ಸೋಮವಾರ, ಏಪ್ರಿಲ್ 12, 2021
26 °C

ನೀರು ಪೂರೈಕೆಗೆ ಒತ್ತಾಯ ಮಹಿಳೆಯರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರುಗುಪ್ಪ: ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಯ 11 ನೇ ವಾರ್ಡಿನಲ್ಲಿ 20 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ ಮಾಡುತ್ತಿರುವುದನ್ನು ವಿರೋಧಿಸಿ ನೂರಾರು ಮಹಿಳೆಯರು ಮಂಗಳವಾರ ಖಾಲಿಕೊಡಗಳೊಂದಿಗೆ  ಪ್ರತಿಭಟನೆ ನಡೆಸಿ, ನಿತ್ಯ ಸಮರ್ಪಕ ನೀರು ಪೂರೈಕೆ ಮಾಡಲು ಪಟ್ಟಣ ಪಂಚಾಯ್ತಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಆಶ್ರಯ ಕಾಲೊನಿಯಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಪ್ರತಿಭಟನಾಕಾರರು ಕಾಡಸಿದ್ದಪ್ಪನ ಗುಡಿ ಮೂಲಕ ಮುಖ್ಯ ರಸ್ತೆಗಳಲ್ಲಿ ಸಾಗಿ, ಸ್ಥಳೀಯ ಶಾಸಕ ಸೋಮಲಿಂಗಪ್ಪ ಅವರು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಪ್ರತಿಭಟನಾಕಾರರು ಬಹಿರಂಗ ಸಭೆ ನಡೆಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ.ಪಂ.ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಜಿ.ಸಿದ್ದಪ್ಪ, ತಾವು ಪ್ರತಿನಿಧಿಸುವ ಈ ವಾರ್ಡಿನ ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದೇ ಬಡಾವಣೆಯಲ್ಲಿ ಹೊಸದಾಗಿ ಒವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ 44.89 ಲಕ್ಷ ರೂಪಾಯಿ ಬಿಡುಗಡೆಯಾಗಿತ್ತು. ಆದರೆ ರಾಜಕೀಯ ದ್ವೇಷದಿಂದ ಶಾಸಕರು ಈ ಕಾಮಗಾರಿಯನ್ನು ಬದಲಾಯಿಸಿ, 18ನೇ ವಾರ್ಡ್‌ಗೆ ಸ್ಥಳಾಂತರಿಸಿದ್ದು ಮೂರು ದಿನಗಳ ಹಿಂದಷ್ಟೇ ಟ್ಯಾಂಕ್ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ನೆರವೇರಿಸಿದ್ದಾರೆ ಎಂದು ಆರೋಪಿಸಿದರು.ತೆಕ್ಕಲಕೋಟೆಯಲ್ಲಿ ಕುಡಿವ ನೀರಿನ ಯೋಜನೆ ಅನುಷ್ಠಾನ ವಿಚಾರದಲ್ಲಿ ಸ್ಥಳೀಯ ಶಾಸಕರು ತಾರತಮ್ಯ ಮಾಡುತ್ತಿದ್ದಾರೆ. ಅಲ್ಲದೇ, ಶಾಸಕರ ಸೂಚಿಸಿದ ಬಡಾವಣೆಗಳಿಗೆ ಮಾತ್ರ ಪಟ್ಟಣ ಪಂಚಾಯ್ತಿ ಸಿಬ್ಬಂದಿ ನಿತ್ಯ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.  ಬಿಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಎಚ್.ಕೆ.ತಿಮ್ಮಪ್ಪ, ಲೋಕಪ್ಪ, ಯು.ಹನುಮಂತಪ್ಪ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.