ಭಾನುವಾರ, ಏಪ್ರಿಲ್ 11, 2021
32 °C

ನಕ್ಸಲರು ಶರಣಾಗತಿ ಬಯಸಿದರೆ ಚರ್ಚೆಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಕ್ಸಲರು ಇತರರಂತೆ ಬದುಕು ಕಟ್ಟಿಕೊಳ್ಳಲು ಬಯಸಿ ಶರಣಾದರೆ, ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.ನಕ್ಸಲರು ಭೇಟಿ ನೀಡಿದ್ದ ಕಾಲೂರಿಗೆ ಬುಧವಾರ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಅವರು ತೆರಳಿ ಕನ್ನಿಕಂಡ ಪಳಂಗಪ್ಪ ಮತ್ತು ಕಾವೇರಿ ಅವರ ಮನೆಯವರಿಗೆ ಧೈರ್ಯ ತುಂಬಿದರು.ಯಾವುದೇ ಕಾರಣಕ್ಕೂ ನಕ್ಸಲರಿಗೆ ಹೆದರುವ ಅಗತ್ಯವಿಲ್ಲ. ನಕ್ಸಲರೆಂದು ಖಚಿತವಾದರೆ ಆತ್ಮ ರಕ್ಷಣೆಗಾಗಿ ತಮ್ಮಲ್ಲಿರುವ ಬಂದೂಕನ್ನು ಬಳಸಿ ಎಂದು ಸಲಹೆ ನೀಡಿದರು.ಯಾವುದೇ ತೊಂದರೆ ಉಂಟಾದಲ್ಲಿ ದೂರವಾಣಿ ಮೂಲಕ ಪೊಲೀಸರಿಗೆ ಸುದ್ದಿ ತಿಳಿಸಬೇಕು. ನಕ್ಸಲ್ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಕೊಡಗಿನಲ್ಲಿ ಅವಕಾಶವಿಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸರು ತಮ್ಮ ಕಾರ್ಯಾಚರಣೆ ಮುಂದುವರಿಸಿ ನಕ್ಸಲರನ್ನು ಸೆದೆಬಡಿಯುವುದಾಗಿ ಎಚ್ಚರಿಕೆ ನೀಡಿದರು.ನಕ್ಸಲರು ಭೇಟಿ ನೀಡಿದ ಮನೆಯ ಮಾಲೀಕರಾದ ಕಾವೇರಿ ಮತ್ತು ಪೂವಮ್ಮ ಕುಟುಂಬದವರಿಂದ ಸಚಿವರು ಮಾಹಿತಿ ಪಡೆದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಶಿವಪ್ಪ, ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ನಗರಸಭೆ ಸದಸ್ಯ ಪಿ.ಡಿ.ಪೊನ್ನಪ್ಪ, ಸುಭಾಷ್, ಪೊಲೀಸ್ ಇನ್ಸ್‌ಪೆಕ್ಟರ್ ಶ್ರಿಕಾಂತ್ ಇತರರು ಇದ್ದರು.

`ಬಂದೂಕು ನೋಡಿ ಭಯವಾಯಿತು~

ಸೋಮವಾರ ಸಂಜೆ ಸುಮಾರು 5 ರಿಂದ 6 ಗಂಟೆ ಸಮಯದಲ್ಲಿ ಮೂವರು ಯುವಕರು ಮತ್ತು ಒಬ್ಬ ಯುವತಿ ಮನೆಯ ಬಳಿ ಬಂದಿದ್ದರು. ಹಸಿರು ಮತ್ತು ಕಪ್ಪು ಬಣ್ಣ ಮಿಶ್ರಿತ ಉಡುಪು ಧರಿಸಿದ್ದರು.ಮನೆಯ್ಲ್ಲಲಿ ಎಷ್ಟು ಜನ ವಾಸವಾಗಿದ್ದೀರಿ?ಎಂದು ಇತರ ಮಾಹಿತಿ ಪಡೆದು, ಹಸಿವಾಗುತ್ತಿದೆ ಊಟ ಕೊಡಿ ಎಂದರು. ಆದರೆ ಆ ನಾಲ್ಕು ನಕ್ಸಲರ ಬಳಿ ಬಂದೂಕು ಇತ್ತು. ಅದನ್ನು ಕಂಡು ನನಗೆ ಭಯವಾಗುತ್ತಿತ್ತು ಎಂದು ಮನೆಯ ಒಡತಿ ಪೂವಮ್ಮ ಅಳಲು ತೋಡಿಕೊಂಡರು.

   

`ನಮಗೆ ಸೂಕ್ತ ರಕ್ಷಣೆ ಕೊಡಿ~

ಪಕ್ಕದ ಮನೆಯವರು ಊಟ ಹಾಕಲು ಹಿಂಜರಿದಾಗ, ನಮ್ಮ ಮನೆಯ ಬಳಿ ಬಂದು ಅಕ್ಕಿ, ಬೇಳೆ, ಉಪ್ಪು ಹಾಗೂ ಮತ್ತಿತರ ಪದಾರ್ಥಗಳನ್ನು ಪಡೆದುಕೊಂಡರು.ಗ್ರಾಮದ ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದರು. ಆ ಸಂದರ್ಭ ಮನೆಯಲ್ಲಿ ಯಾರು ಇಲ್ಲದ ಕಾರಣ ತುಂಬಾ ಭಯವಾಗುತ್ತಿತ್ತು. ನಮಗೆ ರಕ್ಷಣೆ ಬೇಕಾಗಿದೆ ಎಂದು ಮತ್ತೊಂದು ಮನೆಯವರಾದ ಕಾವೇರಿ ಅವರು ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.