ಭಾನುವಾರ, ಏಪ್ರಿಲ್ 11, 2021
32 °C

ನೀರು ದರ 120ಕ್ಕೆ, ಆಸ್ತಿ ತೆರಿಗೆ ಶೇ 15 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರಸಭೆ ನೀರಿನ ದರ ಮತ್ತು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದೆ. ಮನೆ ಬಳಕೆ ನೀರಿನ ದರವನ್ನು ಮಾಸಿಕ ರೂ. 45ರಿಂದ 120ಕ್ಕೆ ಹಾಗೂ ಆಸ್ತಿ ತೆರಿಗೆಯನ್ನು ವಾರ್ಷಿಕ ಶೇ 15ರಷ್ಟು ಹೆಚ್ಚಳ ಮಾಡಿ ನಿರ್ಣಯ ಕೈಗೊಳ್ಳಲಾಯಿತು.ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಅಧ್ಯಕ್ಷೆ ದೇವಿಕಾ ಮಂಡಿಸಿದ ತೆರಿಗೆ ಹೆಚ್ಚಳ ನಿರ್ಣಯಕ್ಕೆ ಸದಸ್ಯರು ಸರ್ವಾನುಮತದ ಒಪ್ಪಿಗೆ ನೀಡಿದರು. ತೆರಿಗೆ ಹೆಚ್ಚಳಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರಾದರೂ ಕೊನೆಗೆ ಒಪ್ಪಿಗೆ ಸೂಚಿಸಿದರು.ಸರ್ಕಾರದ ಆದೇಶದಂತೆ ತೆರಿಗೆ ಪರಿಷ್ಕರಣೆ ಅಗತ್ಯವಾಗಿದ್ದು, ಇಲ್ಲದಿದ್ದರೆ ಸರ್ಕಾರದ ಅನುದಾನ ಸಿಗುವುದಿಲ್ಲ ಎಂದು ಎಂಜಿನಿಯರ್ ವಸಂತ್‌ಕುಮಾರ್ ಸಭೆಗೆ ತಿಳಿಸಿದರು. ನಗರದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗದಿದ್ದರೂ ದರ ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಸದಸ್ಯರಾದ ಮಂಜುನಾಥ್, ನರಸೀಯಪ್ಪ, ವಿಜಯಾ ರುದ್ರೇಶ್, ನಯಾಜ್‌ಅಹ್ಮದ್, ಲಕ್ಷ್ಮೀನರಸಿಂಹರಾಜು ಮುಂತಾದವರು ವಿರೋಧ ವ್ಯಕ್ತಪಡಿಸಿದರು.ಇಲ್ಲಿಯವರೆಗೆ ನಗರದಲ್ಲಿ ನೀರಿಗೆ ಮೀಟರ್ ಅಳವಡಿಸಲು ಸಾಧ್ಯವಾಗಿಲ್ಲ. ಮೀಟರ್ ಅಳವಡಿಸದೆ ತೆರಿಗೆ ಹೆಚ್ಚಿಸುವುದು ಬೇಡ ಎಂದು ಕೆಲವರು ವಿರೋಧಿಸಿದರು. ನಗರದ ಹೊರವಲಯದ ಬಡಾವಣೆಗಳಿಗೆ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ. ನೀರು ಮತ್ತು ತೆರಿಗೆ ಹೆಚ್ಚಳದಿಂದ ತಮ್ಮ ವಾರ್ಡ್‌ಗಳಿಗೆ ಪ್ರಯೋಜನವಾಗುವುದಿಲ್ಲ ಎಂದು ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.ಕಳೆದ 2004ರಿಂದ ತೆರಿಗೆ ಹೆಚ್ಚಳವಾಗಿಲ್ಲ. ಅಲ್ಲದೆ ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ಬಂದಿದೆ. ಬುಗಡನಹಳ್ಳಿ 2ನೇ ಹಂತದ ನೀರು ಸರಬರಾಜು ಆರಂಭವಾಗುತ್ತದೆ. ಹೆಚ್ಚುವರಿ ಕೊಳವೆ ಬಾವಿ ಕೊರೆಸಿರುವುದರಿಂದ ಮುಂದೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಇದು ನೀರು ದರ ಪರಿಷ್ಕರಣೆಗೆ ಸೂಕ್ತ ಸಮಯ ಎಂದು ಅಧ್ಯಕ್ಷೆ ದೇವಿಕಾ ಹೇಳಿದರು.ಸರ್ಕಾರದ ಆದೇಶದಂತೆಯೇ ದರ ಹೆಚ್ಚಳ ಬೇಡ. ಈಗ ಇರುವ ನೀರಿನ ದರವನ್ನು ರೂ. 45ನ್ನು 90ಕ್ಕೆ ಹೆಚ್ಚಳ ಮಾಡಬಹುದು ಎಂದು ನಯಾಜ್ ಅಹ್ಮದ್, ಲಕ್ಷ್ಮೀನರಸಿಂಹರಾಜು ವಾದಿಸಿದರು. ಸದಸ್ಯ ತರುಣೇಶ ರೂ. 121ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರಲ್ಲದೆ, ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಹಮತ ಇರುವುದಾಗಿ ತಿಳಿಸಿದರು.ಕೊನೆಗೆ ದರ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಯಿತು. ನೀರು ದರವನ್ನು ಮನೆ ಬಳಕೆಗೆ ರೂ. 45ರಿಂದ 120ಕ್ಕೆ, ಗೃಹೇತರ ಬಳಕೆ ರೂ. 90ರಿಂದ 240ಕ್ಕೆ ಮತ್ತು ವಾಣಿಜ್ಯ- ಕೈಗಾರಿಕಾ ಉದ್ದೇಶಕ್ಕೆ ರೂ. 480ಕ್ಕೆ ನಿಗದಿ ಮಾಡಲಾಯಿತು.ಆಸ್ತಿ ತೆರಿಗೆಯನ್ನು ವಾಸದ ಮನೆಗೆ ಶೇ 15ರಷ್ಟು ಮತ್ತು ಖಾಲಿ ನಿವೇಶನಕ್ಕೆ ಶೇ 30ರಷ್ಟು (ಆಸ್ತಿ ನೋಂದಣಿ ದರದ ಶೇ 0.1ರಷ್ಟು ತೆರಿಗೆ ಇದೆ) ಹೆಚ್ಚಳ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಹಂತಹಂತವಾಗಿ ಮೀಟರ್ ಅಳವಡಿಸಲು ಮತ್ತು ಅಕ್ರಮ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.

ಯುಜಿಡಿ ಸಂಪರ್ಕ ದರ ಈಗಾಗಲೇ ಸರ್ಕಾರಿ ಆದೇಶದ ಪ್ರಮಾಣಕ್ಕಿಂತ ಜಾಸ್ತಿ ಇರುವುದರಿಂದ ಮತ್ತೆ ಹೆಚ್ಚಳ ಮಾಡುವುದು ಬೇಡ ಎಂದು ತೀರ್ಮಾನಿಸಲಾಯಿತು.ನಗರಸಭೆಯ ಮೂರು ಜೆಸಿಬಿ ಯಂತ್ರಗಳನ್ನು ಬಳಸಿ ನಗರದ ಎಲ್ಲ ಚರಂಡಿಗಳು ಮತ್ತು ನಗರಸಭೆಗೆ ಸೇರಿದ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಅಧ್ಯಕ್ಷರು ಸೂಚಿಸಿದರು. ಆಯುಕ್ತೆ ರೋಹಿಣಿ ಸಿಂಧೂರಿ ಭಾಗವಹಿಸಿದ್ದರು.

ಭಿಕ್ಷೆಗೆ ಹೋಲಿಕೆ

ಕುಡಿಯುವ ನೀರು ಮತ್ತು ಆಸ್ತಿ ತೆರಿಗೆ ಹೆಚ್ಚಳವನ್ನು ಉಪಾಧ್ಯಕ್ಷ ಅಸ್ಲಂಪಾಷಾ ಭಿಕ್ಷೆಗೆ ಹೋಲಿಸಿದ ಪ್ರಸಂಗ ಸಭೆಯಲ್ಲಿ ನಡೆಯಿತು.ಕುಡಿಯುವ ನೀರಿನ ದರವನ್ನು ರೂ. 90ಕ್ಕಿಂತ ಹೆಚ್ಚಿಸಬಾರದು ಎಂದು ಸದಸ್ಯರು ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ, `ಒಂದು ರೂಪಾಯಿ ಭಿಕ್ಷೆ ಹಾಕುತ್ತಿದ್ದೆ. ಈಗ ರೂ. 10 ಭಿಕ್ಷೆ ನೀಡಿದರೂ ಮುಖಮುರಿಯುತ್ತಾರೆ. ಅಂತಹದ್ದರಲ್ಲಿ ನೀರಿನ ದರ ಹೆಚ್ಚಳ ಏನು ಮಹಾ~ ಎಂದು ಲೇವಡಿ ಮಾಡಿದರು.ಸಾಮಾನ್ಯ ಜನರ ದೃಷ್ಟಿಯಿಂದ ಮಾತನಾಡುವಂತೆ ಆಗ್ರಹಿಸಿದ ಸದಸ್ಯ ಲಕ್ಷ್ಮೀನರಸಿಂಹರಾಜು ಅವರು ಅಸ್ಲಂ ಮಾತಿಗೆ ವಿರೋಧ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.