ಶನಿವಾರ, ಮೇ 21, 2022
25 °C

ನುಡಿದೊಡೆ ಪಡಿಗೆಟ್ಟ ನುಡಿಯ ನುಡಿವುದಯ್ಯಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ಕವಿಗಳಿಗೆ ಮತ್ತು ಕಲಾವಿದರಿಗೆ ವಿಚಿತ್ರವಾದ ಸಮಸ್ಯೆಯೊಂದು ಕಾಡುತ್ತದೆ. ತಮ್ಮ ವ್ಯಕ್ತಿ ವಿಶಿಷ್ಟತೆಗಾಗಿ ತಾವೇ ಸೃಷ್ಟಿಸಿಕೊಂಡ ಕುರುಹುಗಳಲ್ಲಿ ಅವರು ಬಂಧಿಗಳಾಗಿರುತ್ತಾರೆ. ತಮ್ಮದೊಂದು ವಿಶಿಷ್ಟವಾದ ಸ್ಟ್ಯಾಂಪನ್ನು ಒತ್ತುವ ಮೂಲಕ ಪ್ರಾರಂಭವಾಗಿ ಕಡೆಗೆ ಅದರಲ್ಲೇ ಬಂಧಿಯಾಗಿಬಿಡುತ್ತಾರೆ.ಈ ಸಂಗತಿಯನ್ನು ಇಂದಿನ ಅನೇಕ ಕವಿಗಳಲ್ಲಿ, ಕಲಾವಿದರಲ್ಲಿ ಕಾಣಬಹುದು. ಇದಕ್ಕೆ ಇನ್ನೊಂದು ಮುಖವೂ ಇದೆ. ಹೀಗೆ ಮೇಲ್ಪದರದ ಯಾವುದೋ ಒಂದು ಹಂತದಲ್ಲಿ ಬಂಧಿಯಾಗಿರುವುದೇ ಸಾಧನೆಯೆಂಬ ಭಾವನೆಯನ್ನು ಸಮೂಹದಲ್ಲಿ ಮೂಡಿಸುವ ಪ್ರಯತ್ನಗಳನ್ನೂ ಅವರು ಮಾಡುತ್ತಾರೆ.ಗಿಡ-ಮರಗಳಲ್ಲಿ ಹೆಣ್ಣೊಂದನ್ನು ಮೂಡಿಸುವುದರಲ್ಲೇ ಜೀವಮಾನವನ್ನು ಕಳೆಯುವವರಿದ್ದಾರೆ. ನೆಲಮೂಲ, ಕರುಳಾಳ ಇತ್ಯಾದಿ ಪದ ವ್ಯಸನವನ್ನೇ ಕಾವ್ಯವೆಂದುಕೊಂಡಿರುವವರೂ ಇದ್ದಾರೆ.  ತಾವೇ ಸೃಜಿಸಿದ ಸಂಕೇತಗಳನ್ನು ನಿರಸನಗೊಳಿಸುತ್ತ ಸಾಗುವ ಕವಿಗಳು ಕಲಾವಿದರು ತುಂಬಾ ಕಡಿಮೆ. ಕಾವ್ಯ ಪ್ರತಿಮೆಗಳ ವಿಸರ್ಜನೆ ಅವುಗಳ ನಿರ್ಮಾಣದಷ್ಟು ಸರಳವಲ್ಲ.ಒಮ್ಮೆ ಪ್ರತಿಮೆಯನ್ನು ನಿರ್ಮಿಸಿಕೊಂಡ ಮೇಲೆ ಅದಕ್ಕೇ ಅಂಟಿಕೂತುಬಿಡುತ್ತೇವೆ. ಆದರೆ ಸೀದಾ ಅವುಗಳ ನಡುನೆತ್ತಿಯ ಮೇಲೆ ಉಳಿಯಿಟ್ಟು ಹೊಡೆಯುವ, ಈ ಕವನ ಸಂಕಲನದ ಕವಿ ಹರಿಯಪ್ಪ ಪೇಜಾವರ ಅವರನ್ನು ಓದುವಾಗ `ಸ್ವಲ್ಪ ತಡಿಯೋ ಮಾರಾಯಾ, ಜನ ಓದುವವರೆಗಾದರೂ ಅವುಗಳನ್ನು ವಿಸರ್ಜಿಸಬೇಡ~ ಅನ್ನಬೇಕೆನಿಸುತ್ತದೆ. ನಿಜ, ವಿಸರ್ಜನೆಯೂ ವ್ಯಸನವಾಗಬಾರದಲ್ಲವೆ?

ತಮ್ಮ ಪಾಡಿಗೆ ತಾವಿರುವಾಗ

ಜಗತ್ತು ಗಮನಿಸುತ್ತಿಲ್ಲ ಎಂದು ಖಾತ್ರಿಯಾಗಿದ್ದಾಗ

ಎಲ್ಲರೂ ಸರಳವಾಗಿಯೇ ಇರುತ್ತಾರೆ

ಆದರೆ ಜಗತ್ತಿನ ಕಣ್ಣು ನಿಮ್ಮತ್ತಲೇ ಇದೆ ಎಂದಾಗ ಮಾತ್ರ

ನಿಮ್ಮ ವರ್ತನೆ ಘನವಾಗಿ ಬಿಡುತ್ತದೆ

ಸುಮ್ಮನಿದ್ದೇನೆ ಎಂದುಕೊಳ್ಳದೆ ಸುಮ್ಮನಿರುವ ಕಷ್ಟವನ್ನು ಕುರಿತು ಜಗತ್ತಿನ ಮಹಾನ್ ದಾರ್ಶನಿಕರು ಅಲವತ್ತುಕೊಂಡಿದ್ದಾರೆ. ಕವನವೂ ಹಾಗೆಯೇ ಸಂಜೆ ಗೂಡಿಗೆ ಮರುಳುವ, ಬೆಳಿಗ್ಗೆ ತೆರಳುವ ಹಕ್ಕಿಯ ತೆರದಲ್ಲಿ ಎಂಬಂತೆ ಅದರೊಡನೆ ನಡೆದುಕೊಳ್ಳಬಲ್ಲ ಈ ಕವಿಗೆ ಯಾವುದಕ್ಕಾದರೂ ಸಮಜಾಯಿಷಿ ಕೊಡುವುದು ಸಂಕಟದ ಕೆಲಸ.ಈ ಕವಿಯ ಕಾವ್ಯಕ್ಕೆ ದುಃಖದ ಅನುಸಂಧಾನವೇ ಮುಖ್ಯ ಉದ್ಯೋಗವಾಗಿದ್ದರೂ ಲೋಕಸಮಸ್ತವೂ ತಲ್ಲಣದಲ್ಲಿ ಇರುವಾಗ ಯಾರಾದರೊಬ್ಬರ ಸಂಕಟದ ವೈಭವೀಕರಣ ಸಮರ್ಥನೀಯವಲ್ಲ ಎಂಬ ಸಮೂಹ ಗೌರವವಿದೆ. ಇಲ್ಲಿ ಯಾರೂ ಮುಖ್ಯರೂ ಅಲ್ಲ ಅಮುಖ್ಯರೂ ಅಲ್ಲ ಎಂಬ ನಂಬಿಕೆಯಿದೆ.

ಸಮಾನತೆಯಲ್ಲಿ ನಂಬಿಕೆ ಇರುವುದಾದರೆ ನಿನಗೆ

ಬದುಕು ಎಲ್ಲರ ಜತೆ ನಿನಗು ಕೆಳ ಅಂತಸ್ತಿನವರ ಜತೆ

ಹಂಚಿಕೋ ಅವರ ಎಲ್ಲ ಕಷ್ಟ ಸುಖ

ಬಿಸಿಲಿಗೆ ಬಾಡು ಮಳೆಯಲ್ಲಿ ನೆನೆ

ಗಾಳಿಯಲ್ಲಿ ಒಣಗು

ಸಾಯಬೇಡ ಸತ್ತು ಬದುಕಿರುವ ಇತರರೆಲ್ಲರಿಗಿಂತ

ನೀನೊಬ್ಬ ಬೇರೆ ಎಂಬ ಸೂಕ್ಷ್ಮ ಭೇದ ಮಾಡಬೇಡ

ದ್ವಿ-ಮಾನ ಭಾಷೆಯ ತೀಕ್ಷ್ಣ ತರ್ಕದ ಹೊಸ ಪೀಳಿಗೆಯೆದುರಿಗೆ ಕಾವ್ಯವನ್ನಾಗಲೀ, ಕಲೆಯನ್ನಾಗಲೀ, ದಾರ್ಶನಿಕತೆಯನ್ನಾಗಲೀ ಇಡುವಾಗ ಎಚ್ಚರದಿಂದಿರಬೇಕಾಗುತ್ತದೆ. ಏಕೆಂದರೆ ಅವುಗಳಲ್ಲಿನ ಪೊಳ್ಳುತನವನ್ನು ಕೇವಲ ಸಜ್ಜನಿಕೆಯ ಕಾರಣಕ್ಕೆ ಎರಡು ಸಾವಿರ ವರ್ಷಗಳ ಕಾಲ ಒಪ್ಪಿಕೊಂಡು ಬಂದ ನಮ್ಮ-ನಿಮ್ಮ ಹಾಗೆ ಅವರು ಒಪ್ಪಿಕೊಳ್ಳುವುದಿಲ್ಲ.ನಿಗಿನಿಗಿ ವರ್ತಮಾನದಲ್ಲಿ ಬದುಕುವ ಅವರು ಕಾಲ-ದೇಶಗಳನ್ನು ಪರಿಭಾವಿಸುವ ಕ್ರಮ ಬೇರೆಯೇ ಇದೆ. ಭಾಷೆಯ ಪ್ರಾಥಮಿಕ ಅವಸ್ಥೆಯಾದ ದ್ವಿ-ಮಾನದ ಹಂತಕ್ಕೆ ಹೋಗಿ ವ್ಯವಹರಿಸಬಲ್ಲ ಅವರಿಗೆ ಈವರೆಗಿನ ಸಂರಚನೆಗಳನ್ನು ಕ್ಷಣಾರ್ಧದಲ್ಲಿ ದಾಟಬಲ್ಲ ಸಾಮರ್ಥ್ಯ ಬಂದಿದೆ. (ಅವರಿಗೆ ಅದು ನಮ್ಮಿಂದ ಬಂದಿಲ್ಲ!).ಹಿರಿಯರನ್ನು ಹೊಸಪೀಳಿಗೆಯು `ಕನ್ನದಲ್ಲಿ ಸವೆದ ಕಬ್ಬುನ~ದಂತೆ ಕಾಣಬಲ್ಲರು. ಹಾಗಾಗಿ ಇಂದು ಕಾವ್ಯಕ್ರಿಯೆಯೆನ್ನುವುದು ಅನಗತ್ಯ ಸಂಕೀರ್ಣವೂ ಆಗಬೇಕಿಲ್ಲ, ವ್ಯಸನವೂ ಆಗಬೇಕಿಲ್ಲ. ಇದರ ಅರಿವಿಲ್ಲದ ಇವತ್ತಿನ ಕಾವ್ಯದ ಫೋಟೋದ ಹಾಗಿದೆ ಈ ಕೆಳಗಿನ `ಕರ್ಣರಥ~ ಹೆಸರಿನ ಕವನ!

ಮೂರು ಚಕ್ರದ ಈ ಬೇಬಿ ಸೈಕಲ್ ನೆಲದ ಮೇಲೆ ಅಂಗಾತ ಮಲಗಿದೆ

ಗಾಳಿ ತುಸುವೆ ಕಂಪಿಸಿದಂತೆ ಅದರ ಗಾಲಿ

ಆಗಸಕೆ ಮೊಗವೆತ್ತಿ ಏನೋ ಹುಯ್ಯಲಿಡುವಂತಿದೆ

ಮೂಕಿಯೋ ಹಳೆಯ ಜನುಮದ ವಾಸನೆಗೆಂಬಂತೆ

ಯಾವ ಅರ್ಜುನ ಎದುರಾದ ಹೀಗಾಗುವುದಕೆ

ಸ್ವಂತದ ಅರಿವಿರದ ತನ್ನದೇ ತಮ್ಮ?

ರಥ ನಡೆಸಿದ ನೆನಪೇ ಇಲ್ಲದಂತೆ ಅರ್ಧದಲ್ಲೆ

ಆಟ ಮರೆತವನಂತೆ ಎದ್ದು ಎಲ್ಲಿ ಹೋದ?

ಯಾವಾಧುನಿಕ ವಿದ್ಯೆಯ ರೈಲು ಹತ್ತಿ

ಯಾವ ಕಾನ್ವೆಂಟಿನ ಯಾವ ಯೂನಿಫಾರ್ಮಿನ ಹಿಂದೆ ಕಳೆದು ಹೋದ?

ರಥದ ಮೆತ್ತನೆ ಸೀಟಿನ ಮೇಲೆ

ಋತುಗಳೆಷ್ಟೋ ಹಾದು ಹೋಗಿವೆ

ಯುಗದಾಚೆಗಿನ ಧೂಳು ಅದರ ಮೈ ತುಂಬ ಹೊಚ್ಚಿದೆ

ಛೇ! ಎಂಥ ಘನವಾಹನಕೆ ಇದು ಎಂಥ ಅಂತ್ಯ!

ಬಯಲನ್ನು ಬಯಲಾಗಿಸುವ ಸಂಕಟವನ್ನು ನಿರ್ವಹಿಸುತ್ತಿರುವ ಕವಿ ಹರಿಯಪ್ಪ ಪೇಜಾವರರಿಗೆ ಅಭಿನಂದನೆಗಳು.ಕಲಾವಿದನ ಕೊಲೆ

ಲೇ:
ಹರಿಯಪ್ಪ ಪೇಜಾವರ

ಪು: 118; ಬೆ: ರೂ. 75

ಪ್ರ: ತಿಂಗಳ ಬೆಳಕು ಪ್ರಕಾಶನ, ವಿಠ್ಠಲವಾಡಿ, ಕುಂದಾಪುರ- 576 201, ಉಡುಪಿ ಜಿಲ್ಲೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.