ಮಂಗಳವಾರ, ಮೇ 18, 2021
30 °C

ನೀರಿಲ್ಲದ ಸ್ಥಿತಿಯಲ್ಲಿ ನಡೆದಿದೆ ಪಾಠ

ಕೆ.ನರಸಿಂಹಮೂರ್ತಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಮನಮೋಹಕ ರಮ್ಯ ತಾಣದ ನಡುವೆ, ಬಂಡೆಗಳ ತಪ್ಪಲಲ್ಲಿ ತಂಪಾಗಿರುವಂತೆ ಕಾಣುವ ಈ ಶಾಲೆಯಲ್ಲಿ ಕುಡಿಯುವ ನೀರಿಲ್ಲ. ಅಸಲು ನೀರಿನ ಸೌಕರ್ಯವೇ ಇಲ್ಲದಿರುವುದರಿಂದ ಬಿಸಿಯೂಟ ತಯಾರಿಸುವುದೂ ಕಷ್ಟಕರವಾಗಿದೆ. ಶೌಚಾಲಯಗಳಿದ್ದರೂ ಅವುಗಳನ್ನು ಬಳಸುವ ಮಾತು ದೂರವೇ ಉಳಿದಿದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಾವು ದಿನವೂ ತರುವ ಬಾಟಲಿ ನೀರು ಸಾಕಾಗದೆ ಬಾಯಾರಿದ ಸ್ಥಿತಿಯಲ್ಲೇ ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶಾಲೆ ಪುನರಾರಂಭ ಎಂಬುದು ಅವರಿಗೆ ಹೇಳಿಕೊಳ್ಳುವ ಸಂಭ್ರಮವನ್ನೇನೂ ತಂದಿಲ್ಲ. ಈ ಸನ್ನಿವೇಶ ನೋಡಲು ನಗರದ ಹೊರವಲಯದಲ್ಲಿರುವ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರಳ್ಳಿಗೆ ಬರಬೇಕು. ತೇರಳ್ಳಿ ಬೆಟ್ಟದ ಬಂಡೆಗಳ ಕೆಳಗೆ ಇಳಿಜಾರು ಪ್ರದೇಶದಲ್ಲಿರುವ  ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ದೂರದಿಂದ ನೋಡಿದರೆ ಕಣ್ಮನ ಸೆಳೆಯುತ್ತದೆ.

ಹತ್ತಿರ ಹೋಗಿ ನಿಂತರೆ ಮಾತ್ರ ಸಮಸ್ಯೆಗಳ ಸರಮಾಲೆ ಧರಿಸಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾಣಿಸುತ್ತಾರೆ. ಶಾಲೆಗೆ ಭದ್ರ ಕಾಂಪೌಂಡ್ ಇಲ್ಲದಿರುವುದರಿಂದ ಕಳ್ಳತನದ ಭಯ ಸದಾ ಕಾಲ ಇದ್ದೇ ಇರುತ್ತದೆ. ಮೈದಾನವೂ ಇಲ್ಲದಿರುವುದರಿಂದ ಕ್ರೀಡಾ ಚಟುವಟಿಕೆಯೂ ನಡೆಯುತ್ತಿಲ್ಲ. ಬಿಸಿಯೂಟ ತಯಾರಿಸುವ ಸಲುವಾಗಿ ಗ್ರಾಮದಿಂದ ದಿನವೂ ಕನಿಷ್ಠ 25 ರೂಪಾಯಿ ಕೊಟ್ಟು ನಾಲ್ಕು ಬಿಂದಿಗೆ ನೀರನ್ನು ಶಿಕ್ಷಕರು ಖರೀದಿಸುತ್ತಿದ್ದಾರೆ.

ತಿಂಗಳಿಗೆ ನೀರಿಗೆಂದು ಶಾಲೆಯು 800 ರೂಪಾಯಿ ಖರ್ಚು ಮಾಡುತ್ತಿದೆ. ಅಡುಗೆಗೆ ಕೊಳ್ಳುವ ನೀರನ್ನು ಬಿಟ್ಟರೆ ಶಾಲೆಗೆ ಬೇರೆ ನೀರಿನ ಸೌಕರ್ಯವೇ ಇಲ್ಲ. ಕುಡಿಯುವ ನೀರನ್ನು ಪ್ರತಿಯೊಬ್ಬರೂ ಮನೆಗಳಿಂದ ತರುತ್ತಾರೆ. ಶೌಚಾಲಯ ಬಳಕೆ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಶಾಲೆಯ ಶಿಕ್ಷಕರು.ಶಾಲೆಗೆ ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕೆಲ ದಿನ ಬಿಸಿಯೂಟ ತಯಾರಿಸುವುದನ್ನು ಕೈಬಿಟ್ಟಿದ್ದೆವು. ಆದರೆ ಕೂಡಲೇ ಶಾಲೆಗೆ ಭೇಟಿ ನೀಡಿದ ಇಲಾಖೆ ಅಧಿಕಾರಿಗಳು ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಈ ಕಡೆಗೆ ಬರಲೇ ಇಲ್ಲ. ಮತ್ತೊಂದು ಶೈಕ್ಷಣಿಕ ವರ್ಷವೂ ಆರಂಭವಾಗಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಇಲ್ಲಿನ ಶಿಕ್ಷಕರು.ಶಾಲೆಗೆ ಸೋಮವಾರ ಭೇಟಿ ನೀಡಿದ್ದ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಶಿಕ್ಷಕರಾದ ವಿ.ಆರ್.ರಮೇಶ್‌ಕುಮಾರ್, ಕೆ.ಎನ್.ರಮೇಶ್, ನೀರಿನ ಸೌಕರ್ಯ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಶಿಕ್ಷಣಾಧಿಕಾರಿಗಳಿಗೆ, ಗ್ರಾಮ ಪಂಚಾಯಿತಿಗೆ, ತಾಲ್ಲೂಕು ಪಂಚಾಯಿತಿಗೆ ಮತ್ತು ಜಿಲ್ಲಾ ಪಂಚಾಯಿತಿಗೆ ಹಲ ಮನವಿಗಳನ್ನು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಕೊಠಡಿ ಕೊರತೆ: ಅಂತರಗಂಗೆ ಬೆಟ್ಟ ಸಾಲುಗಳ ನಡುವೆ ಉಸಿರಾಡುತ್ತಿರುವ ತೇರಳ್ಳಿ, ಶಿವಗಂಗೆ, ಕುಪ್ಪಹಳ್ಳಿ, ಪಾಪರಾಜನಹಳ್ಳಿ, ಕೆಂಚೇಗೌಡನಹಳ್ಳಿ, ಹೊಸಳ್ಳಿಯ ಮಕ್ಕಳೇ ಈ ಶಾಲೆ ವಿದ್ಯಾರ್ಥಿಗಳು. ಆದರೆ ಈ ಮಕ್ಕಳಿಗೆ ಅಗತ್ಯವಿರುವಷ್ಟು ಕೊಠಡಿಗಳು ಶಾಲೆಯಲ್ಲಿಲ್ಲ. ಕೇವಲ ನಾಲ್ಕು ಕೊಠಡಿಯಲ್ಲೇ 1ರಿಂದ 8ನೇ ತರಗತಿವರೆಗಿನ ಪಾಠಗಳು ನಡೆಯುತ್ತಿವೆ.1ರಿಂದ 3ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಒಂದು ಕೊಠಡಿ, 4-5ನೇ ತರಗತಿಗೆ ಒಂದು ಕೊಠಡಿ, 6-7ನೇ ತರಗತಿಗೆ ಒಂದು ಕೊಠಡಿ ಮತ್ತು 8ನೇ ತರಗತಿಗೆ ಮತ್ತೊಂದು ಕೊಠಡಿ ಬಳಸಲಾಗುತ್ತಿದೆ. 8ನೇ ತರಗತಿ ಕೊಠಡಿಯನ್ನು ಸಿಬ್ಬಂದಿಯ ಕೊಠಡಿಯನ್ನಾಗಿಯೂ ಬಳಸಲಾಗುತ್ತಿದೆ. 8ನೇ ತರಗತಿಗಾಗಿ ಮತ್ತೊಂದು ಕೊಠಡಿ ನಿರ್ಮಾಣವಾಗುತ್ತಿರುವುದರಿಂದ ಇಕ್ಕಟ್ಟು ಕೊಂಚ ಕಡಿಮೆಯಾಗಲಿದೆ ಎಂಬುದು ಇನ್ನಿಬ್ಬರು ಶಿಕ್ಷಕರಾದ ಕೆ.ಎಂ.ಶ್ರೀನಿವಾಸ್ ಮತ್ತು ಎಸ್.ಬಿ.ರಘುಕುಮಾರ್ ಅವರ ನಿರೀಕ್ಷೆ.ಮುಖ್ಯಶಿಕ್ಷಕರು ಸೇರಿ ಐವರು ಶಿಕ್ಷಕರಿರುವ ಶಾಲೆಯಲ್ಲಿ ಸದ್ಯಕ್ಕೆ 40 ಮಕ್ಕಳಿದ್ದಾರೆ. 1ಮತ್ತು 6ನೇ ತರಗತಿಗೆ ಮಕ್ಕಳ ದಾಖಲಾತಿ ನಡೆಯಬೇಕಿದೆ. ಈ ವರ್ಷ 60 ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ. ಹೆಚ್ಚು ಮಕ್ಕಳು ಶಾಲೆಗೆ ಬರಬೇಕೆಂದರೆ ಕನಿಷ್ಠ ಸೌಕರ್ಯವಾದರೂ ಇರಬೇಕು. ಹೀಗಾಗಿ ನೀರು, ಕೊಠಡಿ ಮತ್ತು ಕಾಂಪೌಂಡ್ ಸೌಲಭ್ಯವನ್ನು ಕಲ್ಪಿಸುವ ಕಡೆಗೆ ಗ್ರಾಮ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಗಮನ ಹರಿಸಬೇಕಿದೆ ಎಂದು ಶಿಕ್ಷಕರು ಅಭಿಪ್ರಾಯಪಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.