ಮಂಗಳವಾರ, ಏಪ್ರಿಲ್ 13, 2021
25 °C

ಪಕ್ಷೇತರ ಶಾಸಕರಿಂದಲೂ ಭೇಟಿ; ಬೆಂಬಲ ಕೋರಿದ ಪ್ರಣವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಷ್ಟ್ರಪತಿ ಚುನಾವಣೆಯಲ್ಲಿ ತಮ್ಮ ಮತ ಯಾರಿಗೆ ಎಂಬುದನ್ನು ಇನ್ನೂ ನಿರ್ಧರಿಸದ ಪಕ್ಷಗಳೂ ನನ್ನ ಉಮೇದುವಾರಿಕೆಗೆ ಬೆಂಬಲ ನೀಡಬೇಕು~ ಎಂದು ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಮನವಿ ಮಾಡಿದರು.ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಮತ ಯಾಚಿಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, `ಯುಪಿಎ ಜೊತೆ ಗುರುತಿಸಿಕೊಂಡಿರದ ಪಕ್ಷಗಳಾದ ಸಂಯುಕ್ತ ಜನತಾದಳ (ಜೆಡಿಯು), ಶಿವಸೇನೆ, ಸಿಪಿಎಂ, ಫಾರ್ವರ್ಡ್ ಬ್ಲಾಕ್, ಜೆಡಿಎಸ್ ಸಹ ನನ್ನನ್ನೇ ಬೆಂಬಲಿಸಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ನನಗೇ ಬೆಂಬಲ ನೀಡಬೇಕು~ ಎಂದು ಕೋರಿದರು.`ಕಾಂಗ್ರೆಸ್‌ಗೆ ದೊಡ್ಡ ಇತಿಹಾಸವಿದೆ. ನಾನು ಪಕ್ಷದಿಂದ ದೂರ ಉಳಿದ ಮಾತ್ರಕ್ಕೆ, ಸವಾಲುಗಳನ್ನು ಎದುರಿಸಲು ಅಲ್ಲಿ ಸಮರ್ಥ ನಾಯಕರು ಇಲ್ಲವಾಗುತ್ತಾರೆ ಎಂಬ ವಾದ ಸರಿಯಲ್ಲ. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರಿಗೆ ಕೊರತೆ ಇಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪತ್ರಿಕಾಗೋಷ್ಠಿಯುದ್ದಕ್ಕೂ ಲವಲವಿಕೆಯಿಂದ ಮಾತನಾಡಿದ ಪ್ರಣವ್, `ದಶಕಗಳ ಕಾಲ ನಾನು ರಾಜಕೀಯ, ಆಡಳಿತ, ಸರ್ಕಾರದ ಕುರಿತು ಮಾತನಾಡಿದ್ದೇನೆ. ಇನ್ನು ಇಂಥ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ.ರಾಷ್ಟ್ರಪತಿ ಹುದ್ದೆ ಪಕ್ಷಗಳ ಎಲ್ಲೆಯನ್ನು ಮೀರಿದೆ~ ಎಂದು ಹೇಳಿ, ಮಂದಹಾಸ ಬೀರಿದರು. ರಾಷ್ಟ್ರಪತಿ ಚುನಾವಣೆಗೆ ಯುಪಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಪ್ರಣವ್ ಬೆಂಗಳೂರಿಗೆ ನೀಡಿದ ಮೊದಲ ಭೇಟಿ ಇದು. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತಿತರರು ಹಾಜರಿದ್ದರು. ಮತಯಾಚನೆ ವೇಳೆ, ಕೇಂದ್ರ ಸಚಿವರಾದ ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಇದ್ದರು.ದೇವೇಗೌಡ ಭೇಟಿ:
ಪ್ರಣವ್ ಅವರು ನಂತರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಮಾತುಕತೆ ನಡೆಸಿದರು.ಪ್ರಣವ್ ಅವರ ಪರ ಮತ ಚಲಾಯಿಸುವುದಾಗಿ ಜೆಡಿಎಸ್ ಈಗಾಗಲೇ ಘೋಷಿಸಿದೆ. ದೇವೇಗೌಡರ ಭೇಟಿ ಸಂದರ್ಭದಲ್ಲಿ ಪರಮೇಶ್ವರ್, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ ಮಿಸ್ತ್ರಿ ಜೊತೆಗಿದ್ದರು.ಪಕ್ಷೇತರರ ಭೇಟಿ: ಪಕ್ಷೇತರ ಶಾಸಕರಾದ ಗೂಳಿಹಟ್ಟಿ ಶೇಖರ್, ಪಿ.ಎಂ. ನರೇಂದ್ರಸ್ವಾಮಿ, ಡಿ. ಸುಧಾಕರ್, ವೆಂಕಟರಮಣಪ್ಪ ಹಾಗೂ ಶಿವರಾಜ್ ತಂಗಡಗಿ ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಣವ್ ಅವರನ್ನು ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ಭೇಟಿ ಮಾಡಿ ಬೆಂಬಲ ಸೂಚಿಸಿದರು.ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಅವರೂ ಪ್ರಣವ್ ಅವರನ್ನು ಭೇಟಿ ಮಾಡಿ, ಬೆಂಬಲ ಸೂಚಿಸಿದರು. ಪ್ರಣವ್ ಭಾನುವಾರ ರಾತ್ರಿಯೇ ನವದೆಹಲಿಗೆ ಹಿಂದಿರುಗಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.