ಶುಕ್ರವಾರ, ಏಪ್ರಿಲ್ 23, 2021
28 °C

ನಗರೀಕರಣಕ್ಕೆ ಕೆರೆಗಳ ಆತ್ಮಾಹುತಿ

ಪ್ರಜಾವಾಣಿ ವಾರ್ತೆ/ ಕೆ.ಎಂ.ಸಂತೋಷ್‌ಕುಮಾರ್ Updated:

ಅಕ್ಷರ ಗಾತ್ರ : | |

ತುಮಕೂರು: ಶತಮಾನಗಳ ಹಿಂದೆ ಲೋಕ ಕಲ್ಯಾಣಾರ್ಥ ಕೆರೆ ಕಟ್ಟಿಸುವುದು, ಬಾವಿ ತೋಡಿಸುವುದು ರೂಢಿಯಲ್ಲಿತ್ತು. ಕೆರೆ-ಕಟ್ಟೆಗಳು ಸಕಲ ಜೀವಿಗಳಿಗೆ ‘ಅಮೃತದ ಬಟ್ಟಲು’ ಎಂಬ ಜ್ಞಾನದ ಅರಿವು ಪೂರ್ವಿಕರಲ್ಲಿತ್ತು. ಆದರೆ, ಈಗಿನ ಪೀಳಿಗೆ ಹೊಸ ಕೆರೆ ಕಟ್ಟಿಸುವುದು ಬೇಡ, ಇರುವ ಕೆರೆಗಳನ್ನು ಉಳಿಸಿಕೊಳ್ಳಬಾರದೆ? ದುರಾಸೆಗೆ ಬಿದ್ದು ಇರುವ ಕೆರೆಗಳನ್ನೆಲ್ಲಾ ನುಂಗಿ ನೀರು ಕುಡಿಯುತ್ತಾ, ಅಂತರ್ಜಲಕ್ಕೂ ಕನ್ನ ಹಾಕಿ, ಮತ್ತೊಂದು ಗ್ರಹದಲ್ಲಿ ನೀರು ಹುಡುಕುವ ಸ್ಥಿತಿ ತಂದುಕೊಳ್ಳುತ್ತಿರುವುದು ಭವಿಷ್ಯದ ದುರಂತಕ್ಕೆ ಹಿಡಿದ ಕನ್ನಡಿಯಲ್ಲವೇ?ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಲೋಕ ಕಲ್ಯಾಣಕ್ಕಾಗಿ ಕೆರೆ, ಕುಂಟೆ ಹಾಗೂ ಸೋಪಾನ ಕಟ್ಟಿಸಿರುವ ನಿದರ್ಶನಗಳು ಸಾಕಷ್ಟು ದೊರಕುತ್ತವೆ. ರಾಜರು, ರಾಣಿಯರು ಅಷ್ಟೇ ಅಲ್ಲ, ವೇಶ್ಯೆಯರೂ ಕೂಡ ಕೆರೆಗಳನ್ನು ಕಟ್ಟಿಸಿ ಪುಣ್ಯದ ಕೆಲಸ ಮಾಡಿರುವ ದಾಖಲೆಗಳಿವೆ. ಇಂದು ಹೊಸ ಕೆರೆ ಕಟ್ಟಿಸದಿದ್ದರೂ ಚಿಂತೆಯಿಲ್ಲ; ಇರುವ ಕೆರೆಗಳನ್ನಾದರೂ ಉಳಿಸಿ, ನೀರು ತುಂಬಿಸುವ ಕೆಲಸ ಆಗಬೇಕು ಎನ್ನುವ ಕೂಗು ಕೇಳಿಬರುತ್ತಿದೆ. ಆದರೆ, ದುರದೃಷ್ಟವಶಾತ್ ಒಂದು ಕೆರೆಯನ್ನು ಮುಚ್ಚಿದರೆ ಎಷ್ಟು ನಿವೇಶನಗಳು ಆಗಬಹುದು? ಎಷ್ಟಗಲದ ಉದ್ಯಾನ ನಿರ್ಮಿಸಬಹುದು? ಕೆರೆ ಪಕ್ಕದ ಜಮೀನುಗಳ ಮಾಲೀಕರು ಎಲ್ಲಿವರೆಗೂ ಬೇಲಿ ಎಳೆದು ಕೆರೆ ಅಂಗಳ ಕಬಳಿಸಬಹುದೆಂಬ ಹುನ್ನಾರ ನಡೆಸುತ್ತಿದ್ದರೆ ‘ಜೀವಜಲದ ಅಮೃತ ಬಟ್ಟಲು’ ರಕ್ಷಿಸುವವರು ಯಾರು?ಒಂದು ಕಾಲಕ್ಕೆ ಜಿಲ್ಲೆಯಲ್ಲಿ 2010 ಕೆರೆಗಳು ಇದ್ದವು.

ಎಲ್ಲ ಕೆರೆಗಳು ತುಂಬಿ ತುಳುಕುತ್ತಿದ್ದವು, ಇಡೀ ಜಿಲ್ಲೆಯ ಜನತೆ ಜಿಲ್ಲೆಗೆ ಹೇಮಾವತಿ ನೀರು ಬರುವುದಕ್ಕೂ ಮೊದಲೆ ಶತಮಾನಗಳಿಂದಲೂ ಕೆರೆಯ ನೀರನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದರು. ಜನ-ಜಾನುವಾರುಗಳು ಕುಡಿಯಲು ನೀರಿಗಾಗಿ ಕೆರೆಗಳನ್ನೆ ಅವಲಂಬಿಸಿದ್ದವು. ಆದರೆ ಇಂದು ಅವುಗಳಲ್ಲಿ ಅರ್ಧಕ್ಕೂ ಹೆಚ್ಚು ಕೆರೆಗಳು ಕಣ್ಮರೆಯಾಗಿವೆ. ಇರುವಂತಹ ಕೆರೆಗಳ ಪೈಕಿ ಕೆಲವು ಹೂಳು ತುಂಬಿವೆ, ಇನ್ನು ಕೆಲವು ರಿಯಲ್ ಎಸ್ಟೇಟ್ ದಂಧೆಕೋರರ ಪಾಲಾಗಿರುವುದು ದಿಟ.ತುಮಕೂರು ನಗರಕ್ಕೆ ಸೀಮಿತಗೊಳಿಸಿ 8 ಕಿ.ಮೀ. ವ್ಯಾಪ್ತಿಯೊಳಗೆ ಗುರುತಿಸಿರುವಂತೆ ‘ಪ್ರಜಾವಾಣಿ’ಗೆ ಲಭ್ಯವಾಗಿರುವ ಅಂಕಿ-ಅಂಶದ ಪ್ರಕಾರ ನಗರ ವ್ಯಾಪ್ತಿಯಲ್ಲಿ ಸುಮಾರು 29 ಕೆರೆಗಳಿವೆ.

ಜಿಲ್ಲೆಯು ಭೌಗೋಳಿಕವಾಗಿ ಕಾವೇರಿ ಮತ್ತು ಕೃಷ್ಣಾ ಎರಡೂ ಜಲಾನಯನ ವ್ಯಾಪ್ತಿಯಲ್ಲಿ ಹಂಚಿಹೋಗಿದೆ. ನಗರ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳು ಕಾವೇರಿ ಜಲಾನಯನ ವ್ಯಾಪ್ತಿಯಲ್ಲೇ ಇವೆ.

ತುಮಕೂರು ಅಮಾನಿಕೆರೆ, ಮೈದಾಳ ಕೆರೆ, ಗೂಳೂರು ಅಮಾನಿಕೆರೆ, ಮಲ್ಲಸಂದ್ರ ಕೆರೆ, ಊರುಕೆರೆ, ಹೆಬ್ಬಾಕ ಕೆರೆ, ದೇವರಾಯಪಟ್ಟಣ ಕೆರೆ, ಮರಳೂರು ಕೆರೆ, ಶೆಟ್ಟಿಹಳ್ಳಿ ಉತ್ತರಕಟ್ಟೆ ಕೆರೆ, ಬಡ್ಡಿಹಳ್ಳಿಕೆರೆ, ಶೆಟ್ಟಿಹಳ್ಳಿಕೆರೆ, ಗಾರೆನರಸಯ್ಯನಕಟ್ಟೆ, ಗುಂಡಮ್ಮನಕೆರೆ, ಹುಣಸೇಕಟ್ಟೆ, ಭೀಮಸಂದ್ರಕೆರೆ, ಅಕ್ಕ-ತಂಗಿ ಕೆರೆ, ಲಿಂಗಾಪುರ (ಸಿದ್ದಕಟ್ಟೆ) ಕೆರೆ, ಹೆಗ್ಗೆರೆಕೆರೆ, ಗೂಳಹರಿವೆ ಕೆರೆ, ಆಳಸೆಟ್ಟಿಕೆರೆ, ಉಪ್ಪಾರಹಳ್ಳಿಕೆರೆ, ಬಾಳನಕಟ್ಟೆ, ಸೋಮೇಶ್ವರಕಟ್ಟೆ. ಉಳ್ಳಮ್ಮನಕೆರೆ, ಹಿರೇಹಳ್ಳಿಕೆರೆ, ಮೆಳೇಕೋಟೆ ಕೆರೆ, ಗಂಗಸಂದ್ರಕೆರೆ, ಅಂತರಸನಹಳ್ಳಿ ಕೆರೆ, ಬುಗುಡನಹಳ್ಳಿಕೆರೆ ನಗರ ವ್ಯಾಪ್ತಿಯಲ್ಲಿ ಇರುವಂತಹವು.ಈ ಪೈಕಿ ಸೋಮನಕಟ್ಟೆ, ಬಾಳನಕಟ್ಟೆ, ಆಳಸೆಟ್ಟಿಕೆರೆ, ಉಪ್ಪಾರಹಳ್ಳಿ ಕೆರೆ, ಬಡ್ಡಿಹಳ್ಳಿಕೆರೆ, ಅಂತರಸನಹಳ್ಳಿ ಕೆರೆಗಳು ಅಭಿವೃದ್ಧಿ ಮತ್ತು ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ನಿವೇಶನಗಳಾಗಿ ಮಾರ್ಪಟ್ಟಿವೆ. ಉಳಿದಿರುವ ಕೆರೆಗಳನ್ನಾದರೂ ಸಂರಕ್ಷಿಸಿ, ನೀರು ತುಂಬಿಸಿ ನಳನಳಿಸುವಂತೆ ಮಾಡಿದರೆ ಪರಿಸರಕ್ಕೆ ದೊಡ್ಡ ಕೊಡುಗೆ ಕೊಟ್ಟಂತೆಯೇ ಸರಿ.

(ಮುಂದುವರಿಯುವುದು)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.