ಗುರುವಾರ , ಫೆಬ್ರವರಿ 25, 2021
29 °C

ನೇತಾಜಿ ಮಗಳಿಗೆ ಹಣ ನೀಡಲು ಕಾಂಗ್ರೆಸ್‌ನಿಂದ ಟ್ರಸ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇತಾಜಿ ಮಗಳಿಗೆ ಹಣ ನೀಡಲು ಕಾಂಗ್ರೆಸ್‌ನಿಂದ ಟ್ರಸ್ಟ್

ನವದೆಹಲಿ (ಪಿಟಿಐ): ಸುಭಾಷ್‌ ಚಂದ್ರ ಬೋಸ್‌ ಅವರ ಮಗಳು ಅನಿತಾ ಬೋಸ್‌ ಅವರಿಗೆ ಆರ್ಥಿಕ ನೆರವು ನೀಡಲು ಕಾಂಗ್ರೆಸ್‌  1954ರಲ್ಲಿ ಟ್ರಸ್ಟ್‌ ರಚಿಸಿತ್ತು ಎನ್ನುವುದು ಕಡತಗಳ ಮೂಲಕ ಬಹಿರಂಗಗೊಂಡಿದೆ.₹ 2 ಲಕ್ಷ ಠೇವಣಿಯೊಂದಿಗೆ ಟ್ರಸ್ಟ್‌ ಸ್ಥಾಪಿಸಲಾಗಿತ್ತು. ಇದಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬಿ.ಎಸ್‌. ರಾಯ್‌ ಅವರು ಟ್ರಸ್ಟಿಗಳಾಗಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.ನಂತರ ಪ್ರಧಾನಿ ಕಚೇರಿ ನ್ಯಾಯಮೂರ್ತಿ ಜಿ.ಡಿ. ಖೋಸ್ಲಾ ಅವರಿಗೆ 1978ರಲ್ಲಿ ಪತ್ರ ಬರೆದಿತ್ತು. ಎಐಸಿಸಿ ವಾರ್ಷಿಕ ಅನಿತಾ ಅವರಿಗೆ 1964ರವರೆಗೆ ₹ 6 ಸಾವಿರ ನೀಡುತ್ತಿತ್ತು. ಅವರ ಮದುವೆಯಾದ ನಂತರ ಈ ಹಣವನ್ನು 1965ರಲ್ಲಿ ಸ್ಥಗಿತಗೊಳಿಸಲಾಯಿತು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.16  ಸಾವಿರ ಪುಟಗಳು: 119ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಬೋಸ್‌ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಡತಗಳ ಪ್ರದರ್ಶನ ಅನಾವರಣಗೊಳಿಸಿದರು.ಈ 100 ಕಡತಗಳು 16,600 ಪುಟಗಳ ಐತಿಹಾಸಿಕ ದಾಖಲೆಗಳನ್ನು ಹೊಂದಿವೆ. ಬ್ರಿಟಿಷ್‌ ಆಡಳಿತದಿಂದ ಆರಂಭವಾಗಿ 2013ರವರೆಗಿನ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ವರ್ಗೀಕೃತ ದಾಖಲೆಗಳಿಗಾಗಿಯೇ  ಆರಂಭಿಸಲಾಗಿರುವ ವೆಬ್‌ಸೈಟ್‌  https://netajipapers.gov.in ಅನ್ನು ಅನಾವರಣಗೊಳಿಸಿದರು. ಪ್ರತಿ ತಿಂಗಳು  25 ವರ್ಗೀಕೃತ ಕಡತಗಳ ಡಿಜಿಟಲ್‌ ಪ್ರತಿ ಬಿಡುಗಡೆಗೊಳಿಸಲು ಎನ್‌ಎಐ ಉದ್ದೇಶಿಸಿದೆ.ಬಹುದಿನಗಳ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ಇದರಿಂದ ನೇತಾಜಿ ಅವರ ಕುರಿತು ಹೆಚ್ಚಿನ ಸಂಶೋಧನೆ ನಡೆಸಲು ವಿದ್ವಾಂಸರಿಗೆ ಅನುಕೂಲವಾಗುತ್ತದೆ ಎಂದು ಸಾಂಸ್ಕೃತಿಕ ಸಚಿವಾಲಯದ ಹೇಳಿಕೆ ತಿಳಿಸಿದೆ.

ಕಡತಗಳ ಬಿಡುಗಡೆ ಸ್ವಾಗತಿಸಿದ ಬೋಸ್‌ ಕುಟುಂಬದ ಸದಸ್ಯರು, ‘ಇಡೀ ದೇಶಕ್ಕೆ ಇದೊಂದು ಮಹತ್ವದ ದಿನವಾಗಿದೆ’ ಎಂದು ಬಣ್ಣಿಸಿದರು.‘ಸತ್ಯವನ್ನು ಮರೆಮಾಚಲು ಕೆಲವು ಮಹತ್ವದ ಕಡತಗಳನ್ನು ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ನಾಶಪಡಿಸಲಾಗಿದೆ. ಈ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ರಷ್ಯಾ, ಜರ್ಮನಿ, ಬ್ರಿಟನ್‌, ಅಮೆರಿಕದಲ್ಲಿರುವ ಕಡತಗಳನ್ನು ಪಡೆಯಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.‘ನಮಗೆ ಎಲ್ಲ ಕಡತಗಳನ್ನು ನೋಡಲು ಸಾಧ್ಯವಾಗಿಲ್ಲ. ಆದರೆ, ಸುರೇಶ್‌ ಬೋಸ್‌ ಅವರಿಗೆ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರು ಬರೆದಿರುವ ಪತ್ರದ ಪ್ರಕಾರ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಕೇವಲ ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಾಗಿಯೇ ಹೊರತು ನಿರ್ಣಾಯಕ ಪುರಾವೆಗಳು ಇಲ್ಲ’ ಎಂದು ಪ್ರತಿಪಾದಿಸಿದರು.ಕಳೆದ ಅಕ್ಟೋಬರ್‌ನಲ್ಲಿ ನೇತಾಜಿ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದ ಪ್ರಧಾನಿ, ಸುಭಾಷ್‌ ಚಂದ್ರ ಬೋಸ್‌ ಅವರ ನಿಗೂಢ ಸಾವಿಗೆ ಸಂಬಂಧಿಸಿದ ವರ್ಗೀಕೃತ ಕಡತಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು.1945ರ ಆಗಸ್ಟ್‌ 18ರಂದು ತೈಪೆನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸಾವಿಗೀಡಾಗಿದ್ದರು ಎಂದು ಅವರ ಸಾವಿನ ಕುರಿತು ರಚಿಸಲಾಗಿದ್ದ ಎರಡು ವಿಚಾರಣಾ ಆಯೋಗಗಳು ಅಭಿಪ್ರಾಯಪಟ್ಟಿದ್ದವು. ನಂತರ ನ್ಯಾಯಮೂರ್ತಿ ಎಂ.ಕೆ. ಮುಖರ್ಜಿ ನೇತೃತ್ವದ ಆಯೋಗ ವಿಭಿನ್ನ ವರದಿ ನೀಡಿತ್ತು. ವಿಮಾನ ಅಪಘಾತದ ನಂತರವೂ ಸುಭಾಷ್‌ ಚಂದ್ರ ಬೋಸ್‌ ಅವರು ಬದುಕಿದ್ದರು ಎಂದು ಅಭಿಪ್ರಾಯಪಟ್ಟಿತ್ತು.ಮೊದಲ ಕಂತಿನ 33 ಕಡತಗಳನ್ನು ವರ್ಗೀಕರಣಗೊಳಿಸಿದ್ದ ಪ್ರಧಾನಿ ಕಚೇರಿ ಡಿಸೆಂಬರ್‌ 4ರಂದು ಎನ್‌ಎಐಗೆ ಹಸ್ತಾಂತರಿಸಿತ್ತು. ನಂತರ ಗೃಹ ಮತ್ತು ವಿದೇಶಾಂಗ ಸಚಿವಾಲಯಗಳು ಸಹ ಕಡತಗಳ ವರ್ಗೀಕರಣ ಪ್ರಕ್ರಿಯೆ ಆರಂಭಿಸಿ ಎನ್‌ಎಐಗೆ ಹಸ್ತಾಂತರಿಸಿದ್ದವು.ಅಪಘಾತದ ನಂತರವೂ ಬದುಕಿದ್ದರೇ!

ವಿಮಾನ ಅಪಘಾತದಲ್ಲಿ ಸುಭಾಷ್‌ ಚಂದ್ರ ಬೋಸ್‌ ಮೃತಪಟ್ಟಿದ್ದರು ಎಂದು ವರದಿಗಳು ಬಿತ್ತರವಾದ ಐದು ದಿನಗಳ ನಂತರವೂ ಬ್ರಿಟಿಷ್‌ ಆಡಳಿತದ ಹಿರಿಯ ಅಧಿಕಾರಿಗಳು ಅವರನ್ನು ‘ಯುದ್ಧ ಕೈದಿ’ ಎಂದು  ಬಿಂಬಿಸುವ ಸಾಧಕ–ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿದ್ದರು ಎನ್ನುವ ಅಂಶ ಬೆಳಕಿಗೆ ಬಂದಿದೆ.

ಇದರಿಂದ ಬೋಸ್ ಅವರು ಜೀವಂತವಾಗಿದ್ದರು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

‘ಬೋಸ್‌ ಅವರು ಎಲ್ಲಿದ್ದಾರೋ ಹಾಗೇ ಬಿಟ್ಟುಬಿಡುವುದು ಉತ್ತಮ. ಅವರನ್ನು ರಷ್ಯಾದವರು ಸ್ವಾಗತಿಸ ಬಹುದು’ ಎನ್ನುವ ಅಭಿಪ್ರಾಯಗಳನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದರು ಎನ್ನುವುದು ಬಹಿರಂಗಗೊಂಡಿದೆ.* ಬೋಸ್‌ ಅವರ ಧೈರ್ಯ ಮತ್ತು ದೇಶಭಕ್ತಿ ಬಗ್ಗೆ ಭಾರತೀಯರಿಗೆ ಹೆಮ್ಮೆ ಇದೆ.  ಇಂದಿನಿಂದ ನೇತಾಜಿಗೆ ಸಂಬಂಧಪಟ್ಟ ದಾಖಲೆಗಳ ವರ್ಗೀಕರಣ ಆರಂಭವಾಗಲಿದೆ

-ನರೇಂದ್ರ ಮೋದಿ, ಪ್ರಧಾನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.