ಗುರುವಾರ , ಜೂನ್ 17, 2021
21 °C

ನಾಗರಹೊಳೆ: ಕಾಳ್ಗಿಚ್ಚು ಮೊದಲು ಕಂಡ ವಸಂತ

ಶ್ರೀಕಾಂತ ಕಲ್ಲಮ್ಮನವರ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರಹೊಳೆ: ಕಾಳ್ಗಿಚ್ಚು ಮೊದಲು ಕಂಡ ವಸಂತ

ನಾಗರಹೊಳೆ: ನಾವೆಲ್ಲರೂ ಇವರಿಗೆ ಧನ್ಯವಾದಗಳನ್ನು ಹೇಳಬೇಕು. ಅಂದು ಫೆ.26ರಂದು ಮಧ್ಯಾಹ್ನ ನಾಗರಹೊಳೆಯ ಹೆಸರುಗದ್ದೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿಯನ್ನು ಇವರು ಗುರುತಿಸದಿದ್ದರೆ ಬಹುಶಃ ನಾಗರಹೊಳೆಯ ಕಾಳ್ಗಿಚ್ಚನ್ನು ಇಷ್ಟು ಬೇಗ ನಂದಿಸಲು ಸಾಧ್ಯವಾಗುತ್ತಿರಲಿಲ್ಲ.ಇವರ ಹೆಸರು ವಸಂತ್. ವಯಸ್ಸು ಸುಮಾರು 45 ವರ್ಷ. ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತಃ ಇವರು ಹಾಡಿಯಲ್ಲಿ ವಾಸ ಇರುವವರು. ಬೇಸಿಗೆಯಲ್ಲಿ ಕಾಳ್ಗಿಚ್ಚನ್ನು ಗುರುತಿಸಲು ಅರಣ್ಯ ಇಲಾಖೆಯವರು ಗುತ್ತಿಗೆ ಆಧಾರದ ಮೇಲೆ ಇವರನ್ನು ನೇಮಕ ಮಾಡಿಕೊಂಡಿದ್ದಾರೆ.ಕಾಳ್ಗಿಚ್ಚಿನ ಪ್ರಭಾವ ಎಷ್ಟಿತ್ತೆಂದರೆ ಕೇವಲ ನಾಲ್ಕು ದಿನಗಳಲ್ಲಿ 509 ಹೆಕ್ಟೇರ್ ಅರಣ್ಯ ಭೂಮಿ ಸುಟ್ಟುಹೋಗಿದೆ. ಇದು ನಾಗರಹೊಳೆ ಅರಣ್ಯ ಪ್ರದೇಶದ (10,400 ಹೆಕ್ಟೇರ್) ಶೇ. 5ರಷ್ಟು ಭಾಗವಾಗಿದೆ. ಅಂದು ವಸಂತ ಅವರು ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರೂ ಇನ್ನೂ ಅಪಾರ ಪ್ರಮಾಣದ ಅರಣ್ಯ ಸಂಪತ್ತನ್ನು ಕಳೆದುಕೊಳ್ಳಬೇಕಾಗಿತ್ತು.

ನಾಗರಹೊಳೆಯ ಅತಿ ಎತ್ತರದ ವಾಚರ್‌ಗೋಪುರಕ್ಕೆ ಪತ್ರಿಕೆಯ ಪ್ರತಿನಿಧಿಯನ್ನು ಕರೆದೊಯ್ದ ವಸಂತ್, ಅಂದಿನ ದಿನವನ್ನು ನೆನಪಿಸಿಕೊಂಡರು.ಅಂದು ಗಾಳಿ ಅತಿ ವೇಗದಿಂದ ಬೀಸುತ್ತಿತ್ತು. ಇಲ್ಲಿ ಗೋಪುರದ ಮೇಲೆ ನಿಲ್ಲಲು ಸಹ ಸಾಧ್ಯವಾಗುತ್ತಿರಲಿಲ್ಲ. ಇಡೀ ಗೋಪುರವೇ ಅಲ್ಲಾಡುತ್ತಿತ್ತು. ಮಧ್ಯಾಹ್ನ 2.15 ಗಂಟೆ ಸುಮಾರಿಗೆ ದೂರದ ಹೆಸರುಗದ್ದೆ ಬಳಿ ದಟ್ಟವಾದ ಹೊಗೆ ಕಾಣಿಸಿತ್ತು. ಅದು ಕಾಳ್ಗಿಚ್ಚಿನ ಹೊಗೆ ಎಂದು ಗುರುತಿಸುವಲ್ಲಿ ಒಂದ್ನಿಮಿಷ ಕೂಡ ತಡಮಾಡಲಿಲ್ಲ. ತಕ್ಷಣವೇ ವಾಕಿಟಾಕಿ ಮೂಲಕ ಸಂದೇಶವನ್ನು ಎಲ್ಲೆಡೆ ರವಾನಿಸಿದೆ.ಬೆಂಕಿಯ ಕೆನ್ನಾಲಗೆ ನೋಡನೋಡುತ್ತಿದ್ದಂತೆ ಪಡಸರೆ, ಕಾಯಿತೊಳ ಬೆಟ್ಟಕ್ಕೆ ಹಬ್ಬಿತು. ಬಿದಿರು ಒಣಗಿದ್ದ ಕಾರಣ ಹಾಗೂ ವೇಗವಾಗಿ ಗಾಳಿ ಬೀಸುತ್ತಿದ್ದ ಕಾರಣ ಬೆಂಕಿಯು ಹರಡತೊಡಗಿತು. ಬೆಂಕಿ ಹೊತ್ತಿಕೊಂಡ ಬಿದಿರು ದೂರದೂರದವರೆಗೆ ಸಿಡಿಯಿತು. ಪಟಾಕಿ ಹೊಡೆದಂತಹ ಸದ್ದು ಕೇಳಿಸಲಾರಂಭಿಸಿತು.ಇದನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆಯ ಸಿಬ್ಬಂದಿಯವರು ಹಾಡಿಯ ಜನರ ಜೊತೆಗೂಡಿ ಫೈರ್ ಲೈನ್ ನಿರ್ಮಿಸಿದರು. ನಾನು ಕಾಡಿನಲ್ಲಿಯೇ ಹುಟ್ಟಿ ಬೆಳೆದದ್ದು. ಇಷ್ಟು ವರ್ಷದಲ್ಲಿ ಇಂತಹ ಭೀಕರ ಪ್ರಮಾಣದಲ್ಲಿ ಕಾಳ್ಗಿಚ್ಚು ನೋಡಿಲ್ಲ.  ಸತತ ನಾಲ್ಕು ದಿನಗಳವರೆಗೆ ಹಗಲು ರಾತ್ರಿ ಕಷ್ಟಪಟ್ಟು ಇಂದು ಕಾಳ್ಗಿಚ್ಚನ್ನು ನಿಯಂತ್ರಿಸಲಾಗಿದೆ. ಇಂದು ಬೇರೆಲ್ಲಿಯೂ ಕಾಳ್ಗಿಚ್ಚು ಕಾಣಿಸಿಕೊಂಡಿಲ್ಲ.ಏಪ್ರಿಲ್ ಮಧ್ಯಂತರದವರೆಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ನಂತರ ಒಂದೆರಡು ಮಳೆ ಸುರಿಯುತ್ತದೆ. ಇದರಿಂದ ಕಾಡಿನಲ್ಲಿ ಹಸಿರು ಚಿಗುರುತ್ತದೆ. ನಂತರ ಯಾವುದೇ ಕಾಳ್ಗಿಚ್ಚಿನ ಭಯ ಇರುವುದಿಲ್ಲ ಎಂದರು.

ಕಾಳ್ಗಿಚ್ಚಿಗೆ ಏನು ಕಾರಣ ಎಂದು ಅವರನ್ನು ಪ್ರಶ್ನಿಸಿದಾಗ, ಉತ್ತರಿಸಲು ಕೊಂಚ ಹಿಂದಕ್ಕೆ ಸರಿದ ಅವರು, ಈ ಕಾಳ್ಗಿಚ್ಚು ಸಹಜವಾಗಿ ಹತ್ತಿದ್ದಲ್ಲ. ಮಾನವ ನಿರ್ಮಿತ ಎಂದಷ್ಟೇ ಹೇಳಬಲ್ಲೆ ಎಂದು ಮುಗುಮ್ಮೋಗಿ ಹೇಳಿದರು.

ಮನುಷ್ಯರು ಎಂದರೆ ಯಾರು? ಅರಣ್ಯದಲ್ಲಿ ಇರುವವರು ಗಿರಿಜನರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು. ಇವರಲ್ಲಿ ಯಾರು ಎನ್ನುವ ಪ್ರಶ್ನೆಗೆ ಅವರು ಉತ್ತರಿಸದೆ ನಿರ್ಗಮಿಸಿದರು. 

    

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.