ಮಂಗಳವಾರ, ಮೇ 11, 2021
20 °C

ನೇಕಾರರಿಂದ ಅಹೋರಾತ್ರಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನೇಕಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ನೇಕಾರರ ವೇದಿಕೆ ಆಶ್ರಯದಲ್ಲಿ ಬೆಳಗಾವಿ ಔದ್ಯಮಿಕ ಸಹಕಾರಿ ಬ್ಯಾಂಕಿನ ಎದುರು ನೇಕಾರರು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಸೋಮವಾರ ಆರಂಭಿಸಿದ್ದಾರೆ.ನೇಕಾರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ ಔದ್ಯಮಿಕ ಸಹಕಾರಿ ಬ್ಯಾಂಕಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಬ್ಯಾಂಕಿನವರು ಸಕಾರಾತ್ಮಕವಾಗಿ ಉತ್ತರ ನೀಡದಿರುವುದರಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಭುಜಂಗ ಭಂಡಾರಿ ಹಾಗೂ ಕಾರ್ಯದರ್ಶಿ ಪರಶುರಾಮ ಢಗೆ ತಿಳಿಸಿದರು.ಬ್ಯಾಂಕಿಗೆ ದಿ ಬೆಳಗಾವಿ ಔದ್ಯಮಿಕ ನೇಕಾರರ ಸಹಕಾರ ಬ್ಯಾಂಕ್ ಎಂದು ನಾಮಕರಣ ಮಾಡಬೇಕು. ನೇಕಾರರಿಗೆ ಕಳೆದ ಎರಡು ವರ್ಷಗಳಿಂದ ಶೇ. 3 ಬಡ್ಡಿದರದಲ್ಲಿ ನೀಡಿದ ಸಾಲದ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬ್ಯಾಂಕಿನ ಆಡಳಿತ ಮಂಡಳಿಯ ಯು.ಜಿ. ಬೋಳಮಲ್ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬ್ಯಾಂಕಿನ ಬಡ ನೇಕಾರ ಸದಸ್ಯರಿಗೆ ಇದುವರೆಗೆ ಶೈಕ್ಷಣಿಕ ಸಾಲ ನೀಡಿಲ್ಲ. ಎಲ್ಲ ಪದವಿ ಶಿಕ್ಷಣಕ್ಕೂ ಸಾಲ ನೀಡಬೇಕು ಎಂದು ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿದ್ದನ್ನು ಇದುವರೆಗೂ ಜಾರಿಗೊಳಿಸಿಲ್ಲ. ಬ್ಯಾಂಕಿನ ಬಡ ನೇಕಾರರ ಮಕ್ಕಳಿಗೆ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂಬ ಠರಾವನ್ನೂ ಅನುಷ್ಠಾನಗೊಳಿಸಿಲ್ಲ ಎಂದು ದೂರಿದರು.25 ಲಕ್ಷ ರೂಪಾಯಿ ಖರ್ಚು ಮಾಡಿದ್ದರೂ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಇನ್ನೂ ಆರಂಭಿಸಿಲ್ಲ ಎಂದು ದೂರಿರುವ ಅವರು, ಬ್ಯಾಂಕಿನ ಪ್ರಧಾನ ಕಚೇರಿ ಹಾಗೂ ಖಾಸಬಾಗ ಶಾಖೆಯಲ್ಲಿ ಎಟಿಎಂ ಸೌಲಭ್ಯ ಕಲ್ಪಿಸಬೇಕು. ರಾಮದುರ್ಗದ ಮಧ್ಯ ಭಾಗದಲ್ಲಿ ನಮ್ಮ ಬ್ಯಾಂಕಿನ ಹೊಸ ಶಾಖೆ ಆರಂಭಿಸಬೇಕು ಎಂದು ಆಗ್ರಹಿಸಿದರು.ನೇಕಾರರಿಗೆ ಪ್ರೊಸೆಸಿಂಗ್ ಘಟಕ, ಎಂಬ್ರಾಯಡರಿ ಘಟಕ, ಸೀರೆ ಡಿಸೈನ್ ಘಟಕ, ಟ್ವಿಸ್ಟಿಂಗ್ ಘಟಕ ಹಾಗೂ ಆಧುನಿಕ ತಂತ್ರಜ್ಞಾನದ ವಿದ್ಯುತ್ ಮಗ್ಗಗಳಿಗೆ ಶೇ.3 ಬಡ್ಡಿದರದ ಸಾಲ-ಸೌಲಭ್ಯನೀಡಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ನೇಕಾರರ ವೇದಿಕೆಯ ಉಪಾಧ್ಯಕ್ಷ ಗುಂಡು ಮಾಸ್ತಮರದಿ, ನಾಗಪ್ಪ ಢವಳಿ, ಬಾಬು ದೀವಟೆ, ನಾರಾಯಣ ಕುಲಗೋಡ, ಪರಶುರಾಮ ಬಸಕ್ರಿ, ಲಕ್ಷ್ಮಣ ಹೊಂಡಿ, ಕೇದಾರಿ ಢಗೆ, ಚಿದು ಬಂಗೋಡಿ ಮತ್ತಿತರರು ಪಾಲ್ಗೊಂಡಿದ್ದರು.ಬೆಳಗಾವಿ ಔದ್ಯಮಿಕ ಸಹಕಾರಿ ಬ್ಯಾಂಕಿನ ಎದುರು ನೇಕಾರರು ಅಹೋರಾತ್ರಿ ಧರಣಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬ್ಯಾಂಕಿನ ಎದುರೇ ಒಲೆ ನಿರ್ಮಿಸಿಕೊಂಡು ನೇಕಾರರು ಅಡುಗೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.