 °C
ಬೌಲರ್‌ಗಳ ಪ್ರಭಾವಿ ದಾಳಿ, ಧವನ್ ಉತ್ತಮ ಆಟ; ಪಾಕಿಸ್ತಾನಕ್ಕೆ ಮುಖಭಂಗ

ದೋನಿ ಬಳಗದ ಗೆಲುವಿನ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್ ಹ್ಯಾಂ: ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆಯ ಬಲದ ಜೊತೆ ಅಂಗಳದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸುಲಭ ಜಯ ಸಾಧಿಸಿತು.ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಎಂಟು ವಿಕೆಟ್‌ಗಳ ಗೆಲುವು ಪಡೆಯಿತು.ಪದೇ ಪದೇ ಸುರಿದ ಮಳೆ ಆಟದ ರೋಚಕತೆಗೆ ಅಲ್ಪ ಧಕ್ಕೆ ಉಂಟುಮಾಡಿತಾದರೂ, ಭಾರತದ ಗೆಲುವಿನ ಓಟಕ್ಕೆ ಯಾವುದೇ ತಡೆ ಉಂಟಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ ಮಿಸ್ಬಾ ಉಲ್ ಹಕ್ ಸಾರಥ್ಯದ ಪಾಕ್ 39.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟಾಯಿತು.ಭಾರತದ ಇನಿಂಗ್ಸ್ ವೇಳೆ ಎರಡು ಸಲ ಮಳೆ ಸುರಿಯಿತು. ಇದರಿಂದ ತಂಡಕ್ಕೆ 22 ಓವರ್‌ಗಳಲ್ಲಿ 102 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. `ಮಹಿ' ಬಳಗ 19.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತು.ಆಡಿದ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದ ಭಾರತ ಅಜೇಯ ದಾಖಲೆಯೊಂದಿಗೆ ಸೆಮಿಗೆ ಪ್ರವೇಶಿಸಿತು. ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿದ ಪಾಕಿಸ್ತಾನ ತಂಡದವರು ತವರಿಗೆ ಗಂಟುಮೂಟೆ ಕಟ್ಟಿದರು.ಪ್ರಭಾವಿ ಬೌಲಿಂಗ್: ಟಾಸ್ ಗೆದ್ದ ಭಾರತ ಎದುರಾಳಿ ತಂಡಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ನೀಡಿತು. ಆರಂಭದಲ್ಲಿಯೇ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯವನ್ನು 40 ಓವರ್‌ಗಳಿಗೆ ಇಳಿಸಲಾಯಿತು.ಪಾಕ್ ತಂಡದ ನಾಸಿರ್ ಜಮ್‌ಷೆದ್ ಅವರನ್ನು ಮೂರನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದ ಯುವ ವೇಗಿ ಭುವನೇಶ್ವರ್ ಕುಮಾರ್ ಆರಂಭದಲ್ಲಿಯೇ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಎಂಟು ಓವರ್ ಬೌಲಿಂಗ್ ಮಾಡಿದ ಈ ಬಲಗೈ ಬೌಲರ್ ಕೇವಲ 19 ರನ್ ನೀಡಿ ಎರಡು ವಿಕೆಟ್‌ಗಳನ್ನು ಉರುಳಿಸಿದರು.ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರದಾಡಿದ ಪಾಕ್ ತಂಡಕ್ಕೆ ಅಸಾದ್ ಶಫೀಕ್ (41, 57ಎಸೆತ, 3 ಬೌಂಡರಿ) ನೆರವಾದರು. ಐದನೇ ವಿಕೆಟ್‌ಗೆ ನಾಯಕ ಮಿಸ್ಬಾ (22, 33ಎಸೆತ, 1 ಸಿಕ್ಸರ್) ಮತ್ತು ಶಫೀಕ್ ಜೋಡಿ 54 ರನ್‌ಗಳನ್ನು ಕಲೆ ಹಾಕಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿತಾದರೂ, ದೋನಿ ಪಡೆಯ ಬೌಲರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ.ಪಾಕ್ ತಂಡ ಒಂದು ಹಂತದಲ್ಲಿ 131ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ಐದು ವಿಕೆಟ್‌ಗಳು ಕೇವಲ 34 ರನ್‌ಗಳ ಅಂತರದಲ್ಲಿ ಬಿದ್ದವು. ಇದಕ್ಕೆ ಕಾರಣವಾಗಿದ್ದು ಇಶಾಂತ್ ಶರ್ಮ, ಆರ್. ಅಶ್ವಿನ್ ಮತ್ತು ರವಿಂದ್ರ ಜಡೇಜ. ಈ ಮೂವರು ಬೌಲರ್‌ಗಳು ತಲಾ ಎರಡು ವಿಕೆಟ್ ಪಡೆದರು.ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಸಕಾರಾತ್ಮಕವಾಗಿಯೇ ಇನಿಂಗ್ಸ್ ಆರಂಭಿಸಿತು. ರೋಹಿತ್ ಶರ್ಮ (18) ಮತ್ತು ಶಿಖರ್ ಧವನ್ 48 (41 ಎಸೆತ, 5 ಬೌಂ) ಮೊದಲ ವಿಕೆಟ್‌ಗೆ 58 ರನ್ ಸೇರಿಸಿದರು.ಭಾರತದ ಇನಿಂಗ್ಸ್ ವೇಳೆ ಮಳೆ ಸುರಿದ ಕಾರಣ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಪ್ರಸಕ್ತ ಟೂರ್ನಿಯಲ್ಲಿ ಸತತ ಎರಡು ಶತಕ ಗಳಿಸಿದ್ದ ಧವನ್ ಮತ್ತೆ ಸೊಗಸಾದ ಇನಿಂಗ್ಸ್ ಕಟ್ಟಿದರು. ಆದರೆ ಅರ್ಧಶತಕಕ್ಕೆ ಎರಡು ರನ್‌ಗಳು ಬೇಕಿದ್ದಾಗ ಅವರು ವಹಾಬ್ ರಿಯಾಜ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ (ಅಜೇಯ 22) ಮತ್ತು ದಿನೇಶ್ ಕಾರ್ತಿಕ್ (ಅಜೇಯ 11) ಹೆಚ್ಚಿನ ವಿಕೆಟ್ ಬೀಳದಂತೆ ನೋಡಿಕೊಂಡರಲ್ಲದೆ, ಗೆಲುವಿಗೆ ಅಗತ್ಯವಿದ್ದ ರನ್‌ಗಳನ್ನು ಕಲೆಹಾಕಿದರು.ಇದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತಕ್ಕೆ ದೊರೆತ ಮೊದಲ ಗೆಲುವು. ಈ ಹಿಂದೆ ಎರಡು ಸಲ ಮುಖಾಮುಖಿಯಾಗಿದ್ದಾಗಲೂ ಪಾಕ್ ತಂಡವೇ ಜಯಭೇರಿ ಮೊಳಗಿಸಿತ್ತು.                                                ಸ್ಕೋರ್ ವಿವರ

ಪಾಕಿಸ್ತಾನ 39.4 ಓವರ್‌ಗಳಲ್ಲಿ 165


ನಾಸಿರ್ ಜಮ್‌ಷೆದ್ ಸಿ ಸುರೇಶ್ ರೈನಾ ಬಿ ಭುವನೇಶ್ವರ್ ಕುಮಾರ್  02

ಕಮ್ರಾನ್ ಅಕ್ಮಲ್ ಸಿ ವಿರಾಟ್ ಕೊಹ್ಲಿ ಬಿ

ಆರ್. ಅಶ್ವಿನ್  21

ಮಹಮ್ಮದ್ ಹಫೀಜ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಭುವನೇಶ್ವರ್ ಕುಮಾರ್  27

ಅಸಾದ್ ಶಫೀಕ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಇಶಾಂತ್ ಶರ್ಮ  41

ಮಿಸ್ಬಾಉಲ್ ಹಕ್ ಬಿ ರವೀಂದ್ರ ಜಡೇಜ  22

ಶೋಯಬ್ ಮಲಿಕ್ ಎಲ್‌ಬಿಡಬ್ಲ್ಯು ಬಿ ರವೀಂದ್ರ ಜಡೇಜ  17

ಉಮರ್ ಗುಲ್ ಔಟಾಗದೆ  27

ವಹಾಬ್ ರಿಯಾಜ್ ಬಿ ಆರ್. ಆಶ್ವಿನ್  00

ಸಯೀದ್ ಅಜ್ಮಲ್ ಸಿ ರೋಹಿತ್ ಶರ್ಮ ಬಿ ಇಶಾಂತ್ ಶರ್ಮ  05

ಜುನೈದ್ ಖಾನ್ ರನ್‌ಔಟ್   00

ಮಹಮ್ಮದ್ ಇರ್ಫಾನ್ ರನ್‌ಔಟ್ (ಉಮೇಶ್ ಯಾದವ್)  00

ಇತರೆ: (ಲೆಗ್ ಬೈ-1, ವೈಡ್-2)  03

ವಿಕೆಟ್ ಪತನ: 1-4 (ನಾಸೀರ್; 2.3), 2-50 (ಹಫೀಜ್; 12.1), 3-56 (ಅಕ್ಮಲ್; 15.1), 4-110 (ಮಿಸ್ಬಾ; 26.4), 5-131 (ಶಫೀಕ್; 31.1), 6-139 (ಮಲಿಕ್; 32.6), 7-140 (ವಹಾಬ್; 33.3), 8-159 (ಅಜ್ಮಲ್; 28.1), 9-159 (ಜುನೈದ್; 38.2), 10-165 (ಇರ್ಫಾನ್; 39.4).

ಬೌಲಿಂಗ್: ಭುವನೇಶ್ವರ್ ಕುಮಾರ್ 8-2-19-2, ಉಮೇಶ್ ಯಾದವ್ 6.4-0-29-0, ಇಶಾಂತ್ ಶರ್ಮ 7-0-40-2, ಆರ್. ಅಶ್ವಿನ್ 8-0-35-2, ವಿರಾಟ್ ಕೊಹ್ಲಿ 2-0-11-0, ರವೀಂದ್ರ ಜಡೇಜ 8-1-30-2.ಭಾರತ: 19.1 ಓವರ್‌ಗಳಲ್ಲಿ 2 ವಿಕೆಟ್‌ಗೆ 102

(ಪರಿಷ್ಕೃತ ಗುರಿ 22 ಓವರ್‌ಗಳಲ್ಲಿ 102)

ರೋಹಿತ್ ಶರ್ಮ ಸಿ ಮಿಸ್ಬಾ ಬಿ ಅಜ್ಮಲ್  18

ಶಿಖರ್ ಧವನ್ ಸಿ ಜಮ್‌ಷೆದ್ ಬಿ ವಹಾಬ್ ರಿಯಾಜ್  48

ವಿರಾಟ್ ಕೊಹ್ಲಿ ಔಟಾಗದೆ  22

ದಿನೇಶ್ ಕಾರ್ತಿಕ್ ಔಟಾಗದೆ  11

ಇತರೆ: (ವೈಡ್-3)  03

ವಿಕೆಟ್ ಪತನ: 1-58 (ರೋಹಿತ್; 10.4), 2-78 (ಧವನ್; 14.3)

ಬೌಲಿಂಗ್: ಮಹಮ್ಮದ್ ಇರ್ಫಾನ್ 4-0-24-0, ಜುನೈದ್ ಖಾನ್ 4-0-21-0, ಸಯೀದ್ ಅಜ್ಮಲ್ 5-0-29-1, ಮಹಮ್ಮದ್ ಹಫೀಜ್ 2.1-0-8-0, ವಹಾಬ್ ರಿಯಾಜ್ 4-0-20-1ಫಲಿತಾಂಶ: ಭಾರತಕ್ಕೆ 8 ವಿಕೆಟ್ ಜಯ, ಪಂದ್ಯಶ್ರೇಷ್ಠ: ಭುವನೇಶ್ವರ್ ಕುಮಾರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.