ಮಂಗಳವಾರ, ಜೂನ್ 22, 2021
24 °C

ನೀರು, ಮೇವಿಗೆ ತತ್ವಾರ

ಪ್ರಜಾವಾಣಿ ವಾರ್ತೆ ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ನೀರು, ಮೇವಿಗೆ ತತ್ವಾರ

ಬೆಂಗಳೂರು: ಬೇಸಿಗೆಯ ಆರಂಭದಲ್ಲೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಈಗಾಗಲೇ 224 ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ 106 ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.



ಬರುವ ದಿನಗಳಲ್ಲಿ 4,853 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದ್ದು, ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಬರದ ಛಾಯೆ ಆವರಿಸಿರುವ ಬೆನ್ನಲ್ಲೇ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಹಾಹಾಕಾರ ಉಂಟಾಗಿದೆ.



ಇದುವರೆಗೆ ಕೇವಲ ಎರಡು ಮೇವಿನ ಬ್ಯಾಂಕ್ ಮತ್ತು 34 ಗೋಶಾಲೆಗಳನ್ನು ತೆರೆಯಲಾಗಿದೆ. ಇನ್ನಷ್ಟು ಗೋಶಾಲೆಗಳಿಗೆ ಮತ್ತು ಮೇವು ಬ್ಯಾಂಕ್‌ಗಳಿಗೆ ಬೇಡಿಕೆ ಇದೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಜಿಲ್ಲಾಧಿಕಾರಿಗಳೊಂದಿಗೆ ಎರಡು ಬಾರಿ ವಿಡಿಯೊ ಸಂವಾದ ನಡೆಸಿ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಿ ಎಂಬ ಸೂಚನೆ ನೀಡಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.



ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉಂಟಾಗುವುದು ಸಹಜ. ಆದರೆ ಈ ವರ್ಷ ಫೆಬ್ರುವರಿಯಿಂದಲೇ ನೀರಿನ ಅಭಾವ ತಲೆದೋರಿದೆ. ವಿದ್ಯುತ್‌ಗಿಂತ ನೀರಿನ ಸಮಸ್ಯೆಯೇ ತಲೆ ನೋವಾಗಿದೆ ಎಂದು ಸ್ವತಃ ಸದಾನಂದಗೌಡ ಅವರೇ ಹೇಳಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ.





ದಾಖಲೆ ವಿದ್ಯುತ್ ಬಳಕೆ
ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ನಿತ್ಯವೂ ಏರುತ್ತಲೇ ಇದ್ದು, ಗುರುವಾರ ಅತ್ಯಧಿಕ 180.91 ದಶಲಕ್ಷ ಯೂನಿಟ್ ಬಳಕೆಯಾಗಿದೆ. ಇದು ಈ ವರ್ಷದಲ್ಲಿ ದಾಖಲೆಯ ಬಳಕೆಯಾಗಿದೆ.

ಈ ಕುರಿತು `ಪ್ರಜಾವಾಣಿ~ ಜೊತೆ ಮಾತನಾಡಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಿ. ರವಿ ಕುಮಾರ್, `ಎರಡು ದಿನಗಳ ಹಿಂದೆ 180 ದಶಲಕ್ಷ ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಆದರೆ, ಪೂರೈಕೆಯಲ್ಲಿ ವ್ಯತ್ಯಯ ಆಗಿಲ್ಲ. ಆ ದಿನ ಇನ್ನೂ 800 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಅವಕಾಶ ಇತ್ತು~ ಎಂದರು.

ರಾಜ್ಯದ ಎಲ್ಲ ಶಾಖೋತ್ಪನ್ನ ವಿದ್ಯುತ್ ಘಟಕಗಳು ಸುಸ್ಥಿತಿಯಲ್ಲಿವೆ. ಪವನ ವಿದ್ಯುತ್ ಘಟಕಗಳಿಂದಲೂ ಹೆಚ್ಚಿನ ಪ್ರಮಾಣದ ಉತ್ಪಾದನೆ ಆಗುತ್ತಿದೆ. ಜಲ ವಿದ್ಯುತ್ ಸ್ಥಾವರಗಳಲ್ಲೂ ಉತ್ಪಾದನಾ ಪ್ರಮಾಣ ಉತ್ತಮ ಸ್ಥಿತಿಯಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುತ್ತಿದ್ದು, ಪೂರೈಕೆಯಲ್ಲಿ ಹೆಚ್ಚಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.



ವಾರಾಂತ್ಯದಲ್ಲಿ ಸಹಜವಾಗಿಯೇ ವಿದ್ಯುತ್ ಬೇಡಿಕೆಯಲ್ಲಿ ಇಳಿಮುಖವಾಗುತ್ತಿದೆ. ವಾರದ ದಿನಗಳಲ್ಲಿ ದಿನವೊಂದಕ್ಕೆ 8,500 ಮೆಗಾವಾಟ್ ಬೇಡಿಕೆ ಇರುತ್ತದೆ. ಆದರೆ, ವಾರಾಂತ್ಯದಲ್ಲಿ ಈ ಪ್ರಮಾಣ 7,750 ಮೆಗಾವಾಟ್ ಆಸುಪಾಸಿನಲ್ಲಿರುತ್ತದೆ. ವಿದ್ಯುತ್ ಪೂರೈಕೆ ಸದ್ಯ ಉತ್ತಮ ಸ್ಥಿತಿಯಲ್ಲೇ ಇದೆ ಎಂದರು.





ನದಿ ಮೂಲಗಳು ಇರುವ ಪ್ರದೇಶಗಳಲ್ಲಿ ನೀರಿನ ಪೂರೈಕೆಗೆ ತೊಂದರೆ ಇಲ್ಲ, ಆದರೆ ಕೊಳವೆ ಬಾವಿಗಳನ್ನೇ ಅವಲಂಬಿಸಿರುವ ಜಿಲ್ಲೆಗಳಲ್ಲಿ ಜಲಕ್ಷಾಮ ಉಂಟಾಗಿದೆ. ಕಳೆದ ಮುಂಗಾರು-ಹಿಂಗಾರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದು, ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಇತ್ಯಾದಿ ಕಾರಣಗಳಿಂದಾಗಿ ಈ ವರ್ಷ ನೀರಿನ ಸಮಸ್ಯೆ ಗಂಭೀರವಾಗಿದೆ. ಹಲವೆಡೆ ನೀರಿನ ಮೂಲಗಳೇ ಬತ್ತಿ ಹೋಗಿವೆ.



ಒಂದು ಕೊಡ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ, ಗುಲ್ಬರ್ಗ, ಯಾದಗಿರಿ, ವಿಜಾಪುರ, ಬೀದರ್, ರಾಯಚೂರು, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಜನತೆ ನೀರಿಗಾಗಿ ಪರದಾಡುತ್ತಿದ್ದಾರೆ. 



ಮಹಿಳೆಯರು, ಮಕ್ಕಳು, ವೃದ್ಧರು ಎನ್ನದೆ ಮನೆ ಮಂದಿಯೆಲ್ಲ ನಿತ್ಯ ತಳ್ಳುವ ಗಾಡಿ, ಸೈಕಲ್ ಮತ್ತು ತಲೆಮೇಲೆ ಕೊಡಗಳನ್ನು ಹೊತ್ತು ದೂರದಿಂದ ನೀರು ತರುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಅಲ್ಲದೆ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುವ ಕಡೆ ಯಾವಾಗ ಟ್ಯಾಂಕರ್ ಬರುತ್ತದೊ ಎಂದು ಕಾಯುತ್ತಾ ಕಿ.ಮೀ. ಉದ್ದದ ಕ್ಯೂನಲ್ಲಿ ಕೊಡ ಇಡುವುದು ಸಾಮಾನ್ಯ.



ಮಳೆಗಾಲದಲ್ಲಿ ಅಲ್ಪಸ್ವಲ್ಪ ತುಂಬಿದ್ದ ಕೆರೆ ಕುಂಟೆಗಳು ಈಗಾಗಲೇ ಒಣಗಿ ಹೋಗಿವೆ. ಕೇವಲ ಕೊಳವೆ ಬಾವಿಗಳ ಮೇಲೆ ಅವಲಂಬನೆಯಾಗುವಂತಾಗಿದೆ. ಕೆಲವೆಡೆ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ಕೋಲಾರ ಸೇರಿದಂತೆ ಕೆಲವೆಡೆ ಖಾಸಗಿ ಕೊಳವೆ ಬಾವಿಗಳನ್ನು ಸರ್ಕಾರದ ವಶಕ್ಕೆ ಪಡೆದು, ಅವುಗಳ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.