ಭಾನುವಾರ, ಆಗಸ್ಟ್ 9, 2020
23 °C

ನ್ಯಾಯಬೆಲೆ ಅಂಗಡಿ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಬೆಲೆ ಅಂಗಡಿ ಅವ್ಯವಹಾರ

ಚಿತ್ರದುರ್ಗ: ನ್ಯಾಯಬೆಲೆ ಅಂಗಡಿಗಳಲ್ಲಿನ ಅವ್ಯವಹಾರ ವಿರೋಧಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಯುವಕಾಂಗ್ರೆಸ್ ವತಿಯಿಂದ ಮಂಗಳವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಬಡವರಿಗೆ ಅನೂಕೂಲವಾಗಲಿ ಎಂದು ನ್ಯಾಯಬೆಲೆ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ಯಾಯವೇ ಹೆಚ್ಚು. ಸಮರ್ಪಕವಾಗಿ ಆಹಾರ ಪದಾರ್ಥಗಳನ್ನು ವಿತರಿಸುತ್ತಿಲ್ಲ ಎಂದು ದೂರಿದರು.ಬಿಪಿಎಲ್ ಪಡಿತರ ಕಾರ್ಡ್‌ದಾರರಿಗೆ ರೂ 3ಗೆ 29 ಕೆ.ಜಿ. ಅಕ್ಕಿ, ರೂ 2ಗೆ 9 ಕೆ.ಜಿ. ಗೋಧಿ, ಸಕ್ಕರೆ 1 ಕೆ.ಜಿ. 13.50 ಒಟ್ಟು ರೂ 118.50 ವೆಚ್ಚವಾಗುತ್ತದೆ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್‌ದಾರರಿಂದ ರೂ 150 ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಕಾರ್ಡ್‌ದಾರರಿಗೆ ಸರಿಯಾದ ರೀತಿಯಲ್ಲಿ ರಸೀದಿ ನೀಡುವುದಿಲ್ಲ. ಕೇಳಿದರೆ ದಬ್ಬಾಳಿಕೆ ಮಾಡುತ್ತಾರೆ. ಅಂಗಡಿಗಳನ್ನು ರಜಾ ದಿನಗಳನ್ನು ಹೊರತುಪಡಿಸಿ ತಿಂಗಳ ಪೂರ್ತಿ ತೆಗೆದಿರಬೇಕು ಎಂದು ನಿಯಮವಿದ್ದರೂ ಯಾರೂ ಪಾಲಿಸುತ್ತಿಲ್ಲ. ತಿಂಗಳಲ್ಲಿ ಕೊನೆಯ ದಿನಗಳಲ್ಲಿ ಮಾತ್ರ ಆಹಾರ ಧಾನ್ಯ ವಿತರಿಸುತ್ತಾರೆ.ಇದರಿಂದ ಜನತೆಗೆ ತೊಂದರೆಯಾಗುತ್ತಿದೆ. ತಿಂಗಳ ಕೊನೆಯಲ್ಲಿ ಹಣವಿಲ್ಲದೆ ಪಡಿತರ ಖರೀದಿ ಮಾಡದ ಸ್ಥಿತಿ ನಿರ್ಮಾಣ ಆಗುತ್ತಿದೆ. ಆದ್ದರಿಂದ, ಮೊದಲನೇ ವಾರದಲ್ಲಿಯೇ ಪಡಿತರ ಧಾನ್ಯ ವಿತರಿಸಬೇಕು. ಸೀಮೆಎಣ್ಣೆ ವಿತರಣೆಯಲ್ಲಿಯೂ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.ಪಡಿತರ ವಿತರಣೆಯಲ್ಲಿ ಸರ್ಕಾರ ಸಾಬೂನು ಮತ್ತು ಸಬೀನಾ ಪುಡಿ ವಿತರಿಸುವಂತೆ ಸೂಚಿಸಿಲ್ಲ. ಆದರೆ, ನ್ಯಾಯ ಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಬಲವಂತವಾಗಿ ಮಾರಾಟ ಮಾಡುತ್ತಾರೆ. ಇವುಗಳನ್ನು ಖರೀದಿಸಿದರೆ ಮಾತ್ರ ಇತರ ವಸ್ತುಗಳನ್ನು ನೀಡುವುದಾಗಿ ಹೇಳುತ್ತಾರೆ. ಜಿಲ್ಲೆಯಲ್ಲಿರುವ ಬಹುತೇಕ ಪಡಿತರ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಧಾನ್ಯ ವಿತರಿಸುತ್ತಿಲ್ಲ.

 

ಇದರಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ನ್ಯಾಯ ಬೆಲೆ ಅಂಗಡಿಗಳಿಗೆ ಬೆಂಬಲ ನೀಡಿ ಜನತೆಗೆ ಮೋಸ ಮಾಡುತ್ತಿದ್ದಾರೆ.  ನ್ಯಾಯ ಬೆಲೆ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡುವ ಮೂಲಕ ಬಡ ಜನತೆಗೆ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಚಿತ್ರದುರ್ಗ ಲೋಕಸಭಾ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಖಾಲಿದ್ ಹುಸೇನ್, ತಿಪ್ಪೇಸ್ವಾಮಿ, ಮೋಹನ್, ಮುಖೇಶ್, ಹನಿಫ್, ಮಹಮ್ಮದ್ ನಾಹಿದ್, ಸೈಯದ್ ಮೊಯಿನುದ್ದೀನ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.