ಗುರುವಾರ , ಜನವರಿ 23, 2020
28 °C
ಎರಡು ವರ್ಷದ ಬಳಿಕ ಕದ ತೆರೆದ ಶಾಲೆ

ನಾರ್ಯ ಬೈಲು ಶಾಲೆಗೆ `ಶುಭ ಶುಕ್ರವಾರ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾರ್ಯ ಬೈಲು ಶಾಲೆಗೆ `ಶುಭ ಶುಕ್ರವಾರ'

ಪುತ್ತೂರು: ಎರಡು  ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ಕಡಿಮೆಯಾದುದರಿಂದ ಮುಚ್ಚಿದ್ದ ಪುತ್ತೂರು ತಾಲ್ಲೂಕಿನ ಕಾಮಣ ಗ್ರಾಮದ ನಾರ್ಯಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ತೆರೆದಿದೆ. ಶುಕ್ರವಾರ ಶಾಲಾ ಪುನರಾರಂಭಗೊಂಡಿತು. ಈ ಸಂಬಂಧ ತಾಲ್ಲೂಕು ಮಟ್ಟದ ಕಾರ್ಯಕ್ರಮವೂ ನಡೆಯಿತು.ನಾರ್ಯಬೈಲು ಶಾಲೆ ಸಾವಿರಾರು ಜನರಿಗೆ ವಿದ್ಯಾದಾನ ನೀಡಿದ ತೀರಾ ಹಿಂದುಳಿದ ಪ್ರದೇಶದ ಶಾಲೆಯಾಗಿದೆ. ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಬಳಿಕ ಶಾಲೆ ಮುಚ್ಚಲಾಗಿತ್ತು.ಈಗ ಎಲ್ಲವೂ ಸುಗಮವಾಗಿದೆ. ಇಲಾಖೆಯ ಅಧಿಕಾರಿಗಳು ಮತ್ತು ಊರಿನ ವಿದ್ಯಾಭಿಮಾನಿಗಳ ಸತತ ಪ್ರಯತ್ನದಿಂದ ಬೀಗ ಜಡಿದಿದ್ದ ಶಾಲೆಯಲ್ಲಿ `ಶುಭ ಶುಕ್ರವಾರ'ದಂದು ಮಕ್ಕಳ ಕಲರವ ಕೇಳಿಸಿತು.ಬೆಳಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರ್ಯಬೈಲು ಚಾರ್ಚಾಕ ಗ್ರಾಮದ ಗಡಿಭಾಗ ಕುಮಾರಧಾರಾ ನದಿ ತಟದ ಸುಂದರ ವಾತಾವರಣದಲ್ಲಿ 1967ರಲ್ಲಿ ಪ್ರಾರಂಭವಾದ ಈ  ಕಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ನಾಗರಿಕರು ಅಪಾರ ಕೊಡುಗೆ ನೀಡಿದ್ದಾರೆ. ಸುಮಾರು 4.32 ಎಕ್ರೆ ಜಮೀನು ಹೊಂದಿರುವ ಶಾಲೆಯಲ್ಲಿ ಎಲ್ಲಾ ಸೌಕರ್ಯವಿದೆ. ಅಕ್ಷರ ದಾಸೋಹ ಸೇರಿದಂತೆ ಸುಸಜ್ಜಿತ ಮೂರು ಕಟ್ಟಡಗಳು, ವಿಸ್ತಾರವಾದ ಆಟದ ಮೈದಾನ, ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ, ತೆರೆದ ಬಾವಿ, ಪಂಪ್ ವ್ಯವಸ್ಥೆ, ಶಾಲೆಯ ತನಕ ಡಾಂಬರು ರಸ್ತೆಯ ಸೌಕರ್ಯವಿದೆ. ಇಂತಹ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿರುವ ಶಾಲೆಗೆ ಅದೇಕೋ ಮಕ್ಕಳು ಬರುವುದು ಕಡಿಮೆಯಾದಾಗ, ಇದ್ದ ಬೆರಳೆಣಿಯ ಮಕ್ಕಳು ಬೇರೆ ಶಾಲೆಗಳನ್ನು ಆಶ್ರಯಿಸಿದಾಗ ಅದನ್ನು ಅನಿವಾರ್ಯವಾಗಿ ಮಚ್ಚಲೇ ಬೇಕಾಯಿತು. ನಳನಳಿಸುತ್ತಿದ್ದ ಶಾಲೆ ಬಣಬಣವಾಗತೊಡಗಿತು. ಉತ್ತಮ ಪರಂಪರೆ ಹೊಂದಿರುವ ಶಾಲೆಯೊಂದು ಶಾಶ್ವತವಾಗಿ ಮುಚ್ಚಿ ಹೋಯಿತು ಎಂದು ಅದನ್ನು ಕಟ್ಟಿ ಬೆಳೆಸಿದ  ಹಿರಿಯರು ಮರುಗಿದ್ದರು. ಇಂಥವರಲ್ಲಿ ನಿವೃತ್ತ ಅಂಚೆ ಪಾಲಕ ಮುಂಡಾಳ ಸೀತಾರಾಮ ಗೌಡ ಪ್ರಮುಖರು. ಇವರು ಎರಡು ವರ್ಷದಲ್ಲಿ ಅವಿರತವಾಗಿ ಶ್ರಮಿಸಿ ಎಲ್ಲಾ ಅಧಿಕಾರಿಗಳು ಹಾಗೂ ಊರವರನ್ನು ಸಮೀಕರಣ ಮಾಡಿಕೊಂಡು ಶಾಲೆಯನ್ನು ಪುನರಾರಂಭಿಸಲು ಸಫಲರಾಗಿದ್ದಾರೆ. ಇದರಲ್ಲಿ ಸವಣೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ತಾರಾನಾಥ ಸವಣೂರು ಅವರ ಪಾತ್ರ ಬಹುದೊಡ್ಡದು. ಈಗಾಗಲೇ ಒಂದನೇ ತರಗತಿಗೆ ಏಳು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಉಳಿದ ತರಗತಿಗಳಿಗೆ ಇಲ್ಲಿಂದ ಬಿಟ್ಟು ಹೋದ ವಿದ್ಯಾರ್ಥಿಗಳನ್ನು ಮರು ಸೇರ್ಪಡೆ ಮಾಡಲಾಗಿದೆ. ಐದನೇ ತರಗತಿ ತನಕದ ವಿವಿಧ ತರಗತಿಗಳಿಗೆ 15 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಇನ್ನೂ 5 ಮಕ್ಕಳು ಸೇರ್ಪಡೆಯಾಗುವ ನಿರೀಕ್ಷೆಯಿದೆ.ಇಲ್ಲಿ ಮುಖ್ಯಗುರುಗಳಾಗಿದ್ದ ಕುಮಾರ್ ನಾಯರ್ ಅವರನ್ನು ಪುಣ್ಚಪ್ಪಾಡಿ ಶಾಲೆಗೆ ನಿಯೋಜಿಸಲಾಗಿತ್ತು. ಇವರನ್ನು ಮತ್ತೆ ಇಲ್ಲಿಗೆ ಇಲಾಖೆ ಕಾಯಂ ನಿಯೋಜನೆ ಮಾಡಿದೆ. ಊರವರು ಸೇರಿ ಒಬ್ಬರು ಗೌರವ ಶಿಕ್ಷಕರನ್ನೂ ನೇಮಿಸಿದ್ದಾರೆ.

ಪ್ರತಿಕ್ರಿಯಿಸಿ (+)