ಸೋಮವಾರ, ಸೆಪ್ಟೆಂಬರ್ 16, 2019
22 °C

ನಿರ್ಲಕ್ಷ್ಯಕ್ಕೊಳಗಾದ ಮಾಂಪುರ ಕೆರೆ

Published:
Updated:

ಸಿಂಧನೂರು: ತೋಟಗಾರಿಕಾ, ಒಣ ಬೇಸಾಯದ ಬೆಳೆಗಳನ್ನು ಬೆಳೆಯಲು ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಜಲಮೂಲವಾದ ತಾಲ್ಲೂಕಿನ ಮಾಂಪುರ ಗ್ರಾಮದ ಬೃಹತ್ ಕೆರೆ ನಿರ್ಲಕ್ಷ್ಯಕ್ಕೊಳಗಾಗಿದೆ. ಮಳೆಗಾಲದಲ್ಲಿ ಸಂಗ್ರಹವಾಗುವ ಯಥೇಚ್ಛ ನೀರನ್ನು ಕಾಲುವೆ ಮೂಲಕ ಜಮೀನುಗಳಿಗೆ ಹರಿಸಿಕೊಂಡು ನೆಮ್ಮದಿ ಕಂಡುಕೊಂಡಿರುವ ರೈತರು, ನೀರಾವರಿ ಇಲಾಖೆ ಕೆರೆಯ ಬಗ್ಗೆ ತಾಳಿರುವ ನಿಷ್ಕಾಳಜಿಯಿಂದ ಬೇಸರಪಡುವಂತಾಗಿದೆ.ತಾಲ್ಲೂಕಿನಲ್ಲೇ ಮಾಂಪುರ ಕೆರೆ ದೊಡ್ಡದು. ಈ ಕೆರೆಗೆ ಕಾಲುವೆ ನಿರ್ಮಿಸಿ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ. 1977ರಲ್ಲಿ 97ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಕನಕನಾಲಾ ಯೋಜನೆಯಿಂದ ಬೊಮ್ಮನಾಳ, ರತ್ನಾಪುರ, ಗುಂಡಾ,ಸಂಕನಾಳ, ಹೊಗರನಾಳ, ಗುಡಿಹಾಳ, ಹತ್ತಿಗುಡ್ಡ, ಗದ್ರಟಗಿ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಯುತ್ತದೆ. 17,630 ಕ್ಯೂಸೆಕ್ ಸಂಗ್ರಹಣಾ ಸಾಮರ್ಥ್ಯದ ಕೆರೆಯಿಂದ ಅನೇಕ ಬಡ ಕುಟುಂಬಗಳು ಅನ್ನ ಕಂಡುಕೊಂಡಿವೆ. ಸುಮಾರು 15 ಕಿ.ಮೀವರೆಗೆ ಕೆರೆಯ ನೀರು ಉಪಕಾಲುವೆಯ ಮೂಲಕ ಹರಿಯುವುದರಿಂದ 5100 ಎಕರೆ ಪ್ರದೇಶದಲ್ಲಿ ರೈತರು ಅನೇಕ ಬೆಳೆಗಳನ್ನು ಬೆಳೆಯುತ್ತಾರೆ. ಒಣ ಬೇಸಾಯವನ್ನೇ ನೆಚ್ಚಿಕೊಂಡಿರುವ ಇಲ್ಲಿನವರಿಗೆ ಈ ಕೆರೆಯೇ ದೈವ.ಹೆಚ್ಚಿದ ಬತ್ತದ ಬೆಳೆ:
ಸಜ್ಜೆ, ಜೋಳ, ಸೂರ್ಯಕಾಂತಿ ಇನ್ನಿತರ ತೋಟಗಾರಿಕಾ ಬೆಳೆಗಳನ್ನಷ್ಟೆ ಬೆಳೆಯಬೇಕೆಂಬ ನಿಯಮವ್ದ್ದಿದರೂ ಮೇಲ್ಬಾಗದ ಬೊಮ್ಮನಾಳ, ಮಾಂಪುರ, ರತ್ನಾಪುರ, ಗುಂಡಾ, ಸಂಕನಾಳ ಗ್ರಾಮಗಳ ರೈತರು ಹೆಚ್ಚು ಭತ್ತದ ಬೆಳೆ ಬೆಳೆಯುತ್ತಿರುವುದರಿಂದ ಕೆಳ ಭಾಗದ ರೈತರ ಜಮೀನುಗಳಿಗೆ ನೀರಿನ ಕೊರತೆ ಉಂಟಾಗುವುದು ಸಾಮಾನ್ಯ. ನೀರಿನ ಅಭಾವದಿಂದಾಗಿ ಮೇಲ್ಬಾಗ ಮತ್ತು ಕೆಳ ಭಾಗದ ರೈತರ ನಡುವೆ ಸಣ್ಣಪುಟ್ಟ ಜಗಳಗಳು ನಡೆಯುತ್ತಲೆ ಇರುತ್ತವೆ.ನಿರ್ವಹಣೆ ಕೊರತೆ: ನೀರಾವರಿ ಇಲಾಖೆಯ ತುರ್ವಿಹಾಳ ಉಪ ವಿಭಾಗದ ವ್ಯಾಪ್ತಿಗೆ ಬರುವ ಕೆರೆಯ ಸುತ್ತಮುತ್ತ ಆಗುವ ಹೋಗುಗಳನ್ನು ನೋಡಿಕೊಳ್ಳಲು ಕಾವಲುಗಾರರಿಗೆ ಶೆಡ್ ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಯಾವ ಕಾವಲುಗಾರರು ಬರುವುದಿಲ್ಲ. ಪಕ್ಕದಲ್ಲೇ ಸಮುದಾಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹತ್ತಾರು ಗ್ರಾಮಗಳ ರೈತರಿಗೆ ಜೀವನಾಡಿಯಾಗಿರುವ ಕೆರೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತಾಳಲಾಗಿದೆ ಎನ್ನುವುದು ರೈತರ ಆರೋಪ. ಅಪರೂಪಕ್ಕೆಂಬಂತೆ ನೀರಾವರಿ ಇಲಾಖೆ ಅಧಿಕಾರಿಗಳು ಬಂದು ಹೋಗುತ್ತಾರೆ ರೈತರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ. ಮೇಲ್ಭಾಗದ ರೈತರು ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆದರೂ ಆಕ್ಷೇಪಿಸದೇ ಸುಮ್ಮನಿರುತ್ತಾರೆ ಎಂದು ಕೆಳ ಭಾಗದ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.ಪ್ರವಾಸಿ ಕೇಂದ್ರ: ಕೆರೆಯ ಆಸುಪಾಸು ಎಲ್ಲೆಂದರಲ್ಲಿ ಗಿಡಮರಗಳು, ಹಚ್ಚ ಹಸಿರು ಗುಡ್ಡ. ಮಳೆಗಾಲದಲ್ಲಿ ಕೆರೆ ತುಂಬಿ ತುಳುಕುತ್ತಿದ್ದರೆ ನದಿಯಂತೆ ಭಾಸವಾಗುತ್ತದೆ. ಇಲ್ಲಿನ ವಾತಾವರಣ ನೋಡಗರನ್ನು ಆಕರ್ಷಿಸುತ್ತದೆ. ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಕಳೆ ಕಟ್ಟಿದೆ. ಮಕರ ಸಂಕ್ರಮಣ ಮತ್ತಿತರ ಹಬ್ಬ ಹರಿದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಕೆರೆಯಲ್ಲಿ ಮಿಂದೇಳುತ್ತಾರೆ. ಉತ್ತಮ ಪ್ರವಾಸಿತಾಣವಾಗಲು ಎಲ್ಲ ಅರ್ಹತೆಗಳು ಮಾಂಪುರ ಕೆರೆಗಿವೆ ಎಂದು ಗ್ರಾಮಸ್ಥರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಕೆರೆಯ ಆಜುಬಾಜು ಇರುವ ಗಿಡಗಂಟೆಗಳನ್ನು ಕಡಿಯುವುದು ಈಚೆಗೆ ವಿಪರೀತ ನಡೆಯುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದರಿಂದ ಮರಗಳ ಮಾರಣಹೋಮವೇ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಇಲ್ಲಿನವರ ಒತ್ತಾಯ. ಹತ್ತಾರು ಗ್ರಾಮಗಳ ರೈತರಿಗೆ ಆಸರೆಯಾಗಿರುವ ಕೆರೆಯ ಹೂಳು ತೆಗೆಸುವುದು, ಸುತ್ತಲೂ ಗಿಡಮರಗಳ ಬೆಳೆಸುವುದು, ಕಾವಲುಗಾರರನ್ನು ನೇಮಿಸಿ, ಕೆಳಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕೆನ್ನುವುದು ರೈತರ ಒಕ್ಕೊರಲಿನಿ ಧ್ವನಿ. 

Post Comments (+)