ಶನಿವಾರ, ಜೂನ್ 19, 2021
22 °C

ನೈರ್ಮಲ್ಯ, ಭದ್ರತೆಗೆ ಹೊಸತೊಂದು ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬೆಂಗಳೂರು ಸೆರಗಿನಲ್ಲಿರುವ ತುಮಕೂರು ವೇಗವಾಗಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಬೇಡಿಕೆಗೆ ತಕ್ಕಂತೆ ಹೊಸ ಬಡಾವಣೆಗಳು, ನಿವೇಶನಗಳು ಸೃಷ್ಟಿಯಾಗುತ್ತಿವೆ. ಕಳೆದ ಕೆಲ ವರ್ಷದಿಂದ ಮಸುಕಾಗಿದ್ದ ರಿಯಲ್‌ ಎಸ್ಟೇಟ್ ವ್ಯವಹಾರ ಇದೀಗ ಮತ್ತೊಮ್ಮೆ ಗರಿಗೆದರಿದೆ.ಹೂಡಿಕೆಗಾಗಿ ನಿವೇಶನ ಖರೀದಿಸುವ ಪ್ರವೃತ್ತಿ ಮುಂದು­ವರಿದಿದೆ. ಇದು ಹಲವು ಬಡಾವಣೆಗಳಲ್ಲಿ ಸ್ವಚ್ಛತೆ ಮತ್ತು ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ನಗರಕ್ಕೆ ತಾಗಿಕೊಂಡಂತೆ ಇರುವ ಶಿರಾಗೇಟ್‌, ಹೆಗ್ಗೆರೆ, ಊರುಕೆರೆ, ಬೆಳಗುಂಬ, ದೇವರಾಯಪಟ್ಟಣ, ರಿಂಗ್‌ರಸ್ತೆ, ಕ್ಯಾತ್ಸಂದ್ರ ಪ್ರದೇಶದಲ್ಲಿ ಈ ಪ್ರವೃತ್ತಿಯ ದುಷ್ಪರಿಣಾಮಗಳು ಕಣ್ಣಿಗೆ ಹೊಡೆದಂತೆ ಗೋಚರಿಸುತ್ತವೆ.ಪುಂಡರ ಹಾವಳಿ: ೮ ಅಡಿಗೂ ಎತ್ತರ ಬೆಳೆದ ಬೇಲಿ ಗಿಡದ ಪೊದೆಯಲ್ಲಿ ಅಡಗಿ ಕುಳಿತರೆ ಹಗಲು ಹೊತ್ತೇ ಯಾರಿಗೂ ಕಾಣಿಸುವುದಿಲ್ಲ. ರಾತ್ರಿ ವೇಳೆ ಹೊಂಚು ಹಾಕಿ ಕಳ್ಳತನ ನಡೆಸಲು ಇಂಥ ಸ್ಥಳಗಳು ನೆರವಾಗುತ್ತವೆ. ಕಳ್ಳರು ಮುಂಜಾ­ಗ್ರತಾ ಕ್ರಮವಾಗಿ ಬೀದಿ ದೀಪಗಳನ್ನೂ ಒಡೆದು ಹಾಕು­ತ್ತಾರೆ. ಹೀಗಾಗಿ ಕಳ್ಳತನದ ನಂತರ ಓಡಿ ಹೋಗಲು, ಬೆನ್ನಟ್ಟಿ ಬಂದವರಿಂದ ತಪ್ಪಿಸಿಕೊಳ್ಳಲು ಖಾಲಿ ನಿವೇಶನಗಳು ಹೇಳಿ ಮಾಡಿಸಿದ ಸ್ಥಳಗಳಾಗಿವೆ.ವಾರ್ಡ್‌ ಸಂಖ್ಯೆ ೩ರಲ್ಲಿ (ಶಿರಾಗೇಟ್‌) ಹೆಣ್ಣು ಮಕ್ಕಳನ್ನು ಕಾಡಲು ಪುಂಡರು ಇವೇ ಬೇಲಿಗಳನ್ನು ಅಡ್ಡೆ ಮಾಡಿಕೊಂಡ ಬಗ್ಗೆ ದೂರುಗಳಿವೆ.‘ಟ್ಯೂಷನ್‌ ಕ್ಲಾಸ್‌ಗಳಿಂದ ಮನೆಗೆ ಹಿಂತಿರುಗುತ್ತಿದ್ದ ನಮ್ಮ ಬಡಾವಣೆಯ ಐದಾರು ಹೆಣ್ಣು ಮಕ್ಕಳ ಮೇಲೆ ಇಂಥ ಖಾಲಿ ನಿವೇಶನದ ಪೊದೆಗಳಲ್ಲಿಯೇ ಲೈಂಗಿಕ ದೌರ್ಜನ್ಯ ನಡೆದಿದೆ. ಒಂದು ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಶಿಕ್ಷೆಯೂ ಆಗಿದೆ. ಈ ವಿಷಯ ಗೊತ್ತಿದ್ದರೂ ಸ್ವಚ್ಛಗೊಳಿಸಲು ಮತ್ತು ಬೀದಿ ದೀಪದ ವ್ಯವಸ್ಥಿತ ನಿರ್ವಹಣೆಗೆ ನಗರಪಾಲಿಕೆ ಗಮನಹರಿಸಿಲ್ಲ. ಪೊಲೀಸರು ಖಾಲಿ ನಿವೇಶನಗಳನ್ನು ನಗರ ಭದ್ರತೆಗೆ ಇರುವ ಸಮಸ್ಯೆ ಎಂದು ಪರಿಗಣಿಸುತ್ತಿಲ್ಲ’ ಎಂದು ಮುಖಂಡ ಲಕ್ಷ್ಮೀನರಸಿಂಹರಾಜು ಪ್ರತಿಕ್ರಿಯಿಸಿದರು.ಚರಂಡಿ, ಶೌಚಗುಂಡಿ: ರೈಲ್ವೆಸ್ಟೇಷನ್, ಮಹಾಲಕ್ಷ್ಮೀ­ನಗರ ಸೇರಿದಂತೆ ಹಲವೆಡೆ ಖಾಲಿ ನಿವೇಶನಗಳು ಚರಂಡಿ­ಗಳಾಗಿಯೂ ಶೌಚಗುಂಡಿಗಳಾಗಿಯೂ ಬಳಕೆಯಾಗುತ್ತಿವೆ.‘ಚರಂಡಿಗಳು ಕಟ್ಟಿಕೊಂಡಿವೆ. ನಗರಪಾಲಿಕೆಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಕ್ಕದ ಖಾಲಿ ನಿವೇಶನಕ್ಕೆ ಚರಂಡಿ ನೀರು ಬಿಟ್ಟಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ನಿವಾಸಿಯೊಬ್ಬರು ವಿವರಿಸಿದರು. ಮಹಾತ್ಮಾ­ಗಾಂಧಿ ಜಿಲ್ಲಾ ಕ್ರೀಡಾಂಗಣದ ಹಿಂಭಾಗದ ಖಾಲಿ ನಿವೇಶನಗಳು ಬಯಲು ಶೌಚಾಲಯಗಳಾಗಿ ಬಳಕೆಯಾಗು­ತ್ತಿದ್ದು, ಸುತ್ತಲ ನಿವಾಸಿಗಳು ಗಬ್ಬು ವಾಸನೆ, ರೋಗ ಭೀತಿ­ಯಲ್ಲಿಯೇ ದಿನದೂಡಬೇಕಿದೆ.‘ಪ್ರತಿ ಬೇಸಿಗೆಯಲ್ಲಿ ಮನೆ ಮುಂದಿನ ಖಾಲಿ ಸೈಟ್‌­ಗಳಲ್ಲಿ­ರುವ ಬೇಲಿ ಪೊದೆಗಳಲ್ಲಿ ಹಂದಿಗಳು ಮರಿ ಹಾಕು­ತ್ತಿದ್ದವು. ಮಕ್ಕಳು ಓಡಾಡುವ ಜಾಗ, ಏನಾದರೂ ಅಪಾಯ­ವಾದೀತು ಎಂದು ಹೆದರಿ ಹೋದ ವರ್ಷ ನಾನೇ ಹಣ ಖರ್ಚು ಮಾಡಿ ಜೆಸಿಬಿಯಿಂದ ಸ್ವಚ್ಛ ಮಾಡಿಸಿದ್ದೆ. ಸೈಟ್ ತಗೊಂ­ಡೋರು ಅದನ್ನು ವರ್ಷಕ್ಕೊಂದು ಸಲವಾದರೂ ಸ್ವಚ್ಛ ಮಾಡಿಸಬೇಕು. ಇಲ್ಲದಿದ್ದರೆ ಸುತ್ತಲಿನವರಿಗೆ ತೊಂದರೆ’ ಎಂದು ಮಹಾಲಕ್ಷ್ಮೀನಗರದ ನಿವಾಸಿ ಬೊಮ್ಮಣ್ಣ ಹೇಳಿದರು.ಮೋಸದಾಟಕ್ಕೆ ಅವಕಾಶ: ಹೂಡಿಕೆಗಾಗಿ ನಿವೇಶನ ಖರೀದಿಸುವವರು ಮತ್ತೆ ಅತ್ತ ಮುಖ ಹಾಕುವುದಿಲ್ಲ. ಸರ್ಕಾರಿ ಅಧಿಕಾರಿಗಳಾದರೆ ವರ್ಗಾವಣೆಯಾಗಿ ಎಲ್ಲೆಲ್ಲೋ ಹೋಗಿರುತ್ತಾರೆ. ಹಲವು ನಿವೇಶನಗಳಿಗೆ ಸರಿಯಾದ ಖಾತೆಯೂ ಇರುವುದಿಲ್ಲ. ನೋಂದಣಿ ಸಂದರ್ಭ ನೋಂದಣಿ ಕಚೇರಿಗೆ ಕೊಟ್ಟಿರುವ ವಿಳಾಸದಲ್ಲಿ ಅವರು ವಾಸವೂ ಇರುವುದಿಲ್ಲ. ಇಂಥವಕ್ಕೇ ಹೊಂಚು ಹಾಕುವ ಕೆಲವು ರಿಯಲ್‌ ಎಸ್ಟೇಟ್ ಮಧ್ಯವರ್ತಿಗಳು ಒಂದೇ ನಿವೇಶನವನ್ನು ಹಲವರಿಗೆ ಮಾರಿ ಮೋಸ ಮಾಡುವ ಅಪಾಯ ಸದಾ ಇರುತ್ತದೆ ಎಂದು ಸಾರ್ವಜನಿಕರು ದೂರುತ್ತಾರೆ.‘ಹೂಡಿಕೆ ಉದ್ದೇಶದಿಂದ ನಿವೇಶನ ಕೊಂಡವರು ತಮ್ಮ ನಿವೇಶನಕ್ಕೆ ಕಾಂಪೌಂಡ್ ಹಾಕಿಸಿ, ಈ ಸ್ವತ್ತು ಇಂಥವರಿಗೆ ಸೇರಿದ್ದು ಎಂದು ಹಾಲಿ ವಿಳಾಸ ಸಹಿತ ದೂರವಾಣಿ ಸಂಖ್ಯೆ ಇರುವ ಫಲಕವನ್ನು ನಿಲ್ಲಿಸಬೇಕು. ಅಕ್ಕಪಕ್ಕದ ಮನೆ– ನಿವೇಶನ ಮಾಲೀಕರರೊಂದಿಗೆ ಪರಿಚಯ, ಸೌಹಾರ್ದ ಸಂಬಂಧ ಇಟ್ಟುಕೊಳ್ಳಬೇಕು. ಹತ್ತಾರು ಲಕ್ಷ ಖರ್ಚು ಮಾಡಿ ನಿವೇಶನ ಖರೀದಿಸಿದವರು ಕೆಲವು ಸಾವಿರ ಖರ್ಚು ಮಾಡಿ ಮುನ್ನೆಚ್ಚರಿಕೆ ವಹಿಸಿದರೆ ಹೂಡಿಕೆಯೂ ಸುರಕ್ಷಿತ, ಸುತ್ತಲಿನ ನಿವಾಸಿಗಳಿಗೂ ಕ್ಷೇಮ’ ಎಂದು ಅಭಿಪ್ರಾಯಪಡುತ್ತಾರೆ ಪತ್ರ ಬರಹಗಾರರಾಗಿ ಕೆಲಸ ಮಾಡುವ ರಾಜೇಂದ್ರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.