ಭಾನುವಾರ, ಜೂಲೈ 5, 2020
24 °C

ನೀರಿನ ಖಾಸಗೀಕರಣಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಿನ ಖಾಸಗೀಕರಣಕ್ಕೆ ವಿರೋಧ

ದೊಡ್ಡಬಳ್ಳಾಪುರ: ಪ್ರಕೃತಿದತ್ತವಾದ ನೀರನ್ನು ಸರ್ಕಾರ ನಿರ್ವಹಣೆ ಮಾಡಬಹುದೇ ಹೊರತು ಪರಭಾರೆ ಮಾಡುವ ಹಕ್ಕು ಇಲ್ಲ ಎಂದು ಸರ್ವೋಚ್ಫ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಜನಾಂದೋಲನ ಕರ್ನಾಟಕದ ಸ್ವಯಂ ಸೇವಾ ಸಂಸ್ಥೆಯ ಎಂ.ಆರ್.ಪ್ರಭಾಕರ್ ತಿಳಿಸಿದರು. ದೊಡ್ಡಬಳ್ಳಾಪುರ ಅಭಿವೃದ್ದಿ ಸಮಿತಿ ಮತ್ತು ಲಯನ್ಸ್ ಕ್ಲಬ್ ವತಿಯಿಂದ ನಡೆದ  ವಿಶ್ವ ಜಲ ದಿನಾಚರಣೆ  ಕಾರ್ಯಕ್ರಮದಲ್ಲಿ ’ನೀರಿನ ಖಾಸಗೀಕರಣ ಮತ್ತು ದುಷ್ಪರಿಣಾಮ ಹಾಗೂ ಬಡ ಜನರ ಮೇಲಾಗುವ ಆರ್ಥಿಕ ಪರಿಣಾಮಗಳು’ ಕುರಿತು ಮಾತನಾಡಿದರು.

 

ಕಳೆದ 10 ರ್ವಗಳಿಂದಲೂ ಕುಡಿಯುವ ನೀರಿನ ಯೋಜನೆ ನೆಪದಲ್ಲಿ ರಾಜ್ಯದ ಕೆರೆ, ಕುಂಟೆ, ನದಿಗಳನ್ನು ನುಂಗುತ್ತಿರುವ ಬಗ್ಗೆ ಸಾರ್ವಜನಿಕರು ಸಕಾಲದಲ್ಲಿ ಎಚ್ಚರಗೊಳ್ಳಬೇಕಾಗಿದೆ ಎಂದರು.

ರಾಜ್ಯ ಸರ್ಕಾರ ಸತತವಾಗಿ ಒಂದಲ್ಲಾ ಒಂದು ನೀರಿನ ಖಾಸಗೀಕರಣದ ಯೋಜನೆಗೆ ಸಹಿ ಮಾಡುತ್ತಲೆ ಬಂದಿದೆ. ನೀರಿನ ವಾಣಿಜ್ಯೀಕರಣವನ್ನು ಬಹುರಾಷ್ಟ್ರೀಯ ಕಂಪೆನಿಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ಸರ್ಕಾರಗಳು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲಕರವಾಗುವ ಕಾನೂನುಗಳನ್ನು ಮತ್ತು ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಡುತ್ತಿರುವುದು ಎಲ್ಲರೂ ತಿಳಿದ ವಿಷಯ ಎಂದರು. 

 

ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎನ್.ನಾಗರಾಜ್ ಮಾತನಾಡಿ, 1992ರಲ್ಲಿ ಬ್ರಿಜಿಲ್ ದೇಶದ ರಿಯೋ-ಡಿಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆ ಪರಿಸರ ಸಮ್ಮೇಳನದಲ್ಲಿ ನಿರ್ಮಲ ಜಲಮೂಲಗಳ ರಕ್ಷಣೆಗಾಗಿ ತೆಗೆದುಕೊಂಡ ನಿರ್ಣಯದಂತೆ 1993ರ ಮಾರ್ಚ್ 22 ರಿಂದ ಪ್ರತಿ ವರ್ಷವೂ ‘ವಿಶ್ವ ಜಲ ದಿನ’ ಆಚರಿಸಲಾಗುತ್ತಿದೆ. ದೇಶದ ಅಭಿವೃದ್ಧಿ, ಜನರ ಆರೋಗ್ಯ ಹಾಗೂ ಪರಿಸರದ ವಿಷಯದಲ್ಲಿ ಜಲ ನೈರ್ಮಲ್ಯ ಅವಿಭಾಜ್ಯ ಅಂಗವಾಗಿದೆ. ಪ್ರಕೃತಿಯು ಯಾವುದೇ ರೀತಿಯಾ ನಿರೀಕ್ಷೆಯಿಲ್ಲದೆ ಭೂಮಿ ಮೇಲೆ ಜೀವಿಸುವಂತಹ ಎಲ್ಲಾ ಜೀವ ಜಂತುಗಳ ಆಶ್ರಯವಾಗಿದೆ ಎಂದರು.  ಸ್ವರಾಜ್ ಸಂಸ್ಥೆ ಉಪನಿರ್ದೇಶಕ ಮೋಹನ್ ಪಾಲ್, ದೊಡ್ಡಬಳ್ಳಾಪುರ ಅಭಿವೃದ್ದಿ ಸಮಿತಿ ಸಂಚಾಲಕರಾದ ಡಿ.ಆರ್. ನಟರಾಜ್,ಎನ್.ಸಿ.ಲಕ್ಷ್ಮಿ, ನಗರಸಭೆ ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ ಡಿ. ರಾಮೇಗೌಡ  ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.