ಗುರುವಾರ , ಮೇ 13, 2021
34 °C
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜು

ನಗರದಲ್ಲಿ ಇಂದಿನಿಂದ ಸಾಹಿತ್ಯದ ಕಂಪು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ದಾವಣಗೆರೆ: ದಾವಣಗೆರೆ ಜಿಲ್ಲೆ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಇತಿಹಾಸದ ಐಸಿರಿಯನ್ನೇ ತನ್ನ ಒಡಲಲ್ಲಿ ಇರಿಸಿಕೊಂಡಿದೆ. `ಶೈಕ್ಷಣಿಕ ನಗರಿ', `ಮೆಕ್ಕೆಜೋಳದ ಕಣಜ' ಎಂದೆಲ್ಲಾ ಕರೆಸಿಕೊಳ್ಳುವ ದಾವಣಗೆರೆಗೆ, ಜಿಲ್ಲೆಯ ಸ್ಥಾನಮಾನ ಸಿಕ್ಕಿದ್ದು 1997ರಲ್ಲಿ. ಈಗ ಇದು `ಮಧ್ಯ ಕರ್ನಾಟಕ' ಜಿಲ್ಲೆ. ರಾಜಕೀಯ, ಕೈಗಾರಿಕೆ, ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ ನೆಲ.ಜಿಲ್ಲೆಯಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳೂ ಇವೆ. ಸಾಹಿತ್ಯದ ಮೇರು ವ್ಯಕ್ತಿತ್ವ ಹೊಂದಿದವರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದವರು ಇಲ್ಲಿದ್ದಾರೆ.ಏಷ್ಯಾದಲ್ಲಿಯೇ ಎರಡನೇ ಅತೀದೊಡ್ಡ ಕೆರೆ `ಸೂಳೆಕೆರೆ' (ಶಾಂತಿಸಾಗರ) ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸಂತೇಬೆನ್ನೂರಿನ `ಪುಷ್ಕರಣಿ' ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹರಿಹರದ ಹರಿಹರೇಶ್ವರ ದೇಗುಲ, ತೀರ್ಥರಾಮೇಶ್ವರ, ಹೊದಿಗೆರೆಯ ಶಹಾಜಿಯ ಸಮಾಧಿ, ಬಾಗಳಿಯ ಕಲ್ಲೇಶ್ವರ ದೇಗುಲ, ಉಚ್ಚಂಗಿದುರ್ಗ ಇತಿಹಾಸವನ್ನು ಸಾರಿ ಹೇಳುತ್ತಿವೆ.

 

'ದಾವಣಗೆರೆಯ ಊಟಿ' ಎಂದೇ ಪ್ರಸಿದ್ಧಿ ಪಡೆದಿರುವ ಕೊಂಡಜ್ಜಿ ಕೆರೆ, ಜಗಳೂರು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶ `ಕೊಂಡಿಕುರಿ' ಆವಾಸ ಸ್ಥಾನ... ಹೀಗೆ ಜಿಲ್ಲೆಯಲ್ಲಿ ಏನುಂಟು ಏನಿಲ್ಲಾ! ತನ್ನ ಒಡಲಲ್ಲಿ ಅಗಾಧ ಶಕ್ತಿ, ಪ್ರಸಿದ್ಧಿ ಪಡೆದ ನೆಲದಲ್ಲಿ ಕನ್ನಡ ಕಂಪು ಮೊಳಗಲಿದೆ. ಆಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ `ಧರ್ಮದ ತವರು' ನೆಲದಲ್ಲಿ ಶನಿವಾರ ಮತ್ತು ಭಾನುವಾರ ಕನ್ನಡದ ಚರ್ಚೆ ನಡೆಯಲಿದೆ. 5ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜುಗೊಂಡಿದೆ.ಸಾಹಿತ್ಯ ಸಮ್ಮೇಳನವು ನಗರದ ಬಾಪೂಜಿ ಸಭಾಂಗಣದಲ್ಲಿ ನಡೆಯಲಿದ್ದು, ಸಮ್ಮೇಳನದ ವಿಶೇಷತೆ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಉಜ್ಜನಪ್ಪ `ಪ್ರಜಾವಾಣಿ'ಗೆ ನೀಡಿದ  ಸಂದರ್ಶನದ ವಿವರ ಇಲ್ಲಿದೆ.ನಿಮ್ಮ ಅವಧಿಯಲ್ಲಿ ಇದು ಎಷ್ಟನೇ ಸಮ್ಮೇಳನ?

ಇದು ಮೊದಲ ಸಮ್ಮೇಳನ. ಗೋಷ್ಠಿಗಳಲ್ಲಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಅಂತಹ ವಿಷಯವನ್ನೇ ಆಯ್ಕೆ ಮಾಡಲಾಗಿದೆ. ಜಿಲ್ಲೆ ಒಂದು ಕಾಲದಲ್ಲಿ ಕೈಗಾರಿಕೆಗಳಿಗೆ ಪ್ರಸಿದ್ಧಿ ಪಡೆದಿತ್ತು. ಮತ್ತೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು  ಅನಿವಾರ್ಯ. ಹೀಗಾಗಿ,  ಕೈಗಾರಿಕೆ ಹಾಗೂ  ಪ್ರವಾಸೋದ್ಯಮದ  ವಿಷಯಗಳ ಮೇಲೆ ಗಮನ  ಹರಿಸಲಾಗುವುದು.ಹಿಂದಿನ  ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯ, ಅವುಗಳ ಅನುಷ್ಠಾನ ಎಲ್ಲಿಗೆ ಬಂದಿದೆ?

ಭಾಗಶಃ ನಿರ್ಣಯಗಳು ಅನುಷ್ಠಾನಗೊಂಡಿವೆ. ಆಕಾಶವಾಣಿ ಕೇಂದ್ರ ಸ್ಥಾಪನೆ ಮಾಡಲು ನಿರ್ಣಯ ಕೈಗೊಳ್ಳಲಾಗಿತ್ತು. ಈಗ ಬೆಂಗಳೂರಿನ `ಎಫ್‌ಎಂ' ಕೇಳುಗರಿಗೆ ಲಭ್ಯವಾಗುತ್ತಿದೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಆದೇಶ ಬಂದಿದೆ. ಅನುದಾನ ಮಾತ್ರ ಬಂದಿಲ್ಲ. ಪ್ರಸಕ್ತ ಸಮ್ಮೇಳನದಲ್ಲಿ ಮಂಡಿಸುವ ನಿರ್ಣಯಗಳ ಸಂಬಂಧ ಸಮಿತಿ ರಚಿಸಲಾಗಿದೆ.ಸಮ್ಮೇಳನದ ಮೆರವಣಿಗೆ... 

10 ವಿಭಿನ್ನ ಕಲಾ ತಂಡಗಳು ಹಾಗೂ ಭುವನೇಶ್ವರ ಪ್ರತಿಮೆ ಮೆರವಣಿಗೆಗೆ ಮೆರುಗು ನೀಡಲಿವೆ. 5 ಶಾಲೆಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಕಂಗೊಳಿಸಲಿವೆ.ಎಷ್ಟು ಮಂದಿ ಸಾಹಿತ್ಯಾಭಿಮಾನಿಗಳು ಸೇರಬಹುದು?

6,500 ಮಂದಿ ಆಜೀವ ಸದಸ್ಯರಿದ್ದಾರೆ. ಅವರಿಗೆ ಆಮಂತ್ರಣ ಕಳುಹಿಸಲಾಗಿದೆ. 1,500 ಮಂದಿ ಸಾಹಿತ್ಯಾಭಿಮಾನಿಗಳು ಸೇರುವ ನಿರೀಕ್ಷೆಯಿದೆ.ಊಟದ ವ್ಯವಸ್ಥೆ...

ಬೆಳಿಗ್ಗೆ ಉಪ್ಪಿಟ್ಟು. ಮಧ್ಯಾಹ್ನ ಅನ್ನ, ಸಾಂಬಾರು, ಸಿಹಿ, ಉಪ್ಪಿನಕಾಯಿ, ಪಲ್ಯ ವ್ಯವಸ್ಥೆ ಮಾಡಲಾಗಿದೆ.ಕನ್ನಡ ಭವನದಲ್ಲಿ ಸ್ಥಿತಿ ಏನಾಯಿತು?

ಜಿಲ್ಲಾ ಕನ್ನಡ ಭವನದ ಕಾಮಗಾರಿ ಪ್ರಗತಿಯಲ್ಲಿದೆ. ಅದಕ್ಕೆ ಸ್ವಲ್ಪ ಅನುದಾನದ ಕೊರತೆ ಎದುರಾಗಿದೆ. ಅಲ್ಲಿಯೇ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಅದು ಸಾಧ್ಯವಾಗಲಿಲ್ಲ. ಶೌಚಾಲಯ- ಫ್ಲೋರಿಂಗ್ ಕಾಮಗಾರಿ ಇನ್ನೂ ಆಗಿಲ್ಲ.ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಬಾಪೂಜಿ ಸಭಾಂಗಣ ಆವರಣ:
ಧ್ವಜಾರೋಹಣ ನೆರವೇರಿಸುವವರು: ಜಿ.ಪಂ. ಸಿಇಒ ಎ.ಬಿ.ಹೇಮಚಂದ್ರ. ಪರಿಷತ್ತಿನ ಧ್ವಜಾರೋಹಣ: ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್.ಉಜ್ಜನಪ್ಪ. ಉಪಸ್ಥಿತಿ: ನಗರಪಾಲಿಕೆ ಸದಸ್ಯರಾದ ಬೆಳವನೂರು ನಾಗರಾಜಪ್ಪ, ನಾಗರತ್ನಮ್ಮ, ಶೋಭಾ ಪಲ್ಲಾಗಟ್ಟೆ. ಬೆಳಿಗ್ಗೆ 7.30ಕ್ಕೆ.ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಸರ್ಕಾರಿ ಪ್ರೌಢಶಾಲೆಯಿಂದ ಆರಂಭ. ಉದ್ಘಾಟನೆ: ಜಿಲ್ಲಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ. ಉಪಸ್ಥಿತಿ: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಕುಮಾರ್, ವಕೀಲ ಎಲ್.ಎಚ್.ಅರುಣ್ ಕುಮಾರ್.ಬಾಪೂಜಿ ಸಭಾಂಗಣ- ಮುದೇನೂರು ಸಂಗಣ್ಣ ವೇದಿಕೆ: ಸಮ್ಮೇಳನದ ಉದ್ಘಾಟನೆ: ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ. ಆಶಯ ನುಡಿ: ಕಸಾಪ ರಾಜ್ಯ ಘಟಕದ ಅಧ್ಯಕ್ಷ ಪುಂಡಲೀಕ ಹಾಲಂಬಿ. ಸ್ವಾಗತ: ಶಾಸಕ ಎಸ್.ಎಸ್.ಮಲ್ಲಿಕಾರ್ಜುನ. ಅಧ್ಯಕ್ಷತೆ: ಕುಂ.ಬಾ.ಸದಾಶಿವಪ್ಪ. ಪ್ರಾಸ್ತಾವಿಕ ನುಡಿ: ಎ.ಆರ್.ಉಜ್ಜನಪ್ಪ. ಸ್ಮರಣ ಸಂಚಿಕೆ ಬಿಡುಗಡೆ: ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ. ಪುಸ್ತಕ ಮಳಿಗೆ ಉದ್ಘಾಟನೆ: ವಿಧಾನ ಪರಿಷತ್ ಸದಸ್ಯ ಡಾ.ಎ.ಎಚ್.ಶಿವಯೋಗಿಸ್ವಾಮಿ. ಚಿತ್ರಕಲಾ ಪ್ರದರ್ಶನ ಉದ್ಘಾಟನೆ: ಶಾಸಕ ಎಚ್.ಎಸ್.ಶಿವಶಂಕರ್. ಕನ್ನಡ ಧ್ವಜ ಹಸ್ತಾಂತರ: ನಿಕಟಪೂರ್ವ ಅಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಅತಿಥಿಗಳು: ಶಾಸಕರಾದ ವಡ್ನಾಳ್ ರಾಜಣ್ಣ, ಡಿ.ಜಿ.ಶಾಂತನಗೌಡ, ಕೆ.ಶಿವಮೂರ್ತಿ, ವೈ.ನಾರಾಯಣಸ್ವಾಮಿ. ಜಿ.ಪಂ. ಅಧ್ಯಕ್ಷೆ ಶೀಲಾ ಗದ್ದಿಗೇಶ್. ಹರಿಹರ ನಗರಸಭೆ ಅಧ್ಯಕ್ಷ ಜಿ.ಸುರೇಶ್‌ಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಶಂಕರ್. ಸಮ್ಮೇಳನ ಅಧ್ಯಕ್ಷರ ಪರಿಚಯ: ಎಸ್.ಎಚ್.ಹೂಗಾರ್. ಅಧ್ಯಕ್ಷತೆ: ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ.ಗೋಷ್ಠಿ-1- ಸಾಹಿತ್ಯ ಗೋಷ್ಠಿ: ಆಶಯ ನುಡಿ: ಪ್ರೊ.ಸಿ.ವಿ.ಪಾಟೀಲ. ವಿಷಯ ಮಂಡನೆ. ಸಾಮಾಜಿಕ ಚಳವಳಿಗೆ ರಂಗಭೂಮಿ ಕೊಡುಗೆ: ಪತ್ರಕರ್ತ ಗುಡಿಹಳ್ಳಿ ನಾಗರಾಜ. ಸಾಮಾಜಿಕ ಚಳವಳಿಗಳು ಮತ್ತು ಜಾಗತೀಕರಣ: ಡಾ.ಎ.ಬಿ.ರಾಮಚಂದ್ರ. ಸ್ಥಗಿತಗೊಂಡಿರುವ ಸಾಹಿತ್ಯ ಚಳವಳಿಗಳು-ಮುಂದೇನು?: ತಾರಿಣಿ ಶುಭದಾಯಿನಿ. ಮಧ್ಯಾಹ್ನ 2ಕ್ಕೆ.ಗೋಷ್ಠಿ-2- ಸಾಹಿತಿಯೊಂದಿಗೆ ಸಂವಾದ : ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಸಂವಾದ. ವಿಷಯ ಪ್ರವೇಶ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ. ಸಂವಾದದಲ್ಲಿ: ಪ್ರೊ.ಎಚ್.ಎ.ಭಿಕ್ಷಾವರ್ತಿಮಠ, ಡಾ.ಉತ್ತಂಗಿ ಕೊಟ್ರೇಶ್, ಡಾ.ದಾದಾಪೀರ್ ನವಿಲೇಹಾಳ್, ಜಿ.ಎಸ್.ಸುಭಾಷ್ ಚಂದ್ರ ಭೋಸ್, ಎಸ್.ಚಿದಾನಂದ, ಎಂ.ಪಿ.ಎಂ. ಶಾಂತವೀರಯ್ಯ, ಕೊಂಡಜ್ಜಿ ಜಯಪ್ರಕಾಶ್, ಡಾ.ನಾ.ಲೋಕೇಶ ಒಡೆಯರ್, ಬಿ.ಟಿ.ಜಾಹ್ನವಿ, ಜೆ.ಎಂ.ಆರ್.ಆರಾಧ್ಯ, ಚಂದ್ರಹಾಸ ಹಿರೇಮಳಲಿ, ಎಸ್.ಟಿ.ಶಾಂತಗಂಗಾಧರ, ಅರುಣಕುಮಾರಿ ಬಿರಾದಾರ, ಎಂ.ಟಿ.ಸುಭಾಷ್‌ಚಂದ್ರ, ಸಂಜೆ 4ಕ್ಕೆ.ಇಂದು ನೋಂದಣಿ

ಶನಿವಾರ ಬೆಳಿಗ್ಗೆ 7ರಿಂದ ಪ್ರತಿನಿಧಿಗಳ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ. ರೂ 50 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.