ಭಾನುವಾರ, ಮೇ 16, 2021
28 °C

ಪದವಿ ಪಡೆದವರ ಕಣ್ಣಲ್ಲಿ ಕನಸುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕಲಾಮಂದಿರದ ಒಳಗೆ, ಹೊರಗೆ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದವರ ಸಂಭ್ರಮವಿತ್ತು. ಶ್ವೇತ ವಸ್ತ್ರಧಾರಿಗಳಾಗಿದ್ದ ಅವರು ಲವಲವಿಕೆ ಯಿಂದ ಓಡಾಡುತ್ತಾ ಕ್ಯಾಮರಾಗಳ ಮುಂದೆ ನಿಂತು ಪೋಜು ಕೊಡುತ್ತಿದ್ದರು. ಇನ್ನು ಕೆಲವರು ತಮ್ಮ ಪೋಷಕರು, ಬಂಧುಗಳು, ಸ್ನೇಹಿತ ರೊಂದಿಗೆ ನಿಂತು ಫೋಟೊ ತೆಗೆಸಿಕೊಳ್ಳುವುದ ರಲ್ಲಿ ನಿರತರಾಗಿದ್ದರು. ಅಲ್ಲಿ ಸೇರಿದ 500 ಕ್ಕೂ ಹೆಚ್ಚು ಮಂದಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪದವಿ ಪಡೆದು ಹೊಸ ಹೊಸ ಕನಸುಗಳನ್ನು ನೇಯುತ್ತಿದ್ದರು.ಚಿನ್ನದ ಹುಡುಗಿ: ಶಿವಮೊಗ್ಗದ ಡಾ.ಕೆ.ಎಸ್ . ಪವಿತ್ರ ಕನ್ನಡ ವಿಷಯದಲ್ಲಿ 3 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದರು. ಇವರು ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಈ ಬಾರಿ ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದರು.ಇವರು ಶಿವಮೊಗ್ಗದಲ್ಲಿ ಮನೋವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಭರತನಾಟ್ಯ ಕಲಾವಿದೆ. ಇವರ ತಂದೆ, ತಾಯಿಗೆ ಸಾಹಿತ್ಯದಲ್ಲಿ ಅತೀವ ಆಸಕ್ತಿ. ಹೀಗಾಗಿ ಪವಿತ್ರ ಅವರಿಗೂ ಸಾಹಿತ್ಯದ ನಂಟಿತ್ತು. `ನಾನು ರ‌್ಯಾಂಕ್ ಪಡೆಯುವುದಕ್ಕಾಗಿ ವಿಶೇಷವಾಗಿ ಓದಲಿಲ್ಲ. ಸಾಹಿತ್ಯ ಓದು ನನ್ನ ಪ್ರಿಯವಾದದು. ಆದ್ದರಿಂದ ತುಂಬಾ ಓದುತ್ತಿದ್ದೆ. ಹೀಗಾಗಿ ಸಹಜವಾಗಿಯೇ ರ‌್ಯಾಂಕ್ ಬಂದಿದೆ~ ಎಂದ ಅವರು `ಸಾಹಿತ್ಯ ಓದು ಜೀವನವನ್ನು ನೋಡುವ ದೃಷ್ಟಿಯನ್ನು ಬದಲಾಯಿಸುತ್ತದೆ~ ಎಂದು ಹೇಳಿದರು.ಪದವಿ ಪಡೆದ ವೃದ್ಧ: 64 ವರ್ಷದ ಜೆ.ಎಂ.ಸೀತಾರಾಮು ಸಂಸ್ಕೃತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆ ದಿದ್ದಾರೆ. ಮೂಲತಃ ಶೃಂಗೇರಿಯವರಾದ ಜೆ.ಎಂ.ಸೀತಾರಾಮು ಈಗ ಹೈದ್ರಾಬಾದ್‌ನಲ್ಲಿ ನೆಲೆಸಿದ್ದಾರೆ. ಇವರು ಎಂಜಿನಿಯರಿಂಗ್ ಪದವೀ ಧರರು. ಐದಾರು ವರ್ಷ ಸರ್ಕಾರದಲ್ಲಿ ಸೇವೆ ಸಲ್ಲಿಸಿ, ಅದನ್ನು ಬಿಟ್ಟು ಸ್ವಂತವಾಗಿ ಕೆಲಸ ಆರಂಭಿಸಿದರು. ಅಜ್ಜ ಸಂಸ್ಕೃತ ವಿದ್ವಾನ್ ಆದ್ದರಿಂದ ಇವರಿಗೂ ಸಂಸ್ಕೃತದ ಮೇಲೆ ಅಭಿಮಾನವಿತ್ತು. ಈಗ ಅದರಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.`ಮುಂದೆ ಪಿಎಚ್.ಡಿ. ಮಾಡುತ್ತೀರಾ?~ ಎಂದು ಕೇಳಿದರೆ, `ಖಂಡಿತ ಇಲ್ಲ, ಏಕೆಂದರೆ ನಾನು ಪಿಎಚ್.ಡಿ ಮಾಡುವುದರಿಂದ ಪ್ರಯೋ ಜನವಿಲ್ಲ. ಆದರೆ ಯುವಕರು ಮಾಡಿದರೆ ಮುಂದೆ ಅವರ ವೃತ್ತಿ ಜೀವನದಲ್ಲಿ ಬಡ್ತಿಗೆ ನೆರ ವಾಗುತ್ತದೆ. ಇನ್ನೊಬ್ಬರ ಅವಕಾಶವನ್ನು ಕಸಿ ದುಕೊಳ್ಳಲು ನನಗೆ ಇಷ್ಟವಿಲ್ಲ~ ಎಂದು ನಕ್ಕರು.15 ವರ್ಷಗಳ ನಂತರ: 15ವರ್ಷಗಳ ಹಿಂದೆ ಓದಿಗೆ ವಿದಾಯ ಹೇಳಿದ್ದ ಭಾರ್ಗವಿ ಗುರುರಾಜ್ ಕೆ. ಈಗ ಎಂ.ಕಾಂ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. `ನಾನು ಎಂ.ಕಾಂ ಪದವಿ ಪಡೆಯಬೇಕು ಎನ್ನುವ ಕಾರಣಕ್ಕಾಗಿ ಓದಿದೆ. ಆದರೆ ರ‌್ಯಾಂಕ್ ಬಂದಿದೆ. ಇದು ನನಗೇ ಆಶ್ಚರ್ಯವನ್ನುಂಟು ಮಾಡಿದೆ~ ಎಂದು ಭಾರ್ಗವಿ ಖುಷಿಪಟ್ಟರು.ಅಂಗವಿಕಲನ ಸಾಧನೆ: ಉಡುಪಿಯ ವಿಘ್ನೇಶ ಬಿ.ಕಾಂ ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇವರು ಕಳೆದ ಮೂರು ತಿಂಗಳಿಂದ ಬೈಂದೂರು ಶಾಲೆಯ ಎಸ್‌ಬಿಎಂನಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ 14 ವರ್ಷವಿದ್ದಾಗ ಅಪಘಾತದಲ್ಲಿ ಎರಡು ಕಾಲುಗಳ ಶಕ್ತಿ ಕಳೆದು ಕೊಂಡವು. ಕೆಲವು ವರ್ಷಗಳ ಕಾಲ ಎದ್ದು ನಿಲ್ಲುವುದು ಕಷ್ಟವಾಗಿತ್ತು. ಈಗ ವಾಕರ್ ಬಳಸಿ ಓಡಾಡುತ್ತಾರೆ. ಮುಂದೆ ಎಂ.ಕಾಂ ಪದವಿ ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದರು.

ಮುಕ್ತ ವಿವಿ ಪರಿಕಲ್ಪನೆ ಶ್ರೇಷ್ಠ: ಪ್ರೊ .ರೊದ್ದಂ ನರಸಿಂಹ

ಮೈಸೂರು: `ನಮ್ಮ ದೇಶ ಮತ್ತು ಸಮಾಜಕ್ಕೆ ಮುಕ್ತ ವಿಶ್ವವಿದ್ಯಾನಿಲಯ ಪರಿಕಲ್ಪನೆ ಶ್ರೇಷ್ಠವಾದ ಮೌಲ್ಯವಾಗಿದೆ~ ಎಂದು ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಬುಧವಾರ ಹೇಳಿದರು.ನಗರದ ಕಲಾಮಂದಿರದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 12 ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, `ಮುಕ್ತ ವಿಶ್ವವಿದ್ಯಾನಿಲಯಗಳನ್ನು ಗುಲಾಬಿ ಬಣ್ಣದ ವಜ್ರ ಎಂದು ಕರೆಯಲಾಗುತ್ತದೆ. ಏಕೆಂದರೆ ಇವು ಅಸಾಮಾನ್ಯವಾದ ವ್ರಜ. ಆದರೆ ಇದನ್ನು ಮಾಮೂಲಿಯಾಗಿ ಪರಿಗಣಿಸಲಾಗುತ್ತದೆ. ಆದರೆ ಗುಲಾಬಿ ವಜ್ರ ಮಾಮೂಲಿ ವಜ್ರಕ್ಕಿಂತ ಹೆಚ್ಚು ಬೆಲೆಯುಳ್ಳದಾಗಿರುತ್ತದೆ. ಇದೇ ರೀತಿ ಮನುಷ್ಯನ ಒಳಗೂ ಗುಲಾಬಿ ವ್ರಜದಂತಹ ಅದ್ಭುತ ಪ್ರತಿಭೆ ಇರುತ್ತದೆ. ಆದರೆ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಇದನ್ನು ಗುರುತಿಸಿ, ಪೋಷಿಸುವ ವ್ಯವಸ್ಥೆ ಇಲ್ಲವಾಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು.`ಇದಕ್ಕೆ ಉತ್ತಮ ನಿದರ್ಶನ ಶ್ರೇಷ್ಠ ಗಣಿತಶಾಸ್ತ್ರಜ್ಞ ರಾಮಾನುಜಂ. ಈಗ ಪಿಯುಸಿ ಎಂದು ಕರೆಯುವ ಕೋರ್ಸ್‌ನಲ್ಲಿ ಆಗ ಅನುತ್ತೀರ್ಣರಾಗಿದ್ದರು. ಹೀಗಾಗಿ ಅವರು ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ಅವಕಾಶವನ್ನು ಕಳೆದುಕೊಂಡರು. ಆದರೆ ಅವರು ಹರೆಯದಲ್ಲಿ ಅದ್ಭುತವಾದ ಸಾಧನೆ ಮಾಡಿದರು. ಆದರೂ ಭಾರತದಲ್ಲಿ ಅವರ ಪ್ರತಿಭೆಯನ್ನು ಗುರುತಿಸಿ, ಗೌರವಿಸಲಿಲ್ಲ~ ವಿಷಾದಿಸಿದರು.`ಗುಲಾಬಿ ವಜ್ರಗಳಂತಹ ಪ್ರತಿಭೆಗಳು ಇತರೆ ರಾಷ್ಟ್ರಗಳಲ್ಲಿಯೂ ಇವೆ. ಇದಕ್ಕೆ  ಆಲ್ಬರ್ಟ್ ಐನ್‌ಸ್ಟೀನ್ ಸೂಕ್ತ ಉದಾಹರಣೆ. ಇವರು ಬೋಧಕರಾಗಿ ಕೆಲಸ ಮಾಡುವ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಿಸ್‌ನ ಪೇಟೆಂಟ್ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರು. ಅವರು ಅದೇ ವೇಳೆ ತಮ್ಮ ಮಹತ್ವದ ಪ್ರಬಂಧವನ್ನು ಬರೆದರು. ಇದಕ್ಕೆ ಮತ್ತೊಂದು ಜನಪ್ರಿಯ ಉದಾಹರಣೆ ಸ್ಟೀವ್ ಜಾಬ್ಸ್. ಇವರು ವಿಶ್ವವಿದ್ಯಾನಿಲಯದಿಂದ ಹೊರಗೆ ಉಳಿದವರಾಗಿದ್ದರು~ ಎಂದು ನೆನಪಿಸಿಕೊಂಡರು.`ಭಾರತದ ಒಂದೇ ಒಂದು ವಿಶ್ವವಿದ್ಯಾನಿಲಯವೂ ವಿಶ್ವದರ್ಜೆಯ ಮಟ್ಟಕ್ಕೆ ಏರಿಲ್ಲ. ಇದು ಈಗ ಭಾರತದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತಿದೆ. ಆದರೆ ಜಪಾನ್, ಚೀನಾ, ಕೋರಿಯಾ, ಥೈವಾನ್ ಮತ್ತು ಸಿಂಗಾಪುರ್‌ನಲ್ಲಿ ವಿಶ್ವ ದರ್ಜೆಯ ವಿಶ್ವವಿದ್ಯಾನಿಲಯಗಳನ್ನು ಕಾಣಬಹುದಾಗಿದೆ. ಆದ್ದರಿಂದ ಭಾರತದಲ್ಲಿ ಏಕೆ ಒಂದಾದರೂ ವಿಶ್ವದರ್ಜೆಯ ವಿಶ್ವವಿದ್ಯಾನಿಲಯವನ್ನು ರೂಪಿಸಬಾರದು~ ಎಂದು ಪ್ರಶ್ನಿಸಿದರು.ಅಧ್ಯಕ್ಷತೆಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ವಹಿಸಿದ್ದರು. ಪ್ರೊ.ಕೆ.ಎಸ್.ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ.ಬಿ.ಎಸ್.ವಿಶ್ವನಾಥ್ ವಂದಿಸಿದರು. ಡೀನ್ ಪ್ರೊ.ವಿಕ್ರಂರಾಜೇ ಅರಸ್, ಪರೀಕ್ಷಾಂಗ ಕುಲಸಚಿವ ಸೋಮಪ್ಪ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರು ಮತ್ತು ಶೈಕ್ಷಣಿಕ ಮಂಡಳಿ ಸದಸ್ಯರು ಹಾಜರಿದ್ದರು.

ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ

6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 12 ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಆರು ಮಂದಿಗೆ ಬುಧವಾರ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.ನಗರದ ಕಲಾಮಂದಿರದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸಾಹಿತಿ ಪ್ರೊ.ದೇ.ಜವರೇಗೌಡ, ಎಮರಿಟಸ್ ಪ್ರಾಧ್ಯಾಪಕ ಕೆ.ಜೆ.ರಾವ್, ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಆ್ಯಂಡ್ ಎಕನಾ ಮಿಕ್ ಚೇಂಜ್‌ನ ವಿಶ್ರಾಂತ ನಿರ್ದೇಶಕ ಪ್ರೊ.ಜಿ.ತಿಮ್ಮಯ್ಯ, ಯೋಜನಾ ಆಯೋಗದ ಸದಸ್ಯ ಡಾ.ನರೇಂದ್ರ ಜಾದವ್, ಸಮಾಜ ಸೇವಕ ಎಚ್.ಡಿ.ಚೌಡಯ್ಯ ಹಾಗೂ ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.ಖ್ಯಾತ ವಿಜ್ಞಾನ ಪ್ರೊ.ರೊದ್ದಂ ನರಸಿಂಹ ಅವರು ಘಟಿಕೋತ್ಸವ ಭಾಷಣ ಮಾಡಿ, `ಭಾರತದಲ್ಲಿ ವಿಶ್ವ ದರ್ಜೆಯ ಮುಕ್ತ ವಿಶ್ವವಿದ್ಯಾನಿಲಯವನ್ನು ರೂಪಿಸುವುದು ಕಷ್ಟ. ಏಕೆಂದರೆ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ಸಮಸ್ಯೆಗಳು ಇವೆ.  ಮುಖ್ಯವಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಂಪರ್ಕದ ಕೊರತೆ  ಎದ್ದು ಕಾಣಿಸುತ್ತದೆ. ಒಂದೇ ವಿಷಯ ವ್ಯಾಸಂಗ ಮಾಡುತ್ತಿದ್ದರೂ ಪರಸ್ಪರ ಪರಿಚಯ ಇರುವುದಿಲ್ಲ. ಇದು ಮುಕ್ತ ವಿವಿಯ ಕೊರತೆಯಾಗಿದೆ~ ಎಂದು ಹೇಳಿದರು.`ತಂತ್ರಜ್ಞಾನ ಅದರಲ್ಲೂ ಮುಖ್ಯವಾಗಿ ಮಾಹಿತಿ, ಸಂಪರ್ಕ, ಉಪಗ್ರಹ ತಂತ್ರಜ್ಞಾನ ಹಾಗೂ ಅಂತರ್ಜಾಲವು ಎಲ್ಲರೂ ಜ್ಞಾನ ಪಡೆಯುವಂತೆ ಮಾಡಿದೆ. ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕಂಪ್ಯೂಟರ್ ಮೂಲಕ ಪಾಠವನ್ನು ಕೇಳಬಹುದು. ಆದರೆ ಮಾನವೀಯ ಸಂಬಂಧ ಇರುವುದಿಲ್ಲ. ಕಲಿಕೆಗೆ ಮಾನವ ಸಂಬಂಧ ಮತ್ತು ಪರಿಸರ ಮುಖ್ಯವಾಗುತ್ತದೆ~ ಎಂದು ಪ್ರತಿಪಾದಿಸಿದರು.ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಕೆ.ಎಸ್. ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಘಟಿಕೋತ್ಸವದಲ್ಲಿ 14206 ಮಹಿಳೆಯರು, 11902 ಪುರುಷರು ವಿವಿಧ ಪದವಿಗಳನ್ನು ಪಡೆದರು. 13 ಅಭ್ಯರ್ಥಿಗಳು ಪಿಎಚ್.ಡಿ ಪದವಿ, 36 ವಿದ್ಯಾರ್ಥಿಗಳು ಚಿನ್ನದ ಪದಕ, 23 ವಿದ್ಯಾರ್ಥಿಗಳು ನಗದು ಬಹುಮಾನ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.