ಶನಿವಾರ, ಏಪ್ರಿಲ್ 17, 2021
27 °C

ನೀರು ಪರೀಕ್ಷೆ ಫೇಲ್: ಸಿಎಜಿ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜನತೆಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಆಯಾ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್‌ರಾಜ್  ಸಂಸ್ಥೆಗಳ ಜವಾಬ್ದಾರಿ.ಆದರೆ, ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಳುಹಿಸಿದ್ದ ಕಿಟ್‌ಗಳನ್ನು ಜಿಲ್ಲೆಯ 134 ಗ್ರಾಮ ಪಂಚಾಯಿತಿಗಳು ಉಪಯೋಗಿಸಿಲ್ಲ ಎಂಬ ಆಘಾತಕಾರಿ ಅಂಶವನ್ನು ಮಹಾಲೇಖಪಾಲರ ವರದಿ ಬಹಿರಂಗಪಡಿಸಿದೆ.ಜನತೆಗೆ ಪೂರೈಕೆ ಮಾಡುವ ಮುನ್ನ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ, ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ.ಜೊತೆಗೆ, ಈ ಕಿಟ್‌ಗಳಿಗಾಗಿ ಇಲಾಖೆ ಮಾಡಿರುವ 3.17 ಲಕ್ಷ ರೂಪಾಯಿಗಳು ವ್ಯರ್ಥವಾಗಿವೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.ಇಲಾಖೆಯ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಅವರು ನೀರಿನ ಗುಣಮಟ್ಟವನ್ನು ಪರೀಕ್ಷೆ ಮಾಡುವ ಸಲುವಾಗಿ 2008ರಲ್ಲಿ 5,628 ಕಿಟ್‌ಗಳನ್ನು ಖರೀದಿ ಮಾಡಿದ್ದರು. ಪ್ರತಿ ಕಿಟ್‌ಗೆ ರೂ. 2,368 ರಂತೆ ಒಟ್ಟು ರೂ. 1.33 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗಿತ್ತು ಎಂದು `ಪ್ರಜಾವಾಣಿ~ಗೆ ಲಭ್ಯವಾಗಿರುವ ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.ಸದರಿ ಕಿಟ್‌ಗಳನ್ನು ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ವಿತರಣೆ ಮಾಡುವ ಸಲುವಾಗಿ 2009ರ ಜನವರಿಯಲ್ಲಿ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಹಸ್ತಾಂತರಿಸಲಾಗಿದೆ. ಆದರೆ, ತಯಾರಿಸಲಾದ ದಿನದಿಂದ ಒಂದು ವರ್ಷದ ಒಳಗಾಗಿ ಈ ಕಿಟ್‌ಗಳನ್ನು ಬಳಕೆ ಮಾಡಬೇಕಾದ್ದು ಅವಶ್ಯ. ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಈ ಕಿಟ್‌ಗಳಲ್ಲಿ ಬಳಕೆ ಮಾಡಲಾಗುವ ರಾಸಾಯನಿಕಗಳು ಒಂದು ವರ್ಷದ ವರೆಗೆ ಮಾತ್ರ ಉಪಯೋಗಿಸಲು ಯೋಗ್ಯವಾಗಿರುತ್ತವೆ ಎಂಬುದೇ ಈ ನಿಬಂಧನೆಗೆ ಕಾರಣ ಎಂದು ವಿವರಿಸಲಾಗಿದೆ. ಈ ನಿಬಂಧನೆಯ ಪ್ರಕಾರ 2010ರ ಜನವರಿ ವೇಳೆಗೆ ಈ ಕಿಟ್‌ಗಳನ್ನು ಬಳಕೆ ಮಾಡಬೇಕಾಗಿತ್ತು.ಆದರೆ, ಜಿಲ್ಲೆಯ ಒಂದೂ ಗ್ರಾಮ ಪಂಚಾಯಿತಿ ಈ ಕಿಟ್‌ಗಳನ್ನು ಉಪಯೋಗಿಸಿಲ್ಲ. ಉಪಯೋಗಿಸುವುದು ಹೋಗಲಿ, ಕನಿಷ್ಠ ಪಕ್ಷ ತಮ್ಮ ವ್ಯಾಪ್ತಿಯಲ್ಲಿ ಪೂರೈಕೆಯಾಗುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ವರದಿ ನೀಡುವಂತೆ ಒಂದೇ ಒಂದು ಗ್ರಾಮ ಪಂಚಾಯಿತಿ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಇಲ್ಲಿನ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಲ್ಲಿರುವ ಪ್ರಯೋಗಶಾಲೆಯ ಅಧಿಕಾರಿಗಳು 2011ರ ನವೆಂಬರ್‌ನಲ್ಲಿ ಉತ್ತರ ನೀಡಿದ್ದಾರೆ.ಗ್ರಾಮೀಣ ಭಾಗದ ಜನರಿಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಪೂರೈಕೆ ಮಾಡುವ ಸಂಬಂಧ ಅಂತರ್ಜಲದ ವೈಜ್ಞಾನಿಕ ನಿರ್ವಹಣೆ ಅಗತ್ಯ. ಇದಕ್ಕಾಗಿ ದೂರದೃಷ್ಟಿವುಳ್ಳ ಯೋಜನೆ ರೂಪಿಸುವುದು ಅಗತ್ಯ.

ಆದರೆ ಜಿಲ್ಲೆಯಲ್ಲಿ ಇಂತಹ ಯಾವ ಯೋಜನೆಯನ್ನೂ ರೂಪಿಸಿಲ್ಲ ಎಂದು ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.