ಮಂಗಳವಾರ, ಮೇ 18, 2021
22 °C

ಪಂಚಾಯತ್ ತಿದ್ದುಪಡಿ ಮಸೂದೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮ ಪಂಚಾಯತ್‌ಗಳಿಗೆ ನೀಡಲಾದ ಸಂವಿಧಾನಬದ್ಧ ಅಧಿಕಾರದ ಮೇಲೆ ಮತ್ತೊಂದು ಗದಾಪ್ರಹಾರ ನಡೆದಿದ್ದು, ಈಚೆಗೆ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಅಂಗೀಕರಿಸುವುದರ ಮೂಲಕ ಅನ್ಯಾಯ ಎಸಗಿದೆ ಎಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಪ್ರಧಾನ ಕಾರ್ಯದರ್ಶಿ ದಾಮೋದರ ಆಚಾರ್ಯ ತಿಳಿಸಿದ್ದಾರೆ.ಸಭಾಧ್ಯಕ್ಷರು ಮತ್ತು ವಿರೋಧ ಪಕ್ಷಗಳ ತೀವ್ರ ಅಸಮಾಧಾನದ ನಡುವೆಯೂ ಈ ಮಸೂದೆಯನ್ನ ತರಾತುರಿಯಲ್ಲಿ ಅಂಗೀಕಾರ ಮಾಡಲಾಗಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿಂತಿರುವ ಪಂಚಾಯತ್ ವ್ಯವಸ್ಥೆಯ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರ್ಲಕ್ಷ್ಯಿಸಿದೆ ಎಂದು ದೂರಿದ್ದಾರೆ.`ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಸಭೆಗಳ ಸಾರ್ವಭೌಮತೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಈ ಮಸೂದೆಯಿಂದ ಸತತವಾಗಿ ಗ್ರಾಮ ಸಭೆ ನಡೆಸದ ಪಂಚಾಯತ್ ಸದಸ್ಯರ ಹಾಗೂ ಅಧ್ಯಕ್ಷರನ್ನು ಅನರ್ಹಗೊಳಿಸುವ ಅಧಿಕಾರವನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಿರುವುದು ಸರಿಯಲ್ಲ. ಈ ಮಸೂದೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ' ಎಂದಿರುವ ಅವರು, `ಜನಪ್ರತಿನಿಧಿಗಳಿಗೆ ಸಂವಿಧಾನಾತ್ಮಕವಾಗಿಯೇ ನೀಡಲಾದ ಹಕ್ಕುಗಳನ್ನು ಚಲಾಯಿಸಲು ಈ ಮಸೂದೆ ಅಡ್ಡಿಯಾಗುತ್ತದೆ.

ಗ್ರಾಮಸಭೆಗಳನ್ನು ನಡೆಸದೇ ಇರಲು ಹಲವು ಕಾರಣಗಳಿರುತ್ತದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು' ಎಂದು ಹೇಳಿದ್ದಾರೆ.`ಚುನಾಯಿತ ಪ್ರತಿನಿಧಿಗಳು ಅಧಿಕಾರವನ್ನು ಸಮರ್ಥವಾಗಿ ಬಳಸುವ ಬಗ್ಗೆ, ಯೋಜನೆಗಳ ಮೂಲಕ ಗ್ರಾಮವನ್ನು ಸಶಕ್ತವಾಗಿಸುವ ಬದಲು ಅಧಿಕಾರಶಾಹಿಗಳಿಗೆ ಸರ್ಕಾರ ಮನ್ನಣೆ ನೀಡುತ್ತಿರುವುದು ಬೇಸರದ ವಿಚಾರ. ಇದರಿಂದ ಪಟ್ಟಭದ್ರ ಹಿತಾಸಕ್ತಿಯನ್ನು ಪೋಷಿಸಿದಂತಾಗುತ್ತದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು' ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.