ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮೋ ರಕ್ಷತಿ ರಕ್ಷಿತಃ

Last Updated 26 ಮೇ 2015, 19:30 IST
ಅಕ್ಷರ ಗಾತ್ರ

ಭಾರತೀಯರಿಗೆ ಧರ್ಮವನ್ನು ಪರಿಚಯಿಸುವ ಅಗತ್ಯವಿಲ್ಲವಾದರೂ ಅದರ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ನಿವಾರಿಸಬೇಕಾದುದು ಅತ್ಯಗತ್ಯ. ‘ಧಾರಣಾದ್ಧರ್ಮ ಇತ್ಯಾಹುಃ’ ಎಂಬ ಮಾತಿನಲ್ಲಿ ಧರ್ಮ ಎಂದರೆ ಬಿದ್ದವರನ್ನು, ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದು ಅಥವಾ ಅವರನ್ನು ರಕ್ಷಿಸುವುದು ಎಂಬರ್ಥವಿದೆ. ಪರಸ್ಪರ ಪ್ರೀತಿ ವಿಶ್ವಾಸ ಹೊಂದಿರುವುದು, ತ್ಯಾಗ, ಕರುಣೆ, ಅಹಿಂಸೆ, ಸತ್ಯ ಮತ್ತು ಸದಾಚಾರಗಳು ಯಾವುದೇ ಧರ್ಮದ ತಳಹದಿ ಎಂಬಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯೇ ಭಾರತೀಯ ಪರಂಪರೆಯಲ್ಲಿ ವಿವಿಧ ಧರ್ಮಗಳಲ್ಲಿ ಏಕತೆ ಮತ್ತು ಸಮಗ್ರತೆ ಮೂಡಿಬಂದಿರುವುದನ್ನು ಕಾಣಬಹುದು.

ಧರ್ಮವು ಸಾಮಾಜಿಕ ಅಗತ್ಯಗಳಲ್ಲೊಂದು. ಸಮಾಜವನ್ನು ಸುಸ್ಥಿತಿಯಲ್ಲಿಡುವ ಈ ಧರ್ಮವು ವ್ಯಕ್ತಿ ಮತ್ತು ಸಮಾಜವನ್ನು ಎತ್ತಿ ಹಿಡಿಯುವ ಗುಣವುಳ್ಳದ್ದಾಗಿದೆ. ಧರ್ಮದಿಂದ ಮನುಷ್ಯನಿಗೆ ಸಿರಿ-ಸಂಪತ್ತು, ಸುಖ-ಶಾಂತಿ ಮತ್ತು ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಶ್ರೇಷ್ಠ ಧ್ಯೇಯಗಳನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗಿರುವುದೇ ಧರ್ಮ. ಭಾರತೀಯ ದರ್ಶನಗಳಲ್ಲಿ ಪ್ರತಿಪಾದಿತವಾದ ವ್ಯಕ್ತಿಯ ಅಂತಿಮ ಗುರಿಯಾದ ಮೋಕ್ಷ ಸಾಧನೆಯೂ ಕೂಡ ಧರ್ಮದಿಂದಲೇ ಮೊದಲಾಗಬೇಕು. ಪುರುಷಾರ್ಥ ಚತುಷ್ಟಯಗಳಲ್ಲಿ ಧರ್ಮಕ್ಕೆ ಅಗ್ರಸ್ಥಾನ. ನಂತರದ ಅರ್ಥ, ಕಾಮ ಮತ್ತು ಮೋಕ್ಷಗಳ ಸಂಪಾದನೆ ಧರ್ಮಮಾರ್ಗದಲ್ಲಿಯೇ ಸಾಗಬೇಕೆಂಬುದು ಇದರರ್ಥ.

ಧರ್ಮಶಾಸ್ತ್ರಗಳಲ್ಲಿ ಧರ್ಮವು ಮನುಷ್ಯನ ಸ್ವಭಾವ (religion a priori) ಎಂದು ಹೇಳಲಾಗಿದೆ. ಧರ್ಮವಿಲ್ಲದೆ ಮನುಷ್ಯ ಬದುಕಲಾರ. ಶ್ವಾಸೋಚ್ಛ್ವಾಸ ಮನುಷ್ಯನ ಸ್ವಾಭಾವಿಕ ಕ್ರಿಯೆಯಾಗಿರುವಂತೆ ಧರ್ಮವೂ ಕೂಡ ಸ್ವಾಭಾವಿಕ ಕ್ರಿಯೆ. ಧರ್ಮವಿಲ್ಲದೆ ಮನುಷ್ಯನು ಮನುಷ್ಯನಂತೆ ವರ್ತಿಸಲಾರ. ಧರ್ಮದ ಅರಿವಿನಿಂದಲೇ ಮನುಷ್ಯನು ಭೂತವನ್ನು ವರ್ತಮಾನದಲ್ಲಿ ಪುನರ್ಜೀವಿತಗೊಳಿಸಿ ಭವಿಷ್ಯವನ್ನು ನಿರ್ಮಿಸಲು ಸಾಧ್ಯ. ಆದ್ದರಿಂದ ಧರ್ಮವು ಸದಾ ಮಾನವ ಬದುಕಿಗೆ ದಾರಿದೀಪವಾಗಿದೆ.

ಧರ್ಮ ಎಂದರೆ ಮೂಢಾಚರಣೆಗಳಲ್ಲ. ಸತ್ಯ, ಅಹಿಂಸೆ, ಕರುಣೆ, ಶೀಲ, ಚಾರಿತ್ರ್ಯಗಳಿಂದ ಕೂಡಿದ ನೈತಿಕ ಆಚರಣೆಗಳು. ಈ ಆಚರಣೆಗಳೇ ಧರ್ಮದ ತಳಹದಿ. ದಯವೇ ಧರ್ಮದ ಮೂಲ ಅಹಿಂಸಾ ಪರಮೋ ಧರ್ಮಃ ಇತ್ಯಾದಿ ವಾಕ್ಯಗಳಿಂದ ಧರ್ಮವನ್ನು ವ್ಯಾಖ್ಯಾನಿಸಲಾಗಿದೆ. ಮಜಹಬ್ ನಹೀಂ ಸಿಖಾತಾ, ಆಪಸ್ ಮೇ ವೈರ ರಖನಾ ಎಂಬ ಕವಿವಾಣಿಯಲ್ಲಿ ಧರ್ಮವೆಂದೂ ವೈರವನ್ನು ಬೋಧಿಸುವುದಿಲ್ಲ. ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಹೆಚ್ಚಿಸಿ ಸಹಬಾಳ್ವೆಯನ್ನು ಬೋಧಿಸುವುದೇ ಧರ್ಮವಾಗಿದೆ. ಇಂತಹ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವನ್ನು ಮೀರಿ ಯಾರೂ ನಡೆಯಬಾರದು.  ಮೀರಿದರೆ ಹಾನಿ ತಪ್ಪಿದ್ದಲ್ಲ. ಧರ್ಮದ ಆಚರಣೆಗಳನ್ನು ಪಾಲಿಸಿದರೆ ಧರ್ಮವು ನಮ್ಮನ್ನು ನಿಶ್ಚಿತವಾಗಿಯೂ ಸಂರಕ್ಷಿಸುತ್ತದೆ. ಅಂತೆಯೇ ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತು ಜನಜನಿತವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT