ಶುಕ್ರವಾರ, ಮೇ 7, 2021
24 °C

ನನ್ನಂತೆಯೇ ಇರುವವನು

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಸಿಟಿ ಬಸ್ಸಿನಲ್ಲಿ ಕುಳಿತಿದ್ದೆ. ಸ್ಟಾರ್ಟಿಂಗ್ ಪಾಯಿಂಟ್‌ನಲ್ಲೇ ಬಸ್ ಹತ್ತುವುದರಿಂದ ನನಗೆ ಒಂದು ಸೀಟು ಗ್ಯಾರಂಟಿ ಇರುತ್ತದೆ. ಗ್ಯಾರಂಟಿ ಇಲ್ಲದಿದ್ದರೆ ನಾನು ಅಂತಹ ಬಸ್ಸನ್ನು ಹತ್ತುವುದಿರಲಿ ತಿರುಗಿ ಕೂಡ ನೋಡುವುದಿಲ್ಲ ಬಿಡಿ. ಸಿಟಿ ಬಸ್ಸಿನಲ್ಲಿ ಸೀಟು ಸಿಕ್ಕುವುದೆಂದರೆ ಅದು ಹುಡುಗಾಟದ ವಿಷಯ ಎಂದುಕೊಂಡಿರಾ?

 

ಸಿಇಟಿ, ಕಾಮೆಡ್‌ಕೆ ಸೀಟುಗಳು ಒಂದುಕಡೆ ಇರಲಿ, ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದನೇ ತರಗತಿ ಸೇರಬಯಸುವ ನಮ್ಮ ಹುಡುಗರಿಗೆ ಒಂದು ಸೀಟು ಪಡೆಯಲು ಎಷ್ಟು ಕಷ್ಟಪಡಬೇಕೋ ಸಿಟಿಬಸ್‌ನಲ್ಲಿ ಒಂದು ಸೀಟು ಹಿಡಿಯಲು ಅಷ್ಟೇ ಕಷ್ಟಪಡಬೇಕು. ಬಸ್ಸು ಹೋಗುತ್ತಾ ಹೋಗುತ್ತಾ ಜನ ಅಲ್ಲಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತಾರೆ. ನಾನು ಕೂತ ಬಸ್ಸೂ ಹೀಗೇ ತುಂಬುತ್ತಾ, ತುಳುಕುತ್ತಾ, ಮುಕ್ಕರಿಯುತ್ತಾ... ತೆವಳುತ್ತಾ..ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿಕೊಳ್ಳುತ್ತಾ ಹೋಗುತ್ತಿತ್ತು. ಜನ ಕೂತವರ ಮೇಲೆ ಒರಗುತ್ತಾ, ಬೀಳುತ್ತಾ, ಮೇಲೆ ರಾಡನ್ನು ಹಿಡಿದುಕೊಂಡು ಜೋಲಿ ಹೊಡೆಯುತ್ತಾ ಸರ್ಕಸ್‌ನಲ್ಲಿ ತೊಡಗಿದ್ದರು. ಇಂತಹ ಸಿಟಿ ಬಸ್ಸುಗಳಲ್ಲಿ ಕೂತವರ ಸಂಖ್ಯೆ ಕಡಿಮೆ. ನಿಂತವರ ಸಂಖ್ಯೆಯೇ ಹೆಚ್ಚು. ಸಿಟಿ ಬಸ್ಸುಗಳ ರಚನೆಯೇ ಈ ರೀತಿ ಇರುತ್ತದೆ.ಸೀಟುಗಳು ನಾಮಕಾವಸ್ತೆಗೆ. ನಿಲ್ಲುವವರಿಗೆ ಇಲ್ಲಿ ಆದ್ಯತೆ. ಇಪ್ಪತ್ತೆಂಟು ಜನ ಕೂತರೆ, ನೂರು ಜನ ನಿಲ್ಲಬಹುದು. ಇಲ್ಲಿಗೆ ಬರುವವರು ಯಾರೂ ಖಾಯಂ ಅಲ್ಲವಾಗಿರುವುದರಿಂದ  ಹತ್ತುತ್ತಲೇ ಇರಬೇಕು. ಇಳಿಯುತ್ತಲೇ ಇರಬೇಕು.ಆದುದರಿಂದಲೇ ಸಾಮಾನ್ಯವಾಗಿ ಬಸ್ಸುಗಳಲ್ಲಿ ಸೀಟಿಗಾಗಿ ಜಗಳವಾದರೆ `ಇದು ನಿಮ್ಮ ಅಪ್ಪನ ಮನೆ ಆಸ್ತೀನಾ? ಎಂದು ಬಹಳ ಜನ ಕ್ಯಾತೆ ತೆಗೆಯುತ್ತಾರೆ. ಮತ್ತೆ ಕೆಲವರು `ಅದ್ಯಾಕೆ ಹಂಗಾಡ್ತೀರಾ? ಹೋಗುವಾಗ ಏನ್ ಎತ್ಕೊಂಡೋಗ್ತೀರಾ?~ ಎಂದು ವೇದಾಂತದ ಮಾತು ಹೇಳುತ್ತಾರೆ. ನಮ್ಮ ಜನಪದ ಎಷ್ಟೊಂದು ಶ್ರೀಮಂತಿಕೆಯಿಂದ ಕೂಡಿದೆ ನೋಡಿ.ಸಿಟಿ ಬಸ್ಸಿನಲ್ಲಿ ನಾವು ಪ್ರಯಾಣ ಮಾಡುವುದೇ ಹತ್ತು ನಿಮಿಷ. ಅಷ್ಟರಲ್ಲಿ ಸೀಟಿಗಾಗಿ ಹಾತೊರೆಯುವುದೇನು? ಸೀಟು ಸಿಗಲಿಲ್ಲ ಎಂದು ಹತಾಶರಾಗುವುದೇನು? ವಿವಿಧ ರೀತಿಯ ಡೈಲಾಗುಗಳನ್ನು ಉದುರಿಸುವುದೇನು? ಜನರ ಮನಸ್ಸು ಸ್ವಯಂ ಸುಖಕ್ಕಾಗಿ ಎಷ್ಟು ಹಾತೊರೆಯುತ್ತದೆ ಅಲ್ಲವೇ.ಅಂತಹ ಮನಸ್ಥಿತಿ ಇರುವ ಕುಲವನ್ನೇ ಛೇಡಿಸುವ, ಅವರಿಗೆ ಹಿತವಚನ ಹೇಳುವ ಇಂತಹ ಮಾತನ್ನು ಸೀಟು ಹಿಡಿದು ಹಾಯಾಗಿ ಕುಳಿತವನು ಹೇಳುವ ಗೊಡ್ಡು ಪುರಾಣ ಎಂದು ಭಾವಿಸಿದರೆ ಜೀವನದಲ್ಲಿ ನೀವು ನಿಜಕ್ಕೂ ಅಮೃತವಾಣಿಯೊಂದನ್ನು ಕಳೆದುಕೊಳ್ಳುತ್ತೀರಿ.ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಎಷ್ಟು ಸರಳವಾಗಿ, ಸುಂದರವಾಗಿ ಅರ್ಥಗರ್ಭಿತವಾಗಿ ಯಾರೋ ಒಬ್ಬ ಅಪರಿಚಿತ ಎಷ್ಟು ಸುಲಭವಾಗಿ ಹೇಳಿಬಿಡುತ್ತಾನೆ ನೋಡಿ. ಈ ಜಗತ್ತಿಗೆ ನಾವು ಬರುವಾಗ ಒಬ್ಬರೇ, ಹೋಗುವಾಗಲೂ ಒಬ್ಬರೇ. ನಡುವೆ ನಡೆಯುವ ಎಲ್ಲ ವಿದ್ಯಮಾನಗಳು ಬರೀ ಭ್ರಮೆ ಎಂಬುದನ್ನು ಈ ಮಾತು ಎಷ್ಟು ಚೆನ್ನಾಗಿ ಧ್ವನಿಸುತ್ತದೆ.ಅದಕ್ಕೇ ಅಲ್ಲವೇ ನಮ್ಮ ಶ್ರೀಸಾಮಾನ್ಯನನ್ನು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳು ಎಂದು ಕರೆದಿರುವುದು. ದೊಡ್ಡದೊಡ್ಡ ಕವಿಗಳು, ಸಿನಿಮಾ ಸಾಹಿತಿಗಳು ಮಾನವಾ ದೇಹವೂ ಮೂಳೆ ಮಾಂಸದ ತಡಿಕೆ... ಎಂದೋ, ಆರಡಿ ಮೂರಡಿ ನೆಲದಲ್ಲಿ ಹೂತು ಹೋಗುವ ಜನ್ಮ ಎಂದೋ , ಬರುವಾಗ ಎಲ್ಲ ನೆಂಟರು, ಹೋಗುವಾಗ ಯಾರೂ ಇಲ್ಲ... ಎಂದೋ ಹೇಳುತ್ತಾ ನೂರು ವರ್ಷದ ಜೀವನದ ಗತಿಯನ್ನು ಮೂರು ನಿಮಿಷದಲ್ಲಿ ಹಿಡಿದಿಟ್ಟು `ಕ್ಯಾತ~ ಕವಿಗಳು ಎಂಬ ಹೆಸರು ಪಡೆಯುತ್ತಾರೆ.ಆದರೆ ಬಸ್ಸುಗಳಲ್ಲಿ ಇಂತಹ ಸುಭಾಷಿತಗಳನ್ನು ಉದುರಿಸುವ ಜನಪದ ಸಾಹಿತಿಗಳಿಗೆ, ಅವರು ಹೇಳಿದ ಮಾತಿನ ಹಿಂದೆ ಜೀವನದ ಸಾರವೇ ಇದೆ ಎಂಬುದರ ಅರಿವು ಇರುವುದಿಲ್ಲ. `ಹೋಗುವಾಗ ತಲೆ ಮೇಲೆ ಹೊತ್ಕಂಡ್ ಹೋಗ್ತೀರಾ?~ ಎಂದೋ, `ಎಷ್ಟು ಸಂಪಾದಿಸಿದ್ರೆ ಏನ್ ಪ್ರಯೋಜನ? ತಿನ್ನೋದು ಒಂದು ಹಿಡಿ ಅನ್ನಾ ಅಷ್ಟೇ ಅಲ್ವ?~ ಎಂದೋ ಕೆಲವರು ಆಗಾಗ ಅಲ್ಲಲ್ಲಿ ಹೇಳುತ್ತಿರುವುದನ್ನು ಕೇಳುತ್ತಿರುತ್ತೇವೆ.ಇಂತಹವನ್ನು ಅಷ್ಟು ಸುಲಭವಾಗಿ ಈ ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಹೊರಬಿಡಬೇಡಿ. ಇಂತಹ ಮಾತುಗಳ ಹಿಂದೆ ಜೀವನಸಾರವೇ ಇದೆ ಎನ್ನುವುದನ್ನು ಮರೆಯಬೇಡಿ.ನಾನಂತೂ ಸೀಟು ಹಿಡಿದು ಕುಳಿತುಕೊಂಡು ಬಿಟ್ಟಿದ್ದೇನೆ. ಮೇಲೆ ರಾಡು ಹಿಡಿದು ಜೋತಾಡುವ ಸಂಕಟವಿಲ್ಲ. ನನ್ನ ಬೂಟು ತುಳಿಯುತ್ತಾರೆ ಎಂಬ ಭಯವಿಲ್ಲ. ನನ್ನ ಜೇಬಿಗೆ ಕೈಹಾಕಿ ಪಿಕ್‌ಪಾಕೆಟ್ ಮಾಡುತ್ತಾರೆ ಎನ್ನುವ ಆತಂಕವೂ ಇಲ್ಲ.

 

ಹೀಗಿರಬೇಕಾದರೆ ನೂರಾರು ವಿಷಯಗಳನ್ನು ಮನಸ್ಸಿನೊಳಗೆ ಎಳೆದುಕೊಂಡು ಮಂಥನ ಮಾಡಲು ಆಗುವ ಸಂಕಟವಾದರೂ ಏನು? ಹೀಗೆ ಕಣ್ಣುಮುಚ್ಚಿ ಒಂದು ಕ್ಷಣ ಚಿಂತಿಸುವಷ್ಟರಲ್ಲಿ ನಿಂತಿದ್ದವರಲ್ಲಿ ಒಬ್ಬರು ಹಿಂದಿನಿಂದ ಭುಜ ತಟ್ಟಿ ಕರೆದಂತಾಯಿತು.ಬಸ್ಸಿನಲ್ಲಿ ಹೀಗೆ ಕುಳಿತುಕೊಂಡಿರುವವರನ್ನು ಕಂಡರೆ ಕೆಲವರಿಗೆ ಹೊಟ್ಟೆ ಉರಿ ಜಾಸ್ತಿ. ಕೂತಿರುವವರಿಗೆ ಏನಾದರೂ ಕಿರಿಕಿರಿ ಮಾಡಬೇಕು, ಅವರು ನೆಮ್ಮದಿಯಿಂದ ಕೂರಬಾರದು ಎಂಬ ಹಟ ತೊಟ್ಟೇ ಕೆಲವರು ಬಂದಿರುತ್ತಾರೆ. ಅದಕ್ಕಾಗೇ ಕುಳಿತಿರುವವರಿಗೆ ತಾಗಿಯೇ ನಿಂತುಕೊಳ್ಳುವುದು, ಅವರ ಮೈಭಾರವನ್ನೆಲ್ಲಾ ಕೂತವನ ಮೇಲೆ ಬಿಡುವುದು.. ಇತ್ಯಾದಿ.. ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ.

 

ಕೆಲವರು ಕೈಯಲ್ಲಿ ಬ್ಯಾಗನ್ನೋ, ಇನ್ನಾವುದೋ ಲಗೇಜನ್ನೋ ಹಿಡಿದುಕೊಂಡು ಸಿಟಿ ಬಸ್ಸು ಹತ್ತಿ ಬಿಡುತ್ತಾರೆ. ಕುಳಿತಿರುವವರ ಕೈಗೆ ಆ ಬ್ಯಾಗನ್ನು ಕೊಟ್ಟು, ಸ್ವಲ್ಪ ಹಿಡಿದುಕೊಂಡಿರಿ ಎನ್ನುತ್ತಾರೆ. ಈ ರೀತಿ ಕೊಡುವುದು ನಮ್ಮ ಹಕ್ಕು ಎಂದು ಅವರು ತಿಳಿದುಕೊಂಡಿರುತ್ತಾರೆ ಎನ್ನುವುದು ಅವರ ಧೋರಣೆಯಿಂದಲೇ ಗೊತ್ತಾಗುತ್ತದೆ.

 

ಕೆಲವರು ಊಟದ ಡಬ್ಬಿ, ನೀರಿನ ಬಾಟಲು, ಪುಸ್ತಕ ಮೊದಲಾದ ದೊಡ್ಡ ಮೂಟೆಯನ್ನೇ ಕೂತಿರುವವರ ತೊಡೆಯ ಮೇಲೆ ಕುಕ್ಕಿ ಬದಿಯಲ್ಲಿ ನಿಲ್ಲುತ್ತಾರೆ. ಕೂತಿರುವವನ ತೊಡೆ ಲಗೇಜು ಇಡಲು ಸೂಕ್ತ ಸ್ಥಳ ಎಂದೇ ಅವರ ಭಾವನೆ. ಇಂತಹವರನ್ನು ಕಂಡರೆ ನನಗೆ ನಖಶಿಖಾಂತ ಉರಿಯುತ್ತದೆ. ಒಂದು ಸಣ್ಣ ಬ್ಯಾಗನ್ನೂ ತನ್ನ ಕೈಯ್ಲ್ಲಲ್ಲೇ ಇಟ್ಟುಕೊಂಡು ಪಯಣಿಸಲು ಸಾಧ್ಯವಾಗದವನು ಶುದ್ಧ ದಂಡಪಿಂಡ ಎನ್ನುವುದು ನನ್ನ ವಾದ.ಅಂತಹವರಾರೋ ನನ್ನ ಭುಜ ತಟ್ಟುತ್ತಿದ್ದಾರೆ. ಅವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ನಾನು ಕಣ್ಣುಮುಚ್ಚಿ ನಿದ್ರಿಸುತ್ತಿರುವವನಂತೆ ನಟಿಸಲಾರಂಭಿಸಿದೆ. ಅವನ ಬ್ಯಾಗನ್ನು ಹೊತ್ತುಕೊಂಡು ನಿಲ್ಲುವುದು ಅವನ ಹಣೆ ಬರಹ. ಅವನ ಹಣೆಬರಹವನ್ನು ನಾನೇಕೆ ಹೊತ್ತುಕೊಳ್ಳಲಿ?ಕಣ್ಣು ಮುಚ್ಚಿ ನಿದ್ರಾಸುರನಾದೆ. ಕೆಲವೇ ಕ್ಷಣಗಳಲ್ಲಿ ನಾನು ಅಭಿನಯದಲ್ಲಿ ಬಹಳ ವೀಕು ಎನ್ನುವುದು ಗೊತ್ತಾಯಿತು. `ಈ ಕಳ್ಳಾಟಗಳೆಲ್ಲಾ ಗೊತ್ತು ಬಿಡ್ರಿ~ ಎನ್ನುವಂತೆ ಅವನು ನನ್ನ ಭುಜ ಅಲುಗಾಡಿಸುವುದು ಬಿಡಲಿಲ್ಲ. ಇನ್ನೇನು ಗ್ರಹಚಾರ ಕಾದಿದೆಯೋ ಎಂದು ನಾನು ಕಣ್ಣು ಬಿಡಲೇಬೇಕಾಯಿತು. ಆ ರಶ್‌ನಲ್ಲೂ ಆ ವ್ಯಕ್ತಿ `ಏನಯ್ಯಾ.. ಚೆನ್ನಾಗಿದ್ದೀಯಾ? ಎಷ್ಟು ದಿನ ಆಯ್ತು ಈಗ ಸಿಕ್ತಾ ಇದ್ದೀಯಾ?~ ಎಂದು ಹರ್ಷ ವಿಸ್ಮಿತನಾಗಿ ಎಲ್ಲ ಹಲ್ಲುಗಳನ್ನೂ ಪ್ರದರ್ಶಿಸುತ್ತಾ ನನ್ನ ಮರುಜವಾಬಿಗಾಗಿ ಕಾದು ನಿಂತ.ದೇವರಾಣೆ ಅವನನ್ನು ನಾನು ನೋಡಿಯೇ ಇಲ್ಲ. ಅವನು ಯಾರು ಎಂಬುದಂತೂ ಸತ್ಯವಾಗಿಯೂ ಗೊತ್ತಿಲ್ಲ. ಅವನಂತೂ ನನ್ನನ್ನು ಖಚಿತವಾಗಿ ಭೇಟಿಯಾಗಿದ್ದೇನೆ, ಎಂಬಂತೆ ವರ್ತಿಸುತ್ತಿದ್ದಾನೆ. ಎಷ್ಟು ನೆನಪಿಸಿಕೊಂಡರೂ ಅವನು ಯಾರೆಂದೇ ಗೊತ್ತಾಗುತ್ತಿಲ್ಲ. ಆದರೂ ಸ್ವಲ್ಪ ನಗು ಬರಿಸಿಕೊಂಡು ಚಿಂತಿಸಲಾರಂಭಿಸಿದೆ. `ಏನ್ ಮರ‌್ತು ಬಿಟ್ಟ್ಯಾ? ಗೊತ್ತಾಗ್ಲಿಲ್ವ ನಾನ್ಯಾರೂ ಅಂತ..~ ಎಂದು ಆ ವ್ಯಕ್ತಿ ಮತ್ತೆ ದೇಶಾವರಿ ನಗೆ ನಕ್ಕ.ನನಗಂತೂ ಮೈಪರಚಿಕೊಳ್ಳುವಂತಾಯಿತು. ಸಾವಿರಾರು ಜನರನ್ನು ಭೇಟಿಯಾಗಿರುತ್ತೇವೆ. ವ್ಯಕ್ತಿಗಳು ಆಗಾಗ ಭೇಟಿಯಾಗುತ್ತಿದ್ದರೆ ನೆನಪಿನಲ್ಲಿ ಉಳಿಯುತ್ತದೆ. ಇವರು ಯಾವಾಗಲೋ ಎಂದೋ ಭೇಟಿಯಾಗಿರುತ್ತಾರೆ. ಗೊತ್ತಿಲ್ಲ ಎಂದರೆ ಅವಮಾನವಾಗುತ್ತದೆ ಎಂದು ಅಥವಾ ಅವರ ಮುಖಭಂಗ ಮಾಡಲು ಇಷ್ಟವಾಗದೆ `ಹ್ಹಿ...ಹ್ಹೀ ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ? ಈಗ ಎಲ್ಲಿದ್ದೀರಿ?~ ಎಂದು ಎಲ್ಲರೂ ಎಲ್ಲರಿಗೂ ಯಾವ ಸಂದರ್ಭದಲ್ಲಿ ಬೇಕಾದರೂ ಹೇಳಬಹುದಾದ ಉತ್ತರವನ್ನು ಹೇಳಿ ಕೆಲವು ಬಾರಿ ತಪ್ಪಿಸಿಕೊಂಡಿದ್ದೇನೆ. ಮತ್ತೆ ಕೆಲವು ಸಲ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದೇನೆ.

 

ಕೆಲವರಂತೂ ನಾನ್ಯಾರು ಹೇಳಿ ಎಂದು ಪಟ್ಟು ಹಿಡಿದುಬಿಡುತ್ತಾರೆ. ಅವರ ಹೆಸರು ಹೇಳುವವರೆಗೂ ಬಿಡುವುದೇ ಇಲ್ಲ. ಹೇಗಾದರೂ ಮಾಡಿ ನನ್ನ ಹೆಸರನ್ನು ಇವನ ಬಾಯಿಂದ ಹೊರಡಿಸಲೇ ಬೇಕು ಎಂಬ ದುರ್ದಾನ ತೆಗೆದುಕೊಂಡವರಂತೆ ಅವರು ಬಂದಿರುತ್ತಾರೆ.`ಸ್ವಾಮಿ, ದಯವಿಟ್ಟು ಕ್ಷಮಿಸಿ, ನೀವು ತಪ್ಪು ತಿಳ್ಕೊಂಡಿದೀರಿ, ನೀವು ಅಂದುಕೊಂಡಂತೆ ನಾನು ರಾಜು ಅಲ್ಲ. ಮಿಸ್ಟೇಕ್ ಮಾಡ್ಕೊಂಡಿದೀರಾ ಅನ್ಸುತ್ತೆ~ಎಂದು ನೇರವಾಗಿ, ನಿಷ್ಠುರನಾಗಿ ಹೇಳಿಯೇ ಬಿಟ್ಟೆ. ಒಮ್ಮಮ್ಮೆ ಹೀಗೆ ನೇರವಾಗಿ ಹೇಳದಿದ್ದರೆ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂದು ನನಗೆ ಗೊತ್ತು. ಆದರೆ ಇಲ್ಲಿನ ಪರಿಸ್ಥಿತಿ ಆ ರೀತಿ ಇಲ್ಲ. ನೇರವಾಗಿ ಹೇಳಿದರೂ ಕಷ್ಟ. ಹೇಳದಿದ್ದರೂ ಕಷ್ಟ. ಸುಮ್ಮನಿದ್ದರೂ ಕಷ್ಟ. ಎದುರಿಗಿರುವ ಪಾರ್ಟಿ ಬಡಪಟ್ಟಿಗೆ ಬಗ್ಗುವವನ ತರಹ ಕಾಣಿಸುತ್ತಿಲ್ಲ.  `ಮಿಸ್ಟೇಕ್ ಎಂತದು ಮಾರಾಯ, ಹೋದ ವರ್ಷ ಮೈಸೂರ‌್ನಲ್ಲಿ ಸಿಕ್ದೋನು ಮತ್ತೆ ತುಮಕೂರು ಸಾಹಿತ್ಯ ಸಮ್ಮೇಳನದಲ್ಲಿ ಅಲ್ವ ಸಿಕ್ಕಿದ್ದು. ಇಲ್ಲೇ ಇದೇ ಊರ‌್ನಲ್ಲೇ ಮಾರ್ಕೆಟ್ ತಾವು ನೋಡ್ದೆ, ಮಾತಾಡ್ಸಕ್ ಆಗ್ಲಿಲ್ಲ. ಎಲ್ಲಿ ಇಳೀತೀಯಾ ಮಾರಾಯ, ಬಾ ಕಾಫಿ ಕುಡ್ಕಂಡು ಹೋಗುವೆ...~ ಎಂದು ಬಲವಂತ ಮಾಡಿದ.ಇವನು ಇಷ್ಟೊಂದು ಖಚಿತವಾಗಿ ಹೀಗೆ ಹೇಳ್ತಾ ಇರೋದು ನೋಡಿದರೆ ನನ್ನ ತರಹವೇ ಇನ್ನೊಬ್ಬ ಇರಬಹುದಾ ಎಂಬ ಅನುಮಾನ ನನ್ನನ್ನು ಕಾಡತೊಡಗಿತು. ಜಗತ್ತಿನಲ್ಲಿ ಒಂದೇ ರೀತಿಯ ಏಳುಜನ ಇರ‌್ತಾರೆ.. ಎಂಬ ಡೈಲಾಗುಗಳನ್ನು ಡಬ್ಬಲ್ ಆಕ್ಟಿಂಗ್ ಸಿನಿಮಾಗಳಲ್ಲಿ ಕೇಳಿ ಕೇಳಿ ಸಾಕಾಗಿದೆ.ಆ ಉಪೇಂದ್ರ ಬೇರೆ ಎಲ್ಲ ಕಾರ್ಯಕ್ರಮಗಳ್ಲ್ಲಲೂ ಅವನ ರೀತಿಯೇ ಇರುವ ಏಳು ಜನರನ್ನು ಕರೆತಂದು ನಿಲ್ಲಿಸಿ ಅಚ್ಚರಿ ತರುತ್ತಿರುತ್ತಾನೆ. ಈ ವ್ಯಕ್ತಿ ನೋಡಿದರೆ ಏಳು ಊರುಗಳ ಹೆಸರುಗಳನ್ನು ಹೇಳಿ ಅಲ್ಲೆಲ್ಲಾ ಭೇಟಿಯಾಗಿದ್ದೇವೆ ಎನ್ನುವುದನ್ನು ಘಂಟೆ ಹೊಡೆದಂತೆ ಹೇಳ್ತಾ ಇದ್ದಾನೆ. ನನ್ನ ತಲೆ ಕೆಟ್ಟು ಗೊಬ್ಬರವಾಯಿತು.

 

ಕೆಲವರಿಗೆ ಕೆಲವು ತರಹದ ಹುಚ್ಚು ಇರುತ್ತದೆ. ಕಂಡವರನ್ನೆಲ್ಲಾ ಓ, ಅವರೇ ಇವರು ಎಂದು ಹೇಳುವ ರೋಗ ಅದು. ಒಬ್ಬನ ತರಹ ಇನ್ನೊಬ್ಬನಿರುವುದು ಹೇಗೆ ಸಾಧ್ಯ? ಇದೊಂದು ರೀತಿಯ ಭ್ರಾಂತಿ. ನಮಗೆ ಯಾರೋ ಒಬ್ಬರು ಇಷ್ಟವಾದರೆ ನೋಡಿದವರೆಲ್ಲಾ ಅವರ ರೀತಿಯೇ ಕಾಣಲಾರಂಭಿಸುತ್ತಾರೆ. ರಜನೀಕಾಂತ್ ತರಹವೇ ಕಾಣಬೇಕೆಂದು ಬಹಳಷ್ಟು ಜನ ಅದೇ ರೀತಿ ವರ್ತಿಸುತ್ತಿರುತ್ತಾರೆ.

 

ಸಲ್ಮಾನ್ ತರಹ,  ಶಾರೂಕ್ ತರಹ ಕಾಣಬೇಕೆಂದು ಅದೇ ತರಹ ವೇಷಭೂಷಣ, ಮ್ಯಾನರಿಸಂಗಳನ್ನು ಮಾಡುತ್ತಾ ತಿಕ್ಕಲನಂತೆ ಕಾಣುತ್ತಿದ್ದರೂ, ನಾನು ಸಲ್ಮಾನ್ ಎಂಬ ಭ್ರಮೆಯಲ್ಲಿ ತಿರುಗಾಡುತ್ತಿರುತ್ತಾರೆ. ಅದೊಂದು ರೀತಿಯ ಹುಚ್ಚು. ಆದರೆ ನನಗೆ ಆ ರೀತಿಯ ಹುಚ್ಚುಗಳೇನೂ ಇಲ್ಲ. ನಾನು ನನ್ನಂತೆಯೇ ಇರಬೇಕೆಂಬುದು ನನ್ನ ಇಷ್ಟ, ಆದರೆ ಬಸ್ಸಿನಲ್ಲಿ ಸಿಕ್ಕ ಈ ಪಾರ್ಟಿ ನನ್ನನ್ನು ಹುಚ್ಚನನ್ನಾಗಿ ಮಾಡುತ್ತಿದ್ದಾನೆ.ಸದ್ದಾಂ ಹುಸೇನ್ ಎಲ್ಲಿಗಾದರೂ ಹೋಗುವ ಮುನ್ನ ತನ್ನಂತೆಯೇ ಇರುವ ಡಮ್ಮಿಗಳನ್ನು ಮೊದಲು ಕಳುಹಿಸುತ್ತಿದ್ದನಂತೆ. ಯಾರಾದರೂ ಬಾಂಬ್ ಹಾಕಿ ಕೊಲ್ಲಲು ಹೊಂಚು ಹಾಕುತ್ತಿದ್ದರೆ ಅವರನ್ನು ಬೇಸ್ತು ಬೀಳಿಸುವ ತಂತ್ರಗಾರಿಕೆಯಂತೆ ಇದು. ಅವನ ಅರಮನೆಯಲ್ಲಿ ಅವನ ರೀತಿಯಲ್ಲೇ ಇರುವ ಹಲವಾರು ಮಂದಿ ತದ್ರೂಪಿಗಳು ಇರುತ್ತಿದ್ದರಂತೆ.

 

ಇವೆಲ್ಲಾ ಅಂತೆಕಂತೆ ಕತೆಗಳಿರಬಹುದು ಆದರೆ ಗಂಡಾಂತರದಲ್ಲಿರುವವರೆಲ್ಲಾ ಇಂತಹ ಆಲೋಚನೆಗಳನ್ನು ಹೊಂದಿರುತ್ತಾರೆ. ಅಂದರೆ ಇರಾಕಿನಲ್ಲಿ ಒಂದೇ ತರಹ ಕಾಣುವವರು ಬಹಳ ಜನ ಇದ್ದಾರೆ ಎನ್ನುವುದು ಖಾತ್ರಿ ಆಯಿತು. ಹಿಟ್ಲರ್ ಕೂಡ ತನ್ನಂತೆಯೇ ಇರುವ ಹಲವರನ್ನು ಪೋಷಿಸುತ್ತಿದ್ದನಂತೆ. ಇವರಿಗೆಲ್ಲಾ ತದ್ರೂಪಿಗಳು ಬಲಿಪಶುಗಳಿದ್ದ ಹಾಗೆ.

 

ಒಬ್ಬನ ರೀತಿ ಇನ್ನೊಬ್ಬ ಇದ್ದಾನೆ ಅಂದರೆ ಅವನು ಸಾಯಲು ರೆಡಿಯಾಗಿರಬೇಕು ಅಂತ ಅರ್ಥ. ಎಲ್ಲೋ ನಿಮ್ಮನ್ನು ನೋಡಿದ್ದೇನಲ್ಲಾ ಎಂದು ಸಾಮಾನ್ಯವಾಗಿ ಅಪರಿಚಿತರು ಹೇಳಿದರೆ ನನಗೆ ಇಂತಹ ಭಯ ಕಾಡುವುದು ಅದಕ್ಕಾಗಿಯೇ. ನನಗೂ ಒಮ್ಮವ್ಮೆು ಒಂದೇ ತರಹ ಕಾಣಿಸುವವರು ಸಿಗುತ್ತಾರೆ.

 

ಪಂಜಾಬಿನಲ್ಲಿ, ತಿರುಮಲದಲ್ಲಿ ಯಾರನ್ನು ನೋಡಿದರೂ ಒಂದೇ ತರಹ ಕಾಣುತ್ತಾರೆ. ತಿರುಪತಿಯಲ್ಲಿ ಒಬ್ಬ ವ್ಯಕ್ತಿ ಕಳೆದು ಹೋದರು. ಅವರ ಸಂಬಂಧಿಕರು ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ವ್ಯಕ್ತಿಯ ಚಹರೆ ಹೇಳಿ ಎಂದಾಗ, ತಲೆ ಬೋಳಿಸಿಕೊಂಡಿದ್ದಾರೆ. ಹಣೆಗೆ ಮೂರು ನಾಮ ಹಾಕಿಕೊಂಡಿದ್ದಾರೆ ಎಂದು ಹೇಳಿದರಂತೆ.

 

ಈ ಚಹರೆ ಹಿಡಿದು ಪೊಲೀಸರು ತಿರುಮಲದಲ್ಲೆಲ್ಲಾ ಅಲೆದಾಡಿದರೆ, ಸಾವಿರಾರು ಜನ ಅದೇ ರೀತಿ ಇದ್ದರಂತೆ! ವ್ಯಕ್ತಿ ಸಿಗಲಿಲ್ಲ ಎಂದು ಬೇರೆ ಹೇಳಬೇಕಿಲ್ಲವಲ್ಲ.

ಎಷ್ಟು ಜ್ಞಾಪಿಸಿಕೊಂಡರೂ ನಮ್ಮ ಕುಟುಂಬದಲ್ಲಿ ಅವಳಿ ಜವಳಿ ಪರಂಪರೆ ಇದ್ದ ನೆನಪೇ ಆಗಲಿಲ್ಲ.

 

ಬೈಚಾನ್ಸ್ ನಮ್ಮ ತಂದೆಗೆ ಅವಳಿ ಮಕ್ಕಳಾಗಿ, ಚಿಕ್ಕಂದಿನಲ್ಲಿ ಒಂದು ಮಗು ಸರ್ಕಸ್ ದುರಂತದಲ್ಲೋ, ಜಾತ್ರೆಯಲ್ಲೋ, ಟ್ರೈನಿನಲ್ಲಿ ಹೋಗುವಾಗಲೋ ತಪ್ಪಿಸಿಕೊಂಡು ಇನ್ನೊಂದು ಕಡೆ ನನ್ನ ತರಾನೇ ಬೆಳೆಯುತ್ತಾ ಇರಬಹುದೇ? ಅವನನ್ನೇ ನೋಡಿ ಈ ಆಸಾಮಿ ನಾನು ಅಂತ ತಿಳಿದುಕೊಂಡು ಹೀಗೆ ಯಾಮಾರಿ ಬಂದು ನನಗೆ ತಗುಲಿಕೊಂಡಿರಬಹುದೇ ಎಂದೆಲ್ಲಾ ಚಿಂತನೆ ಬಂತು.ಥೂ... ಕನ್ನಡ ಸಿನಿಮಾ ನೋಡಿನೋಡಿ ಅದೇ ತರಹದ ಕತೆಗಳೇ ತಲೆತುಂಬಾ ಹರಿದಾಡ್ತಿದೆ ಎಂದು ನನ್ನನ್ನು ನಾನೇ ಬೈದುಕೊಂಡೆ. ಡಬ್ಬಲ್ ಆ್ಯಕ್ಟಿಂಗ್ ಇರುವ ಕತೆಗಳನ್ನು ಸಿನಿಮಾದವರು ಸ್ವಲ್ಪ ಬೇರೆಯ ತರಹ ನಿರೂಪಿಸಬಾರದೇ ಎಂದು ಶಪಿಸಿದೆ.

ನಾನು ಯಾರನ್ನೂ ಅನುಕರಣೆ ಮಾಡಿಲ್ಲ.ಇನ್ನೊಬ್ಬರ ತರಹವೇ ಕಾಣಬೇಕು ಎಂದೂ ಹಂಬಲಿಸಿದವನಲ್ಲ. ದೇವರು ಕೊಟ್ಟ ಸ್ವರೂಪ ಇರುವಾಗ, ಬೇರೆ ರೂಪ ಯಾಕೆ? ಆದರು ಈ ಭಡವಾ, ಯಾರನ್ನೋ ನೋಡಿ, ಅದು ನಾನೇ ಅಂತ ಹಟ ಹಿಡಿದು ಬಿಟ್ಟಿದ್ದಾನಲ್ಲಾ? ಜನಪದ ಕತೆಯೊಂದು ನನಗೆ ನೆನಪಿಗೆ ಬರುತ್ತಿದೆ. ಜನಪದ ಅತಿಮಾನುಷ ಕತೆಗಳಲ್ಲಿ ಇಂತಹದು ಸಹಜವಾಗಿ ಕೇಳಿಬರುತ್ತದೆ. ಕುಪಿತರಾಜ ಎಂಬ ರಾಜಕುಮಾರ ದೇವಕನ್ಯೆಯೊಬ್ಬಳನ್ನು ವರಿಸುತ್ತಾನೆ.

 

ಇದ್ದಕ್ಕಿದ್ದಂತೆ ಅವಳು ಕಳೆದುಹೋಗುತ್ತಾಳೆ. ಅವಳನ್ನು ಹುಡುಕುತ್ತಾ ಕಾಡಿನಲ್ಲಿ  ಹೊರಟಾಗ ರಾಜಕುಮಾರನಿಗೆ ದಾರಿಯಲ್ಲಿ ಅಗ್ನಿಪರೀಕ್ಷೆಗಳು ಎದುರಾಗುತ್ತವೆ. ಜನಪದ ಕತೆಯೆಂದ ಮೇಲೆ ಇದೆಲ್ಲಾ ಇರಲೇ ಬೇಕಲ್ಲ. ಅದರಲ್ಲಿ ಕೊನೆಯ ಅಗ್ನಿಪರೀಕ್ಷೆ ಸ್ವಾರಸ್ಯಕರವಾಗಿದೆ. ಒಂದು ಕಡೆ ಒಂದೇ ರೀತಿಯ ಮೂವರು ದೇವಕನ್ಯೆಯರು ನಿಂತಿರುತ್ತಾರೆ.ಇವರಲ್ಲಿ ನಿನ್ನ ಹೆಂಡತಿಯನ್ನು ಆಯ್ಕೆಮಾಡಿಕೋ ಎನ್ನುವುದೇ ಕಠಿಣ ಪರೀಕ್ಷೆ. ರಾಜಕುಮಾರ ಕಣ್ಣು ಉಜ್ಜಿಕೊಂಡು ನೋಡುತ್ತಾನೆ. ಮೂವರೂ ತಾನು ವರಿಸಿದ ಸ್ವಂತ ಹೆಂಡತಿಯರಂತೆಯೇ ಇದ್ದಾರೆ! (ಬೇರೆಬೇರೆ ರೂಪದವರಿದ್ದಿದ್ದರೆ ವರಿಸಿದವಳಿಗಿಂತ ಸ್ವಲ್ಪ ಹೆಚ್ಚು ಚೆಲುವು ಇರುವ  ಚೆಲುವೆಯರನ್ನೇ ತೋರಿಸಬಹುದಿತ್ತೇನೋ) ಆದರೆ ಇಲ್ಲಿ ಮೂವರೂ ಒಂದೇ ತರಹ ಇದ್ದಾರೆ. ರಾಜಕುಮಾರ ಚಡಪಡಿಸಿದ.ಒಂದೇ ತರಹ ಕಂಡರೆ ಎಷ್ಟು ಅಪಾಯ ನೋಡಿ. ತಮ್ಮ ಹೆಂಡತಿಯರನ್ನೇ ಗುರುತಿಸಲಾಗದಂತಹ ಪರಿಸ್ಥಿತಿ ಬರುತ್ತದೆ. ಕೊನೆಗೆ ಎಲ್ಲ ಜನಪದ ಕತೆಗಳಂತೆಯೇ ಆಗುತ್ತದೆ. ದಾರಿಯಲ್ಲಿ ಬರುವಾಗ ರಾಜಕುಮಾರ ಅಪಾಯದಲ್ಲಿದ್ದ ಚಿಟ್ಟೆಯೊಂದಕ್ಕೆ ಸಹಾಯ ಮಾಡಿರುತ್ತಾನೆ. ಈಗ ಅದು ರಾಜಕುಮಾರನ ನೆರವಿಗೆ ಬರುತ್ತದೆ.

 

ಅವನ ನಿಜ ಹೆಂಡತಿಯನ್ನು ಗುರುತಿಸಲು ಸಹಾಯ ಮಾಡುತ್ತದೆ. ಈ ಕತೆಯೇನೋ ತದ್ರೂಪಿಗಳಿದ್ದಾರೆ ಎನ್ನುವುದನ್ನು ನೆನಪಿಗೆ ತರುತ್ತದೆ. ಆದರೆ, ಬಸ್ಸಿನಲ್ಲಿ ಅಮರಿಕೊಂಡಿರುವ ಈ ಬೇತಾಳನಿಂದ ಪಾರಾಗುವುದಾದರೂ ಹೇಗೆ ಸ್ವಾಮಿ?

ಬಸ್ಸಿನಲ್ಲಿ ನಡೆದ ಘಟನೆಯನ್ನು ಮನೆಗೆ ಬಂದು ಹೆಂಡತಿಗೆ ಹೇಳಿದೆ.ನೋಡಿದ್ರಾ, ನಾನು ಹೇಳ್ತಾ ಇರ‌್ಲಿಲ್ವಾ, ನಿಮ್ ತರಾ ಸ್ವಲ್ಪ ಜನ ಇದ್ದಾರೆ ಎಂದು ಅವಳು ಮಾಮೂಲಿ ವರಸೆ ತೆಗೆದಳು. ಆ ಬಸ್ಸಿನಲ್ಲಿ ಸಿಕ್ಕ ಪ್ರಳಯಾಂತಕನೂ, ನನ್ನ ಹೆಂಡತಿಯೂ ಸ್ವಲ್ಪ ಒಂದೇ ಕ್ಯಾಟಗರಿಗೆ ಸೇರಿದವರು.

 

ಯಾರನ್ನು ನೋಡಿದರೂ ಸ್ವಲ್ಪ ನಿಮ್ಮ ತರಹವೇ ಇದ್ದಾನೆ ಎಂದು ಹೇಳುವುದು ಒಂದು ರೀತಿಯ ಕಾಯಿಲೆಯೋ, ಬಾಯಿಪಾಠವೋ ಆಗಿಬಿಟ್ಟಿದೆ. ಅವಳೂ ಆಗಾಗ `ಅಯ್ಯೋ ಅಲ್ನೋಡಿ ನಿಮ್ ತರಹಾನೇ ಇದಾನೆ~ ಎಂದು ಅವರಿವರನ್ನು ತೋರಿಸುತ್ತಿರುತ್ತಾಳೆ. ನೋಡಿದರೆ, ಬೋಂಡಾ ಮಾರುವವನು! ತಮಾಷೆ ಮಾಡ್ತಾ ಇದಾಳೆ ಅಂತ ನಕ್ಕು ಸುಮ್ಮನಾದೆ. ಒಂದೊಂದು ಸಲ ಹೀಗೆಯೇ ಇರಬೇಕಾಗುತ್ತದೆ.ಮತ್ತೊಂದು ಸಲ ಬೀಡಿ ಸೇದುತ್ತಾ ಕುಳಿತಿದ್ದ ಪೊರಕಿಯೊಬ್ಬನನ್ನು ತೋರಿಸಿ, `ನೋಡಿ, ನಿಮ್ ತರಾನೇ...~ ಎಂದು ಹೇಳುವಷ್ಟರಲ್ಲಿ ಅವಳ ಮಾತು ಕಟ್ ಮಾಡಿಬಿಟ್ಟೆ. ಕೆಲವರಿಗೆ ಯಾವುದನ್ನು ಎಲ್ಲಿ ಹೇಳಬೇಕು ಎಂಬ ಪರಿಜ್ಞಾನವೇ ಇರೋಲ್ಲ. ಯಾರಾದರು ಹೀರೋಗಳನ್ನೋ, ದೊಡ್ಡ ಮನುಷ್ಯರನ್ನೋ ತೋರಿಸಿ ಹೋಲಿಕೆ ಮಾಡಿದರೆ ಸ್ವಲ್ಪ ಕಾಲರ್ ಏರಿಸಿಕೊಳ್ಳಬಹುದು.

 

ನನಗೂ ಮರ್ಯಾದೆ ಇರೋಲ್ಲವೇ? ಮಾತು ಕಟ್ ಮಾಡಿದ್ದಕ್ಕೆ ಅವಳಿಗೆ ಸಿಟ್ಟು ಬಂತು. ಆಹಾ.. ಸುರಸುಂದರಾಂಗ ಎಂದು ಗೇಲಿ ಮಾಡಿದಳು. ಹೊಟೇಲಿಗೆ ಹೋಗುವ ಕಾರ್ಯಕ್ರಮ ರದ್ದು ಮಾಡಿ ಸೇಡು ತೀರಿಸಿಕೊಂಡೆ,ಆಮೇಲೆ ಅವಳಿಗೂ ವಿಷಯದ ಗಂಭೀರತೆಯನ್ನು ವಿವರಿಸಿದೆ.ಇದು ಬಹಳ ಅಪಾಯ. ನನ್ನ ತರಹವೇ ಇನ್ನೊಬ್ಬ ಇರಲು ಸಾಧ್ಯವಿಲ್ಲ. ಇರಲೂ ಬಾರದು. ಕ್ಲೋನಿಂಗ್ ನಿಷೇಧ. ನನ್ನ ತರಹವೇ ಇರೋ ಒಬ್ಬ ಎಲ್ಲೋ ಬ್ಯಾಂಕ್ ರಾಬರಿನೋ, ಭಯೋತ್ಪಾದಕ ಕೃತ್ಯವನ್ನೋ ಮಾಡಿಬಿಡುತ್ತಾನೆ ಅಂತ ಇಟ್ಕೋ, ಅದು ಸಿಸಿಟಿವಿಯಲ್ಲಿ ಬಂದು, ಆನಂತರ ಪೇಪರ್‌ನಲ್ಲಿ ಬಂದು, ಅದನ್ನು ನೀನು ನೋಡಿ, ನನ್ಗಂಡನ ತರಹಾನೇ ಇದೆ ಅಂತ ಹೇಳಿ... ನನ್ನನ್ನೇ ಹಿಡಿದು ಸಿಬಿಐನವರಿಗೆ ಒಪ್ಪಿಸಿಕೊಡುವಂತೆ ಕಾಣುತ್ತದೆ.

 

ನನ್‌ತರಹ ಇನ್ನೊಬ್ಬ ಇಲ್ಲ ಅಂತ್ಲೇ ನೀನು ಹೇಳ್‌ಬೇಕು ಎಂದು ಅವಳಿಗೆ ಸ್ವಲ್ಪ ಭಯ ಹುಟ್ಟಿಸಿದೆ. ಈ ಮಾತು ಅವಳಿಗೆ ತಾಕಿದಂತೆ ಕಂಡಿತು. ಆದರೆ ಪರಿಣಾಮ ಸ್ವಲ್ಪ ಬೇರೆಯೇ ಆಗಲಾರಂಭಿಸಿತು. ನನ್ನ ಗಂಡನಿಗೆ ಏನೂ ಆಗದಿರಲಿ ಎಂದು ಅವಳು ದಿನಾ ವಿಶೇಷ ಪೂಜೆ ಶುರುಮಾಡಿಕೊಂಡಳು. ಯಾರಾದ್ರೂ ದೈವಜ್ಞರಿಂದ ಶಾಸ್ತ್ರ ಕೇಳಿ. ಎಲ್ಲರೂ ನಿಮ್ಮತರಾನೇ ಯಾಕೆ ಕಾಣ್ತಾರೆ ಸ್ವಲ್ಪ ಕೇಳಿ, ಕವಡೆ ಹಾಕಿಸಿ ನೋಡಿ ಎಂದು ದಿನಾ ತಲೆತಿನ್ನಲಾರಂಭಿಸಿದಳು.ಒಂದು ದಿನ  ಬಲವಂತವಾಗಿ ದೈವಜ್ಞರೊಬ್ಬರ ಬಳಿಗೆ ಎಳೆದುಕೊಂಡು ಹೋಗಿಯೇ ಬಿಟ್ಟಳು. ಎಲ್ಲಾ ವಿಷಯವನ್ನೂ ನಮ್ಮಿಂದಲೇ ಹೊರತೆಗೆದ ಅವರು, `ಅನಿಷ್ಟಗಳು ಏನೇನೋ ಹೇಳಿ ತಲೆ ಕೆಡಿಸ್ತವೆ... ರಾಹು ಕೇತುಗಳಿಗೆ ಮೊಳಕೆಕಾಳಿನ ಸೇವೆ ಮಾಡಿದ್ರೆ ಯಾವ ಕಾಟಾನೂ ಇರಲ್ಲ. ಏಳು ಲೋಕಗಳಲ್ಲಿ ಒಂದೇ ತರಹ ಏಳು ಜನ ಇರಬಹುದು.

 

ಒಂದೇ ಲೋಕದಲ್ಲಿ ಒಂದೇ ರೀತಿ ಕಾಣುವ ಏಳು ಜನ ಇರ‌್ತಾರೆ ಅಂತ ಯಾವ ಮುಂಡೇಗಂಡ ಹೇಳ್ದ ನಿಮಗೆ~ ಎಂದು ಥೇಟ್ ಬ್ರಹ್ಮಾಂಡ ಜ್ಯೋತಿಷಿಗಳ ತರಹ ಹೇಳಿ ಸಾಗಹಾಕಿದ. ಈಗ  ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಕ್ಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.