ಭಾನುವಾರ, ಏಪ್ರಿಲ್ 11, 2021
32 °C

ನಗರಗಳಲ್ಲಿ ಪ್ರಾದೇಶಿಕ ಭಾಷೆಗಳ ಸ್ಥಿತಿಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಾಹಿತ್ಯ ಅಕಾಡೆಮಿಯ ಇತ್ತೀಚಿನ ‘ಇಂಡಿಯನ್ ಲಿಟರೇಚರ್’ (ಸಂಖ್ಯೆ 259) ಸಂಚಿಕೆಯಲ್ಲಿ ಅದರ ಅತಿಥಿ ಸಂಪಾದಕರಾದ ಸುಬೋಧ ಸರ್ಕಾರ್ ಅವರು ಜಗತ್ತಿನ ಅತಿ ಹೆಚ್ಚು ಜನ ಮಾತಾಡುವ ಭಾಷೆಗಳ ಪೈಕಿ ಆರನೆಯದಾದ ಬಂಗಾಲಿ ಭಾಷೆಯ ಇಂದಿನ ಸ್ಥಿತಿಗತಿ ಬಗ್ಗೆ ಹೀಗೆ ಬರೆದಿದ್ದಾರೆ. ‘ಈಗ ಬಂಗಾಲಿ ಸಾಯುತ್ತಿರುವ ಭಾಷೆಯಾಗಿದೆ, ತನ್ನದೇ ಆದ ರಾಜಧಾನಿಯಲ್ಲಿ, ಗಾಸಿಗೊಂಡು, ತೇಜೋವಧೆಯಾದಂತಿದೆ.. ದೇಶದ ಸಾಂವಿಧಾನಿಕ ಪಟ್ಟವುಳ್ಳ 24 ಭಾಷೆಗಳಲ್ಲಿ ಅದೂ ಒಂದು ಸಭ್ಯ ಭಾಷೆಯಾಗಿದೆಯಷ್ಟೆ. ಕೋಲ್ಕತ್ತದ ಯಾವುದೇ ವಿಶ್ವವಿದ್ಯಾನಿಲಯದ ಮೊದಲಿಗ ಅಥವಾ ಹಳ್ಳಿಯ ಶಾಲಾ ಶಿಕ್ಷಕ ತನ್ನ ಹರಕು ಮುರುಕು ಇಂಗ್ಲಿಷ್ ಬಗ್ಗೆ ಹೆಮ್ಮೆಪಡುತ್ತಾನೆಯೇ ಹೊರತು, ನಿರ್ಲಕ್ಷಿಸಲ್ಪಟ್ಟ ಸುಂದರ ಹೆಂಡತಿಯಂತೆ ಉಳಿದಿರುವ ಬಂಗಾಲಿ ಭಾಷೆಯ ಬಗ್ಗೆ ಅವನಿಗೆ ನಾಚಿಕೆಯಿಲ್ಲ’.‘ಆದರೆ, ಕೆಲವು ಆಶಾಭಾವನೆಯು ಇಲ್ಲದಿಲ್ಲ. ಒಂದು ಬಂಗಾಲಿ ಸಾಹಿತ್ಯ ಕೋಲ್ಕತ್ತದ ಪುಸ್ತಕ ಮೇಳಕ್ಕೆ ಬಂದರೆ, ನಮ್ಮ ಮಾತು ಸುಳ್ಳು ಎನ್ನುತ್ತೀರಿ. ಅದು ಜಗತ್ತಿನ ಅತ್ಯಂತ ಬೃಹತ್ ಪುಸ್ತಕ ಮೇಳವಾಗಿರುತ್ತದೆ. ಟಿಕೆಟ್ ಕೊಂಡು ಮೇಳಕ್ಕೆ ಹೋಗುವವರ ಸಾಲು, ಯುದ್ಧ ಸಮಯದಲ್ಲಿ ಗಡಿ ದಾಟಿ ಬರುವವರ ನಿರಾಶ್ರಿತರ ಸಂಖ್ಯೆಯ ಸಾಲನ್ನು ನೆನಪಿಸುವಂತೆ, ಅತ್ಯಂತ ಉದ್ದವಾಗಿರುತ್ತದೆ’.ಈ ಸಾಲುಗಳನ್ನು ಓದಿದರೆ, ಇಂದಿನ ಕನ್ನಡದ ಸ್ಥಿತಿಗತಿ ರಾಜಧಾನಿ ಬೆಂಗಳೂರಿನಲ್ಲಿ ಇದಕ್ಕಿಂತ ಭಿನ್ನವಾಗಿಲ್ಲ ಅನ್ನಿಸುತ್ತದೆ. ನಮ್ಮ ರಾಜ್ಯದಲ್ಲೂ ಪುಸ್ತಕ ಮೇಳ ನಡೆದರೆ ಇಷ್ಟು ಲಕ್ಷ ರೂಪಾಯಿ ಪುಸ್ತಕಗಳ ಮಾರಾಟವಾಯಿತು ಎಂದು ಹೆಮ್ಮೆಯಿಂದ ಬೀಗುವವರೇ ಹೆಚ್ಚು. ಅಂದರೆ, ಕನ್ನಡ ಸಾಹಿತ್ಯದ ಬಗ್ಗೆ ಒಲವು ಹೆಚ್ಚು, ಕನ್ನಡ ಭಾಷೆಯ ಬಗ್ಗೆ ಒಲವು ಕಮ್ಮಿಯಾಗುತ್ತಿದೆ. ಅಂದರೆ, ರಾಜ್ಯದ ಎಲ್ಲಾ ರಾಜಧಾನಿಗಳು ಮತ್ತು ಮೆಟ್ರೊ ನಗರಗಳಲ್ಲಿ ಇಂಗ್ಲಿಷ್ ಪ್ರಾಬಲ್ಯವೇ ಹೆಚ್ಚು ಎಂದು ಹೇಳಿದ ಹಾಗಾಯಿತು.ಈಗಂತೂ ಉದ್ಯೋಗಾವಕಾಶಗಳು ಎಲ್ಲಿ ಹೆಚ್ಚಾಗಿರುತ್ತದೋ, ಅಲ್ಲೇ ಜನ ಸೇರಿಕೊಳ್ಳುತ್ತಾರೆ. ಬೆಂಗಳೂರಿನಂತಹ ನಗರ ಐಟಿ ರಾಜಧಾನಿಯಾದ ಮೇಲಂತೂ, ಜನಸಂಖ್ಯೆ ಎಷ್ಟೋ ಪಟ್ಟು ಹೆಚ್ಚಾಗಿದೆ. ಬೇರೆ ಬೇರೆ ಭಾಷೆಗಳನ್ನಾಡುವ ಜನ ಹೆಚ್ಚಾದ ಮೇಲೆ ಕನ್ನಡ ಭಾಷೆಯ ಬಳಕೆ ಕ್ಷೀಣಿಸುತ್ತಿದೆ ಎಂಬ ಭಾವನೆ ಬರುವುದು ಸಹಜ. ಬೇರೆ ಭಾಷೆಗಳನ್ನಾಡುವ ಎಲ್ಲಾ ಜನರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಅಪೇಕ್ಷಿಸುವುದು ಸಹಜವೆ. ಅವರಿಗೆಲ್ಲ ಕನ್ನಡ ಕಲಿಸುವುದು ಕಾರ್ಯಗತವಾಗಬಲ್ಲ ಹೆಜ್ಜೆಯೇ?ಕನ್ನಡಿಗರಂತೂ ಬೇರೆ ಭಾಷೆಯವರೊಂದಿಗೆ ವ್ಯವಹರಿಸುವಾಗ, ಅವರ ಭಾಷೆಯಲ್ಲಿಯೇ ಮಾತನಾಡುತ್ತಾರೆಯೇ ಹೊರತು, ನಮ್ಮ ಭಾಷೆಯ ಪರಿಚಯ ಅವರಿಗಾಗಲಿ ಎಂದು ನಮ್ಮ ಭಾಷೆಯನ್ನು ಬಳಸುವ ಸಾಧ್ಯತೆ ಕಡಿಮೆಯೇ. ನಮ್ಮ ರಾಜ್ಯದ ನೀರು, ಗಾಳಿ ಕುಡಿದು ಅವರು ನಮ್ಮ ಭಾಷೆಯನ್ನು ಕಲಿಯುವುದಿಲ್ಲ ಅಥವಾ ಬಳಸುವುದಿಲ್ಲ ಎಂದು ಹೇಳುವುದು ಉಡಾಫೆಯ ಮಾತಾಗುತ್ತದೆ ಎಂದು ಸುಲಭವಾಗಿ ಜಾರಿಕೊಳ್ಳಬಹುದು. ಆದರೆ, ಕನ್ನಡ ಭಾಷೆಯ ಬಳಕೆಯನ್ನು ಎಲ್ಲಾ ಕಡೆ ಅನುಷ್ಠಾನಗೊಳಿಸಲು ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿರುವಂತೆ, ಅನ್ಯ ಭಾಷೆಯ ಜನರಲ್ಲಿ ಕನ್ನಡ ಕಲಿಯುವ ಇಚ್ಛಾಶಕ್ತಿಯ ಕೊರತೆಯೂ ಎದ್ದು ಕಾಣುತ್ತದೆ. ಇಂತಹ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದು ಸಾಹಿತ್ಯ ಅಕಾಡೆಮಿ ಪತ್ರಿಕೆಯ ಲೇಖಕರು ಬರೆದಿರುವುದರಿಂದ ಸ್ಪಷ್ಟವಾಗಿರುತ್ತದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ಬಿಟ್ಟು ಎಲ್ಲಾ ಕಡೆ ಕನ್ನಡ ಭಾಷೆಯ ಬಳಕೆ ಹೆಚ್ಚಾಗಿಯೇ ಇದೆ. ಆದರೆ ಗಡಿನಾಡು ಪ್ರದೇಶಗಳು ಇದಕ್ಕೆ ಅಪವಾದ. ಅಲ್ಲಿ ಎಂದಿನಂತೆ, ನಮ್ಮ ರಾಜ್ಯದ ಜನ, ಗಡಿಯ ಪಕ್ಕದ ರಾಜ್ಯದ ಭಾಷೆಯಲ್ಲಿಯೆ ವ್ಯವಹಾರ ನಡೆಸುತ್ತಾರೆ.ಕನ್ನಡದ ಈ ಸ್ಥಿತಿಗೆ ಕಾರಣ ಮುಖ್ಯವಾಗಿ ಇಂಗ್ಲಿಷ್ ಭಾಷೆ ಮೇಲಿನ ವ್ಯಾಮೋಹವೂ ಹೌದು. ಈ ವ್ಯಾಮೋಹವನ್ನು ನಮ್ಮ ಇಂದಿನ ಸಾಮಾಜಿಕ, ಆರ್ಥಿಕ ಸಂದರ್ಭದಲ್ಲಿ ಬಹಳ ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ಎಲ್ಲಿ ಆರ್ಥಿಕ ಲಾಭವಿರುತ್ತದೋ, ಅಲ್ಲಿ ಸಂಬಂಧಪಟ್ಟ ಭಾಷೆಯೇ ಪ್ರಾಬಲ್ಯ ಪಡೆಯುತ್ತದೆ. ಕಟ್ಟಡ ನಿರ್ಮಾಣದ ಕೆಲಸ ಹುಡುಕಿಕೊಂಡು ಬರುವ ತಮಿಳರು ನಮ್ಮೊಂದಿಗೆ ಹರಕು ಮುರಕು ಕನ್ನಡದಲ್ಲಿಯೇ ಮಾತನಾಡಿ ನಮ್ಮಿಂದ ಲಾಭ ಪಡೆಯಲು ಇಚ್ಛಿಸುತ್ತಾರೆ.ಅಂತೆಯೇ ವಿದ್ಯಾವಂತ ಕನ್ನಡಿಗರೂ ಸಹ ತಮ್ಮ ಆರ್ಥಿಕ ಲಾಭಕ್ಕಾಗಿ ಎಲ್ಲಾ ಕಡೆ ಇಂಗ್ಲಿಷ್ ಅಥವಾ ಅನ್ಯ ಭಾಷೆಯ ಮೊರೆ ಹೋಗುವುದು ವಾಸ್ತವ ಸತ್ಯವಾಗಿದೆ. ಆರ್ಥಿಕ ಲಾಭಕ್ಕೆ ಭಾಷೆಯ ಹಂಗಿಲ್ಲ. ಅಲ್ಲಿ ಹಣ ಮಾತ್ರ ಮುಖ್ಯ. ಹಣದ ಮೋಹದಲ್ಲಿ ಭಾಷಾ ವ್ಯಾಮೋಹ ಸ್ವಾಭಾವಿಕವಾಗಿಯೇ ಕ್ಷೀಣಿಸುತ್ತದೆ. ಇಂದಿನ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ದುಡ್ಡು ಮುಖ್ಯವಾಗುತ್ತದೆಯೇ ಹೊರತು ಇತರ ಆದ್ಯತೆಗಳು ಪಲ್ಲಟವಾಗುತ್ತವೆ. ಇವೆಲ್ಲಾ ಇಂದಿನ ಆರ್ಥಿಕ ಅಸ್ಥಿರತೆಯ ಕಠೋರ ವಾಸ್ತವ ಸಂಗತಿಗಳು.ಸಾಹಿತ್ಯದ ಬಗ್ಗೆ ಒಲವು ಉಳ್ಳವರು ಭಾಷೆಯನ್ನು ಮಾತ್ರ ಏಕೆ ಉಪೇಕ್ಷಿಸಬೇಕು? ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಎಲ್ಲಿಯವರೆಗೆ ನಮ್ಮ ಪ್ರಾದೇಶಿಕ ಭಾಷೆಗಳು ಬದುಕು ಕಟ್ಟಿಕೊಡುವುದಿಲ್ಲವೋ ಅಲ್ಲಿಯವರೆಗೆ ಅವು ಉಪೇಕ್ಷೆಗೆ ಒಳಗಾಗುತ್ತವೆ. ಈ ನಿಟ್ಟಿನಲ್ಲಿ ಸಾಹಿತ್ಯಾಭಿಮಾನ ಮತ್ತು ಭಾಷಾಭಿಮಾನ ಎರಡೂ ಎರಡು ಧ್ರುವಗಳಂತೆ ಕಾಣಿಸುವುದು ವೈಪರೀತ್ಯವೇ ಸರಿ.ವಿದ್ಯಾವಂತ ಕನ್ನಡಿಗರೇ ಇಂಗ್ಲಿಷ್ ಬಳಕೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಇಂದಿನ ಸಂದರ್ಭದಲ್ಲಿ ಮೊದಲು ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕೆಂದು ಅಪೇಕ್ಷಿಸಬೇಕಿದೆ. ಇದು ಸುಲಭವಾಗಿ ಕಡಿಮೆಯಾಗುವಂತಹ ತಲ್ಲಣವಲ್ಲ. ಬೆಂಗಳೂರಿನಲ್ಲಿ ಕ್ಷೀಣಿಸುತ್ತಿರುವ ಕನ್ನಡದ ಬಳಕೆಯನ್ನು ಇಂದಿನ ಕನ್ನಡದ ತವಕ ತಲ್ಲಣಗಳ ಭಾಗವಾಗಿಯೇ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.