ಸೋಮವಾರ, ಮೇ 16, 2022
28 °C

`ನಗೆ ನನ್ನ ಕುಲದೇವರು!'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೇವಲ ಜೋಕುಗಳನ್ನಷ್ಟೇ ಹೇಳಿ ಸಭೆಯನ್ನು ನಗಿಸುವುದು ಈಗ ಕನಸಿನ ಮಾತು. ಸಭಿಕರೂ ಸಾಕಷ್ಟು ತಿಳಿದುಕೊಂಡಿದ್ದಾರೆ. ವೇದಿಕೆ ಮೇಲೆ ನಿಂತಾಗ ಹೊಮ್ಮುವ ಯಾವುದೇ ಮಾತು ಸಹಜವಾಗಿ ಬಂದದ್ದೇ ಅಥವಾ ಉರು ಹೊಡೆದು ಒಪ್ಪಿಸಿದ್ದೇ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟರ ಮಟ್ಟಿಗೆ ಪ್ರೇಕ್ಷಕವರ್ಗ ಬೆಳೆದಿದೆ. ಹೀಗಾಗದಂತೆ ಸಾಕಷ್ಟು ಎಚ್ಚರ ವಹಿಸಿಕೊಂಡಿದ್ದೇನೆ. ಸ್ವತಂತ್ರವಾಗಿ ಎಲ್ಲ ನಿಭಾಯಿಸುವುದನ್ನೂ ಅಭ್ಯಾಸ ಮಾಡುತ್ತಿದ್ದೇನೆ. ಯಾವ ಕ್ಷಣದಲ್ಲಿ ಏನಾದರೂ ಆಗಬಹುದು...'ಎಂಟಿವಿ ಬಕ್ರಾ ಮೂಲಕ ನಗೆಯುಕ್ಕಿಸುತ್ತಾ ಮನೆಮಾತಾದ ಸೈರಸ್ ಬ್ರೋಚಾ ಅವರ ಕಣ್ಣುಗಳು ಮಾತಿಗೆ ತಕ್ಕಂತೆ ಕೆವೊಮ್ಮೆ ಅರಳುತ್ತಾ, ಕೆಲವೊಮ್ಮೆ  ಸಣ್ಣಗಾಗುತ್ತಾ ಇದ್ದವು. ಹಾಸ್ಯ ಕಾರ್ಯಕ್ರಮ ನೀಡಲು ಭಾನುವಾರ ನಗರಕ್ಕೆ ಬಂದಿದ್ದ ಸೈರಸ್ ಹಾಸ್ಯ, ವಿಡಂಬನೆ ಬೆರೆಸಿ ನಗುವಿನ ಕತ್ತರಿಯಲ್ಲೇ ರಾಜಕೀಯ, ಕ್ರೀಡೆ, ವಾಣಿಜ್ಯ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದರು. ಇಂಗ್ಲಿಷ್ ಹಾಗೂ ತಮ್ಮದೇ ಶೈಲಿಯ ಹಿಂದಿ ಭಾಷೆಯಲ್ಲಿ ಅವರು ಇಡುವ ಕಚಗುಳಿಗೆ ಇಡೀ ಸಭೆಯೇ ನಗೆಗಡಲಲ್ಲಿ ತೇಲುವುದನ್ನು ನೋಡುವುದೇ ಮಜಾ.

`ಕೇವಲ ನಗಿಸುವುದರಿಂದ ನಾಳಿನ ಊಟ ದಕ್ಕಿಸಿಕೊಳ್ಳುವುದು ಸುಲಭವಲ್ಲ. ಆದರೆ ಆಡುವ ಮಾತುಗಳಿಗೆ ಸಭಿಕರ ಗೊಳ್ ಎಂಬ ನಗುವಿನ ಪ್ರವಾಹ ಒಂದಷ್ಟು ತಂಗಾಳಿ ಬೀಸಿದಂಥ ಅನುಭವ ನೀಡುತ್ತದಲ್ಲ, ಅದು ಹಿತವೆನಿಸುತ್ತದೆ' ಎನ್ನುವ ಸೈರಸ್ ಅವರ ಬಾಯಲ್ಲಿ ಅರ್ಥಶಾಸ್ತ್ರ ಕೂಡ ನಗೆ ಗುಳಿಗೆ ಆಗಬಲ್ಲದು. ಆದರೆ ನಗುವಿನ ಆ ಗುಳಿಗೆಯಲ್ಲೂ ವಾಸ್ತವದ ಮೇಲೆ ಬೆಳಕು ಬೀರುವ ಯತ್ನ ಇರುತ್ತದೆ.`ನಾನೊಬ್ಬ ಹವ್ಯಾಸಿ ನಟ. ಸ್ಟಾಂಡ್ ಅಪ್ ಕಾಮಿಡಿ ಮೂಲಕ ಜೀವನ ನಡೆಯುತ್ತಿದೆ. ತಲೆ ಮೇಲೆ ಬೆಳ್ಳಿ ಗೆರೆಗಳು ಮೂಡುತ್ತಿರುವ ಈ ಸಮಯದಲ್ಲೇಕೋ ಕಾನೂನು ಓದಬೇಕೆಂದೆನಿಸುತ್ತಿದೆ' ಎಂದು ತಮ್ಮ ಅಭಿಲಾಷೆಯನ್ನು ಸೈರಸ್ ಹೊರಹಾಕಿದರು. ಅವರ ಕುಟುಂಬ ಸಾಕಷ್ಟು ವಕೀಲರಿಂದ ತುಂಬಿದೆಯಂತೆ.

ಸೈರಸ್ ಬ್ರೋಚಾ ಅವರ ಕುಟುಂಬದಲ್ಲಿ ಬಹುತೇಕರು ಓದಿದ್ದು ಕಾನೂನು. ಬಾಲ್ಯದಿಂದಲೇ ಹಾಸ್ಯ ಪ್ರವೃತ್ತಿಯವರಾಗಿದ್ದ ಅವರಿಗೆ ಹಾಸ್ಯವನ್ನು ವೃತ್ತಿಯಾಗಿ ಸ್ವೀಕರಿಸಲು ಮನೆಯವರ ವಿರೋಧವೇನೂ ಇರಲಿಲ್ಲ.

ಹೀಗಾಗಿ ಹಾಸ್ಯದ ಹುಡುಕಾಟದಲ್ಲೇ ರಂಗಭೂಮಿ ನಟರಾದರು. ರೇಡಿಯೋ ಜಾಕಿಯಾಗಿ ಮಾತಿನ ಸಾಣೆಗೆ ಒಡ್ಡಿಕೊಂಡರು. ಸಿನಿಮಾಗಳಲ್ಲೂ ಆಗೊಮ್ಮೆ ಈಗೊಮ್ಮೆ ಸುತ್ತು ಹಾಕಿ ಬಂದರು. ಇಷ್ಟು ಸಾಲದು ಎಂಬಂತೆ ಸ್ಟಾಂಡ್ ಅಪ್ ಕಾಮಿಡಿಯನ್, ಕಿರುತೆರೆ ಕಲಾವಿದ, ಅಂಕಣಕಾರರಾಗಿಯೂ ಕೈ ಪಳಗಿಸಿಕೊಂಡರು.`ವೇದಿಕೆ ಮೇಲೆ ಗಂಟೆಗಟ್ಟಲೆ ಪ್ರಸಕ್ತ ವಿಷಯವನ್ನಿಟ್ಟುಕೊಂಡು ಅದಕ್ಕೊಂದಿಷ್ಟು ಹಾಸ್ಯವನ್ನು ಲೇಪಿಸಿ ನೀಡುವ ಸ್ಟ್ಯಾಂಡ್ ಅಪ್ ಕಾಮಿಡಿಯನ್ನು ನನ್ನ ವೃತ್ತಿ ಎಂದಂತೂ ಸ್ವೀಕರಿಸಿಲ್ಲ. ನಮ್ಮ ಸುತ್ತಲೇ ಸಾಕಷ್ಟು ಹಾಸ್ಯವಿದೆ. ಆದರೆ ಅದನ್ನು ಗ್ರಹಿಸಿ ಜನರಿಗೆ ನೀಡಲು ಎಷ್ಟೊಂದು ಪೈಪೋಟಿ ಇದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಗುವಿನ ಡಾಕ್ಟರ್.`ಬಕ್ರಾ ಕಾರ್ಯಕ್ರಮ ಆರಂಭವಾದಾಗ ಮುಂದಿನ ಸಂಚಿಕೆ ಕುರಿತು ಆಲೋಚಿಸುತ್ತಿರಲಿಲ್ಲ. ಆ ಕ್ಷಣಕ್ಕೆ ಹೊಳೆದ ವಿಷಯವನ್ನು ಆಧರಿಸಿ ಕಾರ್ಯಕ್ರಮ ಚಿತ್ರೀಕರಿಸುತ್ತಿದ್ದೆವು. ಕ್ರಮೇಣ ಜನರಿಗೆ ಅದು ಇಷ್ಟವಾಗತೊಡಗಿತು. ಇಷ್ಟು ಮಾತ್ರವಲ್ಲ, ಈ ಕಾರ್ಯಕ್ರಮದಲ್ಲಿ ತಾವೂ ಕಾಣಿಸಿಕೊಳ್ಳಬೇಕೆಂಬ ತುಡಿತ ಜನರಲ್ಲಿ ಹೆಚ್ಚಾಯಿತು. ಈಗ ನಾವು ಪ್ರಸ್ತಾಪಿಸುವ ಕೆಲವು ವಿಷಯಗಳು ನಗುವ ವಿಷಯವಾಗಿರುವುದಿಲ್ಲ. ಉದಾಹರಣೆಗೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾಕಷ್ಟು ಪವಿತ್ರ ಹಸುಗಳಿವೆ. ಅವುಗಳನ್ನು ಗೇಲಿ ಮಾಡಿದರೆ ಇಲ್ಲಿ ಕೆಲವರು ಕೆರಳಬಹುದ. ಹೀಗಾಗಿ ಹಾಸ್ಯ ಸಿದ್ಧಪಡಿಸುವಾಗ ಅವುಗಳ ಉಲ್ಲೇಖವಿಲ್ಲದಂತೆ ಎಚ್ಚರ ವಹಿಸಬೇಕಾಗಿದೆ' ಎಂದರು ಮಾರ್ಮಿಕವಾಗಿ.ಮಾತಿನಲ್ಲಿ ಮಾತ್ರವಲ್ಲದೆ ಬರವಣಿಗೆಯಲ್ಲೂ ಹಾಸ್ಯ ಬೆರೆಸುವ ಪ್ರಯತ್ನವನ್ನು ಅವರು ನಡೆಸಿದ್ದಾರೆ. ಅವರ ಪ್ರಕಾರ ಬರವಣಿಗೆ ಎನ್ನುವುದು ವಿದ್ಯಾರ್ಥಿಯು ನಿಗದಿತ ಸಮಯದಲ್ಲಿ ಕೊಟ್ಟ ಪ್ರಶ್ನೆ ಪತ್ರಿಕೆಗೆ ಉತ್ತರಿಸಿದಂತೆ. `ಬಹಳಷ್ಟು ಬರಹಗಾರರು ಗಂಭೀರವಾಗಿ ಬರೆಯುತ್ತಾರೆ. ಆದರೆ ಆ ರೀತಿಯ ಗಾಂಭೀರ್ಯ ನನಗಿನ್ನೂ ಸಿದ್ಧಿಸಿಲ್ಲ. ಬರೆಯುವ ಹುಮ್ಮಸ್ಸಿದೆ. ಈಗ ರಾಜಕೀಯ ಕುರಿತು ಬರೆಯುತ್ತಿದ್ದೇನೆ. ಈ ಪುಸ್ತಕ 2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನವೇ ಲೋಕಾರ್ಪಣೆಗೊಳ್ಳಲಿದೆ' ಎಂದರು ಸೈರಸ್.ಹಾಸ್ಯವನ್ನು ಸ್ವೀಕರಿಸುವವರ ಕುರಿತೂ ಸೈರಸ್ ತಮ್ಮದೇ ವಾದ ಮುಂದಿಡುತ್ತಾರೆ. ದೆಹಲಿ, ಮುಂಬೈನ ಸಭಿಕರು ಬಯಸುವ ಹಾಸ್ಯವೇ ಬೇರೆ. ಬೆಂಗಳೂರಿಗರು ಬಯಸುವ ಹಾಸ್ಯವೇ ಬೇರೆ. ಇಲ್ಲಿಯವರು ಭಿನ್ನ, ಬುದ್ಧಿವಂತ ಜನ. ಬೆಂಗಳೂರಿಗರು ಸಾಲುಗಳ ನಡುವೆ ಅರ್ಥ ಹೊಮ್ಮಿಸುವಂಥ ಹಾಸ್ಯವನ್ನು ಅಪೇಕ್ಷಿಸುತ್ತಾರೆ' ಎಂದು ಬೆಂಗಳೂರಿಗರ ಕುರಿತು ಮೆಚ್ಚುಗೆಯ ಮಾತನ್ನಾಡಿದರು.

ಚಿತ್ರ: ಬಿ.ಕೆ. ಜನಾರ್ದನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.