ಭಾನುವಾರ, ಮಾರ್ಚ್ 7, 2021
22 °C
ಬದಲಾಗುತ್ತಿದೆ ಜೀವನಶೈಲಿ, ಬರುತ್ತಿವೆ ಹೊಸ ಕಟ್ಟಡಗಳು

ನಗರಕ್ಕೆ ಹೈಟೆಕ್‌ ಸ್ಪರ್ಶ, ನವೀನ ರೂಪ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ನಗರಕ್ಕೆ ಹೈಟೆಕ್‌ ಸ್ಪರ್ಶ, ನವೀನ ರೂಪ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವಾಗಿ 8 ವರ್ಷವಾದರೂ ಗ್ರಾಮೀಣ ಸಂಸ್ಕೃತಿಯ ಛಾಯೆ ಹೊಂದಿದ್ದ ನಗರ ನಿಧಾನವಾಗಿ ಹೈಟೆಕ್‌ ಸ್ಪರ್ಶ ಪಡೆಯುತ್ತಿದೆ.ಬೆಂಗಳೂರಿನಿಂದ 60 ಕಿ.ಮೀ. ದೂರದಲ್ಲಿದ್ದರೂ ಹೊಸ ಮಾದರಿ ಕಟ್ಟಡ, ವ್ಯಾಪಾರ–ವಹಿವಾಟು ಮತ್ತು ಆಧುನಿಕತೆಯ ಲೇಪನ ಸಹ ಇಲ್ಲದೇ ಸಹಜತೆಯಿಂದ ಕೂಡಿದ್ದ ನಗರವು ಇತ್ತೀಚಿನ ದಿನಗಳಲ್ಲಿ ಹೊಸ ಸ್ವರೂಪದಲ್ಲಿ ಕಂಗೊಳಿಸತೊಡಗಿದೆ.ನಗರದ ಪ್ರವೇಶದ್ವಾರದ ಬಳಿಯೇ ಮಾಲ್‌ಗಳು ನಿರ್ಮಾಣಗೊಳ್ಳುತ್ತಿದ್ದು, ಹೊಸ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಶಾಖಾ ಕೇಂದ್ರಗಳನ್ನು ಆರಂಭಿಸತೊಡಗಿವೆ. ಮಿಲಿಟರಿ ಹೋಟೆಲ್‌ಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಬಗೆಬಗೆ ರೀತಿಯ ಮಾಂಸಾಹಾರಿ ಹೋಟೆಲ್‌ಗಳು ಸ್ಥಾನ ಪಡೆದುಕೊಳ್ಳುತ್ತಿವೆ. ದೂರದ ಕರಾವಳಿ ಪ್ರದೇಶದ ಉದ್ಯಮಿಗಳು ಸಸ್ಯಾಹಾರಿ ಹೋಟೆಲ್‌ಗಳನ್ನು ತೆರೆದು ಸ್ಥಳೀಯರನ್ನು ಆಕರ್ಷಿಸತೊಡಗಿದ್ದಾರೆ.ಒಂಟಿ ಮನೆ ಇಲ್ಲವೇ ಸಾಲು ಮನೆಗಳು ಮಾತ್ರ ಕಾಣಸಿಗುತ್ತಿದ್ದ ವಾರ್ಡ್‌ಗಳಲ್ಲಿ ಪ್ರತ್ಯೇಕ ಕಾಲೊನಿಗಳು ನಿರ್ಮಾಣಗೊಳ್ಳುತ್ತಿವೆ. 5 ಎಕರೆ ಭೂ ಪ್ರದೇಶದಲ್ಲಿ ವಿಶಾಲ ಬಂಗಲೆಗಳುಳ್ಳ ವಿನೂತನ ಮಾದರಿಯ ಕಾಲೊನಿಗಳು ಜನರನ್ನು ಕೈ ಬೀಸಿ ಕೆರೆಯುತ್ತಿವೆ. ಬೆಂಗಳೂರಿನ ಒತ್ತಡದ ಜೀವನಶೈಲಿಯಿಂದ ಕೊಂಚ ಮುಕ್ತಿ ಪಡೆಯಲು ಜನರು ಇಲ್ಲಿ ಮನೆ ಖರೀದಿಸಲು ಆಸಕ್ತರಾಗಿದ್ದಾರೆ.‘ನಗರದ ಹೊರವಲಯದ ಬಿ.ಬಿ.ರಸ್ತೆ ಬದಿಯಲ್ಲಿರುವ ಯಶೋದಾ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಎಟಿಎಂ ಸೌಲಭ್ಯ ಸಹಿತ ಐದು ಬ್ಯಾಂಕ್‌ ಶಾಖೆಗಳಿವೆ. ಅಲ್ಲಿಯೇ ಎರಡು ಹೋಟೆಲ್‌ ಮತ್ತು ಲಾಡ್ಜ್‌ಗಳೂ ಇವೆ. ನಾನಾ ರೀತಿಯ ಮಳಿಗೆಗಳೂ ತಲೆ ಎತ್ತುತ್ತಿವೆ.‘ಹೊಸ ಉದ್ಯಮಿಗಳು ನಗರದಲ್ಲಿ ವಿವಿಧ ಉದ್ಯಮಗಳನ್ನು ಆರಂಭಿಸಲು ಮುಂದಾಗಿದ್ದಾರೆ’ ಎಂದು ನಗರದ ನಿವಾಸಿ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.ಒಂದೆಡೆ ವಿವಿಧ ವಿನ್ಯಾಸಗಳುಳ್ಳ ಕಟ್ಟಡಗಳು ನಿರ್ಮಾಣಗೊಳ್ಳುತ್ತಿದ್ದರೆ, ಮತ್ತೊಂದೆಡೆ ನಗರದ ಬಿ.ಬಿ.ರಸ್ತೆ ಮತ್ತು ಎಂ.ಜಿ.ರಸ್ತೆಯ ಎರಡೂ ಬದಿಯಲ್ಲೂ ಸಾಲುಗಟ್ಟಿರುವ ರಿಯಲ್‌ ಎಸ್ಟೇಟ್‌ ಕಚೇರಿಗಳಲ್ಲಿ ವಹಿವಾಟು ಕೂಡ ವೇಗ ಪಡೆಯತೊಡಗಿದೆ. ಬೆಂಗಳೂರು, ಆಂಧ್ರಪ್ರದೇಶ ಸೇರಿದಂತೆ ನಾನಾ ರಾಜ್ಯಗಳ ಪ್ರತಿಷ್ಠಿತ ನಿರ್ಮಾತೃ ಸಂಸ್ಥೆಯವರು ಬೃಹತ್‌ ಸೂಚನಾ ಫಲಕಗಳನ್ನು ಅಳವಡಿಸಿ ಜನರ ಗಮನ ಸೆಳೆಯತೊಡಗಿದ್ದಾರೆ.‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 20 ಕಿ.ಮೀ. ಸಮೀಪ ಇರುವ ಕಾರಣ ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲ ಸ್ಥಳಗಳಿಗೆ ಬೇಡಿಕೆಯಿದೆ. ಬೆಂಗಳೂರಿನಲ್ಲಿ ವಾಹನ ಮತ್ತು ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಬಹುತೇಕ ಜನರು ಚಿಕ್ಕಬಳ್ಳಾಪುರ ನಗರವನ್ನು ‘ಔಟ್‌ಹೌಸ್‌’ ರೂಪದಲ್ಲಿ ಕಂಡುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡಿ, ಚಿಕ್ಕಬಳ್ಳಾಪುರದಲ್ಲಿ ವಾಸವಿರಲು ಇಷ್ಟಪಡುತ್ತಾರೆ’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ಶಿವಶಂಕರ್‌ ತಿಳಿಸಿದರು.ಖಾನಾವಳಿಯದ್ದೇ ಕೊರತೆ

ಕರಾವಳಿ ಪ್ರದೇಶದ ಜನರು ‘ಕರಾವಳಿ’, ‘ಉಡುಪಿ ಗಾರ್ಡನ್’ ಮತ್ತು ‘ಅಂಬಾ ಭವಾನಿ’ ಹೋಟೆಲ್‌ ತೆರೆದಿದ್ದರೆ, ಆಂಧ್ರಪ್ರದೇಶದ ಅನಂತಪುರ ಮತ್ತು ಕದಿರಿ ಭಾಗದವರು ಮಿಲಿಟರಿ ಹೋಟೆಲ್‌ಗಳನ್ನು ತೆರೆದಿದ್ದಾರೆ. ಆದರೆ ಇಲ್ಲಿ ಉತ್ತರ ಕರ್ನಾಟಕದಿಂದ ಬಂದವರ ಬಾಯಿ ರುಚಿ ತಣಿಸುವ ಖಾನಾವಳಿ ಒಂದೂ ಇಲ್ಲ.

‘ನಗರದಲ್ಲಿ ಉತ್ತರ   ಕರ್ನಾಟಕ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ.    ಆದರೆ ಅವರು ಇಷ್ಟಪಡುವ ರೊಟ್ಟಿ, ಚಪಾತಿ ಊಟ ಸಿಗುವ ಖಾನಾವಳಿ ಇಲ್ಲಿ ಇಲ್ಲ. ಅದಕ್ಕಾಗಿ ಅವರು ತಮ್ಮ ಊರುಗಳಿಗೆ ಹೋದಾಗ, ಅಲ್ಲಿಂದಲೇ ರೊಟ್ಟಿ, ಚಪಾತಿ,   ಚಟ್ನಿ ಮುಂತಾದವು ತರುತ್ತಾರೆ. ರಾಯಚೂರು, ಕಲಬುರ್ಗಿ, ವಿಜಯಪುರ ಮುಂತಾದ    ಜಿಲ್ಲೆಗಳ ಜನರು ಇಲ್ಲಿನ ಶಿಕ್ಷಣ ಸಂಸ್ಥೆಗಳು ಮತ್ತು ಸಾರಿಗೆ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ವಿಜಯಪುರದ ಚನ್ನಬಸಪ್ಪ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.