ಬುಧವಾರ, ಸೆಪ್ಟೆಂಬರ್ 30, 2020
19 °C

ಧೂಮಪಾನ ಪ್ರೇಮಿಗಳ ಸಂಖ್ಯೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧೂಮಪಾನ ಪ್ರೇಮಿಗಳ ಸಂಖ್ಯೆ ಹೆಚ್ಚಳ

ಬೆಂಗಳೂರು: ವಿಶ್ವ ತಂಬಾಕು ವಿರೋಧಿ ದಿನವನ್ನು ಪ್ರತಿ ವರ್ಷ ಮೇ 31ರಂದು ಆಚರಿಸಲಾಗುತ್ತಿದ್ದರೂ ರಾಜ್ಯದಲ್ಲಿ ತಂಬಾಕು ಸೇವನೆ ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ರಾಜ್ಯದ ವಯಸ್ಕರ ಪೈಕಿ ಶೇಕಡ 28.2ರಷ್ಟು ಮಂದಿ ತಂಬಾಕು ಸೇವನೆಯ ದಾಸರಾಗಿದ್ದಾರೆ. ಇದರಲ್ಲಿ ಮಹಿಳೆಯರ ಪಾಲು ಶೇ 16.3ರಷ್ಟು.ಬೀಡಿ, ಸಿಗರೇಟ್ ಸೇದುವ ಮೂಲಕ ತಂಬಾಕಿನ ದಾಸರಾಗಿರುವವರ ಪ್ರಮಾಣ ಶೇ 11.9ರಷ್ಟು. ಇದರಲ್ಲಿ ಬೀಡಿ ಸೇದುವವರ ಪಾಲು ಶೇ 8.3ರಷ್ಟು ಎಂದು `ಗ್ಯಾಟ್ಸ್~ (ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ) ಸಮೀಕ್ಷೆ ತಿಳಿಸಿದೆ.ತಂಬಾಕು ಸೇವನೆಯನ್ನು ಚಟವಾಗಿ ಬೆಳೆಸಿಕೊಂಡಿರುವ ರಾಜ್ಯದ ವಯಸ್ಕರ ಕುರಿತು ನಡೆದಿರುವ `ಗ್ಯಾಟ್ಸ್~ ಸಮೀಕ್ಷೆಯ ವರದಿಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನ ಸೌಧದಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.ಪಾನ್ ಮಸಾಲಾ, ಗುಟ್ಕಾ, ಬೀಡಾ ಮೂಲಕ ತಂಬಾಕು ಸೇವಿಸುವ ವಯಸ್ಕರ ಪ್ರಮಾಣ ರಾಜ್ಯದಲ್ಲಿ ಶೇ 19.4ರಷ್ಟಿದೆ. ಶೇ 16ರಷ್ಟು ಮಹಿಳೆಯರು ಹಾಗೂ ಶೇ 22.7ರಷ್ಟು ಪುರುಷರು ಪಾನ್ ಮಸಾಲಾ, ಗುಟ್ಕಾ ಸೇವಿಸುವ ಮೂಲಕ ತಂಬಾಕಿನ ಚಟ ಅಂಟಿಸಿಕೊಂಡಿದ್ದಾರೆ. ತಂಬಾಕು ಸೇವಿಸುವವರ ಪೈಕಿ ಶೇ 55.1ರಷ್ಟು ಮಂದಿ ಬೆಳಿಗ್ಗೆ ಎದ್ದ ಅರ್ಧ ಗಂಟೆಯಲ್ಲೇ ತಮ್ಮ `ಚಟ~ ಆರಂಭಿಸುತ್ತಾರೆ ಎಂದು ಸಮೀಕ್ಷಾ ವರದಿ ಹೇಳಿದೆ.ಸಮಾಧಾನಕರ ಅಂಶವೆಂದರೆ, ಧೂಮಪಾನಿಗಳ ಪೈಕಿ ಶೇ 37.6ರಷ್ಟು ಮಂದಿ ಹಾಗೂ ಬೇರೆ ವಿಧದಲ್ಲಿ ತಂಬಾಕು ಸೇವಿಸುವರ ಪೈಕಿ ಶೇ 41ರಷ್ಟು ಮಂದಿ ತಮ್ಮ `ಚಟ~ದಿಂದ ದೂರ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ.ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧ ಎಂದು ಪರಿಗಣಿತವಾಗಿದ್ದರೂ, ಅದಕ್ಕೆ ಸಂಪೂರ್ಣ ತಡೆ ಬಿದ್ದಿಲ್ಲ. ಧೂಮಪಾನ ಮಾಡದವರ ಪೈಕಿ ಶೇ 37.2ರಷ್ಟು ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.ವರದಿ ಬಿಡುಗಡೆ ಮಾಡಿ ಮಾತನಾಡಿದ ಶೆಟ್ಟರ್, `ಕ್ಯಾನ್ಸರ್ ಬರಲು ಪ್ರಮುಖ ಕಾರಣ ತಂಬಾಕು ಸೇವನೆ. ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಅಧಿಕ ಮಂದಿ ಕ್ಯಾನ್ಸರ್‌ನಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ~ ಎಂದರು.

`ಮಹಿಳೆಯರಲ್ಲೂ ತಂಬಾಕು ಸೇವನೆ ಅಧಿಕವಾಗುತ್ತಿರುವುದು ಆತಂಕದ ವಿಚಾರ. ರಾಜ್ಯದಲ್ಲಿ ಒಟ್ಟು 1,881 ಮಂದಿ ವಯಸ್ಕರನ್ನು ಸಂಪರ್ಕಿಸಿ ಈ ವರದಿ ಸಿದ್ಧಪಡಿಸಲಾಗಿದೆ~ ಎಂದು `ಗ್ಯಾಟ್ಸ್~ ಅಧಿಕಾರಿಗಳು ತಿಳಿಸಿದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಶಾಸಕರಿಗಾಗಿ ಆಯೋಜಿಸಲಾಗಿತ್ತು. ಆದರೆ ಆಡಳಿತ ಹಾಗೂ ಪ್ರತಿಪಕ್ಷಗಳ ಹೆಚ್ಚಿನ ಶಾಸಕರು ಕಾರ್ಯಕ್ರಮದತ್ತ ತಲೆ ಹಾಕಲಿಲ್ಲ.ತಪ್ಪೆಂಬುದು ತಿಳಿದಿದೆ, ಆದರೂ...

ರಾಜ್ಯದಲ್ಲಿ ವಯಸ್ಕರ ಪೈಕಿ ಶೇ 92.1ರಷ್ಟು ಮಂದಿಗೆ ಧೂಮಪಾನ ಮಾಡುವುದು ಕ್ಯಾನ್ಸರ್‌ಗೆ ಕಾರಣವಾಗಬಲ್ಲದು ಎಂಬುದು ತಿಳಿದಿದೆ. ತಂಬಾಕು ಅಗಿಯುವುದು ಗಂಭೀರ ಕಾಯಿಲೆಗಳಿಗೆ ಮೂಲವಾಗುತ್ತದೆ ಎನ್ನುವುದು ಶೇ 92ರಷ್ಟು ಮಂದಿಗೆ ಗೊತ್ತು. ಆದರೂ ರಾಜ್ಯದಲ್ಲಿ ಸರಿಸುಮಾರು ಮೂವರಲ್ಲಿ ಒಬ್ಬರಿಗೆ ತಂಬಾಕು ಸೇವನೆ ದುಶ್ಚಟ ಅಂಟಿಕೊಂಡಿದೆ ಎನ್ನುವುದು ಸಮೀಕ್ಷೆ ಕಂಡುಕೊಂಡಿರುವ ಅಂಶ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.