ಸೋಮವಾರ, ಜುಲೈ 26, 2021
26 °C

ನಾಡು- ನುಡಿ ಅಭಿವೃದ್ಧಿಗೆ ಇಚ್ಛಾಶಕ್ತಿ ಮುಖ್ಯ

ರಾಹುಲ ಬೆಳಗಲಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಗಡಿ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕನ್ನಡದ ಕಾರ್ಯ ನಿರಂತರವಾಗಿ ನಡೆಯಲು ಸ್ಥಳೀಯರು ಆಸಕ್ತಿ ತೋರಬೇಕು. ನಾಡು- ನುಡಿಪರ ಸೌಕರ್ಯ ಅನುಷ್ಠಾನಕ್ಕೆ  ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹೀಗಾದಲ್ಲಿ ಮಾತ್ರ ಕನ್ನಡ ಅಭಿವೃದ್ಧಿಯಾಗುತ್ತದೆ. ಶಾಶ್ವತವಾಗಿ ಉಳಿಯುತ್ತದೆ’.ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದವರು ಹಿರಿಯ ಸಾಹಿತಿ ‘ಕೈಪು’ ಲಕ್ಷ್ಮಿನರಸಿಂಹ ಶಾಸ್ತ್ರಿ. ಮೇ 4, 5ರಂದು ನಡೆಯುವ ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಅವರು ಹಲವು ದಶಕಗಳಿಂದ ನಾಡು- ನುಡಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.ಸಮ್ಮೇಳನದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ನಾಡು- ನುಡಿಯ ಕುರಿತು ವಿವಿಧ ವಿಷಯಗಳನ್ನು ಹಂಚಿಕೊಂಡಿದ್ದಾರೆ.* ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಿಮಗೆ ಹೇಗೆ ಅನ್ನಿಸುತ್ತದೆ?

ತುಂಬ ಸಂತೋಷವಾಗಿದೆ. ಕನ್ನಡದ ಉಪನ್ಯಾಸಕನಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ನನಗೆ ಇಂಥ ಒಂದು ಅವಕಾಶ ಪ್ರಥಮ ಬಾರಿ ಸಿಕ್ಕಿದೆ. ಸಮ್ಮೇಳನದ ಅಧ್ಯಕ್ಷನಾಗಿ ನನ್ನ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ನಾಡು- ನುಡಿಗೆ ಸಂಬಂಧಿಸಿದಂತೆ ಆಗಬೇಕಿರುವ ಕಾರ್ಯಗಳ ಬಗ್ಗೆ ಹೇಳಲು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ತೆಲುಗು ಮತ್ತು ಇತರ ಭಾಷೆಗಳ ಪ್ರಭಾವ ಇರುವ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತಮ ಸಂಗತಿ.* ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಜಿಲ್ಲೆಯ ವಿಶೇಷ ಕೊಡುಗೆ ಏನು?

ವಿಚಾರವಾದಿ ಎಚ್.ನರಸಿಂಹಯ್ಯ, ಕವಿ ಮಂಡಿಕಲ್ ರಾಮಾಶಾಸ್ತ್ರಿ, ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಸೇರಿದಂತೆ ಹಲವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಈ ಅಂಶ ಬೆಳಕಿಗೆ ಬಂದಿಲ್ಲ. ಚಿಕ್ಕಬಳ್ಳಾಪುರ ಎಂದ ಕೂಡಲೇ ಬರಪೀಡಿತ ಬಯಲುಸೀಮೆ ಜಿಲ್ಲೆಯೆಂದೇ ಗುರುತಿಸಲಾಗುತ್ತದೆ ಹೊರತು ಇಲ್ಲಿನ ಸಾಂಸ್ಕೃತಿಕ ಸೊಗಡು ಯಾರೂ ಗಮನಿಸುವುದಿಲ್ಲ. ಜಿಲ್ಲೆಯ ಸಾಹಿತಿಗಳು, ಕವಿಗಳು, ಕಲಾವಿದರು ಹಲವು ಸಾಧನೆಗಳನ್ನು ಮಾಡಿದ್ದರೂ ಮಾನ್ಯತೆ ಸಿಕ್ಕಿಲ್ಲ.* ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಗೆ ಧಕ್ಕೆಯಾಗುವ ಸಾಧ್ಯತೆ ಇದೆಯೇ? ಇದ್ದರೆ, ಅಪಾಯದಿಂದ ಪಾರಾಗಲು ಅನುಸರಿಸಬೇಕಾದ ಮಾರ್ಗಗಳೇನು?

ತಮ್ಮ ಮಾತೃಭಾಷೆಯ ಮೇಲೆ ಕನ್ನಡಿಗರಿಗೆ ಪ್ರೀತಿ ಮತ್ತು ಅಭಿಮಾನ ಇರುವವರೆಗೆ ಕನ್ನಡಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ. ತೆಲುಗು, ತಮಿಳು ಸೇರಿದಂತೆ ಇತರ ಭಾಷೆಗಳ ಪ್ರಭಾವವಿದ್ದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡ ಮಾತನಾಡುವ ಮೂಲಕ ಭಾಷೆ ರಕ್ಷಿಸಬಹುದು.

ಇತರ ಭಾಷೆ ಬಗ್ಗೆ ಗೌರವವಿರಬೇಕು. ಆದರೆ ಕನ್ನಡದ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇರಬೇಕು.

ಜನಸಾಮಾನ್ಯರ ಮತ್ತು ದೈನಂದಿನ ಭಾಷೆಯಾಗಿ ಇರುವಷ್ಟು ದಿನ ಕನ್ನಡಕ್ಕೆ ಯಾವುದೇ ರೀತಿಯಲ್ಲೂ ಅಪಾಯವಿಲ್ಲ.* ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಕಾರ್ಯಗಳು ಆಗುತ್ತಿವೆಯೇ ? ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿರುವ ತೊಡಕುಗಳೇನು?


ಕೋಲಾರದಿಂದ ಬೇರ್ಪಟು ನಾಲ್ಕು ವರ್ಷಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿದೆ. ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಳಿಗಾಗಿ ಪ್ರತ್ಯೇಕ ಸಭಾಂಗಣಗಳಿಲ್ಲ, ಕನ್ನಡ ಭವನಗಳಿಲ್ಲ. ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ವೀಕ್ಷಿಸಲು ಸೂಕ್ತ ರೀತಿಯ ವೇದಿಕೆ ಮತ್ತು ವ್ಯವಸ್ಥೆಯಿಲ್ಲ.

 ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಅವಕಾಶಗಳಿಲ್ಲ. ಈ ಎಲ್ಲ ಸಮಸ್ಯೆ ಮತ್ತು ಕೊರತೆಗಳ ಬಗ್ಗೆ ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು, ಕನ್ನಡಪ್ರೇಮಿಗಳು ಸರ್ಕಾರದ ಗಮನಕ್ಕೆ ತರಬೇಕು. ಸಮಸ್ಯೆ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.* ಕನ್ನಡ ಭಾಷೆ ಉಳಿಸಿ, ಬೆಳೆಸಲು ಏನಾಗಬೇಕು?

ಕನ್ನಡಿಗರು ತಾವು ಮಾತನಾಡುವುದರ ಜೊತೆಗೆ ಪರಭಾಷಿಕರಿಗೂ ಕನ್ನಡ ಕಲಿಸಬೇಕು. ಕನ್ನಡ ಕಲಿಕೆ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.