ಶನಿವಾರ, ಜನವರಿ 18, 2020
19 °C

ನಮ್ಮ ಮೆಟ್ರೊ 2ನೇ ಹಂತಕ್ಕೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ~ ಎರಡನೇ ಹಂತದ ಯೋಜನೆಗೆ ಮಂಗಳವಾರ ಸಚಿವ ಸಂಪುಟದ ಒಪ್ಪಿಗೆ ದೊರೆತಿದೆ. 72 ಕಿ.ಮೀ. ಉದ್ದದ ಈ ಯೋಜನೆ 2017ಕ್ಕೆ ಪೂರ್ಣಗೊಳ್ಳಲಿದ್ದು, 27,000 ಕೋಟಿ ರೂಪಾಯಿ ವೆಚ್ಚವಾಗಲಿದೆ.ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಚಿವರಾದ ಡಾ.ವಿ.ಎಸ್.ಆಚಾರ್ಯ ಮತ್ತು ಬಸವರಾಜ ಬೊಮ್ಮಾಯಿ, `ನಮ್ಮ ಮೆಟ್ರೊ ಮೊದಲನೇ ಹಂತದ ಮುಂದುವರಿದ ಭಾಗವೇ ಆಗಿರುವ ಎರಡನೇ ಹಂತದ ಯೋಜನೆಗೆ ಒಪ್ಪಿಗೆ ದೊರೆತಿದೆ. ಜಪಾನ್ ಸರ್ಕಾರದ `ಜೈಕಾ~ ಸಂಸ್ಥೆಯ ಹಣಕಾಸಿನ ನೆರವಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಬೆಂಗಳೂರು ಮೆಟ್ರೊ ರೈಲು ನಿಗಮವೇ (ಬಿಎಂಆರ್‌ಸಿಎಲ್) ಈ ಕಾಮಗಾರಿಯನ್ನೂ   ನಿರ್ವಹಿಸಲಿದೆ~ ಎಂದು ತಿಳಿಸಿದರು.ಮೆಜೆಸ್ಟಿಕ್ ಮೆಟ್ರೊ ರೈಲು ನಿಲ್ದಾಣದ ಹೊರತಾಗಿ ಮೊದಲನೇ ಹಂತದ ನಮ್ಮ ಮೆಟ್ರೊ ಕಾಮಗಾರಿ 2013ಕ್ಕೆ ಪೂರ್ಣಗೊಳ್ಳಲಿದೆ. ಮೆಜೆಸ್ಟಿಕ್ ನಿಲ್ದಾಣದ ಕಾಮಗಾರಿ ಆರು ತಿಂಗಳು ತಡವಾಗಿ ಮುಗಿಯಲಿದೆ. ಉಳಿದ ಎಲ್ಲ ಕಾಮಗಾರಿಗಳೂ ನಿಗದಿತ ಸಮಯಕ್ಕೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು. ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆ ಮೊದಲನೇ ಹಂತದ ನಾಲ್ಕು ರೀಚ್‌ಗಳ ಮುಂದುವರಿದ ಭಾಗವೇ ಆಗಿದೆ. ಉಳಿದಂತೆ ಎರಡು ಹೊಸ ಮಾರ್ಗಗಳೂ ಇವೆ. ಜಯನಗರದಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಹೊಸ ಮಾರ್ಗ ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ ಮತ್ತು ರೇಷ್ಮೆ ಮಂಡಳಿ ವೃತ್ತದ ಮೂಲಕ ಹಾದುಹೋಗಲಿದೆ. ನಾಗವಾರದಿಂದ ಗೊಟ್ಟಿಗೆರೆ ನಡುವಣ ಹೊಸ ಮಾರ್ಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು ಮೂಲಕ ಹಾದುಹೋಗಲಿದೆ.ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಮೊದಲನೇ ಹಂತದ ಕಾಮಗಾರಿ ಕೊನೆಗೊಂಡ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ (15.5 ಕಿ.ಮೀ), ಮೈಸೂರು ರಸ್ತೆಯ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ (6.5) ಮಾರ್ಗಗಳು ವಿಸ್ತರಣೆಯಾಗಲಿವೆ. ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಹೆಸರಘಟ್ಟ ಅಡ್ಡರಸ್ತೆಯಿಂದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದವರೆಗೆ (3.8 ಕಿ.ಮೀ) ಮತ್ತು ಪುಟ್ಟೇನಹಳ್ಳಿ ಅಡ್ಡರಸ್ತೆಯಿಂದ ಅಂಜನಾಪುರ ಉಪನಗರದವರೆಗೆ ಮೆಟ್ರೊ ರೈಲು ಮಾರ್ಗ ವಿಸ್ತರಣೆಗೆ ಹಸಿರು ನಿಶಾನೆ ದೊರೆತಿದೆ. ನಾಗವಾರ-ಗೊಟ್ಟಿಗೆರೆ ನಡುವಣ ಹೊಸ ಮಾರ್ಗ 21.1 ಕಿ.ಮೀ. ಉದ್ದವಿದ್ದು, 20 ನಿಲ್ದಾಣಗಳು ಬರಲಿವೆ. 18.8 ಕಿ.ಮೀ. ಉದ್ದದ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಣ ಮಾರ್ಗದಲ್ಲಿ 15 ನಿಲ್ದಾಣಗಳು ಬರುತ್ತವೆ.

ಪ್ರತಿಕ್ರಿಯಿಸಿ (+)