ಶುಕ್ರವಾರ, ಮೇ 7, 2021
20 °C

ನಿಮ್ಮ ಮಾತು ಸಂಗೀತವಾಗಿರಲಿ...

ಭರತ್ ಮತ್ತು ಶಾಲನ್ ಸವೂರ್ Updated:

ಅಕ್ಷರ ಗಾತ್ರ : | |

ವರ್ಷಗಳ ಹಿಂದೆ ನಮ್ಮ ತಂದೆ ಆಸ್ತಮಾದಿಂದ ನರಳುತ್ತಿದ್ದರು. ಹಿತೈಷಿಯೊಬ್ಬರು ಅವರನ್ನು `ಪಾನಿ ಮಹಾರಾಜ್~ ಎಂಬ ಸ್ವಾಮಿಯೊಬ್ಬರಿಗೆ ಪರಿಚಯಿಸಿದರು. ಪಾನಿ ಮಹಾರಾಜ್ ತಮ್ಮ ಬಳಿ ಬರುವ ರೋಗಿಗಳಿಗೆ ಮಂತ್ರಿಸಿದ ನೀರನ್ನು ಕೊಡುತ್ತಿದ್ದರು.ಪ್ರತಿನಿತ್ಯ ಈ ನೀರು ಕುಡಿಯುವಂತೆ ಸ್ವಾಮೀಜಿ ನಮ್ಮ ತಂದೆಗೆ ಸಲಹೆ ನೀಡಿದರು. ತಿಂಗಳು ಉರುಳಿದರೂ ತಂದೆಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ.

ಮಹಾರಾಜ್ ಉದ್ದೇಶ ಉದಾತ್ತವಾಗಿತ್ತು. ಆದರೆ, ಆ ಮಂತ್ರವನ್ನು ನಮ್ಮ ತಂದೆಯೇ ನಿತ್ಯ ಜಪಿಸಿದ್ದರೆ ಬಹುಶಃ ಗುಣಮುಖರಾಗುತ್ತಿದ್ದರು.ಕೆಲ ವರ್ಷಗಳ ಹಿಂದೆ ಜಪಾನ್ ವಿಜ್ಞಾನಿ ಮಸರು ಎಮೊಟೊ ಅದ್ಭುತ ಪ್ರಯೋಗವೊಂದನ್ನು ಮಾಡಿದ್ದರು. ನೀರಿನ ಮೇಲೆ ಮಾತುಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅವರು ಪ್ರಯೋಗದ ಮೂಲಕ ತೋರಿಸಿಕೊಟ್ಟಿದ್ದರು.ಧನ್ಯವಾದ, ಪ್ರೀತಿ, ನಾನು ಗುಣಮುಖನಾಗುತ್ತೇನೆ ಎಂಬ ಮಾತುಗಳನ್ನು ಹೇಳಿದಾಗ ನೀರಿನ ಅಣುಗಳು ಸುಂದರವಾದ, ಪರಿಪೂರ್ಣವಾದ ಹರಳಿನ ರೂಪ ತಾಳುವುದನ್ನು, ಓಂ ನಮಃ ಶಿವಾಯ ಎಂಬ ಮಂತ್ರ ಉಚ್ಚರಿಸಿದಾಗ ಈ ಅಣುಗಳು ಬ್ರಹ್ಮಾಂಡದ ವಿನ್ಯಾಸದಲ್ಲಿ ಹರಡಿಕೊಳ್ಳುವುದನ್ನು ಅವರು ಗಮನಿಸಿದ್ದರು.  ಹಾಗೆಯೇ ದೆವ್ವ, ದಡ್ಡ, `ನಾ ನಿನ್ನ ದ್ವೇಷಿಸುತ್ತೇನೆ~ ಎಂದಾಗ ನೀರಿನ ಅಣುಗಳು ಪ್ರತಿರೋಧ ತೋರುವಂತೆ ಅಡ್ಡಾದಿಡ್ಡಿಯಾಗಿ ಹರಡಿಕೊಳ್ಳುತ್ತಿದ್ದವು. ವಿಕಾರವಾಗಿ ಕಾಣುತ್ತಿದ್ದವು.ಸಮುದ್ರದ ಅಲೆಗಳ ಭರತ- ಇಳಿತ ಸುಮಧುರವಾದ ಶಬ್ದ ಕಂಪನಾಂಕ ಹುಟ್ಟುಹಾಕುತ್ತದೆ. ಈ ಲಯಬದ್ಧ ಅಲೆಗಳಿಗೆ ಮನಸ್ಸು, ದೇಹದ ನೋವುಗಳನ್ನು ಗುಣಪಡಿಸುವ ಶಕ್ತಿಯಿದೆ. ದಡಕ್ಕೆ ಬಂದು ಅಪ್ಪಳಿಸುವ ಅಲೆಗಳು ಮರಳಿನ ಮೇಲೆ ಈ ಕಂಪನಗಳ ಚಿತ್ತಾರ ಬರೆಯುತ್ತವೆ ಎಂದು ವಿಜ್ಞಾನಿಯೂ ಆಗಿದ್ದ ಸ್ಕಾಟ್ಲೆಂಡ್ ಸಂತನೊಬ್ಬ 15ನೇ ಶತಮಾನದಲ್ಲಿಯೇ ತೋರಿಸಿಕೊಟ್ಟಿದ್ದ.

ಬಹುತೇಕ ಚಿಕಿತ್ಸಕರು ಶಬ್ದ ನಮ್ಮ ತೇಜಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.ಪ್ರಾಣ ಶಕ್ತಿಯ ಹರಿವು, ಉಸಿರಾಟ, ದೇಹದೊಳಗಿನ ಅಣುಗಳು ಮತ್ತು ಜೀವಕೋಶಗಳ ಸ್ವರೂಪವನ್ನು ಅದು ಬದಲಿಸುತ್ತದೆ. ಮಾಂಡಕ್ಯ ಉಪನಿಷತ್ ಪ್ರಕಾರ ನಮ್ಮ ದೇಹ ಶಬ್ದದ ಕಂಪನದಿಂದಲೇ ಹುಟ್ಟಿದೆ. ನಮ್ಮ ಪಂಚೇಂದ್ರಿಯಗಳ ಪೈಕಿ ಶ್ರವಣ ಶಕ್ತಿ ಮೊದಲು ಜಾಗೃತಗೊಳ್ಳುವುದು (ಭ್ರೂಣಾವಸ್ಥೆಯಲ್ಲಿ) ಇದೇ ಕಾರಣಕ್ಕೆ ಇರಬಹುದು. ಹಾಗೆಯೇ ಸಾಯುತ್ತಿರುವಾಗ ಶ್ರವಣ ಶಕ್ತಿ ಕೊನೆಯದಾಗಿ ಹೊರಟುಹೋಗುತ್ತದೆ.ನೀರಿಗೆ ನೆನಪು ಹಾಗೂ ಬುದ್ಧಿಯಿದೆ ಎಂದು ಎಮೊಟೊ ಹೇಳುತ್ತಾರೆ. ನಮ್ಮ ದೇಹದ ಶೇ 70 ಭಾಗ ನೀರು ತುಂಬಿಕೊಂಡಿರುವುದರಿಂದ ನಾವು ಕೇವಲ ಸಕಾರಾತ್ಮಕ ಶಬ್ದಗಳನ್ನೇ ಹೇಳಿಕೊಳ್ಳಬೇಕು. ಉತ್ತಮ ವಿಚಾರಗಳನ್ನೇ ತುಂಬಿಕೊಳ್ಳಬೇಕು. ನಮ್ಮಳಗೆ ಸತತವಾಗಿ ಹರಿಯುತ್ತಿರುವ ಈ ನೀರಿನ ನದಿಯಲ್ಲಿ ಉನ್ನತ ವಿಚಾರಗಳೇ ಅಚ್ಚೊತ್ತಿರಬೇಕು.

 

ನಿಮ್ಮ ಮಕ್ಕಳು, ಸ್ನೇಹಿತರು, ಸಹೋದ್ಯೋಗಿಗಳನ್ನು ಹೊಗಳುತ್ತ ಇರಿ. ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿ. ಇದರಿಂದ ನಿಮಗೂ ಒಳ್ಳೆಯದಾಗುತ್ತದೆ. ಬೇರೆಯವರ ಕುರಿತು ಹೇಳಿದ ಒಳ್ಳೆಯ ಮಾತು ನಿಮ್ಮ ಮೇಲೆ ಮೊದಲು ಪರಿಣಾಮ ಬೀರುತ್ತದೆ ಎನ್ನುತ್ತಾರೆ ಎಮೊಟೊ.ನಿಮ್ಮ ಮಾತು ಸಂಗೀತವಾಗಿರಲಿ, ಎಲ್ಲವನ್ನೂ ಗುಣಪಡಿಸುವ ಮಂತ್ರವಾಗಲಿ. ಮೃದುವಾದ ಮಾತು, ಕ್ಷಮಿಸುವ ಮಾತು, ಪ್ರೀತಿಯ ಮಾತು ಮನಸು, ದೇಹದ ಗಾಯಗಳನ್ನು ಬೇಗನೇ ಗುಣಪಡಿಸುತ್ತದೆ. ನೀವು ಈ ತರಹ ಮಾತನಾಡಲು ಯಾವುದೇ ಕಸರತ್ತು ಮಾಡಬೇಕಿಲ್ಲ. ಎಲ್ಲರನ್ನೂ ಪ್ರೀತಿ, ಕರುಣೆಯಿಂದ ಮಾತನಾಡಿಸಿದರೆ ಸಾಕು.ದಾದಾ ವಾಸ್ವಾನಿ ಹೇಳುವಂತೆ ಯಾವಾಗಲೂ ಸತ್ಯವನ್ನೇ ಹೇಳಿ. ಆದರೆ, ನೀವು ಹೇಳುವ ಸತ್ಯ ಕಹಿ ಉಂಟು ಮಾಡದಿರಲಿ. ಮನಸ್ಸು ಒಡೆಯದಿರಲಿ. ನೀವು ಹೇಳುವ ಸತ್ಯದ ಮಾತು ಸಿಹಿ ತುಂಬಲಿ. ಸತ್ಯದ ಸತ್ಯ ಪ್ರೀತಿಯೇ ಆಗಿರುತ್ತದೆ. ಪ್ರೀತಿ ತುಂಬಿರದಿದ್ದಲ್ಲಿ ಸತ್ಯ ಸತ್ಯವೇ ಅಲ್ಲ. ಪ್ರೀತಿ ಅಂದರೆ ಸತ್ಯ. ಸತ್ಯ ಅಂದರೆ ಪ್ರೀತಿ.ಬ್ರಹ್ಮಕುಮಾರಿಯರು ಹೇಳುವಂತೆ ಮೃದುವಾಗಿ ಮಾತನಾಡಿ. ಸಿಹಿಯಾಗಿ ಮಾತನಾಡಿ. ಮೆಲ್ಲಗೆ ಮಾತನಾಡಿ. ಶಿಲುಬೆಗೇರಿದ ಕ್ರಿಸ್ತ ಮರಳಿದಾಗ ಬೆದರಿದ್ದ ತನ್ನ ಶಿಷ್ಯರಿಗೆ  `ಶಾಂತಿ ನಿಮ್ಮ ಜೊತೆಗೆ ಇರಲಿ~ ಎಂದು ಸಮಾಧಾನ ಹೇಳಿದ್ದ.ನಮ್ಮ ದಿನಚರಿಯನ್ನು ಈಗ ಅವಲೋಕಿಸೋಣ. ಕಷ್ಟವನ್ನು ನಿವಾರಿಸುವಂತೆ, ಸಂತಸ ಹೆಚ್ಚಿಸುವಂತೆ ನಾವು ಮಾತನಾಡುತ್ತೇವೆಯೇ? ನಮಗೆ ನೋವುಂಟು ಮಾಡಿದವರಿಗೆ ಚುಚ್ಚುವಂತೆ ಮಾತನಾಡುತ್ತೇವೆಯೇ? ನನಗೆ ನೋವಾಗಿದೆ ಎಂದು ರೊಚ್ಚಿನಿಂದ ಮಾತನಾಡುತ್ತೇವೆಯೇ ಅಥವಾ ಭಯಾನಕ ನೋವು ಅನುಭವಿಸಿದರೂ ತನಗೆ ನೋವುಂಟು ಮಾಡಿದವರನ್ನು ಅರ್ಥ ಮಾಡಿಕೊಂಡು ಕರುಣೆ ತೋರುವ ಕ್ರಿಸ್ತನಂತೆ ವರ್ತಿಸುತ್ತೇವೆಯೇ?ಅನಗತ್ಯ ಸಲಹೆ ಕೊಡುತ್ತ ಸ್ನೇಹಿತರ, ಕುಟುಂಬದವರ ತಲೆಚಿಟ್ಟು ಹಿಡಿಸುತ್ತೇವೆಯೇ ಅಥವಾ ಎಲ್ಲವನ್ನೂ ಸಹನೆಯಿಂದ ಕೇಳಿಸಿಕೊಳ್ಳುತ್ತ ಹೊಸ ಅರ್ಥ, ಹೊಸ ಭರವಸೆ ನೀಡುವ ಮಾತನಾಡುತ್ತೇವೆಯೇ? ಯೋಚನೆ ಮಾಡದೇ ಇರುವುದು ಹೇಗೆ ಎಂಬ ಬಗ್ಗೆ ನಾವೀಗ ಬಹಳಷ್ಟು ಯೋಚಿಸಬೇಕಿದೆ.ತತ್ವಜ್ಞಾನಿ ಸಾಕ್ರಟೀಸ್ ನೇತ್ಯಾತ್ಮಕ ವಿಚಾರಗಳು, ಟೀಕಿಸುವ ಮಾತುಗಳು ಎಷ್ಟೇ ಔಪಚಾರಿಕವಾಗಿದ್ದರೂ ನಮ್ಮ ಮನಸ್ಸು, ದೇಹವನ್ನು ಮಲಿನಗೊಳಿಸುತ್ತವೆ ಎಂದು ಅರಿತಿದ್ದ. ಒಂದು ದಿನ ಸಾಕ್ರಟೀಸ್ ಪರಿಚಯದವನೊಬ್ಬ `ನಿನ್ನ ಸ್ನೇಹಿತನ ಬಗ್ಗೆ ಈಗಷ್ಟೇ ಏನೋ ಕೇಳಿದೆ~ ಎಂದು ಆತನ ಗೆಳೆಯನ ಬಗ್ಗೆ ಹೇಳಲು ಆರಂಭಿಸಿದ. ಕೂಡಲೇ ಆತನ ಮಾತನ್ನು ಸಾಕ್ರಟೀಸ್ ತುಂಡರಿಸಿದ.`ನಿನ್ನ ಮಾತು ಮೂರು ಶೋಧಕದ ಮೂಲಕ ಸಾಗಲಿ. ನೀನು ಹೇಳುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ನಿನಗೆ ಅನಿಸುತ್ತದೆಯೇ~ ಎಂದು ಸಾಕ್ರಟೀಸ್ ಪ್ರಶ್ನಿಸಿದ. `ಇಲ್ಲ...ನಾನು ಈಗಷ್ಟೇ ಅದರ ಬಗ್ಗೆ ಕೇಳಿದೆ...~ ಎಂದು ತಡವರಿಸಿದ.`ಎರಡನೇ ಶೋಧಕ ಒಳ್ಳೆಯತನದ್ದು. ನೀನು ಆತನ ಬಗ್ಗೆ ಹೇಳುವುದರಿಂದ ಏನಾದರೂ ಒಳ್ಳೆಯದಾಗುತ್ತದೆಯೇ~ ಎಂದು ಸಾಕ್ರಟೀಸ್ ಕೇಳಿದ. `ಓ ಇಲ್ಲ, ಇಲ್ಲ...~ ಎಂದು ತಪ್ಪು ಮಾಡಿದವನಂತೆ ಮುಖ ಮಾಡಿದ ಆ ವ್ಯಕ್ತಿ.`ಮೂರನೇ ಶೋಧಕ ಪ್ರಯೋಜನದ್ದು. ಆತನ ಬಗ್ಗೆ ಹೇಳುವುದರಿಂದ ನನಗೆ ಏನಾದರೂ ಪ್ರಯೋಜನವಾಗುತ್ತದೆಯೇ~ ಎಂದು ಸಾಕ್ರಟೀಸ್ ಮತ್ತೆ ಪ್ರಶ್ನಿಸಿದ. `ಆ..ಇಲ್ಲ~ ಎಂದು ಆ ವ್ಯಕ್ತಿ ವಿಷಾದದಿಂದ ಹೇಳಿದ.`ನೀನು ಹೇಳುವುದರಲ್ಲಿ ಸತ್ಯವಿಲ್ಲ. ಅದರಿಂದ ಒಳ್ಳೆಯದಾಗುವುದಿಲ್ಲ ಅಥವಾ ಪ್ರಯೋಜನವೂ ಇಲ್ಲ~ ಎಂದಾದಲ್ಲಿ ಅದನ್ನು ಹೇಳುವದು ಏಕೆ ಎಂದು ಸಾಕ್ರಟೀಸ್ ಕೇಳಿದ. ಈ ವಿಚಾರ ಎಷ್ಟು ಉನ್ನತವಾಗಿದೆ. ಯಾವುದೋ ಮಾತು ಕೇವಲ ವದಂತಿ, ಊಹೆ ಎಂದಾದಲ್ಲಿ, ಮತ್ತೊಬ್ಬರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತದೆ ಎಂದಲ್ಲಿ, ಅದರಿಂದ ಪ್ರಯೋಜನವೂ ಇಲ್ಲ ಎಂದಾದಲ್ಲಿ ಅದರ ಕುರಿತು ಯೋಚಿಸುವುದು ಏಕೆ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.