ಸೋಮವಾರ, ಏಪ್ರಿಲ್ 19, 2021
25 °C

ಪಡಿತರ ಅಂಗಡಿಗಳಲ್ಲಿ ಮತ್ತೆ ಸಬ್ಸಿಡಿ ಬೇಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಡಿತರ ಅಂಗಡಿಗಳ ಮೂಲಕ ಮತ್ತೆ  ಸಬ್ಸಿಡಿ ದರದಲ್ಲಿ ಬೇಳೆಕಾಳುಗಳ ಮಾರಾಟ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. 

ಹವಾಮಾನ ವೈಪರೀತ್ಯ ಮತ್ತು ಮಳೆ ಅಭಾವದಿಂದ ಈ ಬಾರಿ ಬೇಳೆಕಾಳುಗಳ ಉತ್ಪಾದನೆ ಕುಸಿದಿದೆ. ಇದರಿಂದ ಕಾಳಸಂತೆಯಲ್ಲಿ ಬೇಳೆಕಾಳುಗಳ ಬೆಲೆ ಗಗನಕ್ಕೇರುವ ಸಾಧ್ಯತೆ ಇದ್ದು, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟದಿರಲು ಸರ್ಕಾರ ತನ್ನ ಹಳೆಯ ಯೋಜನೆಯನ್ನೇ ಇನ್ನಷ್ಟು ಸುಧಾರಣೆಗೊಳಿಸಿ ಮತ್ತೆ ಜಾರಿಗೆ ತರುವ ಸಾಧ್ಯತೆ ಇದೆ. 

`ಪ್ರಸಕ್ತ ಬಾರಿ ಬೇಳೆಕಾಳುಗಳ ಇಳುವರಿ ತೀವ್ರವಾಗಿ ಕುಸಿದಿದೆ. ಈ ನಿಟ್ಟಿನಲ್ಲಿ ಮತ್ತೆ ಪಡಿತರ ಅಂಗಡಿಗಳ ಮೂಲಕ ಬೇಳೆಕಾಳುಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ಕೆಲವು ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ~ ಎಂದು ಆಹಾರ ಸಚಿವ ಕೆ.ವಿ ಥಾಮಸ್ ಬುಧವಾರ ಇಲ್ಲಿ ನಡೆದ `ಆಹಾರ ಸಮ್ಮೇಳನ~ದಲ್ಲಿ ಅಭಿಪ್ರಾಯಪಟ್ಟರು.

ಆಮದು ಮಾಡಿಕೊಳ್ಳುವ ಬೇಳೆಕಾಳುಗಳನ್ನು ಕೆ.ಜಿಗೆ ರೂ. 10 ರಂತೆ ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಮೂಲಕ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಕೃಷಿ ಮತ್ತು ವಾಣಿಜ್ಯ ಸಚಿವಾಲಯದ ಜತೆ ಮಾತುಕತೆ ನಡೆಸಿದ್ದೇವೆ ಎಂದು ಥಾಮಸ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ 2008ರ ನವೆಂಬರ್‌ನಲ್ಲಿ ಪಡಿತರ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ಬೇಳೆಕಾಳುಗಳ ಮಾರಾಟ ಪ್ರಾರಂಭಿಸಿತ್ತು. ಈ ಯೋಜನೆಯಡಿ  ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಮತ್ತು ಕೆಳಗಿರುವ (ಬಿಪಿಎಲ್) ಕುಟುಂಬಗಳು ಕೆ.ಜಿಗೆ ರೂ. 10 ರಂತೆ ಬೇಳೆಕಾಳು ಪಡೆಯಬಹುದಿತ್ತು. ಆದರೆ, ಇದರಲ್ಲಿ ರಾಜ್ಯಗಳ ಪಾಲು ಕಡಿಮೆ ಇದ್ದಿದ್ದರಿಂದ ಕಳೆದ ವರ್ಷ ಇದನ್ನು ನಿಲ್ಲಿಸಲಾಗಿತ್ತು.

ಯೋಜನೆ ಮತ್ತೆ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಲಾಗಿದೆ. ಸಚಿವ ಸಂಪುಟದ ಅನುಮೋದನೆ ಲಭಿಸುತ್ತಿದ್ದಂತೆ ಮತ್ತೆ ಪಡಿತರ ಅಂಗಡಿಗಳಲ್ಲಿ ಬೇಳೆ ಲಭಿಸಲಿದೆ. ಇದರಿಂದ ಬೆಲೆ ಏರಿಕೆ ನಿಯಂತ್ರಿಸಬಹುದು ಎಂದು ಥಾಮಸ್ ಹೇಳಿದ್ದಾರೆ.

ಪ್ರಪಂಚದಲ್ಲಿಯೇ ಅತಿ ಹೆಚ್ಚು ಬೇಳೆಕಾಳು ಬೆಳೆಯುವ ಮತ್ತು ಬಳಸುವ ದೇಶ ಭಾರತ. ಆದರೆ, 2011-12ನೇ ಸಾಲಿನ ಬೆಳೆ ವರ್ಷದಲ್ಲಿ (ಜುಲೈ-ಜೂನ್) ಬೇಳೆಕಾಳುಗಳ ಉತ್ಪಾದನೆ 17.21 ದಶಲಕ್ಷ ಟನ್‌ಗಳಿಗೆ ಕುಸಿತ ಕಂಡಿದೆ.  2010-11ನೇ ಸಾಲಿನಲ್ಲಿ ದಾಖಲೆ ಪ್ರಮಾಣ ಅಂದರೆ 18.24 ದಶಲಕ್ಷ ಟನ್‌ಗಳಷ್ಟು ಬೇಳೆಕಾಳು ಉತ್ಪಾದನೆ ಆಗಿತ್ತು.  ಬೇಳೆಕಾಳು ಬೆಳೆಯುವ ಪ್ರದೇಶವೂ 32.83 ಲಕ್ಷ ಹೇಕ್ಟರ್‌ಗಳಿಂದ 20.54 ಲಕ್ಷ ಹೇಕ್ಟರ್‌ಗಳಿಗೆ ತಗ್ಗಿದೆ. ದೇಶದಲ್ಲಿ ಬೇಳೆಕಾಳುಗಳ ಬೇಡಿಕೆ 18.84 ಲಕ್ಷ ಟನ್‌ಗಳಷ್ಟಿದೆ.  ದೇಶೀಯ ಬೇಡಿಕೆ ಪೂರೈಸಲು ಕಳೆದ ಹಣಕಾಸು ವರ್ಷದಲ್ಲಿ 2.8 ದಶಲಕ್ಷ ಟನ್‌ಗಳಷ್ಟು ಬೇಳೆ ಕಾಳು ಆಮದು ಮಾಡಿಕೊಳ್ಳಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.