ಶನಿವಾರ, ಮೇ 21, 2022
28 °C
ನ್ಯಾ.ನಾಗಮೋಹನ್‌ದಾಸ್ ಅವರ `ಅರಿವು ಬೆಳಕು' ಕೃತಿ ಲೋಕಾರ್ಪಣೆ

`ನ್ಯಾಯಾಧೀಶರು ಆತ್ಮಚರಿತ್ರೆ ರಚನೆಗೆ ಮುಂದಾಗಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ನ್ಯಾಯಾಲಯದ ಶಾಸ್ತ್ರ ಭಾಷೆ ಸರಳವಾಗಿ ಕನ್ನಡಕ್ಕೆ ದಕ್ಕುವಂತಾದರೆ ಭಾಷೆ ಇನ್ನಷ್ಟು ಶ್ರೀಮಂತಗೊಳ್ಳುತ್ತದೆ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.ಸ್ಫೂರ್ತಿ ಪ್ರಕಾಶನವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ `ಅರಿವು ಬೆಳಕು' ಪುಸ್ತಕವನ್ನು ಬಿಡುಗಡೆ ಮಾಡಿ  ಮಾತನಾಡಿದರು.`ನ್ಯಾಯಾಲಯದ ಭಾಗವಾಗಿರುವ ವಕೀಲರು, ನ್ಯಾಯಾಧೀಶರು ಆತ್ಮಚರಿತ್ರೆಯ ರಚನೆಗೆ ಮುಂದಾಗಬೇಕು. ಇದರಿಂದ ಜೀವನದ ಸಾಮಾನ್ಯ ಸಂಗತಿಗಳ ಜತೆಯಲ್ಲಿಯೇ ಈ ವೃತ್ತಿಯ ಒಳ ಹೊರಗುಗಳು ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ' ಎಂದು ತಿಳಿಸಿದರು.`ನಿರ್ಲಿಪ್ತ ಸ್ಥಿತಿಯಲ್ಲಿದ್ದಾಗ ಮಾತ್ರ ನ್ಯಾಯ, ಅನ್ಯಾಯದ ಸೂಕ್ಷ್ಮಗಳನ್ನು ಅವಲೋಕಿಸಲುಸಾಧ್ಯವಿದೆ. ಇಡೀ ಪುಸ್ತಕವು ವಿವಿಧ ವಿದ್ಯಮಾನಗಳ ಚರ್ಚೆಯ ಜತೆಯಲ್ಲಿಯೇ ಒಂದು ಬಗೆಯ ನಿರ್ಲಿಪ್ತ ಭಾವವನ್ನು ತಾಳುವ ಮೂಲಕ ಓದುಗರಿಗೆ ಹಲವು ವಿಚಾರಗಳ ಕುರಿತು ತೀರ್ಪು ಒದಗಿಸುತ್ತದೆ' ಎಂದು ತಿಳಿಸಿದರು.`ದೇಶದಲ್ಲಿ ಎಲ್ಲ ವರ್ಗದ ಜನರ ಅಂತರಾತ್ಮ ಜಾಗೃತಗೊಳ್ಳಲು ಭಕ್ತಿಪಂಥ ಚಳವಳಿ ಹಾಗೂ ಅಕ್ಷರ ಕ್ರಾಂತಿ ಪ್ರಮುಖ ಕಾರಣವಾಗಿದೆ. ಚಾರಿತ್ರಿಕ ಘಟನೆಗಳು, ಪ್ರಸಕ್ತ ಕಾಲದ ವಿದ್ಯಮಾನಗಳನ್ನು ಒಳಗೊಂಡ ಪುಸ್ತಕ ತರ್ಕಬದ್ಧ ನ್ಯಾಯವನ್ನು ಒದಗಿಸುತ್ತದೆ' ಎಂದು ಹೇಳಿದರು.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ದಂತ ಸಿಂಹಾಸನವನ್ನು ಅಲಂಕರಿಸಿರುವ ನ್ಯಾಯಾಲಯದ ಆಗುಹೋಗುಗಳ ಬಗ್ಗೆಯೂ ಸದಾ ಚರ್ಚೆನಡೆಯಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ವೃದ್ಧಿಸುತ್ತದೆ' ಎಂದು ಹೇಳಿದರು.ಲೇಖಕಿ ಡಾ.ಕೆ.ಆರ್. ಸಂಧ್ಯಾರೆಡ್ಡಿ, `ವಿದ್ವತ್ತು ಪ್ರದರ್ಶನ ಹಾಗೂ ವಿಮರ್ಶಕರಿಗಾಗಿ ಪುಸ್ತಕಗಳನ್ನು ರಚಿಸುವವರ ನಡುವೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಪುಸ್ತಕ ಹೊರತಂದಿರುವುದು ನಿಜಕ್ಕೂ ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.`ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅತ್ಯಾಚಾರ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರ ಪರವಾಗಿ ಸಮರ್ಪಕ ಕಾನೂನು ಜಾರಿಯಾಗುವ ನಿಟ್ಟಿನಲ್ಲಿ ಎಲ್ಲ ವಕೀಲರು, ನ್ಯಾಯಾಧೀಶರು ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.