ಭಾನುವಾರ, ಮೇ 22, 2022
23 °C

ಪತ್ನಿ, ಮಗಳ ಕೊಂದು ವ್ಯಕ್ತಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವ್ಯಕ್ತಿಯೊಬ್ಬರು ಪತ್ನಿ ಮತ್ತು ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ಮುಖ್ಯರಸ್ತೆ ಸಮೀಪದ ಸೌದಾಮಿನಿ ಲೇಔಟ್‌ನಲ್ಲಿ ಶನಿವಾರ ರಾತ್ರಿ ನಡೆದಿದೆ.ಸೌದಾಮಿನಿ ಲೇಔಟ್‌ನ ವಾಟರ್ ಟ್ಯಾಂಕ್ ರಸ್ತೆ ನಿವಾಸಿ ಎಚ್.ಆರ್.ಶ್ರೀನಿವಾಸ್ (40) ಅವರು ಪತ್ನಿ ಗಾಯಿತ್ರಿ (36) ಮತ್ತು ಮಗಳು ಪೂರ್ಣಿಮಾ (12) ಅವರನ್ನು ಕೊಲೆ ಮಾಡಿ ನಂತರ ನೇಣು ಹಾಕಿಕೊಂಡಿದ್ದಾರೆ.ಶ್ರೀನಿವಾಸ್ ಅವರು ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಜೀವ ವಿಮಾ ನಿಗಮದ (ಎಲ್‌ಐಸಿ) ಕಚೇರಿಯಲ್ಲಿ ಗುಮಾಸ್ತರಾಗಿದ್ದರು. ದಂಪತಿ ವಿವಾಹವಾಗಿ 15 ವರ್ಷಗಳಾಗಿದ್ದವು. ಪೂರ್ಣಿಮಾ ಚುಂಚಘಟ್ಟ ಮುಖ್ಯರಸ್ತೆಯ ಸಿಲಿಕಾನ್‌ಸಿಟಿ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಳು. ಶ್ರೀನಿವಾಸ್ ಅವರ ತಂದೆ ರಾಮಾಂಜನಪ್ಪ ಮತ್ತು ಸಹೋದರ ಅಮರ್‌ನಾರಾಯಣ್ ಪಕ್ಕದ ಮನೆಯಲ್ಲೇ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪತ್ನಿ ಮತ್ತು ಮಗಳು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಶ್ರೀನಿವಾಸ್ ಅವರಿಬ್ಬರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಬಳಿಕ ಅವರೂ ನೇಣು ಹಾಕಿಕೊಂಡಿದ್ದಾರೆ. ಪೂರ್ಣಿಮಾಳ ಸ್ನೇಹಿತೆ ಮಧುವಂತಿ ಎಂಬಾಕೆ ಭಾನುವಾರ ಬೆಳಿಗ್ಗೆ ತನ್ನ ಸ್ನೇಹಿತೆ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.`ಸ್ನೇಹಿತೆ ಪೂರ್ಣಿಮಾಳ ಮನೆಗೆ ಹೋದಾಗ ಮುಂಬಾಗಿಲು ತೆರೆದಿತ್ತು. ಒಳ ಹೋಗಿ ನೋಡಿದಾಗ ಪೂರ್ಣಿಮಾಳ ತಂದೆ ನೇಣು ಹಾಕಿಕೊಂಡಿರುವುದು ಗೊತ್ತಾಯಿತು. ಇದರಿಂದ ಹೆದರಿದ ನಾನು ಅಳಲಾರಂಭಿಸಿದೆ. ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲಿದ್ದ ಪೂರ್ಣಿಮಾ ಮತ್ತು ಅವರ ತಾಯಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಕೂಡಲೇ ಪೂರ್ಣಿಮಾಳ ಚಿಕ್ಕಪ್ಪನ ಮನೆಗೆ ಹೋಗಿ ವಿಷಯ ತಿಳಿಸಿದೆ~ ಎಂದು ಮಧುವಂತಿ ಹೇಳಿದಳು.ಶ್ರೀನಿವಾಸ್‌ರ ಮತ್ತೊಬ್ಬ ಸಹೋದರ ಮೋಹನ್ ಎಂಬುವರು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಮೋಹನ್ ಅವರು ಹಣಕಾಸಿನ ಸಮಸ್ಯೆಯಿಂದ ನಾಲ್ಕು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು.ಸಹೋದರನ ಸಾವಿನಿಂದ ಶ್ರೀನಿವಾಸ್ ಬೇಸರಗೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ `ನನ್ನ ಸಾವಿಗೆ ಯಾರು ಕಾರಣರಲ್ಲ. ಸಹೋದರ ಮೋಹನ್‌ಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಬೇಸರವಾಗಿದೆ~ ಎಂದು ಪತ್ರ ಬರೆದಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.`ದಂಪತಿ ಅನ್ಯೋನ್ಯವಾಗಿದ್ದರು. ಹಣಕಾಸು ಸಮಸ್ಯೆಯೂ ಇರಲಿಲ್ಲ~ ಎಂದು ಮೃತರ ಸಂಬಂಧಿಕರು ಹೇಳಿದರು.ನಗರದ ಕಿಮ್ಸನಲ್ಲಿ ಸಂಜೆ ಮೂರು ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು.ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಇನ್‌ಸ್ಪೆಕ್ಟರ್ ಬಾಳೇಗೌಡ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.