ಸೋಮವಾರ, ಜೂನ್ 14, 2021
26 °C

ನಾಗರಿಕ ಸೇವಾ ಖಾತರಿ ಕಾಯ್ದೆ:ಗ್ರಾಹಕರ ಪಾಲಿಗೆ ಹೊಸ ಅಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಸದ್ಯದಲ್ಲಿಯೇ ಜಾರಿಗೆ ಬರಲಿರುವ ನಾಗರಿಕ ಸೇವಾ ಖಾತರಿ ಕಾಯ್ದೆಯು ಸರ್ಕಾರಿ ಸೇವೆಯ ಗುಣಮಟ್ಟವನ್ನು ಉತ್ತಮಪಡಿಸುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಇದರಿಂದ ಗ್ರಾಹಕರಿಗೆ ಸುಲಭ ಮತ್ತು ತ್ವರಿತ ಸೇವಾ ಸೌಲಭ್ಯ ದೊರೆಯುತ್ತದೆ ಎಂದು ತಹಶೀಲ್ದಾರ್ ಡಾ.ರವಿ ಎಂ ತಿರ್ಲಾಪುರ ತಿಳಿಸಿದರು.



ನಗರದ ಸ್ಫೂರ್ತಿ ಭವನದಲ್ಲಿ ಗುರುವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರಿಗೆ ಅನುಕೂಲವಾಗುವಂತಹ ಈ ಕಾಯ್ದೆಯು ಏಪ್ರಿಲ್ 2ರಿಂದ ರಾಜ್ಯದಾದ್ಯಂತ ಜಾರಿಗೊಳ್ಳಲಿದೆ. ಆಡಳಿತ ಕ್ಷೇತ್ರದಲ್ಲಿ ಹಾಗೂ ಸಾರ್ವಜನಿಕ ಸೇವಾ ವಿಚಾರಗಳಲ್ಲಿ ಈ ಕಾಯ್ದೆಯಿಂದ ಮಹತ್ವದ ಬದಲಾವಣೆ ಕಾಣಬಹುದಾಗಿದೆ ಎಂದು ತಿಳಿಸಿದರು.



ಕಂದಾಯ ಇಲಾಖೆ, ಆರ್ಥಿಕ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ನಗರಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಮತ್ತಿತರ ಹನ್ನೊಂದು ಇಲಾಖೆಗಳನ್ನು ಮತ್ತು ಈ ಇಲಾಖೆಗಳು ನೀಡುವ ವಿವಿಧ ಬಗೆಯ ಒಟ್ಟು 151 ಸೇವೆಗಳನ್ನು ಈ ಕಾನೂನಿನ ವ್ಯಾಪ್ತಿಯಲ್ಲಿ ತರಲಾಗಿದೆ.



ಸೇವೆಯನ್ನು ನಿಗದಿತ ಅವಧಿಯಲ್ಲಿ ಒದಗಿಸಲು ಸರ್ಕಾರಿ ನೌಕರರು ವಿಫಲವಾದಲ್ಲಿ ಅವರು ಗ್ರಾಹಕರಿಗೆ ಪ್ರತಿದಿನ ರೂ 20 ರಂತೆ 500 ರೂಪಾಯಿ ಗರಿಷ್ಠ ಮಿತಿಗೆ ಒಳಪಟ್ಟು ಪರಿಹಾರ ಶುಲ್ಕ ನೀಡಬೇಕಾಗುತ್ತದೆ ಎಂದು ಅವರು ಸರ್ಕಾರಿ ನೌಕರರಿಗೆ ಎಚ್ಚರಿಸಿದರು.



ಕಾನೂನು ಮಾಪನ ಇಲಾಖೆಯ ನಿರೀಕ್ಷಕ ನಾಗರಾಜು ಮಾತನಾಡಿ, ಅಳತೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಗ್ರಾಹಕರು ವಸ್ತುಗಳನ್ನು ಕೊಳ್ಳುವಾಗ ಅಳತೆ ಮತ್ತು ತೂಕವನ್ನು ಗಮನಿಸಬೇಕು. ಇದರಲ್ಲಿ ವ್ಯತ್ಯಾಸವಿದ್ದರೆ ಸಂಬಂದಪಟ್ಟ ಇಲಾಖೆಗಳ ಗಮನಕ್ಕೆ ತರಬೇಕು. ಇದರಿಂದ ಗ್ರಾಹಕರ ಹಕ್ಕುಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.



 ಆಹಾರ ಇಲಾಖೆಯ ಶಿರಸ್ತೇದಾರ್ ಅಫ್ಸರ್‌ಪಾಷಾ ಮಾತನಾಡಿ, ಗ್ರಾಹಕರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಈಗಾಗಲೇ ರಾಜ್ಯ ಗ್ರಾಹಕರ ರಕ್ಷಣಾ ಪರಿಷತ್ ಸ್ಥಾಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ ಸ್ಥಾಪಿಸಲಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಲಾಗುವುದು ಎಂದರು.



ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣಸ್ವಾಮಿ ಮಾತನಾಡಿದರು. ನಿಸರ್ಗ ಮಹಿಳಾ ಸ್ವಸಹಾಯ ಸಂಘದ ಲೀಲಾ, ಜ್ಯೋತಿ ಪ್ರಾರ್ಥಿಸಿದರು. ವೆಂಕಟೇಶ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.