ಗುರುವಾರ , ಜೂನ್ 24, 2021
23 °C

ನಿಮ್ಮ ವಿದಾಯದಿಂದ ಕ್ರಿಕೆಟ್ ಬಡವಾಗಿದೆ...

ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ನಿಮ್ಮ ವಿದಾಯದಿಂದ ಕ್ರಿಕೆಟ್ ಬಡವಾಗಿದೆ...

ಜಗತ್ತಿಗೊಬ್ಬರು ಈ ದ್ರಾವಿಡ್...!

`ಪ್ರೀತಿಯ ದ್ರಾವಿಡ್, ನಿಮ್ಮ ಆಟ ಅದೆಷ್ಟೊ ಬಾರಿ ನಮ್ಮ ಯಾವುದೊ ವೈಯಕ್ತಿಕ ದುಃಖವನ್ನು ದೂರ ಮಾಡಿದೆ. ನೀವು ಕ್ರಿಕೆಟ್‌ನ ದಂತಕತೆ. ಭಾರತ ಹಾಗೂ ಕರ್ನಾಟಕದ ಹೆಸರು ವಿಶ್ವ ಕ್ರಿಕೆಟ್‌ನಲ್ಲಿ ಮಿಂಚಲು ಕಾರಣವಾದ ವ್ಯಕ್ತಿ ನೀವು~

-ದೂರದ ಊರಿನಿಂದ ಬಂದಿದ್ದ ಕೆಲ ಅಭಿಮಾನಿಗಳು ರಾಹುಲ್ ವಿದಾಯ ಹೇಳುವ ಸಂದರ್ಭದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಮುಖ್ಯದ್ವಾರದ ಎದುರು ಈ ರೀತಿ ಬರಹವಿದ್ದ ಪೋಸ್ಟರ್ ಪ್ರದರ್ಶಿಸುತ್ತಾ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದರು. 
- ಕೆಲವರ ಯಶಸ್ಸಿಗೆ ಅದೃಷ್ಟ ಕಾರಣವಾಗಿರುತ್ತದೆ. ಆದರೆ ಈ  ದ್ರಾವಿಡ್ ಯಶಸ್ಸಿಗೆ ಪ್ರಯತ್ನ ಹಾಗೂ ಕಠಿಣ ಶ್ರಮ ಕಾರಣ:

-ನವಜೋತ್ ಸಿಂಗ್ ಸಿಧು.-ದ್ರಾವಿಡ್ ಭಾರತದ ಕ್ರಿಕೆಟ್‌ಗೆ ಚೀನಾದ ಮಹಾಗೋಡೆ ಇದ್ದಂತೆ: ಅಜಿತ್ ವಾಡೇಕರ್-ಪೀಲೆ, ಮರಡೋನ ವಿದಾಯ ಹೇಳಿದ್ದಾರೆ. ರೋಜರ್ ಫೆಡರರ್ ಕೂಡ ಮುಂದೊಂದು ದಿನ ಟೆನಿಸ್ ಬಿಟ್ಟು ಹೋಗಬೇಕು. ಈಗ ದ್ರಾವಿಡ್ ಆ ಕೆಲಸ ಮಾಡಿದ್ದಾರೆ ಅಷ್ಟೆ:         ಸೌರವ್ ಗಂಗೂಲಿ

ನಿಜ ದ್ರಾವಿಡ್, ನಿಮ್ಮ ಈ ವಿದಾಯದಿಂದ ಇಡೀ ಕ್ರಿಕೆಟ್ ಜಗತ್ತು ಬಡವಾಗಿದೆ. ಏನನ್ನೋ ಕಳೆದುಕೊಂಡ ಭಾವ ಆವರಿಸಿದೆ. ರಾಹುಲ್ ಈಗ ಟೆಸ್ಟ್‌ಗೆ ವಿದಾಯ ಹೇಳಿರಬಹುದು. ಆದರೆ ಈ ವಿಶ್ವದಲ್ಲಿ ಕ್ರಿಕೆಟ್ ಇರುವ ತನಕ ದ್ರಾವಿಡ್ ಹೆಸರು ಕೂಡ ಅದರ ಜೊತೆಗಿರುವುದರಲ್ಲಿ ಅನುಮಾನ ಇಲ್ಲ. `ಗೋಡೆಗಳು ವಿದಾಯ ಹೇಳುವುದಿಲ್ಲ. ಬದಲಾಗಿ ಅವು ಸ್ಮಾರಕಗಳಾಗುತ್ತವೆ~ ಎಂದು ಟ್ವಿಟರ್‌ನಲ್ಲಿ ಒಬ್ಬ ಅಭಿಮಾನಿ ಹೇಳಿದ ಮಾತು ಅರ್ಥಪೂರ್ಣವಾಗಿದೆ.ಒಬ್ಬ ಆಟಗಾರ 16 ವರ್ಷ ಕಾಲ ಆಡುತ್ತಿರುವಾಗ ಅವನ ಬಗ್ಗೆ ಹಲವು ಟೀಕೆಗಳು, ವಿವಾದಗಳು ಹುಟ್ಟಿಕೊಳ್ಳುವುದು ಸಹಜ. ಆದರೆ ದ್ರಾವಿಡ್ ಕ್ರಿಕೆಟ್ ಜೀವನ ಎಂಬುದು ಒಂದು ಕಪ್ಪುಚುಕ್ಕೆಯೂ ಇಲ್ಲದ ಬಿಳಿ ಹಾಳೆ. ಯಾವುದೇ ವಿವಾದಕ್ಕೆ ಒಳಗಾಗದ ಅವರದ್ದು ಸ್ವಾರ್ಥ ರಹಿತ ಆಟ. ಅಂಗಳದಲ್ಲಿನ ಅವರ ದಾಖಲೆ, ಸನ್ಮಾನವನ್ನು ಒಂದು ಕ್ಷಣ ಮರೆತುಬಿಡಿ. ಆ ದಾಖಲೆಗಳೆಲ್ಲಾ ಒಂದು ದಿನ ಅಳಿಸಿ ಹೋಗಬಹುದು ಅಥವಾ ಹಾಗೇ ಇರಬಹುದು. ಆದರೆ ಗುಣ ನಡತೆ ಸದಾ ಅಮರ.ದ್ರಾವಿಡ್ ಅವರಂತಹ ಆಟಗಾರರಿಂದಲೇ    ಕ್ರಿಕೆಟ್ ತುಂಬಾ ಇಷ್ಟವಾಗುತ್ತಾ ಹೋಗುತ್ತದೆ. ಕ್ರಿಕೆಟ್ ಪ್ರೀತಿಸಲು, ಮುದ್ದಾಡಲು, ಗೌರವಿಸಲು ಅವರಂತಹ ಒಬ್ಬ ಕ್ರಿಕೆಟಿಗನಿದ್ದರೆ ಸಾಕು. ವಿಶ್ವ ಕಂಡ ಶ್ರೇಷ್ಠ ಹಾಗೂ ಕಲಾತ್ಮಕ ಆಟಗಾರನಿಗೆ ಜನ್ಮ ನೀಡಿದ ಭಾರತವೇ ಪುಣ್ಯ. ದ್ರಾವಿಡ್ ಅವರಂತಹ ಆಟಗಾರರಿಂದ ಕ್ರಿಕೆಟ್‌ಗೆ ಮತ್ತಷ್ಟು ಹೊಳಪು ಸಿಕ್ಕಿರುವುದು ದಿಟ.ಅವರ ಆಟದ ಶೈಲಿಯೂ ಅದ್ಭುತ. ಅದೆಂಥಾ ಬೌಲರ್ ಆಗಿದ್ದರೂ ಆತನ ಉತ್ಸಾಹ ಅಡಗಿ ಹೋಗಲು ದ್ರಾವಿಡ್ ಅವರಂಥ ಒಬ್ಬ ಬ್ಯಾಟ್ಸ್‌ಮನ್ ಇದ್ದರೆ ಸಾಕು. ಸಚಿನ್, ಸೆಹ್ವಾಗ್ ಬ್ಯಾಟಿಂಗ್ ಮಾಡುವಾಗ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗಬಹುದು. ಆದರೆ ದ್ರಾವಿಡ್ ಕ್ರೀಸ್‌ನಲ್ಲಿದ್ದಾಗ ಏನೋ ಒಂಥರಾ ಭರವಸೆ. ಏಕೆಂದರೆ ಎದುರಾಳಿ ಬೌಲರ್‌ಗಳನ್ನು ದ್ರಾವಿಡ್‌ರಂತೆ ಸತಾಯಿಸಿದ ರೀತಿಯ ಬ್ಯಾಟ್ಸ್‌ಮನ್‌ಗಳು ವಿರಳ.  `ಒಬ್ಬ ವ್ಯಕ್ತಿ ಯಾವ ರೀತಿ ಶಿಖರವೇರಿದ ಎಂಬುದು ಯಶಸ್ಸು ಆಗಲಾರದು. ಕೆಳಗೆ ಬಿದ್ದಾಗ ಮತ್ತೆ ಮೇಲೆದ್ದು ನಿಲ್ಲುವುದಕ್ಕೆ ನಡೆಸುವ ಪ್ರಯತ್ನವಿದೆಯಲ್ಲ, ಅದು ನಿಜವಾದ ಯಶಸ್ಸು~ ಎನ್ನುವ ನುಡಿಯನ್ನು ದ್ರಾವಿಡ್ ಕ್ರಿಕೆಟ್ ಜೀವನಕ್ಕೆ ಅನ್ವಯಿಸಬಹುದು.

`ಕೆಎಸ್‌ಸಿಎ ಹಾಗೂ ಎನ್‌ಸಿಎಗೆ ತೆರಳಿ ಅಭ್ಯಾಸ ನಡೆಸುವುದು ನನ್ನ ದಿನಚರಿ ಆಗಿತ್ತು.

 

ಇದರಿಂದ ಹೊರಬರುವಂತೆ ನನ್ನ ಪತ್ನಿ ಒತ್ತಾಯಿಸುತ್ತಿದ್ದಳು. ಈಗ ನನ್ನ ದಿನಚರಿ ಬದಲಾಗಲಿದೆ. ಇನ್ನು ಮಾರುಕಟ್ಟೆಗೆ ಹೋಗಿ ತರಕಾರಿ ತರುವುದು ಹಾಗೂ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು~ ಎಂದು ದ್ರಾವಿಡ್ ಹೇಳಿದ ಮಾತು ತಮಾಷೆಯಿಂದ ಕೂಡಿರಬಹುದು. ಆದರೆ ಯಾವ ರೀತಿ ತಮ್ಮನ್ನು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು ಎಂಬುದಕ್ಕೆ ಈ ಹೇಳಿಕೆ ಸಾಕ್ಷಿ.ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಜೆ ದಿನ ಕೂಡ ಬಂದು ಅವರು ಅಭ್ಯಾಸ ನಡೆಸುತ್ತಿದ್ದರು. ಇದನ್ನು ಇಲ್ಲಿನ ಕಾರ್ಮಿಕರೇ ಹೇಳುತ್ತಾರೆ.`ಅವತ್ತು ಹಬ್ಬವಿತ್ತು ಸರ್. ಕ್ರೀಡಾಂಗಣದಲ್ಲಿ ಇಬ್ಬರು ಕೆಲಸಗಾರರನ್ನು ಬಿಟ್ಟರೆ ಮತ್ತೊಬ್ಬರಿರಲಿಲ್ಲ. ಆದರೆ ದ್ರಾವಿಡ್ ಬಂದು ದಿನವಿಡೀ ಅಭ್ಯಾಸ ನಡೆಸಿದರು. ಇದು ಒಂದು ದಿನದ ವಿಷಯವಲ್ಲ. ಕಿರಿಯ ಆಟಗಾರರಗಿಂತ ಮೊದಲು ಅಂಗಳಕ್ಕೆ ಬರುತ್ತಿದ್ದವರು ರಾಹುಲ್~ ಎಂದು ನುಡಿಯುತ್ತಾರೆ ಕ್ರೀಡಾಂಗಣದ ಪಿಚ್ ನಿರ್ವಹಣಾ ಸಿಬ್ಬಂದಿ.ತೆಂಡೂಲ್ಕರ್ ಅವರಿಗಿರುವಂತೆ ಒಂದು ನಿರ್ದಿಷ್ಟ ಕರ್ತವ್ಯ ಇದ್ದಿದ್ದರೆ ದ್ರಾವಿಡ್ ಇನ್ನಷ್ಟು ಯಶಸ್ಸು ಗಳಿಸಬಹುದಿತ್ತೇನೊ? ಏಕೆಂದರೆ ತಂಡದ ಆಡಳಿತ ಸೂಚಿಸಿದಾಗಲೆಲ್ಲಾ ಅವರು ವಿವಿಧ ಕ್ರಮಾಂಕದಲ್ಲಿ ಬಂದು ಬ್ಯಾಟ್ ಮಾಡಿದ್ದಿದೆ. ತಂಡದಲ್ಲಿ ಯಾರಾದರೂ ಗಾಯಗೊಂಡಾಗ ನಾಯಕನಿಗೆ ನೆನಪಾಗುತ್ತ್ದ್ದಿದದ್ದು ದ್ರಾವಿಡ್. ಆರಂಭಿಕ ಬ್ಯಾಟ್ಸ್‌ಮನ್ ಆಗಿಯೂ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸುತ್ತಿದ್ದರು. ಒತ್ತಡದ ಸನ್ನಿವೇಶದಲ್ಲಿ ಕೆಳ ಕ್ರಮಾಂಕದಲ್ಲೂ ಬ್ಯಾಟ್ ಮಾಡಲು ಬಂದ ಉದಾಹರಣೆ ಇದೆ.ತಮ್ಮ ಎಂದಿನ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮಾನಸಿಕವಾಗಿ ಸಜ್ಜಾಗಿರುತ್ತಿದ್ದ ಅವರಿಗೆ ಇದು ಕೊಂಚ ಕಿರಿಕಿರಿ ಎನಿಸುತಿತ್ತು. ಆದರೆ ತಂಡದ ಸಮಸ್ಯೆಗೆ ಸ್ಪಂದಿಸುತ್ತಿದ್ದರು. ವೇಗದ ಬೌಲರ್‌ಗಳಿಗೆ ನೆರವಾಗುವ ವಿದೇಶದ ಪಿಚ್‌ಗಳಲ್ಲಿ ತಂಡವನ್ನು ಮುಜುಗರದಿಂದ ಪಾರು ಮಾಡಲು ರಾಹುಲ್ ಬೇಕಾಗುತಿತ್ತು.ಹಾಗೇ, ಫೈನಲ್ ತಲುಪಿದ್ದ 2003ರ ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರು. ವಿದಾಯ ಹೇಳಿದ ಸಂದರ್ಭದಲ್ಲಿ ಹಾಜರಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಕೂಡ ಈ ಮಾತನ್ನು ಒಪ್ಪಿಕೊಂಡರು.

ಗ್ಲೆನ್ ಮೆಕ್‌ಗ್ರಾ, ಶೇನ್ ವಾರ್ನ್, ಮ್ಯಾಥ್ಯು ಹೇಡನ್, ಆ್ಯಡಮ್ ಗಿಲ್‌ಕ್ರಿಸ್ಟ್ ವಿದಾಯ ಹೇಳುವವರೆಗೆ ಅವರ ಪ್ರಾಮುಖ್ಯತೆಯೇ ಆಸ್ಟ್ರೇಲಿಯಾಕ್ಕೆ ಗೊತ್ತಾಗಿರಲಿಲ್ಲ.

 

ಆದರೆ ಆಮೇಲೆ ಆಸ್ಟ್ರೇಲಿಯಾ ತಂಡದ ಬಣ್ಣ ಬಯಲಾಗುತ್ತಾ ಹೋಯಿತು. ಹಾಗೇ, ಭಾರತ ತಂಡದ ತ್ರಿಮೂರ್ತಿಗಳ ಪೈಕಿ ದ್ರಾವಿಡ್ ಹೊರ ನಡೆದಿದ್ದಾರೆ. ಇನ್ನು ಲಕ್ಷ್ಮಣ್, ಸಚಿನ್ ಸರದಿ. ಆದರೆ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರರು ಕಾಣುತ್ತಿಲ್ಲ.ಅದೇನೇ ಇರಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ರಾವಿಡ್ ಅವರನ್ನು ಮತ್ತೆ ಕಾಣಲು ಸಾಧ್ಯವಿಲ್ಲ. ಮತ್ತೆ ರಾಹುಲ್ ಅವರಂಥ ಆಟಗಾರ ಬರುವುದು ಯಾವಾಗ? ಮತ್ತೊಂದು ಗೋಡೆಯನ್ನು ನೋಡುವುದು ಯಾವಾಗ...?`ಸಂಗೀತಗಾರರು ವಿದಾಯ ಹೇಳುವುದಿಲ್ಲ. ಬದಲಾಗಿ ತಮ್ಮಳಗಿನ ಸಂಗೀತದ ಸಾಮರ್ಥ್ಯ ಕುಂದಿದಾಗ ಹಾಡುವುದನ್ನು ನಿಲ್ಲಿಸಿಬಿಡುತ್ತಾರೆ~ ಎಂಬ ಮಾತನ್ನು ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಲೇಬೇಕು. 

 

10 ಸಾವಿರ ಇಟ್ಟಿಗೆಗಳ ಗೋಡೆ...

ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ದಾಟಿದ್ದ ದ್ರಾವಿಡ್ ಸಾಧನೆಯ ನೆನಪಿಗಾಗಿ 2008ರಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ 10 ಸಾವಿರ ಇಟ್ಟಿಗೆಗಳಿಂದ ನಿರ್ಮಿಸಿದ ಗೋಡೆ ಈಗ ಮೌನವಾಗಿ ನಿಂತಿದೆ. ಇದನ್ನು ಅಂದು ಅನಾವರಣಗೊಳಿಸಿದ್ದ ಸಚಿನ್, `ದ್ರಾವಿಡ್ ಬರೀ ಕ್ರಿಕೆಟ್ ಆಟಗಾರನಲ್ಲ; ಅವರೊಬ್ಬ ಯುವ ಕ್ರಿಕೆಟಿಗರ ಗುರು ಕೂಡ. ಅವರ ಆ ತಾಳ್ಮೆಯ ಆಟಕ್ಕೆ ನನ್ನ ಸಲಾಂ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.ವಿದಾಯ ಹೇಳಲು ದ್ರಾವಿಡ್ ಶುಕ್ರವಾರ ಕ್ರೀಡಾಂಗಣಕ್ಕೆ ಬಂದ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಈ ಗೋಡೆಗೆ `13,288~ ಎಂದು ಬರೆದಿದ್ದ ಬೋರ್ಡ್ ತೂಗು ಹಾಕಿದರು. ಇದೇ ಕೊನೆ. ಇನ್ನು ಈ ಬೋರ್ಡ್‌ಗೆ ಮತ್ತೊಂದು ರನ್ ಸೇರುವುದಿಲ್ಲ.

 ಸ್ಥಿರತೆ, ಕೌಶಲ ಹಾಗೂ ಬದ್ಧತೆ ಎಂದು ಅದರ ಮೇಲೆ ಬರೆಯಲಾಗಿದೆ. ಇದು ದ್ರಾವಿಡ್ ಆಟದ ಶೈಲಿಗೆ ಸಾಕ್ಷಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.