ಬುಧವಾರ, ಜನವರಿ 22, 2020
21 °C

ನೊಂದವರಿಗೆ ‘ಮನಸ್ವಿನಿ’, ನಿರ್ಲಕ್ಷಿತರಿಗೆ ‘ಮೈತ್ರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಕುಟುಂಬದಲ್ಲಿನ ಸಂಕಷ್ಟ, ಬಡತನ, ವರದಕ್ಷಿಣೆ ಪಿಡುಗಿನಿಂದ ಅನೇಕ ಮಹಿಳೆಯವರು ವಿವಾಹ ಮಾಡಿಕೊಳ್ಳದೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ನೊಂದ ಮಹಿಳೆಯರ ಸಂಕಷ್ಟ ನಿವಾರಣೆಗೆ ಸರ್ಕಾರ ‘ಮನಸ್ವಿನಿ’ ಹಾಗೂ ‘ಮೈತ್ರಿ’ಯಂತಹ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯವರು ತಿಳಿಸಿದರು.ನಗದ ಎಸ್‌ಜೆಎಂ ಸಭಾಂಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಮನಸ್ವಿನಿ, ಮೈತ್ರಿ ಯೋಜನೆಯ ಫಲಾನುಭವಿಗಳಿಗೆ ಮಾಸಾಶನ ಮಂಜೂರಾತಿ ಆದೇಶ ವಿತರಣೆ’ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು.‘ವಯಸ್ಸಾದರೂ ಮದುವೆಯಾಗದ ಹಾಗೂ ಮದುವೆಯಾಗಿಯೂ ಅನಿವಾರ್ಯ ಕಾರಣಗಳಿಂದ ಪತಿಯಿಂದ ದೂರವಿರುವ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಮನಸ್ವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಲೈಂಗಿಕ ಅಲ್ಪ ಸಂಖ್ಯಾತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ₨ 500 ಮಾಸಾಶನ ನೀಡುವ ‘ಮೈತ್ರಿ’ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗಳನ್ನು ಬಳಸಿಕೊಂಡು ಮಹಿಳೆಯರು ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಮತ್ತೊಬ್ಬರ ಮೇಲೆ ಅವಲಂಬಿತವಾಗದೆ ಸ್ವಾವಲಂಬಿಯಾಗಿ ಬದುಕುವಂತೆ’ ಸಚಿವರು ಸಲಹೆ ನೀಡಿದರು.ಸಚಿವರ ಮಾತು ಪೂರ್ಣಗೊಳ್ಳುವ ನಡುವೆಯೇ ನೊಂದ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯೊಬ್ಬರು, ‘ನಗರದಲ್ಲಿ ನಮ್ಮಂಥವರಿಗೆ ಮನೆ ಬಾಡಿಗೆ ಸಿಗುವುದು ಕಷ್ಟ. ಕೆಲವರು ಹೆಚ್ಚಿನ ಬಾಡಿಗೆ ಕೇಳುತ್ತಾರೆ. ಸ್ವಲ್ಪ ದಿನಗಳಲ್ಲೇ ಮನೆ ಖಾಲಿ ಮಾಡಿ ಎಂದು ಒತ್ತಾಯಿಸುತ್ತಾರೆ.ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಿ 9ವರ್ಷವಾದರೂ  ನಿವೇಶನ ದೊರೆತಿಲ್ಲ. ಇದು ಕೇವಲ ನನ್ನ ಸಮಸ್ಯೆಯಲ್ಲ. ನನ್ನಂಥ ಅನೇಕ ಮಹಿಳೆಯರು ಇದೇ ಸಮಸ್ಯೆ ಎದುರಿಸು ತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆಂಜನೇಯ ಅವರು ‘ಆಶ್ರಯ ಮನೆಗಾಗಿ 9 ಸಾವಿರ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿದವರಿಗೆಲ್ಲ ನಿವೇಶನ ಕೊಡಬೇಕೆಂದರೆ ಕನಿಷ್ಠ 400 ಎಕರೆ ಜಮೀನು ಬೇಕು. ಆದರೆ, ಅಷ್ಟು ಪ್ರಮಾಣದ ಖಾಲಿ ಭೂಮಿ ಇಲ್ಲ. ಆದ್ದರಿಂದ ಆ ಅರ್ಜಿಗಳನ್ನು ಪರಿಶೀಲಿಸಿ, ಅದರಲ್ಲಿ ನೈಜ ಫಲಾನುಭವಿಗಳನ್ನು ಗುರುತಿಸಿ, ಸಾಧ್ಯವಾದಷ್ಟು ಮಂದಿಗೆ ಇನ್ನೆರಡು ವರ್ಷಗಳಲ್ಲಿ ಆಶ್ರಯ ಮನೆ ನೀಡಲಾಗುವುದು ಎಂದು ಭರವಸೆ ನೀಡಿದರು.ಯೋಜನೆ ಜಾರಿಯಾದ ಎರಡು ತಿಂಗಳಲ್ಲಿಯೇ ಜಿಲ್ಲಾ ಆಡಳಿತದಿಂದ ಫಲಾನುಭವಿಗಳ ಸಮೀಕ್ಷೆ ಮಾಡಿ ಸೌಲಭ್ಯ ತಲುಪಿಸುವ ಕೆಲಸ ಮಾಡಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ ತಿಂಗಳು ಅಂಚೆ ಮೂಲಕ ಪಿಂಚಣಿಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಮನಸ್ವಿನಿ ಮತ್ತು ಮೈತ್ರಿಯಡಿ ಅರ್ಹರು ಬಿಟ್ಟುಹೋಗಿದ್ದಲ್ಲಿ ಇದಕ್ಕೆ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸಚಿವರು ತಿಳಿಸಿದರು.ಲೈಂಗಿಕ ಅಲ್ಪಸಂಖ್ಯಾತರರು ಮನೆ, ನಿವೇಶನ ನೀಡಿ ಎಂಬ ಬೇಡಿಕೆಯನ್ನು ಸಲ್ಲಿಸಿದ್ದು ಪರಿಶೀಲನೆ ನಡೆಸಿ ಸ್ಥಳದ ಲಭ್ಯತೆಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ನಾಯಕನಹಟ್ಟಿಯ ಫಲಾನುಭವಿಯೊಬ್ಬರು ತಂದೆ ಮರಣದ ನಂತರ ಕುಟುಂಬದ ನಿರ್ವಹಣೆ ಕಷ್ಟವಾಗಿದ್ದು ಇಬ್ಬರು ಸಹೋದರಿಯರು ಸ್ನಾತಕೋತ್ತರ ಪದವಿ ಪಡೆದಿದ್ದರೂ ಕೆಲಸವಿಲ್ಲದೆ ಸಂಕಷ್ಟವನ್ನು ಎದುರಿಸುವಂತಾಗಿದೆ. ಮನೆ, ನಿವೇಶನ ಇಲ್ಲ ಎಂದು ಮನವಿ ಮಾಡಿದಾಗ ಸಚಿವರು ನಾಯಕನಹಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ನಿವೇಶನ ನೀಡಿ ಆಶ್ರಯದಲ್ಲಿ ಮನೆ ನೀಡಲು ಉಪವಿಭಾಗಾಧಿಕಾರಿಗಳಿಗೆ ತಿಳಿಸಿದರು.ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ವಿಚ್ಛೇದನ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ಕಡಿಮೆ. ಆದರೆ, ನಗರಪ್ರದೇಶಗಳಲ್ಲಿ ಹೆಚ್ಚು. ಇದೊಂದು ಸಾಮಾಜಿಕ ಪಿಡುಗಾಗಿದೆ. ಇದನ್ನು ಗುರುತಿಸಿದ ಸರ್ಕಾರ ಮಾನವೀಯತೆ ದೃಷ್ಟಿಯಿಂದ ₨ 500 ಮಾಸಾಶನ ನೀಡುತ್ತಿರುವುದು ಶ್ಲಾಘನೀಯ ಎಂದರು.‘ಇಲ್ಲಿ ಆಗಮಿಸಿರುವ ಶೇ 80ರಷ್ಟು ಮಹಿಳೆಯರಿಗೆ ಮನೆಗಳಿಲ್ಲ. ಬಂದಿರುವ ಅರ್ಜಿಗಳಿಗೆಲ್ಲ ಮನೆ ಕೊಡುವುದು ಅಸಾಧ್ಯ. ಸದ್ಯ 40 ಎಕರೆ ಜಾಗ ಖರೀದಿಸಿ ಒಂದು ಸಾವಿರ ಮಂದಿಗೆ ಮಾತ್ರ ಲಾಟರಿ ಮೂಲಕ ನಿಜವಾದ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಆಶ್ರಯ ಮನೆ ಎಲ್ಲರಿಗೂ ಸಿಗಬೇಕಾದರೆ ಒಂದರ ಮನೆ ಮೇಲೆ ಮತ್ತೊಂದು ಮನೆ ನಿರ್ಮಾಣ (ಅಪಾರ್ಟ್ ಮೆಂಟ್ ರೀತಿ) ಮಾಡಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಪ್ರಾಸ್ತವಿಕವಾಗಿ ಮಾತನಾಡಿ, ಸುಮಾರು 900 ಫಲಾನುಭವಿಗಳನ್ನು ಗುರುತಿಸಿ ಮಂಜೂರಾತಿ ಪತ್ರ ವಿತರಿಸಲಾಗಿದೆ. ‘ಮನಸ್ವಿನಿ’ಯಲ್ಲಿ 663 ಹಾಗೂ ‘ಮೈತ್ರಿ’ಯಲ್ಲಿ 11 ಮಂದಿಗೆ ನೀಡಲಾಗಿದೆ. ಉಳಿದವರಿಗೂ ಶೀಘ್ರವೇ ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ, ಜಿಲ್ಲಾ ಪಂಚಾಯ್ತಿ ಸಿಇಒ ನಾರಾಯಣ ಸ್ವಾಮಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಎಂ. ನಾಗರಾಜ್‌, ತಹಶೀಲ್ದಾರ್‌ ಕಾಂತರಾಜ್‌ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)