ಜಪಾನಿನ ಹಿಂದಿನ ಸಾಮ್ರಾಟ ಹಿರೊಹಿಟೊ ತಾವು ದೇವರಲ್ಲ ಎಂದು ಹೇಳಿಕೊಂಡರು. ಎಲ್ಲ ರಾಜಕೀಯ ಅಧಿಕಾರಗಳನ್ನು ಅವರಿಂದ ಕಿತ್ತುಕೊಳ್ಳಲಾಯಿತು. ಆದರೂ ಜಪಾನ್ ತನ್ನ ರಾಷ್ಟ್ರೀಯ ಅಸ್ಮಿತೆಯ ಕೇಂದ್ರ ಸ್ಥಾನದಲ್ಲಿ ಸಾಮ್ರಾಟನನ್ನು ಕೂರಿಸಿದೆ. ಆತ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತಿಲ್ಲ ಎನ್ನುತ್ತಿದೆ.

ಜಪಾನಿನ ಈಗಿನ ಸಾಮ್ರಾಟ ಅಕಿಹಿಟೊ ತಮಗೆ ನಿವೃತ್ತಿ ಪಡೆಯಲು ಬಿಡಿ ಎಂದು ದೇಶದ ಜನರನ್ನು ಕೇಳುತ್ತಿದ್ದಾರೆ. ಅಕಿಹಿಟೊಗೆ ಈಗ 82 ವರ್ಷ ವಯಸ್ಸು. ಅವರಿಗೆ ಕ್ಯಾನ್ಸರ್ ಇತ್ತು, ಅದಕ್ಕಾಗಿ ಶಸ್ತ್ರಚಿಕಿತ್ಸೆ ಕೂಡ ಆಗಿದೆ. ಹಾಗಾಗಿ, ಜಪಾನಿನ ಮಟ್ಟಿಗೆ ಅನನ್ಯ ಎನ್ನಬಹುದಾದ ಕ್ಷಣವೊಂದರಲ್ಲಿ ಟಿ.ವಿ. ಪರದೆಯಲ್ಲಿ ಕಾಣಿಸಿಕೊಂಡ ಅಕಿಹಿಟೊ, ತಮ್ಮ ಸ್ಥಾನವನ್ನು ಮಗನಿಗೆ ಹಸ್ತಾಂತರಿಸಲು ಅವಕಾಶವಾಗುವಂತೆ ಸಂಸತ್ತು ಕಾನೂನು ಬದಲಾಯಿಸಬೇಕು ಎಂಬ ಇಚ್ಛೆಯನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದರು.

ಆದರೆ ಇಚ್ಛೆಯು ಒಂದು ಭಾರವನ್ನೂ ಹೊತ್ತುಕೊಂಡಿದೆ. ಎಲ್ಲ ಸಮಸ್ಯೆಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬಹುದು ಎನ್ನುವ ಯುದ್ಧೋತ್ತರ ಜಪಾನ್ ದೇಶವನ್ನು ಸಾಮ್ರಾಟ ಪ್ರತಿನಿಧಿಸುತ್ತಾನೆ. ಈಗಿನ ಸರ್ಕಾರ ಮಿಲಿಟರಿ ಮೇಲಿನ ನಿಯಂತ್ರಣವನ್ನು ಕಡಿಮೆ ಮಾಡಲು ಇಚ್ಛಿಸುತ್ತಿದೆ. ಪ್ರಧಾನಿ ಶಿಂಜೊ ಅಬೆ ರಾಜಕೀಯವಾಗಿ ಶಕ್ತಿಶಾಲಿಯಾಗಿದ್ದಾರೆ. ಅಕಿಹಿಟೊ ಅಧಿಕಾರದಿಂದ ಕೆಳಗಿಳಿದರೆ, ಇತಿಹಾಸವನ್ನು ಪುನಃ ಬರೆಯುವ, ಹಳೆಯ ಪಾಠಗಳನ್ನು ಮರೆಯುವ ಸರ್ಕಾರದ ಅಭಿಯಾನಕ್ಕೆ ತಡೆಯೊಡ್ಡುವ ಶಕ್ತಿಯೊಂದನ್ನು ಜಪಾನ್ ಕಳೆದುಕೊಳ್ಳಲಿದೆಯೇ?
ಬಲಪ್ರಯೋಗಕ್ಕಿಂತ ಮಾತುಕತೆಯೇ ಲೇಸು ಎನ್ನುವ ರಾಜಕುಮಾರ ನರುಹಿಟೊ, ತಮ್ಮ ತಂದೆಗೆ ಸಮಾನವಾದ ಖ್ಯಾತಿ ಹೊಂದಿದ್ದಾರೆಯೇ?

ಜಪಾನ್ನಲ್ಲಿ ರಾಜನಿದ್ದರೂ, ಅಲ್ಲಿ ಸಂವಿಧಾನ ಇದೆ. ಅದು ಉದಾರವಾದಿ ಪ್ರಜಾತಂತ್ರವನ್ನು ಅಳವಡಿಸಿಕೊಂಡಿದೆ. ಪರಂಪರೆಯನ್ನು ನೆಚ್ಚಿಕೊಂಡಿರುವ ತೀರಾ ಸಂಪ್ರದಾಯವಾದಿ ರಾಷ್ಟ್ರ ಜಪಾನ್. ಇಲ್ಲಿನ ರಾಜಪ್ರಭುತ್ವ ಜಗತ್ತಿನಲ್ಲಿ ಅತ್ಯಂತ ಹಳೆಯದು. ಅಕಿಹಿಟೊ ಅವರ ಕುಟುಂಬ ಸಿಂಹಾಸನವನ್ನು ಅಂದಾಜು 2,700 ವರ್ಷಗಳಿಂದ ತನ್ನ ಬಳಿ ಇರಿಸಿಕೊಂಡಿದೆ. ಅಕಿಹಿಟೊ ರಾಜೀನಾಮೆ ನೀಡಿದರೆ, ಎರಡನೆಯ ವಿಶ್ವಯುದ್ಧದ ನಂತರ ರಾಜಮನೆತನದಲ್ಲಿ ಅತಿದೊಡ್ಡ ಬದಲಾವಣೆ ಆದಂತಾಗುತ್ತದೆ.

ಜಪಾನ್ನಲ್ಲಿ ಬದಲಾವಣೆಗಳು ಸುಲಭವಾಗಿ ಆಗುವುದಿಲ್ಲ. ಈಗ ಸರ್ಕಾರ ಬಿಕ್ಕಟ್ಟಿನಲ್ಲಿ ಸಿಲುಕಿದೆ. ರಾಜನಿಗೆ ಅಧಿಕಾರ ತ್ಯಜಿಸಲು ಅವಕಾಶ ನೀಡಿದರೂ, ನೀಡದಿದ್ದರೂ ಸರ್ಕಾರ ಟೀಕೆಗೆ ಗುರಿಯಾಗುತ್ತದೆ.

ರಾಜಮನೆತನಕ್ಕೆ ರಾಜಕೀಯ ತಟ್ಟದಂತೆ ಕಾಯ್ದುಕೊಳ್ಳುವ ನಿಲುವನ್ನು ಹಾಗೂ ತಮ್ಮ ತಂದೆಯ ನಿಶ್ಚಲ ಮನೋಭಾವವನ್ನು 56 ವರ್ಷ ವಯಸ್ಸಿನ ನರುಹಿಟೊ ಹೊಂದಿದ್ದಾರೆ. ಶಾಂತಿಪ್ರಿಯತೆಯನ್ನು ಪ್ರತಿಪಾದಿಸುವ, 1947ರಲ್ಲಿ ಅಮೆರಿಕದ ಆಕ್ರಮಣಕಾರರು ಬರೆದ ಸಂವಿಧಾನವನ್ನು ನರುಹಿಟೊ ಅವರು ಮತ್ತೆ ಮತ್ತೆ ಕೊಂಡಾಡಿದ್ದಾರೆ.
ಈಗ ಎದುರಾಗಿರುವುದು ಸೂಕ್ಷ್ಮ ಪರಿಸ್ಥಿತಿ. ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದ ಕಾನೂನನ್ನು ಸಂಸತ್ತು ತಿದ್ದಿದರೆ, ರಾಜಮನೆತನದ ವ್ಯವಹಾರಗಳಲ್ಲಿ ಇನ್ನೊಬ್ಬರ ಪ್ರಭಾವದ ಬಗ್ಗೆ ಜನರಲ್ಲಿನ ಕಳವಳ ಹೆಚ್ಚಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

‘ರಾಜಮನೆತನ ದುರ್ಬಲ ಆಗಬಾರದು. ಅಲ್ಲಿ ರಾಜಕೀಯ ಪ್ರಭಾವಕ್ಕೆ ಅವಕಾಶ ಇರಬಾರದು ಎಂಬ ವಿಚಾರದಲ್ಲಿ ಎಡ–ಬಲ ಎರಡೂ ಕಡೆಯ ಜನ ಎಚ್ಚರಿಕೆಯಿಂದ ಇರುತ್ತಾರೆ’ ಎಂದು ವಿದೇಶ ವ್ಯವಹಾರಗಳ ಮಂಡಳಿಯ ಶಿಯ್ಲ ಎ. ಸ್ಮಿತ್ ಹೇಳುತ್ತಾರೆ.

ಅಷ್ಟೇ ಅಲ್ಲ, ರಾಜನ ಇಚ್ಛೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವಿಳಂಬ ಧೋರಣೆ ಅನುಸರಿಸುವುದೂ ಜನರ ಕೋಪಕ್ಕೆ ಕಾರಣವಾಗುತ್ತದೆ.

‘ಈ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚು. ಹಾಗಾಗಿ, ರಾಜನ ಇಚ್ಛೆಯ ಬಗ್ಗೆ ಸಹಾನುಭೂತಿ ಹೊಂದಿರುವವರ ಪ್ರಮಾಣ ಹೆಚ್ಚಿರುತ್ತದೆ’ ಎನ್ನುವುದು ರಾಜಕೀಯ ವ್ಯವಹಾರಗಳ ಬಗ್ಗೆ ಸಲಹೆ ನೀಡುವ ಸಂಸ್ಥೆ ಟೆನಿಯೊ ಇಂಟೆಲಿಜೆನ್ಸ್ನ ಟೊಬಿಯಾಸ್ ಹ್ಯಾರಿಸ್ ಅವರ ಹೇಳಿಕೆ.

ಅಧಿಕಾರ ತ್ಯಜಿಸುವ ಅಕಿಹಿಟೊ ಅವರ ಆಸೆಯನ್ನು ಬಹುಪಾಲು ಜನ ಬೆಂಬಲಿಸುತ್ತಿದ್ದಾರೆ ಎಂಬುದು ಜಪಾನಿನ ಸುದ್ದಿ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಿಂದ ಗೊತ್ತಾಗಿದೆ. ರಾಜಮನೆತನಕ್ಕೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತಂದು, ಅಕಿಹಿಟೊ ಅವರಿಗೆ ಅಧಿಕಾರ ತ್ಯಜಿಸಲು ಅವಕಾಶ ಕೊಡಬೇಕು ಎನ್ನುವುದು ಶೇಕಡ 85ರಷ್ಟು ಜನರ ಅನಿಸಿಕೆ.
‘ನಾವು ರಾಜನ ಬಗ್ಗೆ ಗೌರವದಿಂದ ಮಾತನಾಡುತ್ತೇವೆ. ಆದರೆ ಬಹುಶಃ ರಾಜನನ್ನು ಗುಲಾಮನ ತರಹ ನಡೆಸಿಕೊಳ್ಳುತ್ತೇವೆ. ರಾಜ ನಮ್ಮ ಸಂಕೇತ. ಆದರೆ, ವ್ಯಕ್ತಿಯಾಗಿ ನಾವು ಆತನ ಹಕ್ಕುಗಳನ್ನು ಗೌರವಿಸುವುದಿಲ್ಲ. ನಾವು ರಾಜನಿಗೆ ಇರುವ ಮಾನವ ಹಕ್ಕುಗಳನ್ನು ಗುರುತಿಸಬೇಕು’ ಎಂದು ಸೌಂದರ್ಯವರ್ಧಕ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಡಾಯ್ಸುಕೆ ಕೊಡಾಕಾ ಹೇಳುತ್ತಾರೆ.

ಕಾನೂನಿಗೆ ತಿದ್ದುಪಡಿ ತರುವುದರಿಂದ ಮಹಿಳೆಯನ್ನು ಸಾಮ್ರಾಟನ ಸ್ಥಾನಕ್ಕೆ ತರುವ ವಿವಾದಿತ ವಿಷಯ ಮುನ್ನೆಲೆಗೆ ಬರುವ ಸಾಧ್ಯತೆಯೂ ಇದೆ. ಸಿಂಹಾಸನ ಏರುವ ಅಧಿಕಾರ ಇರುವುದು ಪುರುಷರಿಗೆ ಮಾತ್ರ ಎಂದು ಕಾನೂನಿನಲ್ಲಿ ಇರುವ ಉಲ್ಲೇಖದ ಬಗ್ಗೆ ಕಾಲಕ್ರಮೇಣ ವಿವಾದ ಹೆಚ್ಚುತ್ತಿದೆ. ಸಾಮ್ರಾಟನ ಸ್ಥಾನಕ್ಕೆ ಮಹಿಳೆಯನ್ನು ನೇಮಿಸಲು ಅವಕಾಶ ಕೊಡಬೇಕೇ ಎಂಬ ಬಗ್ಗೆ ದಶಕದ ಹಿಂದೆ ಚರ್ಚೆ ನಡೆದಿತ್ತು. ಆಗ ಶಿಂಜೊ ಅಬೆ ಅವರ ಪಕ್ಷದ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದ್ದರು.

ನರುಹಿಟೊ ಅವರಿಗೆ ಪುತ್ರಿ ಇದ್ದಾಳೆ. ನರುಹಿಟೊ ಸಹೋದರನಿಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. 2006ರಲ್ಲಿ ಯುವರಾಜ ಹಿಸಾಹಿಟೊ ಜನಿಸಿದ ನಂತರ, ಸಾಮ್ರಾಟನ ಸ್ಥಾನಕ್ಕೆ ಮಹಿಳೆಯನ್ನು ತರುವ ಚರ್ಚೆ ತಣ್ಣಗಾಯಿತು.
‘ನನ್ನ ದೇಹದ ತಾಕತ್ತು ಕುಗ್ಗುತ್ತಿದೆ. ಈವರೆಗೆ ಮಾಡಿಕೊಂಡು ಬಂದಂತೆ, ರಾಷ್ಟ್ರದ ಕೆಲಸವನ್ನು ಮಾಡಿಕೊಂಡು ಹೋಗಲು ನನಗೆ ಕಷ್ಟವಾಗುತ್ತಿದೆ’ ಎಂದು ಅಕಿಹಿಟೊ ಅವರು ಟಿ.ವಿ. ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ವೇಳೆ ಹೇಳಿದ್ದಾರೆ.

ಇದಕ್ಕೆ ಚುಟುಕಾಗಿ ಪ್ರತಿಕ್ರಿಯೆ ನೀಡಿದ ಅಬೆ, ಕಾನೂನು ಬದಲಾಯಿಸಲು ತಮ್ಮ ಸರ್ಕಾರ ಮುಕ್ತವಾಗಿದೆ ಎಂದರು. ಆದರೆ ಅದರ ಬಗ್ಗೆ ನಿರ್ದಿಷ್ಟ ಭರವಸೆ ನೀಡಲಿಲ್ಲ. ‘ಸಾಮ್ರಾಟನ ವಯಸ್ಸು, ಮಾಡಬೇಕಿರುವ ಕೆಲಸ, ಅವರ ಆತಂಕಗಳನ್ನು ಪರಿಗಣಿಸಿ ನಾವೇನು ಮಾಡಬಹುದು ಎಂಬುದನ್ನು ಜಾಗರೂಕತೆಯಿಂದ ಆಲೋಚಿಸಬೇಕು’ ಎಂದು ಅಬೆ ಹೇಳಿದರು.

ಜಪಾನಿನಲ್ಲಿ ಮಹಾರಾಜರನ್ನು ಆಧಾರವಾಗಿಟ್ಟುಕೊಂಡು ಕಾಲವನ್ನು ಅಳೆಯುತ್ತಾರೆ. ರಾಜ್ಯಭಾರ ಆಧರಿಸಿ ಜಪಾನಿನ ವಿಶಿಷ್ಟವಾದ ಪಂಚಾಂಗ ರೂಪುಗೊಂಡಿದೆ. 2016ನೇ ಇಸವಿಯನ್ನು ಆ ಪಂಚಾಂಗವು ಅಕಿಹಿಟೊ ಅವರ 28ನೇ ಆಡಳಿತ ವರ್ಷ ಎನ್ನುತ್ತದೆ. ಅಕಿಹಿಟೊ ನಂತರ ಅವರ ಪುತ್ರ ಸಿಂಹಾಸನ ಏರಿದಾಗ, ಆ ಪಂಚಾಂಗದಲ್ಲಿ ‘ಒಂದನೆಯ ಇಸವಿ’ ಎಂದು ನಮೂದಾಗುತ್ತದೆ.

ಅಕಿಹಿಟೊ ಅವರ ತಂದೆ ಹಿರೊಹಿಟೊ 1989ರಲ್ಲಿ– ಸಿಂಹಾಸನ ಏರಿದ 64ನೇ ವರ್ಷದಲ್ಲಿ ಮೃತಪಟ್ಟರು. ಈ ಸಂದರ್ಭದಲ್ಲಿ ಶೀತಲ ಸಮರ ಮತ್ತು ಜಪಾನಿನ ಅರ್ಥ ವ್ಯವಸ್ಥೆಯ ಬೆಳವಣಿಗೆ ಅಂತ್ಯಗೊಳ್ಳುತ್ತಿತ್ತು.

ಎರಡನೆಯ ವಿಶ್ವಯುದ್ಧದ ನಂತರ ಹಿರೊಹಿಟೊ ಅವರು ತಾನು ದೇವರಲ್ಲ ಎಂದು ಘೋಷಿಸಿಕೊಂಡರು. ಆದರೆ ರಾಜ ದೈವವಿದ್ದಂತೆ ಎಂದು ಅಲ್ಲಿನ ಸರ್ಕಾರ ದಶಕಗಳ ಕಾಲ ಪ್ರಚಾರ ನಡೆಸಿತ್ತು, ಅಲ್ಲಿನ ಸಂಪ್ರದಾಯದಲ್ಲಿ ಇಂಥದ್ದೊಂದು ನಂಬಿಕೆ ಬೆಳೆದಿತ್ತು. ರಾಜನ ಘೋಷಣೆಯಿಂದ ಜನ ಅಚ್ಚರಿಪಟ್ಟರು. ದೇಶದ ಹೊಸ ಸಂವಿಧಾನವು ರಾಜಮನೆತನವನ್ನು ಆಲಂಕಾರಿಕವಾಗಿ ಮಾತ್ರ ಉಳಿಸಿಕೊಂಡಿತು.

‘ಐತಿಹಾಸಿಕವಾಗಿ ನೋಡಿದರೆ, ಜಪಾನಿನ ಸಾಮ್ರಾಟರು ನಿವೃತ್ತಿ ಪಡೆದುಕೊಳ್ಳುವುದು ಸಹಜ ಪ್ರಕ್ರಿಯೆ’ ಎನ್ನುತ್ತಾರೆ ತಕೆಶಿ ಹರಾ. ಇವರು ಜಪಾನ್ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜಮನೆತನದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಜಪಾನಿನ ಅರ್ಧದಷ್ಟು ಸಂಖ್ಯೆಯ ಸಾಮ್ರಾಟರು ಸಿಂಹಾಸನ ತ್ಯಜಿಸಿ, ಬೌದ್ಧ ವಿಹಾರಗಳಲ್ಲಿ ನಿವೃತ್ತ ಜೀವನ ಕಳೆದಿದ್ದಾರೆ. 19ನೆಯ ಶತಮಾನದಲ್ಲಿ ಜಪಾನಿನ ಆಡಳಿತಗಾರರು, ರಾಜನನ್ನು ಆರಾಧಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ ನಂತರ, ಸಿಂಹಾಸನ ತ್ಯಜಿಸುವುದು ಕಷ್ಟಕರವಾಯಿತು.

2003ರಲ್ಲಿ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆ, 2012ರಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾದರೂ ಅಕಿಹಿಟೊ ಅವರು ತೀರಾ ಒತ್ತಡದ ದಿನಚರಿ ಅನುಸರಿಸುತ್ತಾರೆ. ಅಕಿಹಿಟೊ ಮತ್ತು ಅವರ ಪತ್ನಿ ಮಿಷಿಕೊ ಅವರು ಜೊತೆಯಾಗಿ, ನೈಸರ್ಗಿಕ ವಿಕೋಪಗಳಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ, ಗಾಯಗೊಂಡವರಿಗೆ ಸಮಾಧಾನ ಹೇಳುತ್ತಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಅಕಿಹಿಟೊ ಅವರು ಹಲವು ಬಾರಿ ದೇಶದ ಸಂವಿಧಾನ ಮತ್ತು ರಾಜಪ್ರಭುತ್ವದ ಸಾಂಕೇತಿಕ ಸ್ಥಾನವನ್ನು ಉಲ್ಲೇಖಿಸಿದರು. ಬದಲಾಗುತ್ತಿರುವ ಜಗತ್ತು ಮತ್ತು ದೇಶದಲ್ಲಿ ರಾಜಮನೆತನದ ಭವಿಷ್ಯವನ್ನು ಕಾಪಾಡಬೇಕಿದೆ ಎಂದು ಹೇಳಿದರು.

ಸಿಂಹಾಸನ ತ್ಯಜಿಸುವ ಬಗ್ಗೆ ಸ್ಪಷ್ಟ ಪದ ಬಳಸದ ಅವರು, ಅದರ ಪರವಾಗಿ ವಾದ ಮಂಡಿಸಿದರು. ಸಾಮ್ರಾಟನಿಗೆ ತೀರಾ ಅನಾರೋಗ್ಯ ಕಾಣಿಸಿಕೊಂಡರೆ, ಆತನ ಮಗ ಪ್ರತಿನಿಧಿಯ ರೀತಿ ಕೆಲಸ ಮಾಡಲು ಈಗಿನ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ‘ನನ್ನ ಪಾಲಿನ ಕರ್ತವ್ಯಗಳನ್ನು ನಿಭಾಯಿಸಲು ಆಗುತ್ತಿಲ್ಲ. ಕೊನೆಯ ಉಸಿರಿನವರೆಗೂ ರಾಜನಾಗಿರಲು ಬಯಸಲಾರೆ’ ಎಂದು ಅಕಿಹಿಟೊ ಹೇಳಿದರು.

ವ್ಯಕ್ತಿತ್ವ ಮತ್ತು ಆದ್ಯತೆಗಳ ವಿಚಾರದಲ್ಲಿ ನರುಹಿಟೊ ಅವರು ತಮ್ಮ ತಂದೆಯ ನಿಲುವನ್ನೇ ಹೊಂದಿದ್ದಾರೆ ಎನ್ನಲಾಗುತ್ತಿದೆ. ಅಕಿಹಿಟೊ ಅವರು ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿದರು. ಇದು ಅವರ ದೊಡ್ಡ ಸಾಧನೆ. 1964ರಲ್ಲಿ ಜಪಾನ್ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಿದಾಗ ಅಕಿಹಿಟೊ ಅವರು ಅಂಗವಿಕಲರ ಒಲಿಂಪಿಕ್ಸ್ನ ಪ್ರಧಾನ ಪೋಷಕರಾದರು. ಆ ಕಾಲಘಟ್ಟದಲ್ಲಿ ಜಪಾನಿನಲ್ಲಿ ಅಂಗವಿಕಲರನ್ನು ಕೆಟ್ಟದ್ದಾಗಿ ಕಾಣಲಾಗುತ್ತಿತ್ತು.

ಅಕಿಹಿಟೊ ಮತ್ತು ಅವರ ಪತ್ನಿ ಮಿಷಿಕೊ ಅವರು ತಮ್ಮ ಜೀವನದ ಬಹುಪಾಲು ಸಮಯವನ್ನು ಜಪಾನಿನ ದುರ್ಬಲರ ಏಳಿಗೆಗಾಗಿ ಕಳೆದಿದ್ದಾರೆ. ಇವರಿಬ್ಬರೂ ಜಪಾನಿನ ಸಾಕ್ಷಿಪ್ರಜ್ಞೆ ಇದ್ದಂತೆ ಎನ್ನಲಾಗದು. ಆದರೆ ದುರ್ಬಲರ ವಿಚಾರ ಪ್ರಸ್ತಾಪವಾದಾಗಲೆಲ್ಲ ಇವರು ನೆನಪಾಗುತ್ತಾರೆ ಎನ್ನುತ್ತಾರೆ ಜಪಾನಿನ ವಿದ್ವಾಂಸರೊಬ್ಬರು.

-ದಿ ನ್ಯೂಯಾರ್ಕ್ ಟೈಮ್ಸ್
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.