ಭಾನುವಾರ, ಮೇ 16, 2021
26 °C

ನಕಲಿ ದಾಖಲೆ ಸೃಷ್ಟಿ: ಆರ್‌ಐಗೆ ಕಡ್ಡಾಯ ನಿವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಜಮೀನು ಮಾರಾಟ ಮಾಡಲು ನಕಲಿ ದಾಖಲೆ ಸೃಷ್ಟಿಸಿ ಜಮೀನಿನ ವಾರಸುದಾರರ ಜಾತಿಯನ್ನೇ ಬದಲಿಸಿಕೊಟ್ಟ ಆರೋಪದ ಮೇಲೆ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಎ.ಎಂ. ಶಿವರಾಜು ಎಂಬುವವರನ್ನು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಕಡ್ಡಾಯ ನಿವೃತ್ತಿಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.ತಾಲ್ಲೂಕಿನ ಪಾಲಹಳ್ಳಿ ಸ.ನಂ.210 ಹಾಗೂ ಸ.ನಂ.211ರ 34 ಗುಂಟೆ ಜಮೀನಿನ ಮಾಲೀಕತ್ವವನ್ನೇ ಬದಲಿಸಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎ.ಎಸ್.ಮದ್ಬಾವಿ ಶಿವರಾಜು ಅವರ ವಿರುದ್ಧ ಕಡ್ಡಾಯ ನಿವೃತ್ತಿಯ ಆದೇಶ ಹೊರಡಿಸಿದ್ದಾರೆ.ಕೆಸಿಎಸ್ ನಿಯಮ- 1956 8(4)ರ ಅನ್ವಯ, ಸರ್ಕಾರಿ ಆದೇಶ ಸಂಖ್ಯೆ 84ರ ಅಡಿ ಈ ಆದೇಶ ಹೊರ ಬಿದ್ದಿದೆ. ಆದೇಶದ ಮೂಲ ಪ್ರತಿ ಬಂದ ನಂತರ ಶಿವರಾಜು ಅವರನ್ನು ಸೇವೆಯಿಂದ ಬಿಡಗಡೆಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪಾಲಹಳ್ಳಿ ಸ.ನಂ. 210 ಹಾಗೂ 211ರಲ್ಲಿ ದಿವಂಗತ ಗಿರೀಗೌಡ ಎಂಬುವವರಿಗೆ ಸೇರಿದ ಜಮೀನನ್ನು ಅದೇ ಗ್ರಾಮದ ನರಸಯ್ಯನ ಪತ್ನಿ ವೆಂಕಟಮ್ಮ ಎಂಬುವವರಿಗೆ ಖಾತೆ ಮಾಡಿಕೊಡಲಾಗಿತ್ತು.ಮಡಿವಾಳ ಜಾತಿಯ ನರಸಯ್ಯನನ್ನು ಒಕ್ಕಲಿಗ ಜಾತಿಯ ಗಿರೀಗೌಡ ಎಂಬವರ ಮಗ ಎಂದು ಬಿಂಬಿಸಿ ದಾಖಲೆ ಸೃಷ್ಟಿಸಿದ್ದರು. ಸದರಿ ಜಮೀನನ್ನು ಮೈಸೂರಿನ ರಾಜರಾಜೇಶ್ವರಿ ನಗರದ ಅಣ್ಣಯ್ಯಪ್ಪನ ಮಗ ಟಿ.ಎ.ಪುರುಷೋತ್ತಮ ಎಂಬುವವರಿಗೆ ರೂ.2.50 ಲಕ್ಷಕ್ಕೆ ಮಾರಾಟ ಮಾಡಿದ್ದರು.

 

ಈ ಪ್ರಕರಣದಲ್ಲಿ ಶಿವರಾಜು ಪ್ರಮುಖ ಆರೋಪಿಯಾಗಿದ್ದು ಅವರ ವಿರುದ್ಧ ಗಿರೀಗೌಡ ಅವರ ಮೊಮ್ಮಗ ಚನ್ನೇಗೌಡರ ಮಗ ಪಿ.ಸಿ.ಬಾಲಕೃಷ್ಣ ಉಪ ಲೋಕಾಯುಕ್ತರಿಗೆ ದೂರು ನೀಡಿದ್ದರು. ಎ.ಎಂ.ಶಿವರಾಜು ವಿರುದ್ಧ 2006ರಲ್ಲಿ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಉಪ ಲೋಕಾಯುಕ್ತ ನಕಲಿ ದಾಖಲೆ ಸೃಷ್ಟಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಕಂದಾಯ ನಿರೀಕ್ಷಕ ಶಿವರಾಜು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬಹುದು ಎಂದು ಜಿಲ್ಲಾ ನ್ಯಾಯಾಧೀಶರಿಗೆ ಸೂಚಿಸಿತ್ತು.ಈ ಕುರಿತು ಪೊಲೀಸರಿಂದ ಪ್ರತ್ಯೇಕ ತನಿಖೆ ನಡೆಸಿ ವರದಿಯನ್ನೂ ಪಡೆಯಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೆ.5ರಂದು ಶಿವರಾಜು ಅವರಿಗೆ ಕಡ್ಡಾಯ ನಿವೃತ್ತಿಯ ಆದೇಶ ಜಾರಿಗೊಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.